ಮಂಗಳವಾರ, ಜೂನ್ 15, 2021
24 °C
ವಿದ್ಯಾರ್ಥಿಗಳ ಶುಲ್ಕ ವಿನಾಯಿತಿಗೆ ನಕಾರ

ಜಂಟಿ ನಿರ್ದೇಶಕರ ಮಾತಿಗೂ ಕಿಮ್ಮತ್ತಿಲ್ಲ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಧಾರವಾಡ: ಇತರೆ ಹಿಂದುಳಿದ ವರ್ಗಗಳ (ಓಬಿಸಿ) ವಿದ್ಯಾರ್ಥಿಗಳ ಪರೀಕ್ಷಾ ಶುಲ್ಕದಲ್ಲಿ ವಿನಾಯಿತಿ ನೀಡಿ, ಉಳಿದ ಶುಲ್ಕ ಪಾವತಿಸಿಕೊಳ್ಳಿ ಎಂದು ಕಾಲೇಜು ಶಿಕ್ಷಣ ಇಲಾಖೆಯ ಜಂಟಿ ನಿರ್ದೇಶಕ ಡಾ.ದೇವಾನಂದ ಗಾಂವ್ಕರ್‌ ಅವರು ಇಲ್ಲಿಯ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಪ್ರಾಚಾರ್ಯರಿಗೆ ಸೂಚನೆ ನೀಡಿ ಐದು ದಿನ ಕಳೆದರೂ ಇನ್ನು ಜಾರಿಯಾಗಿಲ್ಲ. ಇದರಿಂದ ನೂರಾರು ವಿದ್ಯಾರ್ಥಿಗಳು ಪೂರ್ತಿ ಹಣವನ್ನು ಭರಿಸುವ ಅನಿವಾರ್ಯತೆಗೆ ಸಿಲುಕಿದ್ದಾರೆ.ಬಿಸಿಎಂ ಇಲಾಖೆಯು ಓಬಿಸಿ ವಿದ್ಯಾರ್ಥಿಗಳ ಪರೀಕ್ಷಾ ಶುಲ್ಕ ವಿನಾಯಿತಿ ಹಣವನ್ನು ಕಾಲೇಜಿಗೆ ಜಮಾ ಮಾಡುತ್ತದೆ. ಆದರೆ, ಇಲಾಖೆ ಪಾವತಿ ಮಾಡುತ್ತದೋ ಇಲ್ಲವೋ ಎಂಬ ಬಗ್ಗೆ ಅನುಮಾನ ವ್ಯಕ್ತಪಡಿಸಿರುವ ಪ್ರಾಚಾರ್ಯ ಪ್ರೊ.ಸಿ.ಪಿ.ಬಹ್ಮನಪಾಡ ಅವರು, ಸಂಪೂರ್ಣ ಹಣ ಪಾವತಿಸುವಂತೆ ಸೂಚನೆ ನೀಡಿದ್ದಾರೆ.ಕಳೆದ ಶುಕ್ರವಾರ ವಿದ್ಯಾರ್ಥಿಗಳು ಎಐಡಿಎಸ್‌ಓ ಹಾಗೂ ಎಐಡಿವೈಓ ಸಂಘಟನೆಗಳ ನೇತೃತ್ವದಲ್ಲಿ ಕಾಲೇಜಿನ ಎದುರು ಪ್ರತಿಭಟನೆ ನಡೆಸಿದ್ದರು.‘ಹುಬ್ಬಳ್ಳಿಯ ರಾಜನಗರದಲ್ಲಿರುವ ಸರ್ಕಾರಿ ಪ್ರಥಮ ದರ್ಜೆ ಕಾಲೇಜು ಸೇರಿದಂತೆ ನಗರದ ಬಹುತೇಕ ಖಾಸಗಿ ಕಾಲೇಜುಗಳಲ್ಲಿಯೂ ವಿನಾಯಿತಿ ನೀಡಲಾದ ಶುಲ್ಕವನ್ನು ಪಡೆಯಲಾಗುತ್ತಿದೆ. ಆದರೂ ಪ್ರಥಮ ದರ್ಜೆ ಕಾಲೇಜಿನಲ್ಲಿ ಏಕೆ ಸಂಪೂರ್ಣ ಶುಲ್ಕ ಪಾವತಿಸಬೇಕು’ ಎಂದು ಸಂಘಟನೆಯ ಮುಖಂಡರು ಹಾಗೂ ವಿದ್ಯಾರ್ಥಿಗಳು ಪ್ರಾಚಾರ್ಯರ ನಿಲುವನ್ನು ವಿರೋಧಿಸಿದ್ದರು. ನಂತರ, ಜಂಟಿ ನಿರ್ದೇಶಕರೊಂದಿಗೆ ಚರ್ಚೆ ನಡೆಸಿದ್ದರು.‘ಮಾನವೀಯತೆಯ ದೃಷ್ಟಿಯಿಂದ ಕಳೆದ ಸೆಮಿಸ್ಟರ್‌ನಲ್ಲಿ ತೆಗೆದುಕೊಳ್ಳುವಷ್ಟೇ ಶುಲ್ಕವನ್ನೇ ತೆಗೆದುಕೊಳ್ಳಬೇಕು. ಪೂರ್ತಿ ಶುಲ್ಕ ಪಡೆಯುವ ಕ್ರಮವನ್ನು ಕೈಬಿಡಬೇಕು’ ಎಂದು ಜಂಟಿ ನಿರ್ದೇಶಕರು ಪ್ರಾಚಾರ್ಯರಿಗೆ ಸೂಚಿಸಿದ್ದರು.‘ಆದರೂ, ಈ ಬಗ್ಗೆ ಕಠಿಣ ನಿಲುವು ತಾಳಿರುವ ಪ್ರಾಚಾರ್ಯರು ಸಂಪೂರ್ಣ ಶುಲ್ಕವನ್ನೇ ವಸೂಲಿ ಮಾಡುತ್ತಿದ್ದಾರೆ. ಹುಬ್ಬಳ್ಳಿಯ ರಾಜನಗರದಲ್ಲಿರುವ ಪ್ರಥಮ ದರ್ಜೆ ಕಾಲೇಜಿನಲ್ಲಿ ಇಷ್ಟು ಶುಲ್ಕ ಪಡೆಯುತ್ತಿಲ್ಲ ಎಂದು ಹೇಳಿದರೂ ಅವರು ಕೇಳುತ್ತಿಲ್ಲ’ ಎಂದು ವಿದ್ಯಾರ್ಥಿಗಳಾದ ಪ್ರಕಾಶ ಕಲಹಾಳ ಹಾಗೂ ಪ್ರದೀಪ ಹಿರೇಮಠ ದೂರಿದರು.ಪ್ರಾಚಾರ್ಯರ ಕ್ರಮವನ್ನು ಖಂಡಿಸಿದ ಎಐಡಿಎಸ್‌ಓ ಸಂಘಟನೆಯ ಜಿಲ್ಲಾ ಅಧ್ಯಕ್ಷ ಶರಣಬಸು ಗೋನವಾರ, ‘ಪ್ರಾಚಾರ್ಯರು ತಾವು ಜಂಟಿ ನಿರ್ದೇಶಕರಿಗೆ ನೀಡಿದ ಮಾತಿನಂತೆ ನಡೆದುಕೊಳ್ಳುತ್ತಿಲ್ಲ. ನಗರದ ಜೆಎಸ್‌ಎಸ್‌ ಕಾಲೇಜು, ಕಿಟೆಲ್‌ ಕಾಲೇಜು ಹಾಗೂ ಕೆಸಿಡಿ ಕಾಲೇಜಿನಲ್ಲಿಯೂ ಪೂರ್ಣ ಶುಲ್ಕ ಪಡೆಯುತ್ತಿಲ್ಲ. ಕೂಡಲೇ ಪೂರ್ಣ ಶುಲ್ಕ ಪಾವತಿ ಮಾಡಿದ ವಿದ್ಯಾರ್ಥಿಗಳಿಗೆ ಹೆಚ್ಚುವರಿ ಹಣವನ್ನು ಮರುಪಾವತಿ ಮಾಡಬೇಕಲ್ಲದೇ, ಇನ್ನು ಮುಂದೆ ಶುಲ್ಕ ತುಂಬುವ ವಿದ್ಯಾರ್ಥಿಗಳಿಗೆ ವಿನಾಯಿತಿ ನೀಡಬೇಕು’ ಎಂದು ಒತ್ತಾಯಿಸಿದರು.ಈ ಬಗ್ಗೆ ‘ಪ್ರಜಾವಾಣಿ’ಗೆ ಪ್ರತಿಕ್ರಿಯೆ ನೀಡಿದ ಪ್ರಾಚಾರ್ಯ ಬಹ್ಮನಪಾಡ, ‘ಜಂಟಿ ನಿರ್ದೇಶಕರು ಅಂದು ನನಗೆ ಮೌಖಿಕ ಸೂಚನೆ ನೀಡಿದ್ದಾರಷ್ಟೇ. ಲಿಖಿತವಾಗಿ ನೀಡಿಲ್ಲ. ಅಲ್ಲದೇ, ಈ ಯೋಜನೆಯ ಪ್ರಯೋಜನ ಪಡೆಯುವವರು ಕೆಲವೇ ವಿದ್ಯಾರ್ಥಿಗಳು. ಬಿಸಿಎಂ ಇಲಾಖೆಯು ಎಷ್ಟು ವಿದ್ಯಾರ್ಥಿಗಳಿಗೆ ಶುಲ್ಕ ವಿನಾಯಿತಿ ನೀಡುತ್ತದೆ ಎಂಬುದರ ಪಟ್ಟಿಯನ್ನು ನಮಗೆ ನೀಡಿಲ್ಲ. ಆ ಪಟ್ಟಿ ಕೊಟ್ಟಿದ್ದರೆ ಅಂತಹ ವಿದ್ಯಾರ್ಥಿಗಳು ಶುಲ್ಕ ವಿನಾಯಿತಿ ನೀಡಲು ಸಿದ್ಧ’ ಎಂದರು.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.