ಜಂಗಮ ಜೋಗಿಯ ಸಾಂಗತ್ಯದಲ್ಲಿ...

7

ಜಂಗಮ ಜೋಗಿಯ ಸಾಂಗತ್ಯದಲ್ಲಿ...

Published:
Updated:
ಜಂಗಮ ಜೋಗಿಯ ಸಾಂಗತ್ಯದಲ್ಲಿ...

ಒಂದು ಶತಮಾನಕ್ಕೂ ಹಿಂದೆ ರವೀಂದ್ರನಾಥ ಟ್ಯಾಗೋರರು ಹೀಗೆ ಬರೆದಿದ್ದರು- `ನಿಮಗೆ ಭಾರತದ ಬಗ್ಗೆ ಅರಿಯಬೇಕೆಂದಿದ್ದರೆ ವಿವೇಕಾನಂದರ ಬಗ್ಗೆ ಅಧ್ಯಯನ ಮಾಡಿ, ಅವರಲ್ಲಿ ಇರುವುದೆಲ್ಲವೂ ಸಕಾರಾತ್ಮಕವೇ ಹೊರತು ನಕಾರಾತ್ಮಕವಾದುದು ಯಾವುದೂ ಇಲ್ಲ~

ನೊಬೆಲ್ ಪುರಸ್ಕೃತ ಫ್ರಾನ್ಸ್ ಸಾಹಿತಿ ರೊಮೇನ್ ರೋಲ್ಯಾಂಡ್ ಹೇಳುತ್ತಿದ್ದರು-`ವಿವೇಕಾನಂದರ ನುಡಿಮುತ್ತುಗಳನ್ನು ಈಗ ಓದಿದರೂ ನನ್ನಲ್ಲಿ ವಿದ್ಯುತ್ ಸಂಚಾರದ ಅನುಭವ ಆಗದೇ ಇರದು. ಇನ್ನು ಆ ಚೈತನ್ಯಶಾಲಿ ಉದ್ಗಾರಗಳು ಸ್ವತಃ ಅವರ ಬಾಯಿಯಿಂದಲೇ ಹೊರಹೊಮ್ಮಿದಾಗ ಅವು ಎಂತೆಂತಹ ತರಂಗಗಳನ್ನು ಎಬ್ಬಿಸಿರಬಹುದು, ಯಾವ ಬಗೆಯ ಸಂಚಲನ ಸೃಷ್ಟಿಸಿರಬಹುದು ಎಂಬುದು ಊಹಿಸಲಸಾಧ್ಯ.

 

ಸ್ವಾಮಿ ವಿವೇಕಾನಂದರನ್ನು ಭೇಟಿ ಮಾಡಲು ಸಾಧ್ಯವಾಗದೇ ಇದ್ದುದು ಮತ್ತು ಶಿಷ್ಯನಾಗಿ ಅವರ ಪದತಲದಲ್ಲಿ ಅಭ್ಯಸಿಸುವ  ಅವಕಾಶ ಸಿಗದಿದ್ದುದು ನನ್ನ ಬದುಕಿನಲ್ಲಿ ಉಳಿದುಹೋದ ಅತಿ ದೊಡ್ಡ ಕೊರಗು~.ಇಡೀ ತಮ್ಮ ಜೀವನವನ್ನೇ ಮುಡಿಪಾಗಿಟ್ಟರೂ ವಿವೇಕಾನಂದರು ಮತ್ತು ಅವರ ವ್ಯಕ್ತಿತ್ವವನ್ನು ಅರ್ಥ ಮಾಡಿಕೊಳ್ಳಲು ಸಾಧ್ಯವಾಗದೇ ಇರುವಂತಹ ಹಲವರಿದ್ದಾರೆ. ವಿವೇಕಾನಂದರ ಬೌದ್ಧಿಕ ಪ್ರಭೆ ಅಷ್ಟು ಸುಲಭವಾಗಿ ನಿಲುಕುವಂತಹುದೂ ಅಲ್ಲ. ಅವರ ಬಗ್ಗೆ ಟೀಕೆ ಮಾಡಬೇಕೆಂದು ಯೋಚಿಸುವವರು ಅದಕ್ಕಿಂತ ಮೊದಲು ಅವರ ಸಂದೇಶಗಳನ್ನು ಅರ್ಥ ಮಾಡಿಕೊಳ್ಳಬೇಕು, ಅದರಂತೆ ಬದುಕಲು ಪ್ರಯತ್ನಿಸಬೇಕು.

100 ವರ್ಷಗಳಿಗಿಂತಲೂ ಹೆಚ್ಚು ಹಿಂದೆ ಬದುಕಿದ್ದ ಸ್ವಾಮೀಜಿ ಇಂದಿಗೂ ಜನರಿಗೆ ಸ್ಫೂರ್ತಿಯ ಸೆಲೆಯಾಗಿಯೇ ಉಳಿದಿರುವುದು ಹೇಗೆ ಎಂಬುದು ಮಾತ್ರ ನನ್ನನ್ನು ಮಂತ್ರಮುಗ್ಧನನ್ನಾಗಿಸಿದೆ.1893ರಲ್ಲಿ ಸ್ವಾಮಿ ವಿವೇಕಾನಂದರು ಮತ್ತು ಹಾರ್ವರ್ಡ್ ವಿಶ್ವವಿದ್ಯಾಲಯದ ಪ್ರೊ. ಜಾನ್ ಹೆನ್ರಿ ರೈಟ್ ಅವರ ಭೇಟಿಯಾಗುತ್ತದೆ. ಆಗ ಧರ್ಮ ಸಮ್ಮೇಳನಕ್ಕೆ ಆಹ್ವಾನಿಸುವ ಸಲುವಾಗಿ ತಮ್ಮ ಪರಿಚಯ ಮಾಡಿಕೊಳ್ಳುವಂತೆ ರೈಟ್ ಅವರು ವಿವೇಕಾನಂದರನ್ನು ಕೇಳುತ್ತಾರೆ. ಕೆಲ ಹೊತ್ತು ಚರ್ಚಿಸಿದ ಬಳಿಕ ರೈಟ್ ಹೇಳುತ್ತಾರೆ `ಸ್ವಾಮಿ, ನಿಮ್ಮ ಬಳಿ ನಿಮ್ಮ ಪರಿಚಯ ಕೇಳುವುದೆಂದರೆ ಪ್ರಕಾಶಿಸುವ ತನ್ನ ಹಕ್ಕಿನ ಬಗ್ಗೆ ಸೂರ್ಯನ ಬಳಿಯೇ ವಿವರ ಕೇಳಿದಂತೆ~.ಹಾರ್ವರ್ಡ್ ವಿ.ವಿಯ ಪೌರಾತ್ಯ ತತ್ವಶಾಸ್ತ್ರ ವಿಭಾಗ ಮುಖ್ಯಸ್ಥ ಹುದ್ದೆಗೆ ಆಹ್ವಾನಿತರಾದ ಮೊದಲ ಭಾರತೀಯ ವ್ಯಕ್ತಿ ಸ್ವಾಮಿ ವಿವೇಕಾನಂದರು. ಆದರೆ ಅವರು ತನ್ನಂತಹ `ಜಂಗಮ ಜೋಗಿ~ಗೆ ಒಂದು ಕಡೆ ಕುಳಿತು ಮಾಡುವ ಕೆಲಸ ಸರಿಹೊಂದದು ಎಂದು ಈ ಆಹ್ವಾನವನ್ನು ನಯವಾಗಿಯೇ ತಳ್ಳಿಹಾಕಿದ್ದರು.ವೇದಾಂತ ಮತ್ತು ಅದ್ವೈತ ತತ್ವಶಾಸ್ತ್ರದಂತಹ ಸಂಕೀರ್ಣ ವಿಷಯಗಳನ್ನು ಸುಲಭವಾಗಿ ಅರ್ಥವಾಗುವಂತೆ ಸರಳವಾದ ಇಂಗ್ಲಿಷ್ ಭಾಷೆಯಲ್ಲಿ ವಿವರಿಸಿರುವುದನ್ನು ನೋಡಿದರೇ, ವಿವೇಕಾನಂದರ ಪ್ರಖರ ಪಾಂಡಿತ್ಯ ಹಾಗೂ ಬೌದ್ಧಿಕ ಸಾಮರ್ಥ್ಯದ ಅರಿವು ನಮಗಾಗುತ್ತದೆ.ಇದನ್ನು ಸ್ವಾಮೀಜಿ ಅವರ ಮಾತಿನಲ್ಲೇ ಕೇಳುವುದಾದರೆ- `ಹಿಂದೂ ಧರ್ಮದ ಪರಿಕಲ್ಪನೆಗಳನ್ನು ಇಂಗ್ಲಿಷ್‌ಗೆ ಭಾಷಾಂತರಿಸಿ, ಆ ಮೂಲಕ ಶುಷ್ಕ ತತ್ವಶಾಸ್ತ್ರ, ಜಟಿಲ ಪುರಾಣಶಾಸ್ತ್ರ ಮತ್ತು ವಿಲಕ್ಷಣವಾದ ಮನಃಶಾಸ್ತ್ರವನ್ನು ಸುಲಭ, ಸರಳ, ಜನಮಾನಸ ತಟ್ಟುವಂತಹ ಧರ್ಮವನ್ನಾಗಿ ಪರಿವರ್ತಿಸಬೇಕು. ಇದರ ಜೊತೆಜೊತೆಗೇ ಅದು ಶ್ರೇಷ್ಠ ವ್ಯಕ್ತಿಗಳ ಅಗತ್ಯಗಳಿಗೂ ಸ್ಪಂದಿಸುವಂತಿರಬೇಕು.ಇದು ಎಷ್ಟು ಕಷ್ಟದ ಕೆಲಸ ಎಂಬುದು ಈ ನಿಟ್ಟಿನಲ್ಲಿ ಪ್ರಯತ್ನ ಮಾಡಿದವರಿಗಷ್ಟೇ ಗೊತ್ತು. ಶುಷ್ಕ ಮತ್ತು ಅಮೂರ್ತ ಅದ್ವೈತವು ಚಲನಶೀಲವಾಗಿ, ಕಾವ್ಯಾತ್ಮಕವಾಗಿ ದಿನನಿತ್ಯದ ಬದುಕಿನಲ್ಲಿ ಹಾಸುಹೊಕ್ಕಾಗಬೇಕು. ಆಶಾರಹಿತ ಮತ್ತು ಜಟಿಲವಾದ ಪುರಾಣಶಾಸ್ತ್ರದಿಂದ ವಾಸ್ತವಿಕವಾದ ನೈತಿಕ ನೆಲೆಗಟ್ಟು ರೂಪುಗೊಳ್ಳಬೇಕು.ದಿಗಿಲು ಹುಟ್ಟಿಸುವ ಯೋಗಿತ್ವದಿಂದ ಅತ್ಯಂತ ವೈಜ್ಞಾನಿಕ ಮತ್ತು ಪ್ರಾಯೋಗಿಕವಾದ ಮನಃಶಾಸ್ತ್ರ ಹರಳುಗಟ್ಟಬೇಕು. ಒಟ್ಟಾರೆ ಇವೆಲ್ಲದರ ಸಾರ, ಸಣ್ಣ ಮಗುವಿನ ಗ್ರಹಿಕೆಗೂ ನಿಲುಕುವಂತಿರಬೇಕು. ಅದೇ ನನ್ನ ಜೀವನದ ಕಾರ್ಯ~.ಈ ಮಾತುಗಳು ಸ್ವಾಮೀಜಿಯ ಅಸಾಧಾರಣ ಪ್ರತಿಭೆಯನ್ನು ಪ್ರತಿಫಲಿಸುತ್ತವೆ.ಇವೆಲ್ಲವುಗಳ ಬಗ್ಗೆ ಅವರು ತಮ್ಮ ಹಲವಾರು ಶಿಷ್ಯಂದಿರಿಗೆ ಮಾತ್ರ ಬೋಧಿಸಲಿಲ್ಲ, ಮಾನವ ಕುಲಕ್ಕೆ ಇಂದಿಗೂ ಅತ್ಯಂತ ಪ್ರಸ್ತುತ ಮತ್ತು ಅತ್ಯವಶ್ಯಕ ಆಗಿರುವಂತಹ ತಮ್ಮ ಬರಹಗಳ ಅಪಾರ ಸಂಗ್ರಹವನ್ನೇ ಬಿಟ್ಟು ಹೋಗಿದ್ದಾರೆ.

 

(ಡಾ. ಆರ್.ಬಾಲಸುಬ್ರಹ್ಮಣ್ಯಂ, ಸ್ವಾಮಿ ವಿವೇಕಾನಂದ ಯುವ ಚಳವಳಿಯ ಸಂಸ್ಥಾಪಕ, ಮೈಸೂರು ವಿ.ವಿ ವಿವೇಕಾನಂದ ಅಧ್ಯಯನ ಪೀಠದ  ಮಾಜಿ ಮುಖ್ಯಸ್ಥ. ಇನ್ನು ಮುಂದೆ ಪ್ರತೀವಾರ ತಾವು ಕಂಡುಕೊಂಡ ವಿವೇಕಾನಂದರ ಬಗ್ಗೆ ಬರೆಯುತ್ತಾರೆ.)

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry