ಛಾಯಾಚಿತ್ರ ಅಕಾಡೆಮಿ ಸ್ಥಾಪನೆ: ಸುರೇಶ್ ಕುಮಾರ್

7

ಛಾಯಾಚಿತ್ರ ಅಕಾಡೆಮಿ ಸ್ಥಾಪನೆ: ಸುರೇಶ್ ಕುಮಾರ್

Published:
Updated:

ಬೆಂಗಳೂರು: `ಯುವ ಛಾಯಾಗ್ರಾಹಕರನ್ನು ಪ್ರೋತ್ಸಾಹಿಸುವ ಸಲುವಾಗಿ ರಾಜ್ಯದಲ್ಲಿ ಛಾಯಾಚಿತ್ರ ಅಕಾಡೆಮಿ ಸ್ಥಾಪಿಸಲು ಗಂಭೀರ ಚಿಂತನೆ ನಡೆಸಲಾಗುವುದು~ ಎಂದು ಸಚಿವ ಎಸ್.ಸುರೇಶ್‌ಕುಮಾರ್ ಇಲ್ಲಿ ತಿಳಿಸಿದರು.ಪ್ರಕೃತಿ ಕ್ರಿಯೇಷನ್ಸ್ ಸಂಸ್ಥೆಯು ನಗರದ ಕರ್ನಾಟಕ ಚಿತ್ರಕಲಾ ಪರಿಷತ್ತಿನಲ್ಲಿ ಆಯೋಜಿಸಿರುವ ಅಂತರರಾಷ್ಟ್ರೀಯ ಮಾನ್ಯತೆಗಳಾದ ಮಾಸ್ಟರ್ಸ್‌ ಹಾಗೂ ಫೆಲೋಗಳಿಗಾಗಿ ರಾಜ್ಯದ ಛಾಯಾಗ್ರಾಹಕರು ಸಿದ್ದಪಡಿಸಿರುವ `ಛಾಯಾ ವಿಶಿಷ್ಟ~ ವಿಶೇಷ ಛಾಯಾಚಿತ್ರ ಪ್ರದರ್ಶನವನ್ನು ಗುರುವಾರ ಉದ್ಘಾಟಿಸಿ ಅವರು ಮಾತನಾಡಿದರು.`ರಾಜ್ಯದಲ್ಲಿ ಛಾಯಾಚಿತ್ರ ಅಕಾಡೆಮಿ ಸ್ಥಾಪನೆಯ ಅಗತ್ಯವಿದೆ. ಆಂಧ್ರಪ್ರದೇಶ ಹಾಗೂ ತಮಿಳುನಾಡಿನಲ್ಲಿ ಅಕಾಡೆಮಿ ಸ್ಥಾಪನೆಯಾಗಿವೆ. ನೆರೆಯ ರಾಜ್ಯಗಳಲ್ಲಿ ಛಾಯಾಗ್ರಾಹಕ ಅಕಾಡೆಮಿಗಳು ನಿರ್ವಹಿಸುವ ಕಾರ್ಯವೈಖರಿ ಬಗ್ಗೆ ಸಂಪೂರ್ಣ ಮಾಹಿತಿ ಪಡೆಯಲಾಗುವುದು. ಈ ಸಂಬಂಧ ಮುಖ್ಯಮಂತ್ರಿಗಳೊಂದಿಗೆ ಚರ್ಚಿಸಿದ ಬಳಿಕ ಅಕಾಡೆಮಿ ಸ್ಥಾಪನೆ ಕುರಿತು ಸೂಕ್ತ ಕ್ರಮ ಕೈಗೊಳ್ಳಲಾಗುವುದು~ ಎಂದು ಅವರು ಹೇಳಿದರು.`ರಾಷ್ಟ್ರೀಯ ಮಟ್ಟದಲ್ಲಿ ನಡೆಯುವ ಛಾಯಾಚಿತ್ರ ಸ್ಪರ್ಧೆಯಲ್ಲಿ ರಾಜ್ಯದ ಯುವಕರು ಹೆಚ್ಚು ಪ್ರಶಸ್ತಿಗಳನ್ನು ಪಡೆಯುತ್ತಿದ್ದಾರೆ. ಸರ್ಕಾರ ಛಾಯಾಗ್ರಾಹಕರನ್ನು ಉತ್ತೇಜಿಸಲು ಹಲವಾರು ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಿದೆ. ರಾಜ್ಯವು ದೇಶದಲ್ಲಿಯೇ ಮಾಸ್ಟರ್ಸ್‌ ಹಾಗೂ ಫೆಲೋ ಪಡೆದಿರುವ ಹೆಚ್ಚು ಛಾಯಾಗ್ರಾಹಕರನ್ನು ಹೊಂದಿರುವುದು ಶ್ಲಾಘನೀಯ~ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.ರಾಜ್ಯೋತ್ಸವ ಪ್ರಶಸ್ತಿ- ಶಿಫಾರಸಿಗೆ ಮಣಿ ಹಾಕುವುದಿಲ್ಲ: ರಾಜ್ಯೋತ್ಸವ ಪ್ರಶಸ್ತಿ ಆಯ್ಕೆ ವೇಳೆ ಛಾಯಾಗ್ರಾಹಕರನ್ನು ಪ್ರತ್ಯೇಕ ವಿಭಾಗ ಮಾಡಿ ಪ್ರಶಸ್ತಿ ನೀಡಬೇಕು ಎಂಬ ಬೇಡಿಕೆಗೆ ಪ್ರತಿಕ್ರಿಯಿಸಿದ ಅವರು, ಪ್ರತ್ಯೇಕವಾಗಿ ಛಾಯಾಗ್ರಾಹಕರಿಗೆ ಪ್ರಶಸ್ತಿ ನೀಡಲು ಸಾಧ್ಯವಿಲ್ಲ.ಈ ಬಾರಿ ರಾಜ್ಯೋತ್ಸವ ಪ್ರಶಸ್ತಿಯನ್ನು 50ಕ್ಕೆ ಸೀಮಿತಗೊಳಿಸಲು ಮುಖ್ಯಮಂತ್ರಿಗಳು ಒಲವು ತೋರಿದ್ದಾರೆ. ಪ್ರಶಸ್ತಿ ನೀಡುವಾಗ ಯಾವುದೇ ಶಿಫಾರಸುಗಳಿಗೆ ಮಣೆ ಹಾಕುವುದಿಲ್ಲ ಎಂದು ಸ್ಪಷ್ಟಪಡಿಸಿದರು.

ಈ ಬಾರಿ ಛಾಯಾಗ್ರಾಹಕರನ್ನು ನಿರ್ಲಕ್ಷಿಸದೆ ಆದ್ಯತೆ ಮೇರೆಗೆ ಪ್ರಶಸ್ತಿ ನೀಡಲು ಚಿಂತಿಸಲಾಗುವುದು ಎಂದು ಭರವಸೆ ನೀಡಿದರು.ಚಿತ್ರ ನಿರ್ದೇಶಕ ಹಾಗೂ ರಂಗಕರ್ಮಿ ಎಂ.ಎಸ್. ಸತ್ಯು, `ಪ್ರಕೃತಿಯ ಅದ್ಭುತ ಸೌಂದರ್ಯವನ್ನು ಕ್ಯಾಮೆರಾ ಕಣ್ಣಲ್ಲಿ ಸೆರೆ ಹಿಡಿದು ಜನರಿಗೆ ವೀಕ್ಷಿಸುವ ಭಾಗ್ಯ ಕಲ್ಪಿಸುವುದು ಉತ್ತಮ ಕೆಲಸ. ಛಾಯಾಗ್ರಾಹಕರ ಈ ಕಾರ್ಯದ ಹಿಂದೆ ಸಾಕಷ್ಟು ಪರಿಶ್ರಮವಿದೆ. ಜನರು ಇಂತಹ ಪ್ರದರ್ಶನಗಳನ್ನು ವೀಕ್ಷಿಸಿದರೆ ಅವರ ಶ್ರಮಕ್ಕೆ ಬೆಲೆ ದೊರೆತಂತಾಗುತ್ತದೆ~ ಎಂದು ನುಡಿದರು.`ಬಾಲ್ಯದಿಂದಲೂ ನಾನು ಛಾಯಾಗ್ರಾಹಕನಾಗುವ ಕನಸು ಹೊಂದಿದ್ದೆ. ಕಾರಣಾಂತರಗಳಿಂದ ಸಾಧ್ಯವಾಗಲಿಲ್ಲ. ಬಾಲ್ಯದ ಕನಸು ಹಾಗೆಯೇ ಉಳಿದಿದೆ. ರಂಗಭೂಮಿ ಸೆಳೆತದಿಂದ ಕನಸನ್ನು ಕೈಬಿಡಬೇಕಾಯಿತು~ ಎಂದು ಅವರು ತಮ್ಮ ಅಭಿಪ್ರಾಯ ಹಂಚಿಕೊಂಡರು.ಸಂಸ್ಥೆಯ ಸಂಚಾಲಕಿ ಸೌಮ್ಯ ಪಿ.ಕುಮಾರ್, ಹಿರಿಯ ವನ್ಯಜೀವಿ ಛಾಯಾಗ್ರಾಹಕ ಟಿ.ಎನ್. ಎ.ಪೆರುಮಾಳ್ ಇತರರು ಉಪಸ್ಥಿತರಿದ್ದರು. ಈ ಛಾಯಾಚಿತ್ರ ಪ್ರದರ್ಶನವು ಇದೇ 17ರವರೆಗೆ ನಡೆಯಲಿದೆ. ಸಾರ್ವಜನಿಕರಿಗೆ ಉಚಿತ ಪ್ರವೇಶ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry