ಸೋಮವಾರ, ಅಕ್ಟೋಬರ್ 21, 2019
24 °C

ಚೌಡೇಶ್ವರಿ ಜಾತ್ರೆ ಆರಂಭ

Published:
Updated:

ರಾಣೆಬೆನ್ನೂರು: ನಗರದ ತಳವಾರ ಓಣಿಯಲ್ಲಿ ಭಾವೈಕ್ಯತೆ ಸಾರುವ ಗಂಗಾಜಲ ಚೌಡೇಶ್ವರಿ ದೇವಿಯ ಜಾತ್ರೆಯ ಅಂಗವಾಗಿ ಸೋಮವಾರ ರಾತ್ರಿ ತೆರದ ವಾಹನದಲ್ಲಿ ದೇವಿಯ ಭವ್ಯ ಭವ್ಯ ಮೆರವಣಿಗೆ ಮಾಡಲಾಯಿತು.ಸೋಮವಾರ ಸಂಜೆ 7 ಗಂಟೆಗೆ ಪ್ರಾರಂಭವಾಗಿ ಮಂಗಳವಾರ ಬೆಳಿಗ್ಗೆ 8 ಗಂಟೆಗೆ ಮೆಡ್ಲೇರಿ ರಸ್ತೆಯ ಗಂಗಾಜಲ ಶ್ರೀ ಚೌಡೇಶ್ವರಿ ದೇವಸ್ಥಾನದಲ್ಲಿ ಪ್ರತಿಷ್ಠಾಪಿಸ ಲಾಗುವುದು.ತಳವಾರ ಓಣಿಯಲ್ಲಿ  ಶಾಸಕ ಜಿ. ಶಿವಣ್ಣ, ಮಾಜಿ ಸಚಿವ ಕೆ.ಬಿ. ಕೋಳಿವಾಡ, ಜಿಪಂ ಅಧ್ಯಕ್ಷ ಮಂಜುನಾಥ ಓಲೇಕಾರ, ನಗರಸಭಾ ಅಧ್ಯಕ್ಷ ಬಸವರಾಜ ಲಕ್ಷ್ಮೇಶ್ವರ, ಉಪಾಧ್ಯಕ್ಷ ಪ್ರಕಾಶ ಪೂಜಾರ, ಮಾಜಿ ಅಧ್ಯಕ್ಷ ರಾಮಣ್ಣ ಕೋಲಕಾರ ಹಾಗೂ ನಗರದ ವಿವಿಧ ಸಂಘಟನೆಗಳ ಪದಾಧಿಕಾರಿಗಳು, ವಿವಿಧ ಗಣ್ಯ ವ್ಯಕ್ತಿಗಳ ಸಮ್ಮುಖದಲ್ಲಿ ಮೆರವಣಿಗೆಗೆ ಚಾಲನೆ ನೀಡಲಾಯಿತು. ಗಂಗಾಜಲ ಚೌಡೇಶ್ವರಿ ನಿನ್ನಾಲ್ಕು ಉಧೋ ಉಧೋ  ಎನ್ನುತ್ತ ಯುವಕರ ದಂಡು ರಥವನ್ನು ಎಳೆದರು. ದಾರಿಯುದ್ದಕ್ಕೂ ದೇವಿಯ ಆರಾಧಕರು ಛತ್ರ ಚಾಮರವನ್ನು ಬೀಸುತ್ತಿದ್ದರು. ದಾರಿಯುದ್ದಕ್ಕೂ ನೀರು ಚೆಲ್ಲಿ, ತಳಿರು ತೋರಣ, ರಂಗೋಲಿ, ಹೂಗಳನ್ನು ಹರಡಿ, ಹಣ್ಣು ಕಾಯಿ, ಆರತಿ ಬೆಳಗಿ ಸುಮಂಗಲೆಯರು ದೇವಿಯನ್ನು ಸ್ವಾಗತಿಸಿದರು. ಕೆಲವರು ಬೃಹತ್ ಮಾಲೆಯನ್ನು ಅರ್ಪಿಸಿದರು.ಮೆರವಣಿಗೆ ಪ್ರಾರಂಭವಾದೊಡನೆ ಆಕರ್ಷಕ ವಿವಿಧ ಬಗೆಯ ಚಿತ್ತಾರದ ಮದ್ದುಗಳನ್ನು ಹಾರಿಸಿ ಯುವಕರು ಸಂಭ್ರಮಿಸಿದರು. ಮದ್ದುಗಳ ಚಿತ್ರಗಳು ಆಕಾಶದಲ್ಲಿ ಚಿತ್ತಾರಗಳು ಜನರನ್ನು ಹೆಚ್ಚು ಆಕರ್ಷಿಸಿದವು.ಮೆರವಣಿಗೆಯಲ್ಲಿ ಓಲಗ, ದುರುಗಮುರುಗಿ, ಉರ್ಮಿ ದುರುಗಮುರಿಗಿ, ಮಂಗಳ ವಾದ್ಯ, ಶಾರದಾ ಬ್ಯಾಂಡ್, ಬಾಜಾ ಭಜಂತ್ರಿ, ಹಾನಗಲ್ ಮಹಿಳಾ ಕಲಾ ತಂಡ, ಅಟವಾಳಗಿ ಸಮಾಳ, ನಂದಿ ಕೋಲು, ಝಾಂಜ್ ಮೇಳ,  ಹಾಸನದ ಸ್ಯಾಕ್ಸೋಪೋನ, ಕರಡಿ ಮಜಲು,  ಸ್ಯಾಕ್ಸೋ ಪೋನ್ ತಂಡ ಸೇರಿದಂತೆ 31 ಕ್ಕೂ ಹೆಚ್ಚು ಕಲಾ ತಂಡಗಳು ಮೆರವಣಿಗೆಯಲ್ಲಿ ಭಾಗವಹಿಸಿದ್ದರು.ಯುವಕರು ಬೆಂಕಿ ಕಡ್ಡಿಯನ್ನು ತಿರುಗಿಸುವುದು. ಸಾಗರದ ಸಾಗರದ ಶಿವಪ್ಪ ನಾಯಕ ಮಹಿಳಾ ಡೊಳ್ಳು ಕುಣಿತ ಮತ್ತು ಸಾಹಸ ಮೆರವಣಿಗೆಯುದ್ದಕ್ಕೂ ಮೆರಗು ನೀಡಿತು.ಜಾತ್ರೋತ್ಸವ ಸಮಿತಿ ಅಧ್ಯಕ್ಷ ಶಿವರಾಜ ಬ್ಯಾಡಗಿ, ಕುರುವತ್ತಿ ಬಸಣ್ಣ, ನಗರಸಭೆ ಸದಸ್ಯ ವೀರಣ್ಣ ಬಿ. ಅಂಗಡಿ, ವಿಶ್ವನಾಥ ಹೊಳೆಬಾಗಿಲ, ಬಸವರಾಜ ತಳವಾರ, ಪುಟ್ಟಪ್ಪ ಮರಿಯಮ್ಮನವರ, ನಾಗರಾಜ ಪವಾರ, ಕರಬಸಪ್ಪ ಮಾಕನೂರು, ನಗರಯೋಜನಾ ಪ್ರಾಧಿಕಾರದ ಅಧ್ಯಕ್ಷ ವಿಶ್ವನಾಥ ಪಾಟೀಲ, ಗಣೇಶ ಕೊಪ್ಪದ, ಜಿಪಂ ಸದಸ್ಯರಾದ ಶಿವಕುಮಾರ ಮುದ್ದಪ್ಪಳವರ, ಸಂತೋಷ ಪಾಟೀಲ, ಜ್ಯೋತಿ ಎಸ್. ರಾಮಲಿಂಗಣ್ಣನವರ ಹಾಗೂ ನಗರಸಭೆ ಸದಸ್ಯರಾದ ಶಿವಪ್ಪ ಮಣೆಗಾರ ಮೆರವಣಿಗೆ ಸಂದರ್ಭದಲ್ಲಿ ಪಾಲ್ಗೊಂಡಿದ್ದರು. ಹೆಚ್ಚುವರಿ ಎಸ್ಪಿ ಎಂ.ಎಂ. ಅಗಡಿ,  ಡಿವೈಸ್‌ಪಿ. ಜಯಪ್ರಕಾಶ, ಸಿಪಿಐಗಳಾದ ಕೆ.ಸಿ. ಗಿರಿ, ಎಂ.ಎಸ್. ಪಾಟೀಲ, ಶಂಕರಗೌಡ ಪಾಟೀಲ, ಶ್ರೀಶೈಲ ಚೌಗಲಾ, ಎಸ್.ವೈ. ಶಿಲ್ಪಾ, ಕೆ.ಸಿ. ಅರಳಿಕಟ್ಟಿ ಮತ್ತಿತರರು ಸೂಕ್ತ ಬಂದೋಬಸ್ತ್  ಒದಗಿಸಿದ್ದರು.

Post Comments (+)