ಬುಧವಾರ, ಜೂನ್ 3, 2020
27 °C

ಛಾಯಾ ವಿಶಿಷ್ಟ ವಿಶೇಷ ಛಾಯಾಚಿತ್ರ ಪ್ರದರ್ಶನ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಛಾಯಾ ವಿಶಿಷ್ಟ ವಿಶೇಷ ಛಾಯಾಚಿತ್ರ ಪ್ರದರ್ಶನ

ಬೆಂಗಳೂರು: `ರಾಜ್ಯದ ಛಾಯಾಚಿತ್ರ ಕಲೆ ಬೆಳೆದು ಬಂದ ದಾರಿ, ತಂತ್ರಜ್ಞಾನದ ಬೆಳವಣಿಗೆ ಹಾಗೂ ಯುವ ಛಾಯಾಗ್ರಾಹಕರನ್ನು ಪ್ರೋತ್ಸಾಹಿಸುವ ನಿಟ್ಟಿನಲ್ಲಿ ಪ್ರಕೃತಿ ಕ್ರಿಯೇಷನ್ಸ್ ಸಂಸ್ಥೆಯು `ಛಾಯಾ ವಿಶಿಷ್ಟ~ ಎಂಬ ವಿಶೇಷ ಛಾಯಾಚಿತ್ರ ಪ್ರದರ್ಶನವನ್ನು ಏರ್ಪಡಿಸಿದೆ~ ಎಂದು ಸಂಸ್ಥೆಯ ಸಂಯೋಜಕಿ ಸೌಮ್ಯ ಪಿ.ಕುಮಾರ್ ತಿಳಿಸಿದರು. `ಅಂತರರಾಷ್ಟ್ರೀಯ ಮಾನ್ಯತೆ ಪಡೆದ ಹಾಗೂ ಅಂತರರಾಷ್ಟ್ರೀಯ ಮಾನ್ಯತೆ ಪಡೆಯಲು ಸಿದ್ಧರಾಗಿರುವ ಪ್ರಸಿದ್ಧ ಛಾಯಾಚಿತ್ರಗಾರರ ಚಿತ್ರಗಳು ಪ್ರದರ್ಶನದಲ್ಲಿ ಅನಾವರಣಗೊಳ್ಳಲಿವೆ~ ಎಂದು ಶನಿವಾರ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು.ಜಾಗತಿಕ ಮಟ್ಟದಲ್ಲಿ ಛಾಯಾಗ್ರಹಣ ಕಲೆಗಾಗಿ ಅಂತರರಾಷ್ಟ್ರೀಯ ಸಂಸ್ಥೆಗಳಾದ ಲಂಡನ್‌ನ ರಾಯಲ್ ಫೋಟೋಗ್ರಫಿ  ಸೊಸೈಟಿಯು `ಎಫ್‌ಆರ್‌ಪಿಎಸ್~ ಮತ್ತು ಮಾಸ್ಟರ್ ಫೆಡರೇಷನ್ ಇಂಟರ್‌ನ್ಯಾಷನಲ್ ಆರ್ಟ್ ಆಫ್ ಫೋಟೋಗ್ರಫಿಯು `ಎಂಎಫ್‌ಐಎಪಿ~ ಮಾನ್ಯತೆಯನ್ನು ನೀಡಿ ಅಂತಹ ಕಲಾವಿದರಿಗೆ `ಮಾಸ್ಟರ್ಸ್‌~ ಮತ್ತು `ಫೆಲೋ~ ನೀಡುತ್ತಿದೆ. ಈ ಗೌರವ ಪಡೆದ ರಾಜ್ಯದ ಕಲಾವಿದರು ಸಿದ್ಧಪಡಿಸಿರುವ 250 ಚಿತ್ರಗಳು ಪ್ರದರ್ಶನದ ಪ್ರಮುಖ ಆಕರ್ಷಣೆಯಾಗಲಿವೆ.ಅಂತರರಾಷ್ಟ್ರೀಯ ಮಾನ್ಯತೆ ಪಡೆದ 6 ಪ್ರಸಿದ್ಧ ಛಾಯಾಗ್ರಾಹಕರಾದ ದಿವಂಗತ ಸಿ.ರಾಜಗೋಪಾಲ್, ದಿ.ಡಾ.ಜಿ. ಥಾಮಸ್, ಎಂ.ವೈ.ಘೋರ್ಪಡೆ, ಟಿ.ಎನ್.ಎ.ಪೆರುಮಾಳ್, ದಿ.ಬಿ.ಎನ್.ದೇವ್ ಹಾಗೂ ಸಿ.ರಾಮಚಂದ್ರರಾವ್ ಅವರ ಕಪ್ಪು ಬಿಳುಪು ಚಿತ್ರಗಳು ಪ್ರದರ್ಶನದ ಕೇಂದ್ರಬಿಂದುವಾಗಲಿವೆ.ವಿಶೇಷತೆಯೆಂದರೆ 250 ಛಾಯಾಚಿತ್ರಗಳ ಪೈಕಿ 120ಕ್ಕೂ ಅಧಿಕ ಚಿತ್ರಗಳು ಕಪ್ಪು ಬಿಳುಪು. ವರ್ಣಚಿತ್ರಗಳಿಂದ ಹಿಡಿದು ಡಿಜಿಟಲ್ ತಂತ್ರಜ್ಞಾನದ ವರೆಗಿನ ಚಿತ್ರಗಳು ಪ್ರದರ್ಶನಗೊಳ್ಳಲಿದ್ದು, 65 ವರ್ಷಗಳಲ್ಲಿ ಛಾಯಾಚಿತ್ರ ಕ್ಷೇತ್ರದ ಬೆಳವಣಿಗೆಯನ್ನು ಇಲ್ಲಿ ಕಾಣಬಹುದಾಗಿದೆ.ಅಂತರರಾಷ್ಟ್ರೀಯ ಮಾನ್ಯತೆ ಪಡೆದ ದಿ.ಡಾ.ಜಿ.ಥಾಮಸ್ ಹಾಗೂ ಸಿ.ರಾಜಗೋಪಾಲ್ ಅವರು 40ರ ದಶಕದಲ್ಲಿ ಸೆರೆ ಹಿಡಿದ ಗ್ರಾಮೀಣ ಸೊಗಡಿನ ಜೀವನ, ಸಾಂಪ್ರದಾಯಿಕ ಶೈಲಿಯನ್ನು ನೆನಪಿಸುವ ಅಪರೂಪದ ಕಪ್ಪು ಬಿಳುಪು ಚಿತ್ರಗಳು ಮನ ಸೆಳೆಯಲಿವೆ.ಕರ್ನಾಟಕ ದೇಶದಲ್ಲೇ ಅಂತರರಾಷ್ಟ್ರೀಯ ಮಾನ್ಯತೆ ಪಡೆದ ಹೆಚ್ಚು ಛಾಯಾಗ್ರಾಹಕರನ್ನು ಹೊಂದಿರುವ ರಾಜ್ಯವಾಗಿದೆ. ಎಷ್ಟೋ ಛಾಯಾಗ್ರಾಹಕರಿಗೆ ಅಂತರರಾಷ್ಟ್ರೀಯ ಮಾನ್ಯತೆ ಪಡೆಯುವ ವಿಧಾನದ ಬಗ್ಗೆ ಮಾಹಿತಿಯ ಕೊರತೆ ಇದೆ. ಈ ಸಂಬಂಧ ಜಾಗೃತಿ ಮೂಡಿಸುವುದು ಪ್ರದರ್ಶನದ ಉದ್ದೇಶವಾಗಿದೆ.ಅಂತರರಾಷ್ಟ್ರೀಯ ಮಾನ್ಯತೆ ಹೊಂದಿದ ಹಾಗೂ ಪ್ರಸಿದ್ಧ ಛಾಯಾಗ್ರಾಹಕರಾದ ಬಿ.ಶ್ರೀನಿವಾಸ್, ಎಂ.ಎನ್.ಜಯಕುಮಾರ್, ಎಚ್.ವಿ.ಪ್ರವೀಣ್‌ಕುಮಾರ್, ಆರ್.ದೇವ್, ಎಸ್.ನಾಗರಾಜ್, ಎಸ್.ತಿಪ್ಪೇಸ್ವಾಮಿ, ಎಚ್.ಸತೀಶ್ ಅವರ ವನ್ಯಜೀವಿ ಮತ್ತು ಭಾವಾಭಿವ್ಯಂಜನ ವರ್ಣ ಚಿತ್ರಗಳು ಸಹ ಪ್ರದರ್ಶನದಲ್ಲಿವೆ. ಒಟ್ಟಾರೆ 13 ಛಾಯಾಗ್ರಾಹಕರ 250 ಛಾಯಾಚಿತ್ರಗಳು ಒಂದೇ ಬಾರಿ ಪ್ರದರ್ಶನಗೊಳ್ಳಲಿವೆ. ಪ್ರದರ್ಶನವನ್ನು ಸಚಿವ ಎಸ್.ಸುರೇಶ್‌ಕುಮಾರ್ ಅವರು ಉದ್ಘಾಟಿಸಲಿದ್ದಾರೆ. ಚಿತ್ರ ನಿರ್ದೇಶಕ ಎಂ.ಎಸ್.ಸತ್ಯು ಭಾಗವಹಿಸಲಿದ್ದಾರೆ.ಪತ್ರಿಕಾಗೋಷ್ಠಿಯಲ್ಲಿ ಛಾಯಾಗ್ರಾಹಕರಾದ ಟಿ.ಎನ್.ಎ.ಪೆರುಮಾಳ್, ಬಿ.ಶ್ರೀನಿವಾಸ್, ಎಚ್.ವಿ.ಪ್ರವೀಣ್‌ಕುಮಾರ್, ಎಂ.ಎನ್.ಜಯಕುಮಾರ್ ಇತರರು ಉಪಸ್ಥಿತರಿದ್ದರು.ಸನ್ಮಾನ-ಸಂವಾದ

ಪ್ರಕೃತಿ ಕ್ರಿಯೇಷನ್ಸ್ ಸಂಸ್ಥೆಯು ಛಾಯಾಗ್ರಹಣ ಕ್ಷೇತ್ರದಲ್ಲಿ ನೈಪುಣ್ಯತೆ ಪಡೆದ ಹಾಗೂ ಇದರ ಬೆಳವಣಿಗೆಗಾಗಿ ಶ್ರಮಿಸುತ್ತಿರುವ 8 ಮಂದಿ ಛಾಯಾಗ್ರಾಹಕರಿಗೆ ಇದೇ 15ರಂದು ಸನ್ಮಾನ ಕಾರ್ಯಕ್ರಮವನ್ನು ಹಮ್ಮಿಕೊಂಡಿದೆ. ಅಂದು ಸಂಜೆ 5.30ಕ್ಕೆ ನಡೆಯುವ ಕಾರ್ಯಕ್ರಮದಲ್ಲಿ ಅವರೊಂದಿಗೆ ಸಂವಾದವನ್ನೂ ಆಯೋಜಿಸಿದೆ. ಯುವ ಛಾಯಾಗ್ರಾಹಕರು, ಸಾರ್ವಜನಿಕರು ಛಾಯಾಚಿತ್ರಗಳ ಸಂಪೂರ್ಣ ಮಾಹಿತಿ, ಉಪಕರಣಗಳ ಬಳಕೆ ಹಾಗೂ ಹಲವು ವಿಷಯಗಳ ಬಗ್ಗೆ ಪ್ರದರ್ಶನದಲ್ಲಿ ಮಾಹಿತಿ ಪಡೆಯಬಹುದು.`ಛಾಯಾ ವಿಶಿಷ್ಟ~ ಪ್ರದರ್ಶನವು ನಗರದ ಕುಮಾರಕೃಪಾ ರಸ್ತೆಯಲ್ಲಿರುವ ಕರ್ನಾಟಕ ಚಿತ್ರಕಲಾ ಪರಿಷತ್ತಿನಲ್ಲಿ ಇದೇ 13ರಿಂದ 17ರವರೆಗೆ ನಡೆಯಲಿದೆ. ಬೆಳಿಗ್ಗೆ 10ರಿಂದ ಸಂಜೆ 7ರವರೆಗೆ ಸಾರ್ವಜನಿಕ ಪ್ರದರ್ಶನಕ್ಕೆ ಉಚಿತ ಪ್ರವೇಶವಿದೆ.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.