ಗುರುವಾರ , ನವೆಂಬರ್ 21, 2019
21 °C

ಚೌಳಿ ಮಠದಲ್ಲಿ ಸೂತಕದ ಛಾಯೆ

Published:
Updated:
ಚೌಳಿ ಮಠದಲ್ಲಿ ಸೂತಕದ ಛಾಯೆ

ಜನವಾಡ: ಮೂವರು ಸಾಧಕರ ಆತ್ಮಾಹುತಿ ಘಟನೆ ನಂತರ ಬೀದರ್ ತಾಲ್ಲೂಕಿನ ಚೌಳಿ ಮಠದಲ್ಲಿ ಈಗ ಸೂತಕದ ಛಾಯೆ ಆವರಿಸಿದೆ. ಸದಾ ಭಕ್ತರ ಚಟುವಟಿಕೆಯ ತಾಣವಾಗಿದ್ದ ಮಠದಲ್ಲಿ ಈಗ ಮೌನ ಮನೆ ಮಾಡಿದೆ. ಎಂದಿನಂತೆ ಪೂಜಾ ಪ್ರಕ್ರಿಯೆಗಳು ನಡೆದರೂ ತೀರಾ ವಿರಳ ಸಂಖ್ಯೆಯ ಭಕ್ತರು ಕಾಣಿಸಿದರು.ಮಠದ ಆವರಣದಲ್ಲಿ ಮೂರು ಶವಗಳ ಸಮಾಧಿ ಮಾಡಿದ್ದು ಭಕ್ತರು, ಸಂಬಂಧಿಕರು ಸಮಾಧಿಗೆ ಹಾಲು ಎರೆಯುತ್ತಿದ್ದ ದೃಶ್ಯ ಕಂಡುಬಂತು. ಸಾಧಕ ಈರಾರೆಡ್ಡಿ ಅವರ ತಾಯಿ ನಾಗಮ್ಮ, ಪತ್ನಿ ಸುಮಿತ್ರಾಬಾಯಿ ಹಾಗೂ ಮಕ್ಕಳ ಆಕ್ರಂದನ ಮನಕಲಕುವಂತಿತ್ತು.ದುರಂತದ ಹಿನ್ನೆಲೆಯಲ್ಲಿ ಮುಂಜಾಗ್ರತಾ ಕ್ರಮವಾಗಿ ಪೊಲೀಸರು ಸೋಮವಾರ ರಾತ್ರಿ ಯಾರಿಗೂ ಮಠದಲ್ಲಿ ಇರಲು ಅವಕಾಶ ನೀಡಲಿಲ್ಲ. ಸಾಧಕರು, ಭಕ್ತರ ಪೈಕಿ ಪುರುಷರನ್ನು ತಾಲ್ಲೂಕಿನ ಸಂಗೋಳಗಿ ಗ್ರಾಮದಲ್ಲಿ ಇರುವ ಶಾಖಾ ಮಠಕ್ಕೆ, ಮಹಿಳೆಯರನ್ನು ಬೀದರ್‌ಗೆ ಕಳುಹಿಸಲಾಗಿತ್ತು ಎಂದು ಸಾಧಕ ಮಹಾದೇವ್ ಸ್ವಾಮೀಜಿ ತಿಳಿಸಿದರು.ಹಿರಿಯ ಸ್ವಾಮೀಜಿ ಹಾಗೂ ಸಾಧಕರ ಸಾವು ಆಘಾತ ಉಂಟು ಮಾಡಿದೆ. ಭಕ್ತ ವರ್ಗವನ್ನು ದುಃಖ ಸಾಗರದಲ್ಲಿ ಮುಳುಗಿಸಿದ್ದರೂ, ಮಠದಲ್ಲಿ ಈ ಹಿಂದಿನಂತೆಯೇ ಪೂಜೆ- ಪ್ರಾರ್ಥನೆಗಳನ್ನು ಮುಂದುವರೆಸಿಕೊಂಡು ಹೋಗಲಾಗುತ್ತಿದೆ ಎಂದರು.ಹಿರಿಯ ಸ್ವಾಮೀಜಿ ಗಣೇಶ್ವರ ಅವಧೂತರ ಸಾವಿನ ನಂತರ ಐವರು ಸಾಧಕರು ಮಠದಲ್ಲಿ ಇದ್ದೆವು. ಮೂವರು ಆತ್ಮಾಹುತಿ ಮಾಡಿಕೊಂಡಿದ್ದು, ಈಗ ಇಬ್ಬರು ಉಳಿದಿದ್ದೇವೆ. ನಾವೂ ಇಲ್ಲಿಯೇ ಇರಬೇಕೇ, ಬೇರೆಡೆಗೆ ಹೋಗಬೇಕೇ ಎಂದು ನಿರ್ಧಾರ ಮಾಡಿಲ್ಲ. ಮಠದ ಮುಂದುವರಿಕೆ ಬಗೆಗೆ ಶೀಘ್ರವೇ ಭಕ್ತರ ಸಭೆ ನಡೆಯಲಿದೆ ಎಂದರು.ಮಾರುತಿ ಸ್ವಾಮೀಜಿ ನಾಪತ್ತೆ ಪ್ರಕರಣದಿಂದ ಮಠದ ವಿವಾದ ಆರಂಭಗೊಂಡಿತು. ಆಗಿನಿಂದ ಈವರೆಗೂ ಮಠಕ್ಕೆ ಪೊಲೀಸ್ ಬಂದೋಬಸ್ತ್ ಒದಗಿಸಲಾಗಿದೆ. ಮೂವರು  ಸಾಧಕರ ಆತ್ಮಾಹುತಿ ನಂತರ ಹೆಚ್ಚಿನ ಪೊಲೀಸ್ ಬಲ ನಿಯೋಜಿಸಲಾಗಿದೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ.

ಪ್ರತಿಕ್ರಿಯಿಸಿ (+)