ಚೌರ ಮನೆ ಮೇಲೆ ಎರಡನೇ ಬಾರಿ ಲೋಕಾಯುಕ್ತ ದಾಳಿ

7

ಚೌರ ಮನೆ ಮೇಲೆ ಎರಡನೇ ಬಾರಿ ಲೋಕಾಯುಕ್ತ ದಾಳಿ

Published:
Updated:

ವಿಜಾಪುರ: ಇಲ್ಲಿಯ ಜಿಲ್ಲಾ ಪಂಚಾಯಿತಿಯ ಮುಖ್ಯ ಲೆಕ್ಕಾಧಿಕಾರಿ ವಿಜಯನಾಮಾ ಮರಲಿಂಗಪ್ಪ ಚೌರ ಮನೆಯ ಮೇಲೆ ಕಳೆದ ತಿಂಗಳು ದಾಳಿ ನಡೆಸಿ ರೂ.2.06 ಕೋಟಿ ಮೌಲ್ಯದ ಆಸ್ತಿ ಪತ್ತೆ ಹಚ್ಚಿದ್ದ ಲೋಕಾಯುಕ್ತ ಪೊಲೀಸರು, ಮತ್ತೆ ಚಿನ್ನದ ಕೈ ಗಡಿಯಾರ ಹಾಗೂ ರೂ.30 ಲಕ್ಷ ನಗದು ವಶಪಡಿಸಿಕೊಂಡಿದ್ದಾರೆ.`ನಗರದ ಇಬ್ರಾಹಿಂ ರೋಜಾ ಹತ್ತಿರ ಇರುವ ಅಲಹಾಬಾದ್ ಬ್ಯಾಂಕ್‌ನ ಶಾಖೆಯಲ್ಲಿ ವಿ.ಎಂ. ಚೌರ್ ಬೇನಾಮಿ ಹೆಸರಿನಲ್ಲಿ ಹೊಂದಿದ್ದ ಲಾಕರ್‌ನಿಂದ 125 ಗ್ರಾಂ ಚಿನ್ನ, ರೂ.30 ಲಕ್ಷ ನಗದು ಹಾಗೂ ಇತರ ಬ್ಯಾಂಕ್‌ಗಳ ಪಾಸ್ ಬುಕ್, ಠೇವಣಿ ಪತ್ರಗಳನ್ನು ವಶಪಡಿಸಿಕೊಳ್ಳಲಾಗಿದೆ' ಎಂದು ಲೋಕಾಯುಕ್ತ ಎಸ್ಪಿ ಡಿ.ಎಸ್. ಜಗಮಯ್ಯನವರ ಮಂಗಳವಾರ ಸುದ್ದಿಗಾರರಿಗೆ ತಿಳಿಸಿದರು.`ಈ ಲಾಕರ್‌ನಲ್ಲಿ 100 ಗ್ರಾಮ ಚಿನ್ನದ ಕೈಗಡಿಯಾರ ಪತ್ತೆಯಾಗಿದೆ. ವಿಠ್ಠಲ ಮಲ್ಲಪ್ಪ ಚೌಧರಿ ಎಂಬ ಬೇನಾಮಿ ಹೆಸರಿನಲ್ಲಿ ಉಳಿತಾಯ ಖಾತೆ ಇದೆ. ಅದೇ ವ್ಯಕ್ತಿಗೆ 75ನೇ ಸಂಖ್ಯೆಯ ಲಾಕರ್ ನೀಡಲಾಗಿದೆ. ಅಗತ್ಯವಾಗಿರುವ ಸೂಚಕರು ಹಾಗೂ ಖಾತೆದಾರನ ವಿಳಾಸದ ದಾಖಲೆ, ಪ್ಯಾನ್ ಕಾರ್ಡ್ ಪಡೆಯದೇ ಈ ರಾಷ್ಟ್ರೀಕೃತ ಬ್ಯಾಂಕ್‌ನವರು ಖಾತೆ ತೆರೆದಿದ್ದಾರೆ. ಲಾಕರ್‌ನ್ನೂ ಪೂರೈಸಿರುವುದು ತನಿಖೆಯಿಂದ ಬೆಳಕಿಗೆ ಬಂದಿದೆ' ಎಂದರು.`ದಾಳಿಯ ಕಾಲಕ್ಕೆ ಈ ಲಾಕರ್‌ನ ಮಾಹಿತಿ ದೊರೆತಿತ್ತು. ತನಿಖೆಗೆ ಚೌರ್ ಸಹಕರಿಸದ ಕಾರಣ ಕೋರ್ಟ್ ನಿಂದ ಸರ್ಚ್ ವಾರಂಟ್ ತಂದು ಲಾಕರ್ ಒಡೆದೆವು. ನವೆಂಬರ್ 8ರಂದು ದಾಳಿ ನಡೆಸಿದ ಸಂದರ್ಭದಲ್ಲಿ ರೂ.2.06 ಕೋಟಿ ಮೌಲ್ಯದ ಆಸ್ತಿ ಪತ್ತೆ ಹಚ್ಚಲಾಗಿತ್ತು. ಈಗ ಒಟ್ಟಾರೆ ಪತ್ತೆ ಹಚ್ಚಿರುವ ಆಸ್ತಿಯ ಮೊತ್ತ ಸುಮಾರು ರೂ.2.50 ಕೋಟಿ ಆಗಿದ್ದು, ತನಿಖೆ ಮುಂದುವರೆದಿದೆ' ಎಂದು ಹೇಳಿದರು.`ದಾಳಿಯ ಬಗ್ಗೆ ಸರ್ಕಾರಕ್ಕೆ ವರದಿ ನೀಡಿದ್ದೇವೆ. ದಾಳಿ ನಡೆದ ದಿನದಿಂದ ವಿ.ಎಂ. ಚೌರ ಸೇವೆಗೆ ಗೈರು ಉಳಿದಿದ್ದಾರೆ ಎಂದು ಜಿಲ್ಲಾ ಪಂಚಾಯಿತಿಯವರು ಮಾಹಿತಿ ನೀಡಿದ್ದಾರೆ. ಸದ್ಯ ಚೌರ್ ಪರಾರಿ ಯಾಗಿದ್ದಾರೆ' ಎಂದು ಎಸ್ಪಿ ಹೇಳಿದರು.ತನಿಖೆ ನಡೆಸುತ್ತಿರುವ ಲೋಕಾಯುಕ್ತ ಇನ್ಸಪೆಕ್ಟರ್‌ಗಳಾದ ಚಂದ್ರಕಾಂತ ಎಲ್.ಟಿ., ರವೀಂದ್ರ ಕುರಬಗಟ್ಟಿ ಇತರರು ಇದ್ದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry