ಗುರುವಾರ , ಮೇ 26, 2022
22 °C
ಸಿ.ಎಂ ಜೊತೆ ಸಮಾಲೋಚನೆ- ಸಚಿವ ಅಭಯಚಂದ್ರ ಜೈನ್

ಛಾಯಾಚಿತ್ರ ಅಕಾಡೆಮಿ ಸ್ಥಾಪನೆಗೆ ಚಿಂತನೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಛಾಯಾಚಿತ್ರ ಅಕಾಡೆಮಿ ಸ್ಥಾಪನೆಗೆ ಚಿಂತನೆ

ಬೆಂಗಳೂರು: `ಕರ್ನಾಟಕ ಛಾಯಾಚಿತ್ರ ಅಕಾಡೆಮಿ ಸ್ಥಾಪಿಸಲು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರೊಂದಿಗೆ ಚರ್ಚಿಸಿದ ನಂತರ ಕ್ರಮ ಕೈಗೊಳ್ಳಲಾಗುವುದು' ಎಂದು ಮೀನುಗಾರಿಕೆ ಮತ್ತು ಕ್ರೀಡಾ ಸಚಿವ ಅಭಯಚಂದ್ರ ಜೈನ್ ಭರವಸೆ ನೀಡಿದರು.ಕರ್ನಾಟಕ ಛಾಯಾಚಿತ್ರಗ್ರಾಹಕರ ಸಂಘವು ನಗರದ ಕೋರಮಂಗಲದ ಒಳಾಂಗಣ ಸ್ಟೇಡಿಯಂ ನಲ್ಲಿ ಶುಕ್ರವಾರದಿಂದ ಆಯೋಜಿಸಿರುವ `ಡಿಜಿ ಇಮೇಜ್-2013' ಪ್ರಥಮ ಅಂತರರಾಷ್ಟ್ರೀಯ ವಸ್ತು ಪ್ರದರ್ಶನವನ್ನು ಉದ್ಘಾಟಿಸಿ ಅವರು ಮಾತನಾಡಿದರು.`ಛಾಯಾಚಿತ್ರ ತೆಗೆಯುವುದು ಒಂದು ಉತ್ತಮವಾದ ಕಲೆ. ಈ ಕಲೆಗೂ ಮಹತ್ವವನ್ನು ನೀಡುವ ಅಗತ್ಯವಿದ್ದು, ಬಹು ದಿನಗಳಿಂದ ಅಕಾಡೆಮಿಯನ್ನು ಸ್ಥಾಪಿಸಬೇಕೆಂಬ ಒತ್ತಾಯವಿತ್ತು. ಈ ಕುರಿತು ಮುಖ್ಯಮಂತ್ರಿ ಅವರೊಂದಿಗೆ ಚರ್ಚಿಸಿ ಈ ಬೇಡಿಕೆಯ ಈಡೇರಿಸುವಿಕೆಯ ಬಗೆಗೆ ಚಿಂತನೆ ನಡೆಸಲಾಗುವುದು' ಎಂದು ಆಶ್ವಾಸನೆ ನೀಡಿದರು.`ಛಾಯಾಚಿತ್ರಗ್ರಾಹಕರನ್ನು ಅಸಂಘಟಿತ ವಲಯಕ್ಕೆ ಸೇರಿಸುವ ಕುರಿತು ಶೀಘ್ರವಾಗಿ ನಿರ್ಧಾರ ಕೈಗೊಳ್ಳಲಾಗುವುದು. ಈ ವರ್ಷ ನೀಡುವ ಕನ್ನಡ ರಾಜ್ಯೋತ್ಸವ ಪ್ರಶಸ್ತಿಗೆ ಛಾಯಚಿತ್ರಗ್ರಾಹಕರನ್ನು ಕೂಡ ಪರಿಗಣಿಸಲಾಗುವುದು' ಎಂದರು.`ಛಾಯಾಚಿತ್ರಗ್ರಾಹಕರು ನಮ್ಮ ಜೀವನವನ್ನು ನಿತ್ಯ ನೂತನವಾಗಿಸುತ್ತಾರೆ. ನೆಹರು, ಮಹಾತ್ಮ ಗಾಂಧೀಜಿ. ಸುಭಾಶ್ ಚಂದ್ರ ಬೋಸರ ಛಾಯಾಚಿತ್ರಗಳನ್ನು ತೆಗೆದಿದ್ದರಿಂದಲೇ ಇಂದು ನಾವು ಅವರನ್ನು ನೋಡುವ ಅನುಭವವನ್ನು ಪಡೆಯಲು ಸಾಧ್ಯವಾಗಿದೆ' ಎಂದು ನುಡಿದರು.ಕರ್ನಾಟಕ ಛಾಯಾಚಿತ್ರಗ್ರಾಹಕರ ಸಂಘದ ಅಧ್ಯಕ್ಷ ಬಿ.  ಎಸ್.ಶಶಿಧರ ಮಾತನಾಡಿ, `ಸಂಘವು ಮೊದಲ ಬಾರಿಗೆ ಫೋಟೊಗ್ರಫಿ ಮತ್ತು ವಿಡಿಯೋಗ್ರಫಿಗೆ ಸಂಬಂಧಿಸಿದ ಸಲಕರಣೆಗಳ ಪ್ರದರ್ಶನವನ್ನು ಏರ್ಪಡಿಸಿದೆ. ಜಗತ್ತಿನಲ್ಲಿ ನಿತ್ಯ ಹೊಸ ಹೊಸ ಆವಿಷ್ಕಾರಗಳು ನಡೆಯುತ್ತಿವೆ. ಹೊಸ ಸಲಕರಣೆಗಳ ಬಳಸುವಿಕೆ ಕಂಡುಬರುತ್ತಿದೆ. ಇದರಿಂದ, ಛಾಯಾಚಿತ್ರಗ್ರಾಹಕರಿಗೆ ವಿವಿಧ ಸಲಕರಣೆಗಳ ಬಗ್ಗೆ ಮಾಹಿತಿ ನೀಡಲು ಈ ಪ್ರದರ್ಶನ ಸಹಾಯಕವಾಗಲಿದೆ' ಎಂದರು.`ಛಾಯಾಚಿತ್ರಗ್ರಾಹಕರಿಗೆ ಅಗತ್ಯವಿರುವ ಅತ್ಯಾಧುನಿಕ ಸಲಕರಣೆಗಳ ಮಾಹಿತಿ ಇಲ್ಲಿದೆ. ಇಲ್ಲಿನ ಪ್ರದರ್ಶನದಿಂದ ಬರುವ ಆದಾಯವನ್ನು ಛಾಯಾಚಿತ್ರಗ್ರಾಹಕರ ಕಲ್ಯಾಣ ಟ್ರಸ್ಟ್ ಸ್ಥಾಪಿಸಿ ಅದರ ಮೂಲಕ ಇನ್ನು ಅನೇಕ ಕಾರ್ಯಕ್ರಮಗಳನ್ನು ಆಯೋಜಿಸುವ ಆಶಯವಿದೆ' ಎಂದು ಹೇಳಿದರು.ಪ್ರದರ್ಶನದಲ್ಲಿ ಅತ್ಯಾಧುನಿಕವಾದ ಕ್ಯಾಮೆರಾ, ವಿಡಿಯೋ ಮಾಡುವ ಸಲಕರಣೆಗಳು, ಫೋಟೊ ಅಲ್ಬಂ, 3ಡಿ ಇರುವ ಫೋಟೊ ಅಲ್ಬಂ, 3ಡಿ ವಿಡಿಯೋ, ಸಿನೆಮಾದ ಚಿತ್ರೀಕರಣ ಮಾಡುವ ವಿವಿಧ ವಿಡಿಯೋಗಳ ಪ್ರದರ್ಶನ ಮತ್ತು ಮಾಹಿತಿಯಿದೆ. ಪ್ರದರ್ಶನವು ಭಾನುವಾರದವರೆಗೆ ನಡೆಯಲಿದೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.