ಜಂಟಲ್‌ಮ್ಯಾನ್ ಕ್ರೀಡಾಪಟು

7

ಜಂಟಲ್‌ಮ್ಯಾನ್ ಕ್ರೀಡಾಪಟು

Published:
Updated:

ಅದು 1980. ಮಾಸ್ಕೋದಲ್ಲಿ ಒಲಿಂಪಿಕ್ಸ್‌ಗೆ ಸಿದ್ಧತೆ ನಡೆಯುತ್ತಿದ್ದ ಸಮಯ. ಕೂಟದಲ್ಲಿ ಭಾಗವಹಿಸಲು ಅರ್ಹತೆಗಾಗಿ ನಿಗದಿಪಡಿಸಿದ ‘ರೇಖೆ’ ಯನ್ನು ದಾಟಿದ್ದರು ಅವರು. ಆದರೆ ದುರದೃಷ್ಟ ಕಾಡಿತು. ದಿಢೀರ್ ಅಸ್ವಸ್ಥರಾದ ಕಾರಣ ಒಲಿಂಪಿಕ್ಸ್‌ನಲ್ಲಿ ಭಾಗವಹಿಸುವ ಕನಸನ್ನುಕೈಬಿಟ್ಟರು. ನಿರಾಸೆಯಾದರೂ ಭರವಸೆಯ ಫೀಲ್ಡ್‌ನಿಂದ ಹೊರಬರಲಿಲ್ಲ,ಅದೃಷ್ಟ ವನ್ನು ಹಳಿಯುತ್ತಾ ಕೂರಲಿಲ್ಲ. ಇಂಥ ಆತ್ಮಸ್ಥೈರ್ಯಕ್ಕೆ ಮುಖ್ಯ ಕಾರಣ, ಅವರು ಆಗಲೇ ಒಲಿಂಪಿಕ್ಸ್‌ನಲ್ಲಿ ದಾಖಲೆಯೊಂದನ್ನು ಬರೆದಾಗಿತ್ತು. 1972ರ ಮ್ಯೂನಿಚ್ ಒಲಿಂಪಿಕ್ಸ್‌ನಲ್ಲಿ ಹೈಜಂಪ್‌ನಲ್ಲಿ ಸ್ಪರ್ಧಿಸಿದ್ದ ಅವರು, ಒಲಂಪಿಕ್ಸ್‌ನಲ್ಲಿ ಭಾಗವಹಿಸಿದ ಭಾರತದ ಅತಿಕಿರಿಯ ಕ್ರೀಡಾಪಟು ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದರು. ಆಗ ಅವರ ವಯಸ್ಸು ಕೇವಲ 19 ವರ್ಷ.ಅವರ ಹೆಸರು ಸುರೇಶ್ ಬಾಬು, ರಾಂಚಿಯಲ್ಲಿ ನಡೆದ ರಾಷ್ಟ್ರೀಯ ಕ್ರೀಡಾಕೂಟದ ಸಂದರ್ಭದಲ್ಲಿ ಕುಸಿದು ಬಿದ್ದು ಫೆಬ್ರುವರಿ 19ರಂದು ಸಾವಿ ಗೀಡಾದ ಕ್ರೀಡಾಪಟು. ಹೈಜಂಪ್‌ನಿಂದ ಲಾಂಗ್‌ಜಂಪ್ ಹಾಗೂ ಟ್ರಿಪಲ್ ಜಂಪ್‌ನತ್ತ ‘ನೆಗೆದ’ ಅವರು ಡೆಕಾಥ್ಲಾನ್‌ನಲ್ಲೂ ಸಾಧನೆ ಮೆರೆದಿದ್ದರು.1975ರ ಸೋಲ್ ಏಷ್ಯನ್ ಚಾಂಪಿಯನ್‌ಷಿಪ್‌ನ ಡೆಕಾಥ್ಲಾನ್‌ನಲ್ಲಿ ಕಂಚಿನ ಪದಕವನ್ನು ಕೊರಳಿಗೇರಿಸಿದರು.1978ರ ಎಡ್ಮಂಟನ್ ಕಾಮನ್‌ವೆಲ್ತ್ ಗೇಮ್ಸ್‌ನಲ್ಲಿ ಲಾಂಗ್‌ಜಂಪ್‌ನಲ್ಲಿ ಕಂಚಿನ ಪದಕಕ್ಕೆ ಮುತ್ತಿಟ್ಟ ಅವರು ಕಾಮನ್‌ವೆಲ್ತ್ ಗೇಮ್ಸ್‌ನಲ್ಲಿ ಪದಕ ಗೆದ್ದ ಮೊದಲ ಮಲಯಾಳಿ ಎಂಬ ಹೆಸರನ್ನು ಕೂಡ ತಮ್ಮದಾಗಿಸಿಕೊಂಡರು.ಅದೇ ವರ್ಷ ಬ್ಯಾಂಕಾಕ್‌ನಲ್ಲಿ ನಡೆದ ಏಷ್ಯಾಡ್‌ನಲ್ಲಿ ಲಾಂಗ್‌ಜಂಪ್ ವಿಭಾಗದಲ್ಲಿ ಚಿನ್ನವನ್ನು ಮುಡಿಗೇರಿಸಿಕೊಂಡ ಅವರು ಮುಂದಿನ ವರ್ಷ ಟೋಕಿಯೋದಲ್ಲಿ ನಡೆದ ಏಷ್ಯನ್ ಅಥ್ಲೆಟಿಕ್ಸ್ ಕೂಟದಲ್ಲಿ ಲಾಂಗ್‌ಜಂಪ್‌ನಲ್ಲಿ ಬೆಳ್ಳಿ ಪದಕವನ್ನು ಗಳಿಸಿದರು.ಭಾರತ ಕ್ರೀಡಾಕ್ಷೇತ್ರದ ಜಂಟಲ್‌ಮ್ಯಾನ್ ಎಂದೇ ಇವರನ್ನು ಕರೆಯಲಾಗುತ್ತಿತ್ತು. ಹದಿನೇಳು ಅಂತರರಾಷ್ಟ್ರೀಯ ಕೂಟಗಳಲ್ಲಿ ಭಾರತದ ಜರ್ಸಿ ತೊಟ್ಟ ಅವರು 1972ರಿಂದ 79ರವರೆಗೆ ಹೈಜಂಪ್, ಲಾಂಗ್‌ಜಂಪ್, ಟ್ರಿಪಲ್‌ಜಂಪ್ ಹಾಗೂ ಡೆಕಾಥ್ಲಾನ್‌ನಲ್ಲಿ (1974, 1977, 1979ರಲ್ಲಿ ಲಾಂಗ್ ಜಂಪ್, 1974, 1976, 1978ರಲ್ಲಿ ಟ್ರಿಪಲ್ ಜಂಪ್, 1974, 1975 ಹಾಗೂ 1978ರಲ್ಲಿ ಡೆಕಾಥ್ಲಾನ್) ರಾಷ್ಟ್ರೀಯ ಚಾಂಪಿಯನ್ ಆಗಿ ಮೆರೆದಿದ್ದರು.ನಿರಂತರ ಎರಡು ಏಷ್ಯನ್ ಕ್ರೀಡಾಕೂಟಗಳಲ್ಲಿ ಎರಡು ವಿಭಾಗಗಳಲ್ಲಿ ಪದಕ ಗೆದ್ದ ಅಪರೂಪದ ಸಾಧನೆಯೂ ಅವರ ಹೆಸರಿನಲ್ಲಿದೆ. (1974ರ ಟೆಹ್ರಾನ್ ಏಷ್ಯನ್ ಗೇಮ್ಸ್‌ನ ಡೆಕಾಥ್ಲಾನ್‌ನಲ್ಲಿ ಕಂಚಿನ ಪದಕ ಗೆದ್ದಿದ್ದ ಅವರು 1978ರ ಬ್ಯಾಂಕಾಕ್ ಏಷ್ಯನ್ ಗೇಮ್ಸ್‌ನ ಲಾಂಗ್ ಜಂಪ್‌ನಲ್ಲಿ ಚಿನ್ನದ ಪದಕವನ್ನು ತಮ್ಮದಾಗಿಸಿಕೊಂಡಿದ್ದರು). ಏಳು ವರ್ಷಗಳ ವೈಯಕ್ತಿಕ ಸಾಧನೆಗಳ ನಡುವೆ ಅವರು ಕೇರಳ ವಿದ್ಯುತ್ ಮಂಡಳಿಯಲ್ಲಿ ಕ್ರೀಡಾ ಅಧಿಕಾರಿಯಾಗಿ ಸೇವೆಗೆ ಸೇರಿಕೊಂಡರು. 1985ರಲ್ಲಿ ಪಟಿಯಾಲಾದ ರಾಷ್ಟ್ರೀಯ ಕ್ರೀಡಾ ಸಂಸ್ಥೆಯಲ್ಲಿ ಕ್ರೀಡಾ ಅಧಿಕಾರಿ ತರಬೇತಿ ಪೂರ್ಣಗೊಳಿಸಿದ ನಂತರ ಅಥ್ಲೀಟ್‌ಗಳ ರಾಷ್ಟ್ರೀಯ ಆಯ್ಕೆಗಾರರಾಗಿ, ಭಾರತ ಅಥ್ಲೀಟ್‌ಗಳ ತರಬೇತುದಾರರಾಗಿ ಕಾರ್ಯನಿರ್ವಹಿಸಿದ ಸುರೇಶ್ ಬಾಬು 2004ರಲ್ಲಿ ರಾಷ್ಟ್ರೀಯ ಕಿರಿಯರ ಅಥ್ಲೆಟಿಕ್ ತಂಡದ ಮುಖ್ಯ ತರಬೇತುದಾರರಾಗಿಯೂ ಸೇವೆ ಸಲ್ಲಿಸಿ ಅಪಾರ ಅನುಭವದ ಖಣಿಯಾಗಿದ್ದರು.ಈ ಹಿನ್ನೆಲೆಯಲ್ಲಿ ಕ್ರೀಡೆಗೆ ಸಂಬಂಧಿಸಿದ ಯಾವುದೇ ಸಂದೇಹಗಳಿಗೆ  ಕ್ಷಣಾರ್ಧದಲ್ಲಿ ಉತ್ತರ ಬೇಕೆಂದರೆ ಸುರೇಶ್ ಬಾಬು ಅವರನ್ನು ಭೇಟಿ ಮಾಡಬೇಕೆಂಬ ಮಾತೇ ಚಾಲ್ತಿಯಲ್ಲಿತ್ತು.ಕ್ರೀಡೆಗೆ ಅರ್ಪಿಸಿಕೊಂಡ ಅವರ ಜೀವನದ ಓಟ ಕ್ರೀಡಾಂಗಣದಲ್ಲೇ ಕೊನೆಗೊಂಡದ್ದು ವಿಧಿಯ ವೈಚಿತ್ರ್ಯ. ರಾಂಚಿಯಲ್ಲಿ ನಡೆದ ರಾಷ್ಟ್ರೀಯ ಕ್ರೀಡಾಕೂಟದಲ್ಲಿ ಪಾಲ್ಗೊಂಡ ಕೇರಳ ತಂಡದ ಮುಖ್ಯಸ್ಥರಾಗಿ ತೆರಳಿದ್ದ ಅವರು ಫೆಬ್ರುವರಿ 19ರಂದು ಕುಸಿದು ಬಿದ್ದು ಮೃತರಾಗಿದ್ದರು.

ಸುರೇಶ್ ಬಾಬು ಅವರ ಸಹೋದರರು ಕೂಡ ಕ್ರೀಡಾ ಕ್ಷೇತ್ರಕ್ಕೆ ತಮ್ಮನ್ನು ಅರ್ಪಿಸಿಕೊಂಡಿದ್ದಾರೆ. ಸಹೋದರ ಸೋಮರಾಜ್ ತಲಚ್ಚೇರಿ ಸಾಯಿಯ ಮಾಜಿ ನಿರ್ದೇಶಕ. ಸಹೋದರಿ ಸರೋಜಾ ಕೊಲ್ಲಂ ಜಿಲ್ಲೆಯ ಪ್ರತಿಷ್ಠಿತ ಎಸ್.ಎನ್. ಕಾಲೇಜಿನ ಕ್ರೀಡಾ ವಿಭಾಗದ ಮಾಜಿ ಮುಖ್ಯಸ್ಥೆ.

ಇನ್ನೊಬ್ಬ ಸಹೋದರ ಸುಶೀಲನ್ ಜಾವೆಲಿನ್ ಥ್ರೋದಲ್ಲಿ ಮಾಜಿ ರಾಷ್ಟ್ರೀಯ ಚಾಂಪಿಯನ್. ಸತ್ಯಾನಂದ, ಸಾಯಿ ತರಬೇತುದಾರ.

ಕೇರಳದ ಕೊಲ್ಲಂ ಜಿಲ್ಲೆಯ ಪಟ್ಟತ್ತಾನಂ ಎಂಬಲ್ಲಿ ಭಾಸ್ಕರ ಹಾಗೂ ನಳಿನಿ ದಂಪತಿ ಮಗನಾಗಿ 1953ರ ಫೆಬ್ರುವರಿ 10ರಂದು ಜನನ, ವಿಜ್ಞಾನ ಪದವೀಧರ.

ಶಾಲಾ ದಿನಗಳಲ್ಲೇ ಕ್ರೀಡೆಯಲ್ಲಿ ಅಸಾಮಾನ್ಯ ಪ್ರತಿಭೆ ಹೊಂದಿದ್ದ ಸುರೇಶ್ ಬಾಬು 1969ರಲ್ಲಿ ಜಲಂಧರ್‌ನಲ್ಲಿ ನಡೆದ ಕಿರಿಯರ ಕ್ರೀಡಾಕೂಟದಲ್ಲಿ ಮೊದಲ ಬಾರಿ ರಾಷ್ಟ್ರೀಯ ಮಟ್ಟದಲ್ಲಿ ಸ್ಪರ್ಧೆಗಿಳಿದಿದ್ದರು. ಮೂರು ವರ್ಷಗಳ ನಂತರ ಹೈಜಂಪ್‌ನಲ್ಲಿ ರಾಷ್ಟ್ರೀಯ ಚಾಂಪಿಯನ್ ಪಟ್ಟ ಮುಡಿಗೇರಿಸಿಕೊಂಡು ಮುಂದಿನ ಆರು ವರ್ಷ ಅದನ್ನು ತಮ್ಮಲ್ಲೇ ಉಳಿಸಿಕೊಂಡ ಅಪರೂಪದ ಸಾಧಕ.

 

ಮಾಸ್ಕೋದಲ್ಲಿ ನಡೆದ ಅಂತರರಾಷ್ಟ್ರೀಯ ವಿಶ್ವವಿದ್ಯಾಲಯ ಗೇಮ್ಸ್‌ನಲ್ಲಿ ಭಾರತ ತಂಡದ ನಾಯಕನಾಗುವ ಅಮೋಘ ಅವಕಾಶವೂ ಅವರದಾಗಿತ್ತು. 1978ರ ಎಡ್ಮಂಟನ್ ಕಾಮನ್‌ವೆಲ್ತ್ ಕ್ರೀಡಾಕೂಟದಲ್ಲಿ ಪಾಲ್ಗೊಂಡ ಭಾರತೀಯ ಅಥ್ಲೆಟಿಕ್ ತಂಡದ ನಾಯಕ ಕೂಡ ಅವರೇ ಆಗಿದ್ದರು. 1979ರಲ್ಲಿ ಮೋಂಟ್ರಿಯಲ್‌ನಲ್ಲಿ ನಡೆದ ವಿಶ್ವ ಅಥ್ಲೆಟಿಕ್ ಕೂಟದಲ್ಲಿ ಕೂಡ ಭಾರತ ತಂಡದ ನಾಯಕನಾಗಿದ್ದರು.ಅಥ್ಲೆಟಿಕ್ಸ್‌ನಿಂದ ನಿವೃತ್ತರಾದ ನಂತರ ಕೇರಳ ಕ್ರೀಡಾ ಮಂಡಳಿಯಲ್ಲಿ ಅಧಿಕಾರಿಯಾಗಿದ್ದ ಸುರೇಶ್ ಬಾಬು ಅಖಿಲ ಭಾರತ ಇಲೆಕ್ಟ್ರಿಸಿಟಿ ಸ್ಪೋರ್ಟ್ಸ್ ಕಂಟ್ರೋಲ್ ಮಂಡಳಿಯ ತಾಂತ್ರಿಕ ಸಮಿತಿ ಸದಸ್ಯರಾಗಿ, ಬೆಂಗಳೂರಿನ ಸಾಯಿ ದಕ್ಷಿಣ ಕೇಂದ್ರದ ತರಬೇತುದಾರರಾಗಿ, ಕೇರಳ ಹಾಗೂ ಲಕ್ಷದ್ವೀಪದ ಸಾಯಿ ಮೇಲ್ವಿಚಾರಕಾಗಿ ಕಾರ್ಯನಿರ್ವಹಿಸಿದ್ದಾರೆ. ಅರ್ಜುನ ಪ್ರಶಸ್ತಿ (1978) ಪುರಸ್ಕೃತರೂ ಹೌದು.ಯಾವುದೇ ವಿಷಯದ ಬಗ್ಗೆ ಅತಿಯಾಗಿ ತಲೆಕೆಡಿಸಿಕೊಳ್ಳಬಾರದು ಎಂಬ ಸಿದ್ಧಾಂತವನ್ನು ಜೀವನದಲ್ಲಿ ಅಳವಡಿಸಿಕೊಂಡಿದ್ದ ಅವರು ಆರೋಗ್ಯದ ಕಡೆಗೆ ಗಮನ ನೀಡದೇ ಇದ್ದುದು ಜೀವಕ್ಕೇ ಅಪಾಯ ತಂದೊಡ್ಡಿತು. ಕೇರಳ ಸರ್ಕಾರದ ‘ಚಿನ್ನಕ್ಕಾಗಿ ಮುನ್ನಡೆ’ ಎಂಬ ಬಹುನಿರೀಕ್ಷೆಯ ಕ್ರೀಡಾ ಯೋಜನೆಯ ಮುಖ್ಯಸ್ಥರಾಗಿ ಅಧಿಕಾರ ವಹಿಸಿಕೊಳ್ಳಲು ಸರ್ವ ಸಜ್ಜಾಗಿದ್ದ ವೇಳೆಯೇ ‘ಕಾಣದ’ ಮೈದಾನದಲ್ಲಿ ವಿಧಿಯ ಆಟ ನಡೆದದ್ದು ವಿಪರ್ಯಾಸವಲ್ಲದೆ ಬೇರೇನು?  

 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry