ಭಾನುವಾರ, ಡಿಸೆಂಬರ್ 15, 2019
24 °C

ಚೌಕಟ್ಟು ಮೀರುವ 'ರ‍್ಯಾಂಡಮ್ ಫ್ರೇಮ್ಸ್’

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಚೌಕಟ್ಟು ಮೀರುವ 'ರ‍್ಯಾಂಡಮ್ ಫ್ರೇಮ್ಸ್’

ಬೆಂಗಳೂರಿನ ಕಲಾಗ್ಯಾಲರಿಗಳಲ್ಲಿ ಸದಾ ಒಂದಲ್ಲ ಒಂದು ಕಲಾಕೃತಿಗಳ ಪ್ರದರ್ಶನಗಳು ನಡೆಯುತ್ತಲೇ ಇರುತ್ತವೆ. ಸ್ಥಳೀಯ ಕಲಾವಿದರು ಮಾತ್ರವಲ್ಲದೆ ಹೊರರಾಜ್ಯದ ಕಲಾವಿದರೂ ಇಲ್ಲಿ ತಮ್ಮ ಚಿತ್ರಕಲಾ ಪ್ರದರ್ಶನಗಳನ್ನು ನಡೆಸುತ್ತಿರುತ್ತಾರೆ. ನಗರದ ಕೆಲವು ಪ್ರತಿಷ್ಠಿತ ಹೋಟೆಲ್‌ಗಳಲ್ಲಿ ಕೂಡ ಇಂತಹ ಪ್ರದರ್ಶನಗಳು ಆಗಾಗ ನಡೆಯುತ್ತಿರುತ್ತವೆ. ನಳಪಾದ್ಸ್ ಹೋಟೆಲ್‌ ಬೆಂಗಳೂರು ಇಂಟರ್‌ನ್ಯಾಷನಲ್‌ನ ಕ್ರೆಸೆಂಟ್ ಗ್ಯಾಲರಿಯಲ್ಲಿ ಚಿತ್ರಕಲೆ ಮಾತ್ರವಲ್ಲದೆ ಅಪರೂಪದ ಛಾಯಾಚಿತ್ರಗಳ ಪ್ರದರ್ಶವೂ ಆಗಾಗ ನಡೆಯುತ್ತಿರುತ್ತದೆ.ಈ ಬಾರಿ ಜೋಬಿನ್ ಫಿಲಿಪ್‌ ಮತ್ತು ವಿನ್ಸೆಂಟ್‌ ಫಿಲಿಪ್‌ ಅವರ ಛಾಯಾಚಿತ್ರ ಮತ್ತು ವರ್ಣಚಿತ್ರಗಳ ಪ್ರದರ್ಶನವನ್ನು ಒಂದೇ  ವೇದಿಕೆಯಲ್ಲಿ ಆಯೋಜಿಸಿದೆ.ಜೋಬಿನ್‌ ಫಿಲಿಪ್‌

ವೃತ್ತಿಯಲ್ಲಿ ಕಲಾವಿದರಾಗಿರುವ ಜೋಬಿನ್‌ ಫಿಲಿಪ್‌ ಅತ್ಯುತ್ತಮ ಛಾಯಾಗ್ರಾಹಕರೂ ಹೌದು. ಅವರ ಛಾಯಾಚಿತ್ರಗಳು ಕಲಾಕೃತಿಗಳಂತೆ ಇರುತ್ತವೆ. ಬಣ್ಣ ಮತ್ತು ಬೆಳಕಿನ ಕುರಿತು ಇವರದು ಸಮತೂಕದ ನೋಟ. ಛಾಯಾಚಿತ್ರಗಳ ಮೂಲಕ ಜನರ ಬದುಕನ್ನು ಸುಂದರವಾಗಿ ಕಟ್ಟಿಕೊಡುತ್ತಾರೆ. ಛಾಯಾಚಿತ್ರಗಳಿಗೆ ಇವರು ಆಯ್ಕೆ ಮಾಡಿಕೊಳ್ಳುವುದು ಜನರ ದೈನಂದಿನ ಬದುಕಿನ ಕ್ಷಣಗಳನ್ನು. ಒಂದು ಸುಂದರ ಕಲಾಕೃತಿಯಾಗಬಹುದಾದ ಸಾಮಾನ್ಯ ಜನರ ಭಾವನಾತ್ಮಕ ನಡವಳಿಕೆಗಳನ್ನು ಅವರು ಸೆರೆಹಿಡಿಯುವುದೇ ಹೆಚ್ಚು. ಆ ಕ್ಷಣವನ್ನು ಅವಿಸ್ಮರಣೀಯಗೊಳಿಸುವುದರಲ್ಲಿ ಅವರಿಗೆ ಹೆಚ್ಚು ಆಸಕ್ತಿ.ಪ್ರದರ್ಶನದಲ್ಲಿರುವ ಛಾಯಾಚಿತ್ರಗಳು ಇವರ ಕಲಾತ್ಮಕ ನೋಟಕ್ಕೆ ಉದಾಹರಣೆಗಳಂತಿವೆ. ಕಥಕ್ಕಳಿ ಕಲಾವಿದ ವೇಷ ಕಟ್ಟುವ ಸನ್ನಿವೇಶ, ಗದ್ದೆ ಕೆಲಸದಲ್ಲಿ ನಿರತಳಾಗಿರುವ ಸ್ತ್ರೀ, ಪುರ್ರನೆ ಹಾರುತ್ತಿರುವ ಪಾರಿವಾಳದ ಸಮೂಹ, ಹಕ್ಕಿಯೊಂದು ಆಹಾರಕ್ಕೆ ಬಾಯ್ತೆರೆದ ಕ್ಷಣ ಇವರ ಕ್ಯಾಮೆರಾದಲ್ಲಿ ಸೆರೆಸಿಕ್ಕಿದ ರೀತಿ ಕಲಾತ್ಮಕವಾಗಿದೆ.ವಿನ್ಸೆಂಟ್‌ ಫಿಲಿಪ್‌

ವೃತ್ತಿಯಲ್ಲಿ ಸ್ಕೇಟಿಂಗ್ ತರಬೇತುದಾರರಾಗಿರುವ ಇವರು ಚಿತ್ರ ಕಲಾವಿದರು ಕೂಡ. ಒಂದು ನಿರಂತರ ದೈಹಿಕ ಶ್ರಮ ಬೇಡುವ ಕೆಲಸವಾದರೆ, ಮತ್ತೊಂದು ಸಂಪೂರ್ಣವಾಗಿ ‘ಮೂಡ್‌’ಗೆ ಸಂಬಂಧಿಸಿದ್ದು. ಕಲಾಕೃತಿ ರಚನೆಗೆ ಬೇಕಾಗಿರುವುದು ಪ್ರಶಾಂತವಾದ ವಾತಾವರಣ ಮತ್ತು ಭಾವನಾಲೋಕವನ್ನು ಪ್ರವೇಶಿಸುವ ಸೂಕ್ಷ್ಮಮತಿ.  ವಿನ್ಸೆಂಟ್‌ ಇವೆರಡನ್ನೂ ಸರಿದೂಗಿಸಿಕೊಳ್ಳುವುದರಲ್ಲಿ ಯಶಸ್ವಿಯಾಗಿದ್ದಾರೆ.‘ಬದುಕಿನಲ್ಲಿ ಅನೇಕ ಬಗೆಯ ವ್ಯಕ್ತಿಗಳು ಮುಖಾಮುಖಿಯಾಗುತ್ತಾರೆ. ಕೆಲವರು ಸುಮ್ಮನೆ ಸರಿದು ಹೋಗುತ್ತಾರೆ. ಇನ್ನು ಕೆಲವರು ಅಕಾರಣವಾಗಿ ನಗೆ ಬೀರುತ್ತಾರೆ. ಆದರೆ ಅವರೆಲ್ಲರೂ ಕಲಾಕೃತಿಗಳಲ್ಲಿ ಜೀವಂತವಾಗುಳಿಯುತ್ತಾರೆ. ಇಂತಹ ಅಮೂರ್ತ ಕ್ಷಣಗಳು ಕಲಾಕೃತಿಯ ವಸ್ತುಗಳು’ ಎನ್ನುವುದು ವಿನ್ಸೆಂಟ್‌ ತಮ್ಮನ್ನು ತಾವು ಅರ್ಥೈಸಿಕೊಂಡ ಬಗೆ.ಪ್ರದರ್ಶನದಲ್ಲಿರುವ ಇವರ ಎಲ್ಲ ಕಲಾಕೃತಿಗಳೂ ಮನುಷ್ಯರ ನೆರಳಿನಲ್ಲಿಯೇ ಗಮನಸೆಳೆಯುತ್ತದೆ. ಬೆಳಕು ಮತ್ತು ಬಣ್ಣದ ಜೊತೆಗಿನ ಇವರ ಆಟ ಆಕರ್ಷಕವಾಗಿದೆ. ಅಸ್ಪಷ್ಟ ಮುಖಗಳು, ಸನ್ನಿವೇಶವೊಂದನ್ನು ಬಣ್ಣದ ಮೂಲಕ ಕಟ್ಟಿಕೊಡುವ ಕಲಾಕೃತಿಗಳು ಗಮನಸೆಳೆಯುತ್ತವೆ.ಛಾಯಾಚಿತ್ರ ಮತ್ತು ಚಿತ್ರಕಲಾಕೃತಿಗಳನ್ನು ಒಂದೇ ಫ್ರೇಮಿನಲ್ಲಿ ನೋಡಬೇಕೆಂದಿರುವವರು ಸೆ.14ರವರೆಗೆ ಕ್ರೆಸೆಂಟ್‌ ಗ್ಯಾಲರಿಗೆ ಬೆಳಿಗ್ಗೆ 11ರಿಂದ ಸಂಜೆ 7ರವರೆಗೆ ಭೇಟಿ ನೀಡಬಹುದು.

ಪ್ರತಿಕ್ರಿಯಿಸಿ (+)