ಛಲ ಇದ್ದರೆ ಸಾಧನೆ ದೊಡ್ಡದಲ್ಲ: ಕೆ. ಶಿವರಾಂ

7

ಛಲ ಇದ್ದರೆ ಸಾಧನೆ ದೊಡ್ಡದಲ್ಲ: ಕೆ. ಶಿವರಾಂ

Published:
Updated:

ಮೈಸೂರು: `ಮನುಷ್ಯನಿಗೆ ಛಲ, ಪರಿಶ್ರಮ ಇದ್ದರೆ ಏನು ಬೇಕಾದರೂ ಸಾಧಿಸಬಹುದು. ಜೀವನದಲ್ಲಿ ಶಿಸ್ತು, ಕಠಿಣ ಅಭ್ಯಾಸ ಮಾಡಿದವರು ಮುಂದೆ ಬರುತ್ತಾರೆ~ ಎಂದು ಸಾರ್ವಜನಿಕ ಉದ್ದಿಮೆ ಇಲಾಖೆ ಪ್ರಧಾನ ಕಾರ್ಯದರ್ಶಿ ಕೆ.ಶಿವರಾಂ ತಿಳಿಸಿದರು.ಕರ್ನಾಟಕ ರಾಜ್ಯ ಮುಕ್ತ ವಿಶ್ವವಿದ್ಯಾನಿಲಯದ ಸ್ಪರ್ಧಾತ್ಮಕ ಪರೀಕ್ಷಾ ತರಬೇತಿ ಕೇಂದ್ರ ಬುಧವಾರ ಮುಕ್ತ ವಿವಿ ಕಾವೇರಿ ಸಭಾಂಗಣದಲ್ಲಿ ಹಮ್ಮಿಕೊಂಡಿದ್ದ `ಪ್ರೌಢಶಾಲಾ ಶಿಕ್ಷಕರ ನೇಮಕಾತಿ ಪರೀಕ್ಷಾ ತರಬೇತಿ ಶಿಬಿರ~ವನ್ನು ಉದ್ಘಾಟಿಸಿ ಮಾತನಾಡಿದರು.`ಕಿತ್ತು ತಿನ್ನುವ ಬಡತನ, ಅಸ್ಪೃಶ್ಯತೆ ನಡುವೆ ನನ್ನ ಓದು ನಡೆಯಿತು. ಬಡ ಜನರಿಗೆ ಏನಾದರೂ ಸಹಾಯ ಮಾಡಬೇಕೆಂಬ ಛಲ ನನ್ನಲಿ ಬಂದಿತು. ಇದಕ್ಕೆ ಯಾವ ಕ್ಷೇತ್ರವನ್ನು ಆಯ್ಕೆ ಮಾಡಿಕೊಂಡರೆ ಒಳಿತು ಎಂಬುದರ ಬಗ್ಗೆ ಸ್ನೇಹಿತರೊಬ್ಬರನ್ನು ಕೇಳಿ ದಾಗ ಜಿಲ್ಲಾಧಿಕಾರಿ ಆದರೆ ಬಡ ಜನರ ಸೇವೆ ಮಾಡ ಬಹುದು ಎಂಬ ಸಲಹೆ ನೀಡಿದರು. ಅಂದಿನಿಂದ ಗುರಿ ಮುಟ್ಟಲು ಪ್ರಯತ್ನ ಆರಂಭಿಸಿದೆ~ ಎಂದು ತಿಳಿಸಿದರು.ಎಲ್ಲದರಲ್ಲೂ ಫೇಲು: `ನಾನು ಸಾಧಾರಣ ವಿದ್ಯಾ ರ್ಥಿಯಾಗಿದ್ದೆ. ಎಸ್ಸೆಸ್ಸೆಲ್ಸಿ, ಪಿಯುಸಿ, ಪದವಿಯನ್ನು ಮೊದಲ ಬಾರಿಗೆ ತೇರ್ಗಡೆ ಹೊಂದಲಿಲ್ಲ. ಪೂರಕ ಪರೀಕ್ಷೆ ಕಟ್ಟಿಕೊಂಡು ಪಾಸು ಮಾಡಿದೆ. ಯಾವ ಪರೀಕ್ಷೆಯಲ್ಲೂ ಶೇ 40 ರಷ್ಟು ಅಂಕ ಗಳಿಸಲಿಲ್ಲ. ಬಡತನ ಇದ್ದುದ್ದರಿಂದ ಪೊಲೀಸ್ ವರದಿಗಾರನಾಗಿ ಕೆಲಸ ಮಾಡುತ್ತಿದ್ದೆ. ನನಗೆ ಮೊದಲು ಬರುತ್ತಿದ್ದ ರೂ.250 ಸಂಬಳದಲ್ಲಿ ರೂ.50 ನ್ನು ಬಡ ಜನತೆಗೆ ಸಹಾಯ ಮಾಡಲು ಬಳಸುತ್ತಿದ್ದೆ~ ಎಂದು ತಿಳಿಸಿದರು.15 ಗಂಟೆ ಅಧ್ಯಯನ: `ಕೆಎಎಸ್ ಮಾಡಿದ ನಾನು ಡಿವೈಎಸ್ಪಿಯಾಗಿ ಆಯ್ಕೆ ಆದೆ. ಮೈಸೂರಿನಲ್ಲಿ ತರಬೇತಿ ಪಡೆಯುತ್ತಿದ್ದೆ. ಉಪ ವಿಭಾಗಾಧಿಕಾರಿಯಾಗಿ ಸೇವೆ  ಸಲ್ಲಿಸಿದೆ. ಸೂರ್ಯನ ಕಿರಣ ಮೈಗೆ ತಾಗದಂತೆ ಮನೆಯಲ್ಲೇ ಕುಳಿತು ನಿತ್ಯ 15 ಗಂಟೆ ನಿರಂತರವಾಗಿ ಓದುತ್ತಿದ್ದೆ.ರಾಜ್ಯಶಾಸ್ತ್ರ ವಿಷಯದಲ್ಲಿ ಐಎಎಸ್ ಪರೀಕ್ಷೆಯನ್ನು ಕನ್ನಡದಲ್ಲೇ ಬರೆದೆ. ಆದರೆ ಎರಡು ಬಾರಿ ಪ್ರಯತ್ನ ವಿಫಲವಾಯಿತು. ಸಾಹಿತ್ಯದ ಗಂಧ ಗೊತ್ತಿಲ್ಲದಿದ್ದರೂ ಹಿರಿಯರ ಸಲಹೆ ಮೇರೆಗೆ ಕನ್ನಡ ಸಾಹಿತ್ಯ ಓದಿಕೊಂಡು ಮೂರನೇ ಬಾರಿಗೆ ಪರೀಕ್ಷೆ ಬರೆದೆ. ಅದು ಯಶಸ್ವಿಯಾಯಿತು.ಸಾ.ಶಿ.ಮರುಳಯ್ಯ ನನಗೆ ಸಹಕರಿಸಿದರು ~ ಎಂದು ತಿಳಿಸಿದರು.ಆರೋಗ್ಯ ಗುಟ್ಟು ರಟ್ಟು: ಇಷ್ಟು ವರ್ಷಗಳ ಕಾಲ ಸೇವೆ ಸಲ್ಲಿಸಿದ್ದರೂ ಯುವಕನಂತೆ ಕಾಣುತ್ತೀರಲ್ಲ. ನಿಮ್ಮ ಆರೋಗ್ಯದ ಗುಟ್ಟೇನು ಎಂದು ಸಭಿಕರೊಬ್ಬರು ಪ್ರಶ್ನೆ ಹಾಕಿದರು. ಆರೋಗ್ಯದ ಗುಟ್ಟನ್ನು ರಟ್ಟು ಮಾಡಲು ಅವರು ಹಿಂಜರಿಯಲಿಲ್ಲ. `ಬೆಳಿಗ್ಗೆ 6 ಗಂಟೆಗೆ ಏಳುತ್ತೇನೆ. ಒಂದೂವರೆ ಲೀಟರ್ ನೀರು ಕುದಿಸಿ ಕುಡಿಯುತ್ತೇನೆ.

 

ನಂತರ ಯೋಗ, ಧ್ಯಾನ ಮತ್ತು ಪೂಜೆ ನಡೆಯುತ್ತದೆ. ವಾರದಲ್ಲಿ 2 ಬಾರಿ ರಾಗಿ ರೊಟ್ಟಿ ತಿನ್ನುತ್ತೇನೆ. ಬಡತನದ ಬೇಗೆಯಲ್ಲಿದ್ದಾಗ ನನಗೆ ಅನ್ನವೇ ಸಿಗುತ್ತಿ ರಲಿಲ್ಲ. ಹಬ್ಬ ಬಂದಾಗ ಅನ್ನ ಸಿಗುತ್ತಿತ್ತು. ಈಗಲೂ ಅನ್ನ ತಿನ್ನುವುದಿಲ್ಲ. ಹಳ್ಳಿಯಲ್ಲಿ ಮಾಡುವ ನಾಟಿ ಕೋಳಿ ಸಾರಿನಂತೆ ಮನೆಯಲ್ಲಿ ಮಾಡುತ್ತೇವೆ. ಅಡುಗೆ ಯನ್ನು ಕಲಿತ್ತಿದ್ದೇನೆ. ಮದುವೆ ಯಾದ ಬಳಿಕ ನನ್ನ ಪತ್ನಿಗೆ ನಾನೇ ಅಡುಗೆ ಕಲಿಸಿದೆ~ ಎಂದು ತಿಳಿಸಿದರು.`ಐಎಎಸ್ ಮಾಡಬೇಕು, ಸಿನಿಮಾ ನಟನಾಗಬೇಕು ಎಂಬ ಬಯಕೆ ನನ್ನಲಿತ್ತು. ನಾಟಕದ ಬಗ್ಗೆ ಆಸಕ್ತಿ ಇತ್ತು. ನಾಗತಿಹಳ್ಳಿ ಚಂದ್ರಶೇಖರ್ ಅವರ ಬಾನಲ್ಲೆ ಮಧು ಚಂದ್ರಕೆ ಸಿನಿಮಾದಲ್ಲಿ ನನಗೆ ಅವಕಾಶ ಸಿಕ್ಕಿತು~ಎಂದರು.

ಮುಕ್ತ ವಿವಿ ಕುಲಪತಿ ಪ್ರೊ.ಕೆ.ಎಸ್.ರಂಗಪ್ಪ ಅಧ್ಯ ಕ್ಷತೆ ವಹಿಸಿದ್ದರು. ಜೈನಹಳ್ಳಿ ಸತ್ಯನಾರಾಯಣ ಇದ್ದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry