ಮಂಗಳವಾರ, ನವೆಂಬರ್ 19, 2019
29 °C

ಜಗತ್ತಿನ ಪ್ರಭಾವಿ ನಾಯಕಿ

Published:
Updated:

ಲಂಡನ್ (ಪಿಟಿಐ): ಕಠಿಣ ಹಾಗೂ ನಿರ್ದಾಕ್ಷಿಣ್ಯ ಮಾತಿಗೆ ಹೆಸರಾಗಿದ್ದ ಮಾರ್ಗರೇಟ್ ಥ್ಯಾಚರ್ ಜಗತ್ತಿನ ರಾಜಕೀಯದಲ್ಲಿ ತಮ್ಮದೇ ಆದ ಛಾಪು ಮೂಡಿಸಿದವರು.

ಮುಕ್ತ ಮಾರುಕಟ್ಟೆ ಪುನಶ್ಚೇತನಕ್ಕೆ ಬೆಂಬಲ ನೀಡಿದ ಜಾಗತಿಕ ಮಟ್ಟದ ಅಗ್ರಗಣ್ಯ ನಾಯಕಿ ಎಂದು ಎನಿಸಿಕೊಂಡಿದ್ದ ಅವರು, ಸುದೀರ್ಘ ಅವಧಿಗೆ ಪ್ರಧಾನಿಯಾಗಿ ಕಾರ್ಯನಿರ್ವಹಿಸಿದ ಬ್ರಿಟನ್ ರಾಜಕಾರಣಿ.1959ರಲ್ಲಿ ಮೊದಲ ಬಾರಿಗೆ  ಕನ್ಸರ್ವೇಟಿವ್ ಪಕ್ಷದಿಂದ ಉತ್ತರ ಲಂಡನ್ನಿನ ಫಿಂಚ್ಲಿನಿಂದ ಸಂಸತ್ ಸದಸ್ಯರಾಗಿ ಆಯ್ಕೆಯಾಗುವ ಮೂಲಕ ತಮ್ಮ ರಾಜಕೀಯ ವೃತ್ತಿ ಜೀವನವನ್ನು ಆರಂಭಿಸಿದ್ದ ಥ್ಯಾಚರ್, 1992ರಲ್ಲಿ ನಿವೃತ್ತಿಯಾಗುವುದರೊಂದಿಗೆ ಮೂರು ದಶಕಗಳ ರಾಜಕೀಯ ಬದುಕಿಗೆ ಕೊನೆ ಹಾಡಿದ್ದರು.ನಾಯಕತ್ವ ವಿಚಾರವಾಗಿ ತಮ್ಮದೇ ಪಕ್ಷದ ಮುಖಂಡ ಮಾಜಿ ಪ್ರಧಾನಿ  ಎಡ್ವರ್ಡ್ ಹೀತ್ ಅವರಿಗೆ 1975ರಲ್ಲಿ ಅವರು ಸವಾಲೆಸೆದಿದ್ದರು. ನಂತರ 1979, 1983 ಮತ್ತು 1987ರಲ್ಲಿ ನಡೆದಿದ್ದ ಸಾರ್ವತ್ರಿಕ ಚುನಾವಣೆಗಳನ್ನು ಗೆದ್ದು ತಮ್ಮ ಸಾಮರ್ಥ್ಯ ಸಾಬೀತು ಪಡಿಸಿದ್ದರು.ತಮ್ಮ ಆಡಳಿತಾವಧಿಯಲ್ಲಿ ಸರ್ಕಾರಿ ಸ್ವಾಮ್ಯದ ಹಲವು ಉದ್ದಿಮೆಗಳನ್ನು ಖಾಸಗೀಕರಣಗೊಳಿಸಿ ಅವರು ಸುದ್ದಿ ಮಾಡಿದ್ದರು.ಥ್ಯಾಚರ್ ಅಧಿಕಾರಾವಧಿಯಲ್ಲೇ ಅಂದರೆ 1982ರಲ್ಲಿ ಫಾಕ್ಲೆಂಡ್ ದ್ವೀಪಗಳ ವಿಚಾರವಾಗಿ ಬ್ರಿಟನ್, ಅರ್ಜೇಂಟೀನಾ ವಿರುದ್ಧ ಯುದ್ಧ ಸಾರಿತ್ತು.ಸೋವಿಯತ್ ಒಕ್ಕೂಟದ ದಮನಕಾರಿ ನೀತಿಯನ್ನು ಟೀಕಿಸಿ ಅವರು ಮಾಡಿದ್ದ ಭಾಷಣಕ್ಕೆ ಪ್ರತಿಯಾಗಿ ರಷ್ಯಾದ ದಿನಪತ್ರಿಕೆಯೊಂದು ಅವರನ್ನು `ಉಕ್ಕಿನ ಮಹಿಳೆ' ಎಂದು ಕರೆದಿತ್ತು.

ಪ್ರತಿಕ್ರಿಯಿಸಿ (+)