ಛಲದಂಕಮಲ್ಲರು ಈ ಒಳಗಣ್ಣಿನವರು

7

ಛಲದಂಕಮಲ್ಲರು ಈ ಒಳಗಣ್ಣಿನವರು

Published:
Updated:

ಅವರಿಗೆ ಜಗತ್ತು ಹೇಗಿದೆಯೆಂಬುದು ತಿಳಿದಿಲ್ಲ. ಅವರ ಪಾಲಿಗೆ ಕತ್ತಲೆಯೇ ಜಗತ್ತು. ಕತ್ತಲ ಜಗತ್ತಿನಲ್ಲಿಯೇ ಬೆಳಕು ಹುಡುಕುವ ಸಾಹಸ. ಮೋಸದ ಹಂಗಿಲ್ಲ. ದ್ವೇಷದ ಕಿಡಿಯಿಲ್ಲ. ಸ್ನೇಹ ಬಾಂಧವ್ಯ ಬೆಸೆಯುವುದಷ್ಟೇ ಅವರ ಉದ್ದೇಶ.ಉದ್ಯಾನನಗರಿಯಲ್ಲಿ ನಡೆಯುತ್ತಿರುವ ಅಂಧರ ಚೊಚ್ಚಲ ಟಿ-20 ವಿಶ್ವಕಪ್ ಕ್ರಿಕೆಟ್ ಆಟಗಾರರು ಹಾಗೂ ದೇಶ-ದೇಶಗಳ ನಡುವಿನ ಸಂಬಂಧ ಮತ್ತು ಸಂಸ್ಕೃತಿಯನ್ನು ಭದ್ರಗೊಳಿಸುವ ಕೊಂಡಿಯಂತಿದೆ. ಆತಿಥೇಯ ಭಾರತ, ಪಾಕಿಸ್ತಾನ, ಇಂಗ್ಲೆಂಡ್, ವೆಸ್ಟ್‌ಇಂಡೀಸ್, ನ್ಯೂಜಿಲೆಂಡ್, ಆಸ್ಟ್ರೇಲಿಯಾ, ದಕ್ಷಿಣ ಆಫ್ರಿಕಾ ಮತ್ತು ನೇಪಾಳ ತಂಡಗಳು ಚುಟುಕು ಆಟದ ಸವಿ ಅನುಭವಿಸಲು ಬೆಂಗಳೂರಿಗೆ ಬಂದಿವೆ. ಒಳಗಣ್ಣು ಗ್ರಹಿಸಿದ್ದನ್ನು ಆಟದ ರೂಪದಲ್ಲಿ ಉಣಬಡಿಸುತ್ತಿದ್ದಾರೆ...ಪ್ರತಿ ವರ್ಷದ ಏಪ್ರಿಲ್ ಹಾಗೂ ಮೇ ತಿಂಗಳಲ್ಲಿ ಐಪಿಎಲ್ ಮೂಲಕವೇ ಚುಟುಕು ಆಟದ ಸವಿ ಅನುಭವಿಸುತ್ತಿದ್ದ ಇಲ್ಲಿನ ಜನರಿಗೆ ಐದು ತಿಂಗಳು ಮುಂಚಿತವೇ ಇನ್ನೊಂದು ಚುಟುಕು ಆಟದ ಸಂಭ್ರಮ ನೋಡುವ ಅವಕಾಶ. ಅಂಧರ ಕ್ರಿಕೆಟ್‌ನ ದೇಸಿ ಟೂರ್ನಿಗಳನ್ನು ಮಾತ್ರ ನೋಡಿದ್ದ ಜನಕ್ಕೆ ಚೊಚ್ಚಲ ಟಿ-20 ಆಟಕ್ಕೆ ಸಾಕ್ಷಿಯಾಗುವ ಅಮೂಲ್ಯ ಅವಕಾಶ ಮೊದಲ ಸಲ ಸಿಕ್ಕಿದೆ.ಅಂಧರ ಕ್ರಿಕೆಟ್‌ನಲ್ಲಿ ಹೆಣ್ಣು ಗಂಡು ಎಂಬ ಭೇದವಿಲ್ಲ. ಅವರು ಅಂಧರಾಗಿದ್ದರೆ ಸಾಕು. ಈ ವಿಶ್ವಕಪ್‌ನಲ್ಲಿ ಪಾಲ್ಗೊಂಡಿರುವ ನೇಪಾಳ ತಂಡದಲ್ಲಿ ಇಬ್ಬರು ಆಟಗಾರ್ತಿಯರು ಇದ್ದಾರೆ. ರೂಪಾ ಬಲಾಲ್ ಮತ್ತು ಭಾಗವತಿ ಭಟ್ಟರಾಯ್ ನೇಪಾಳ ತಂಡದ ಆಟಗಾರ್ತಿಯರು. ಕ್ರಿಕೆಟ್ ಪ್ರೀತಿ ಇತ್ತೀಚಿಗಿನ ವರ್ಷಗಳಲ್ಲಿ ನಿಧಾನವಾಗಿ ಚಿಗುರುತ್ತಿರುವ ನೇಪಾಳದಲ್ಲಿ ಮಹಿಳಾ ಕ್ರಿಕೆಟ್‌ಗೂ ಉತ್ತೇಜನ ನೀಡಲು ಅಲ್ಲಿನ ಸರ್ಕಾರ ಅಂಧ ಆಟಗಾರ್ತಿಯರಿಗೂ ಪುರುಷರ ತಂಡದಲ್ಲಿ ಪಾಲ್ಗೊಳ್ಳಲು ಅವಕಾಶ ನೀಡಿದೆ.ಪ್ರೀತಿ ಬಿಟ್ಟರೆ ಬೇರೆನಿಲ್ಲಕ್ರೀಡಾಂಗಣದಲ್ಲಿ ಬದ್ಧವೈರಿಗಳಂತೆ ಕಾದಾಡುವ ಭಾರತ ಹಾಗೂ ಪಾಕಿಸ್ತಾನ ತಂಡದ ಅಂಧ ಕ್ರಿಕೆಟಿಗರು ಈ ಟೂರ್ನಿಯ ಪ್ರಮುಖ ಆಕರ್ಷಣೆ.

ಭಾರತದ ನೆಲದಲ್ಲಿ ಕನಿಷ್ಠ ಒಂದು ಪಂದ್ಯವನ್ನಾದರೂ ಆಡಬೇಕೆನ್ನುವುದು ಪಾಕ್ ತಂಡದ ಪ್ರತಿ ಆಟಗಾರನ ಕನಸಂತೆ. ಇಲ್ಲಿನ ಅಭಿಮಾನಿಗಳು ಪಾಕ್ ಆಟಗಾರರಿಗೆ ನೀಡುವ ವಿಶೇಷ ಗೌರವವೇ ಇದಕ್ಕೆ ಪ್ರಮುಖ ಕಾರಣವಂತೆ. `12 ವರ್ಷಗಳಿಂದ ಪಾಕ್ ಅಂಧರ ತಂಡದಲ್ಲಿ ಆಡುತ್ತಿದ್ದೇನೆ. ಈಗ ಮೂರನೇ ಸಲ ಭಾರತಕ್ಕೆ ಬಂದಿದ್ದೇನೆ. ಇಲ್ಲಿಗೆ ಪ್ರತಿಸಲ ಬಂದಾಗಲೂ ಪ್ರೀತಿ ಸಿಗುತ್ತದೆ. ತಮ್ಮ ದೇಶದ ಆಟಗಾರರಿಗೆ ನೀಡುವ ಗೌರವವನ್ನು ನಮ್ಮ ದೇಶದ ಕ್ರಿಕೆಟಿಗರಿಗೂ ನೀಡುತ್ತಾರೆ' ಎಂದು ಖುಷಿಯಿಂದ ನಗುತ್ತಾರೆ ಪಾಕ್ ತಂಡದ ನಾಯಕ ಶೇಖ್ ಅಬ್ಬಾಸಿ.ನೀರಸ ಪ್ರತಿಕ್ರಿಯೆನಗರದಲ್ಲಿ ವಿಶ್ವಕಪ್ ನಡೆಯುತ್ತಿದ್ದರೂ, ಕ್ರೀಡಾಪ್ರೇಮಿಗಳು ಮಾತ್ರ ಕ್ರೀಡಾಂಗಣದತ್ತ ಸುಳಿಯುತ್ತಿಲ್ಲ. ಬಂದರೂ ಅವರ ಸಂಖ್ಯೆ ನೂರರ ಗಡಿ ದಾಟುವುದಿಲ್ಲ.

ದೇಹದ ಒಂದು ಭಾಗವೇ ಇಲ್ಲದಿದ್ದರೂ ಅದನ್ನೆಲ್ಲ ಮರೆತು ವಿಶ್ವಕಪ್‌ವರೆಗೆ ಸಾಗಿ ಬಂದ ಅಂಧ ಕ್ರಿಕೆಟಿಗರ ಪ್ರೋತ್ಸಾಹಕ್ಕೆ ಚಪ್ಪಾಳೆಯ ಬೆಂಬಲ ಬೇಕಿತ್ತು. ಆದರೆ, ಚಪ್ಪಾಳೆ ತಟ್ಟಲು ಕ್ರೀಡಾಭಿಮಾನಿಗಳೇ ಬರುವುದಿಲ್ಲ. ಹೀಗಾದರೆ ಅವರಿಗೆ ಬೆಂಬಲ ನೀಡುವವರು ಯಾರು?`ಸಚಿನ್ ತೆಂಡೂಲ್ಕರ್, ಮಹೇಂದ್ರ ಸಿಂಗ್ ದೋನಿ, ವೀರೇಂದ್ರ ಸೆಹ್ವಾಗ್ ಅವರೇನಾದರೂ ಬಂದು ಇಲ್ಲಿ ಆಡಿದರೆ ನಿಲ್ಲಲು ಕಿಂಚತ್ತೂ ಜಾಗ ಇರುವುದಿಲ್ಲ. ಆದರೆ, ತಮ್ಮ ಸಂಕಷ್ಟವನ್ನು ತೋರಗೊಡದೇ ಸಾಧನೆಗೆ ಸ್ಫೂರ್ತಿಯಾಗುವ ಅಂಧ ಕ್ರಿಕೆಟಿಗರನ್ನು ಬೆಂಬಲಿಸುವುದು ನಮ್ಮೆಲ್ಲರ ಕರ್ತವ್ಯ. ಆದರೆ, ಅವರ ಆಟವನ್ನು ನೋಡುವವರ ಸಂಖ್ಯೆ ಕಡಿಮೆ' ಎಂದು ಬೇಸರ ವ್ಯಕ್ತಪಡಿಸುತ್ತಾರೆ ಭಾರತ- ಇಂಗ್ಲೆಂಡ್ ನಡುವಿನ ಪಂದ್ಯವನ್ನು ನೋಡಲು ಬಂದಿದ್ದ ರಾಯಚೂರಿನ ವೀರೇಶ್.ರನ್ ಹೊಳೆ

ಐಪಿಎಲ್ ಮತ್ತು ಚಾಂಪಿಯನ್ಸ್ ಲೀಗ್‌ನಲ್ಲಿ ಬ್ಯಾಟ್ಸ್‌ಮನ್‌ಗಳು ಹರಿಸುವ ರನ್ ಹೊಳೆಯಂತೆ ಅಂಧ ಬ್ಯಾಟ್ಸ್‌ಮನ್‌ಗಳ ಬ್ಯಾಟಿನಿಂದಲೂ ರನ್ ಮಳೆಯೇ ಹರಿದುಬರುತ್ತಿದೆ. ಒಂದು ಪಂದ್ಯದಲ್ಲಿ ದಾಖಲೆ ಮೂಡಿಬಂದರೆ, ಇನ್ನೊಂದು ಪಂದ್ಯದ ವೇಳೆಗೆ ಆ ದಾಖಲೆ ಮೂಲೆಗುಂಪಾಗುತ್ತದೆ. ಹೊಸ ದಾಖಲೆ ಸೃಷ್ಟಿಯಾಗುತ್ತದೆ. ರ‌್ಯಾಟಲಿಂಗ್ ಚೆಂಡು ಪದೇ ಪದೇ ಬೌಂಡರಿ ಗೆರೆಯತ್ತ ಮುಖ ಮಾಡುತ್ತಲೇ ಇರುತ್ತದೆ.ಸಮರ್ಥನಂ ನೆರವುದೊಡ್ಡ ಕ್ರೀಡಾಕೂಟಗಳನ್ನು ಸಮರ್ಥವಾಗಿ ಸಂಘಟಿಸುವಲ್ಲಿ ಭಾರತ ಅನೇಕ ಸಲ ಯಶಸ್ಸು ಕಂಡಿದೆ. ಹಿಂದೆ ಆಯೋಜಿಸಿದ್ದ ಪ್ರಮುಖ ಅಂತರರಾಷ್ಟ್ರೀಯ ಕ್ರೀಡಾಕೂಟಗಳು ಇದಕ್ಕೆ ಸಾಕ್ಷಿ. ಆದರೆ, ಸರ್ಕಾರೇತರ ಸಂಸ್ಥೆ ಈ ಹೊಣೆ ಹೊತ್ತು ನಿಲ್ಲುವುದು ಸುಲಭದ ಮಾತಲ್ಲ. ಒಟ್ಟು ಒಂಬತ್ತು ರಾಷ್ಟ್ರಗಳು ಪಾಲ್ಗೊಂಡಿರುವ ವಿಶ್ವಕಪ್‌ನ ಟೂರ್ನಿಯಲ್ಲಿ ಕಾರ್ಯಕ್ರಮಗಳ ಆಯೋಜನೆ, ಸಾಂಸ್ಕೃತಿಕ ಸಂಭ್ರಮದ ಅನಾವರಣ, ವಿದೇಶಿ ತಂಡಗಳ ನಿರ್ವಹಣೆ, ವಸತಿ, ಸಾರಿಗೆ ವ್ಯವಸ್ಥೆ ಎಲ್ಲವನ್ನೂ ನಿಭಾಯಿಸಿದ್ದು `ಸಮರ್ಥನಂ' ಎನ್ನುವ ಸರ್ಕಾರೇತರ ಸ್ವಯಂಸೇವಾ ಸಂಸ್ಥೆ. ಟಿ-20 ವಿಶ್ವಕಪ್ ಟೂರ್ನಿಯ ಉದ್ಘಾಟನೆಯ ದಿನ 2000 ಸರ್ಕಾರಿ ಶಾಲಾ ಮಕ್ಕಳನ್ನು ಒಂದುಗೂಡಿಸಿ ಯೋಗ ಕಾರ್ಯಕ್ರಮ ಆಯೋಜಿಸ್ದ್ದಿದೂ ಸಂಸ್ಥೆಯ ಹೆಗ್ಗಳಿಕೆ.ಸಮರ್ಥನಂ ಭಾರತ ಅಂಧರ ಕ್ರಿಕೆಟ್ ಸಂಸ್ಥೆಯನ್ನು ಹುಟ್ಟುಹಾಕಿ ಅಂಧ ಕ್ರಿಕೆಟಿಗರ ಕಣ್ಣಲ್ಲಿ ಬೆಳಕು ಮೂಡಿಸುವ ಕಾರ್ಯ ಮಾಡುತ್ತಿದೆ. ಅವರ ಕಣ್ಣುಗಳಲ್ಲಿ ನಿರಾಸೆಯ ಕಾರ್ಮೋಡ ಆವರಿಸದಂತೆ ಎಚ್ಚರಿಕೆ ವಹಿಸುತ್ತಿದೆ.  ವಿಶೇಷವೆಂದರೆ ಈ ಸಂಸ್ಥೆಯನ್ನು ಸ್ಥಾಪಿಸಿದ ಜಿ.ಕೆ. ಮಹಾಂತೇಶ ಮತ್ತು ಎಸ್.ಪಿ. ನಾಗೇಶ್ ಸಹ ಅಂಧರು.ಈ ಸಂಸ್ಥೆ ಐದಾರು ತಿಂಗಳ ಹಿಂದೆ ರಾಷ್ಟ್ರೀಯ ಚೆಸ್ ಚಾಂಪಿಯನ್‌ಷಿಪ್ ಆಯೋಜಿಸಿತ್ತು. ಅಂಧ ವಿದ್ಯಾರ್ಥಿಗಳು, ಕ್ರೀಡಾಪಟುಗಳು ಹಾಗೂ ಆಸಕ್ತ ಯುವಕರನ್ನು ಒಳಗೊಂಡ ಈ ಸಂಸ್ಥೆಯಲ್ಲಿ ಈಗ 1200ಕ್ಕೂ ಹೆಚ್ಚು ಸದಸ್ಯರಿದ್ದಾರೆ. ಆಗಾಗ್ಗೆ ಸಾಕಷ್ಟು ಸಾಂಸ್ಕೃತಿಕ ಕಾರ್ಯಕ್ರಮಗಳನ್ನೂ ಆಯೋಜಿಸಲಾಗುತ್ತದೆ. ಅಷ್ಟೇ ಅಲ್ಲ, ತನ್ನ ಸಂಸ್ಥೆಯ ಕಾರ್ಯವ್ಯಾಪ್ತಿಯನ್ನು ಅಮೆರಿಕಕ್ಕೂ ಹಬ್ಬಿಸಿದೆ.`ನಮ್ಮಲ್ಲಿ ಸಣ್ಣ ಕೊರತೆಯಿದ್ದರೆ ಸಾಕು. ನಮ್ಮ ಬದುಕೇ ಮುಗಿದು ಹೋಯಿತು ಎಂದು ಕೊರಗುವವರ ಸಂಖ್ಯೆ ಹೆಚ್ಚಿದೆ. ಆದ್ದರಿಂದ ಅವರ ಮನಸ್ಸಿನಲ್ಲಿ ಅಂಧಕಾರ ಮೂಡದಿರಲಿ. ಅವರಲ್ಲಿನ ಪ್ರತಿಭೆಗೆ ವೇದಿಕೆಯಾಗಬೇಕು' ಎನ್ನುವ ಕಾರಣಕ್ಕೆ ಅಂತರರಾಷ್ಟ್ರೀಯ ಮಟ್ಟದಲ್ಲಿ ಟೂರ್ನಿಗಳನ್ನು ಆಯೋಜಿಸುತ್ತೇವೆ' ಎನ್ನುತ್ತಾರೆ ಮಹಾಂತೇಶ್. ಇವರು ವಿಶ್ವ ಅಂಧ ಕ್ರಿಕೆಟ್ ಸಂಸ್ಥೆ ಉಪಾಧ್ಯಕ್ಷರೂ ಹೌದು.

ಚಿತ್ರ: ಸತೀಶ್ ಬಡಿಗೇರ್

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry