ಭಾನುವಾರ, ಜೂನ್ 13, 2021
24 °C

ಚೊಚ್ಚಲ ಮಹಿಳಾ ವಿಶ್ವಕಪ್ ಕಬಡ್ಡಿ ಚಾಂಪಿಯನ್‌ಷಿಪ್: ಭಾರತದ ಮಡಿಲಿಗೆ ಟ್ರೋಫಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಪಾಟ್ನಾ (ಪಿಟಿಐ):  ಬಿಹಾರ ರಾಜ್ಯದ ರಾಜಧಾನಿ ಪಾಟ್ನಾದಲ್ಲಿ ಕರ್ನಾಟಕದ ಆಟಗಾರ್ತಿ ಮಮತಾ ಪೂಜಾರಿ ನೇತೃತ್ವದ ಭಾರತ ಮಹಿಳಾ ಕಬಡ್ಡಿ ತಂಡ ಭಾನುವಾರ ರಾತ್ರಿ ಸಂಭ್ರಮದಲ್ಲಿತ್ತು. ಇದಕ್ಕೆ ರಂಗು ತುಂಬುವಂತೆ ಸ್ಥಳೀಯ ಅಭಿಮಾನಿಗಳು ನೂಕು ನುಗ್ಗಲಿನಲ್ಲೂ ಸಾಧಕರಿಗೆ ಅಭಿನಂದನೆ ಸಲ್ಲಿಸಿದರು.ಇದಕ್ಕೆಲ್ಲಾ ಕಾರಣ ಭಾರತ ಮಹಿಳಾ ತಂಡ ಚೊಚ್ಚಲ ವಿಶ್ವಕಪ್ ಕಬಡ್ಡಿ ಚಾಂಪಿಯನ್‌ಷಿಪ್‌ನಲ್ಲಿ ಪ್ರಶಸ್ತಿ ಜಯಿಸಿದ್ದು. ಇಲ್ಲಿ ನಡೆದ ಫೈನಲ್ ಪಂದ್ಯದಲ್ಲಿ ಭಾರತ 25-19 ಪಾಯಿಂಟ್‌ಗಳಿಂದ ಇರಾನ್ ತಂಡವನ್ನು ಸೋಲಿಸಿ ಚಾಂಪಿಯನ್ ಪಟ್ಟ ಪಡೆಯಿತು.ವಿಶೇಷವೆಂದರೆ, ವಿಶ್ವಕಪ್‌ನಲ್ಲಿ ಆತಿಥೇಯರು ಯಾವ ಪಂದ್ಯದಲ್ಲಿಯೂ ಸೋಲು ಕಂಡಿಲ್ಲ. ವಿಜಯಿ ತಂಡ ವಿರಾಮದ ವೇಳೆಗೆ 19-11ರಲ್ಲಿ ಮುನ್ನಡೆ ಹೊಂದಿದ್ದರು. ತವರು ನೆಲದ ಆಟಗಾರ್ತಿಯರ ಚುರುಕಾದ ರೈಡಿಂಗ್ ಎದುರಾಳಿ ತಂಡವನ್ನು ಕಟ್ಟಿ ಹಾಕಿತು.ವಿರಾಮದ ನಂತರ ಎರಡೂ ತಂಡಗಳ ನಡುವೆ ಪ್ರಬಲ ಪೈಪೋಟಿ ಏರ್ಪಟ್ಟಿತು. ಪ್ರತಿ ಪಾಯಿಂಟ್ ಗಳಿಸಿದಾಗಲೂ, ಪ್ರೇಕ್ಷಕರ ಸಂಭ್ರಮ ಇಮ್ಮಡಿಯಾಗಿತ್ತು.ಫೈನಲ್ ಪಂದ್ಯವನ್ನು ಕಣ್ತುಂಬಿಕೊಳ್ಳುವ ಸಂಭ್ರಮದಲ್ಲಿ ಕೆಲ ಅಭಿಮಾನಿಗಳು ಪೊಲೀಸರ ಲಾಠಿ ಏಟು ತಿಂದರು.ಆದರೆ, ಭಾರತ ಪ್ರಶಸ್ತಿ ಜಯಿಸಿದ ಹರ್ಷದಲ್ಲಿ ಆ ನೋವೆಲ್ಲ ಇಷ್ಟವಾಗಿ ಬಿಟ್ಟಿತು. ಆದರೆ, ಯಾರಿಗೂ ಗಾಯಗಳಾಗಿಲ್ಲ ಎಂದು ಪೊಲೀಸ್ ಅಧಿಕಾರಿಗಳು ನಂತರ ತಿಳಿಸಿದರು.ಇದಕ್ಕೂ ಮುನ್ನ ನಡೆದ ಸೆಮಿಫೈನಲ್ ಪಂದ್ಯದಲ್ಲಿಭಾರತ 60-21ಪಾಯಿಂಟ್‌ಗಳಿಂದ ಜಪಾನ್ ತಂಡವನ್ನು ಸೋಲಿಸಿದರೆ, ಇರಾನ್ 46-26ರಲ್ಲಿ ಥಾಯ್ಲೆಂಡ್ ಎದುರು ಜಯಿಸಿ ಫೈನಲ್ ಪ್ರವೇಶಿಸಿತ್ತು.ನಂತರ ನಡೆದ ಸಮಾರಂಭದಲ್ಲಿ ಬಿಹಾರ ಉಪ ಮುಖ್ಯಮಂತ್ರಿ ಸುಶೀಲ್ ಕುಮಾರ್ ಮೋದಿ ವಿಜೇತ ತಂಡಕ್ಕೆ ಪ್ರಶಸ್ತಿ ಪ್ರದಾನ ಮಾಡಿದರು. ಟ್ರೋಫಿ ಕೈಗೆ ಪಡೆದ ಆಟಗಾರ್ತಿಯರು ಸಂಭ್ರಮಕ್ಕೆ ಪಾರವೇ ಇಲ್ಲ ಎನ್ನುವಂತೆ ಕ್ರೀಡಾಂಗಣದಲ್ಲಿ ಕುಣಿದಾಡಿ ಸಂಭ್ರಮಿಸಿದರು.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.