ಛಿದ್ರವಾಗಿವೆ ವಿಗ್ರಹ!

7

ಛಿದ್ರವಾಗಿವೆ ವಿಗ್ರಹ!

Published:
Updated:

ಉತ್ತರ ಕನ್ನಡ ಜಿಲ್ಲೆಯ ಮುಂಡಗೋಡ ತಾಲ್ಲೂಕಿನ ಬೆಡಸಗಾಂವ್ ವ್ಯಾಪ್ತಿಯಲ್ಲಿದೆ ಪುಟ್ಟ ಹಳ್ಳಿ ಟೆಂಕಾಲ್. ಯಲ್ಲಾಪುರದ ಉಮ್ಮಚಗಿಯಿಂದ ಸುಮಾರು 18 ಕಿ. ಮೀ. ದೂರದಲ್ಲಿದೆ ಇದು. ಅಲ್ಲಿರುವ ಕಾನನದ ಮಧ್ಯೆ ಸಹಸ್ರ ವರ್ಷಗಳಷ್ಟು ಪುರಾತನವಾದ ಶಿವನ ದೇವಾಲಯವೊಂದು ಪಾಳುಬಿದ್ದಿದೆ.

ವೀರಗಲ್ಲು, ಶಿವ, ಗಣಪತಿ, ವಿಷ್ಣು, ಸಪ್ತ ಮಾತೃಕೆಯ ವಿಗ್ರಹ, ನಂದಿ.... ಹೀಗೆ ಹತ್ತು ಹಲವು ವಿಗ್ರಹಗಳು ಛಿದ್ರವಾಗಿವೆ. ನಿಧಿಯ ಆಸೆಗಾಗಿ ಕಳ್ಳ ಖದೀಮರು ದೇವಾಲಯದ ವಿವಿಧ ಭಾಗಗಳನ್ನು ಅಗೆದು ಧ್ವಂಸಗೊಳಿಸಿದ್ದಾರೆ. ಶಿಲಾ ಮೂರ್ತಿಗಳನ್ನು ಯದ್ವಾತದ್ವಾ ಎಸೆಯಲಾಗಿದೆ.

ವೀರಗಲ್ಲಿನಲ್ಲಿಯೂ ಉಬ್ಬು ಚಿತ್ರಗಳಿದ್ದು, ಅವು ಅಸ್ಪಷ್ಟವಾಗಿ ಗೋಚರಿಸುತ್ತಿವೆ. ಕಲ್ಯಾಣಿ ಚಾಲುಕ್ಯರ ಶೈಲಿಯಲ್ಲಿಯೇ ಈ ದೇವಾಲಯವನ್ನು ನಿರ್ಮಾಣ ಮಾಡಲಾಗಿದೆ.

ಸುಮಾರು 200-300 ವರ್ಷಗಳ ಹಿಂದೆಯೇ ಜೀರ್ಣೋದ್ಧಾರ ಮಾಡಿದ  ಕುರುಹೂ ಇಲ್ಲಿದೆ. ಈ ಶಿವನ ದೇವಾಲಯವು ಮುಖ ಮಂಟಪ, ಸಭಾ ಮಂಟಪ, ಸಾಲಂಕೃತ ಸುಂದರ ಕಂಬಗಳಿರುವ ನವರಂಗ, ಅಂತರಾಳ, ಗರ್ಭಗೃಹವನ್ನು ಹೊಂದಿರುವುದು ಸ್ಪಷ್ಟವಾಗಿ ಕಾಣುತ್ತದೆ. ಅಲ್ಲದೆಯೇ ದೇವಾಲಯದ ಎದುರಿನಲ್ಲಿಯೇ ಪುಟ್ಟದಾದ ಧ್ವಜಸ್ತಂಭ, ಬಲಿಪೀಠವೂ ಇದೆ.

ಈ ಶಿವ ದೇವಾಲಯದ ವಾಸ್ತು ಶಿಲ್ಪದ ಶೈಲಿ, ಲಲಾಟ ಬಿಂಬದಲ್ಲಿರುವ ಗಜ ಲಕ್ಷ್ಮಿಯ ಚಿತ್ರ, ಸಪ್ತ ಮಾತೃಕೆಯ ಲಕ್ಷಣಗಳನ್ನು ನೋಡಿದಾಗ ಅದು ಹಾನಗಲ್ ಕದಂಬರ ಕಾಲದಲ್ಲಿ (10-11 ನೇ ಶತಮಾನ) ನಿರ್ಮಾಣ ಆಗಿರಬಹುದೆಂಬ ಅಭಿಪ್ರಾಯವನ್ನು ಸಂಶೋಧಕರು ವ್ಯಕ್ತಪಡಿಸಿದ್ದಾರೆ.

ಇದರ ಹೊರತಾಗಿಯೂ ಜನರ ಭಕ್ತಿ ನಿಂತಿಲ್ಲ. ಹಬ್ಬ ಹರಿದಿನಗಳಲ್ಲಿ ಇಲ್ಲಿ ಪೂಜೆ ನಡೆಯುತ್ತದೆ. ಪುರಾತನವಾಗಿರುವ ದೇವಾಲಯದ ಜೀರ್ಣೋದ್ಧಾರಕ್ಕೆ ಸರ್ಕಾರ ಮುಂದಾದರೆ ಒಳಿತು ಎನ್ನುವುದು ಜನರ ಆಗ್ರಹ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry