ಜಗದೀಶ ಶೆಟ್ಟರ್ ಸರ್ಕಾರವೇ ಅಕ್ರಮ

7
ರಾಜ್ಯಪಾಲ ಭಾರದ್ವಾಜ್‌ಗೆ ಕಾಂಗ್ರೆಸ್ ದೂರು

ಜಗದೀಶ ಶೆಟ್ಟರ್ ಸರ್ಕಾರವೇ ಅಕ್ರಮ

Published:
Updated:

ಬೆಂಗಳೂರು: ರಾಜ್ಯ ಬಿಜೆಪಿ ಸರ್ಕಾರ ಅಲ್ಪಮತಕ್ಕೆ ಕುಸಿದಿದೆ. ಇಂತಹ ಸರ್ಕಾರಕ್ಕೆ ಬಜೆಟ್ ಮಂಡನೆಯೂ ಸೇರಿದಂತೆ ಯಾವುದೇ ಪ್ರಮುಖ ನಿರ್ಧಾರಗಳನ್ನು ಕೈಗೊಳ್ಳಲು ಅವಕಾಶ ನೀಡದಂತೆ ರಾಜ್ಯಪಾಲರಿಗೆ ಕಾಂಗ್ರೆಸ್ ಮನವಿ ಸಲ್ಲಿಸಲಿದೆ ಎಂದು ಕೆಪಿಸಿಸಿ ಅಧ್ಯಕ್ಷ ಡಾ.ಜಿ.ಪರಮೇಶ್ವರ್ ಹೇಳಿದರು.


ಬಿ.ಎಸ್.ಯಡಿಯೂರಪ್ಪ ಮುಖ್ಯಮಂತ್ರಿಯಾಗಿದ್ದ ಅವಧಿಯಲ್ಲಿ ಕಾನೂನು ಸಲಹೆಗಾರರಾಗಿದ್ದ ಬಿಜೆಪಿ ಮುಖಂಡ ಕೆ.ದಿವಾಕರ್ ಅವರನ್ನು ಪಕ್ಷಕ್ಕೆ ಬರಮಾಡಿಕೊಂಡ ಬಳಿಕ ಗುರುವಾರ ಕೆಪಿಸಿಸಿ ಕಚೇರಿಯಲ್ಲಿ ಅವರು ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದರು.

 

ಬಿಜೆಪಿಯ ಕೆಲವು ಶಾಸಕರು ಯಡಿಯೂರಪ್ಪ ನೇತೃತ್ವದ ಕೆಜೆಪಿ ಜೊತೆ ಗುರುತಿಸಿಕೊಂಡಿದ್ದಾರೆ. ಇನ್ನು ಕೆಲವರು ಬಿ.ಶ್ರೀರಾಮುಲು ನೇತೃತ್ವದ ಬಿಎಸ್‌ಆರ್ ಕಾಂಗ್ರೆಸ್ ಪಕ್ಷವನ್ನು ಬೆಂಬಲಿಸುತ್ತಿದ್ದಾರೆ. ಈ ಸರ್ಕಾರಕ್ಕೆ ಬಹುಮತ ಇಲ್ಲ ಎಂಬುದು ಸ್ಪಷ್ಟವಾಗಿ ತಿಳಿಯುತ್ತದೆ. ರಾಜ್ಯಪಾಲರನ್ನು ಶೀಘ್ರದಲ್ಲಿ ಭೇಟಿ ಮಾಡಿ ಯಾವುದೇ ಮಹತ್ವದ ನಿರ್ಧಾರ ಕೈಗೊಳ್ಳದಂತೆ ಸರ್ಕಾರಕ್ಕೆ ನಿರ್ದೇಶನ ನೀಡುವಂತೆ ಮನವಿ ಮಾಡಲಾಗುವುದು ಎಂದರು.

 

ಈ ಸರ್ಕಾರದ ಅವಧಿ 155 ದಿನ ಮಾತ್ರ ಉಳಿದಿದೆ. ಈಗಾಗಲೇ ಬಹುಮತವನ್ನು ಕಳೆದುಕೊಂಡಿರುವ ಬಿಜೆಪಿ, ಕಾನೂನುಬದ್ಧವಲ್ಲದ ರೀತಿಯಲ್ಲಿ ಸರ್ಕಾರವನ್ನು ನಡೆಸುತ್ತಿದೆ. ಬಜೆಟ್ ಮಂಡಿಸುವುದು ಕೂಡ ಕಾನೂನು ಪ್ರಕಾರ ಸರಿಯಾದ ಕ್ರಮವಲ್ಲ. ಚುನಾವಣೆ ದೃಷ್ಟಿಯಿಂದ ಜನಪ್ರಿಯ ಯೋಜನೆಗಳನ್ನು ಪ್ರಕಟಿಸುವುದಕ್ಕೂ ತಡೆ ಹಾಕಬೇಕು ಎಂದು ಒತ್ತಾಯಿಸಿದರು.

 

ರಾಜಕೀಯ ಬೇಡ: ಹೈದರಾಬಾದ್-ಕರ್ನಾಟಕಕ್ಕೆ ವಿಶೇಷ ಸ್ಥಾನಮಾನ ನೀಡುವ ಸಂಬಂಧದ ಸಂವಿಧಾನ ತಿದ್ದುಪಡಿ ಮಸೂದೆಯನ್ನು ಸಂಸತ್ತು ಅಂಗೀಕರಿಸಿದೆ. ಈ ವಿಷಯದಲ್ಲಿ ರಾಜಕೀಯ ಪಕ್ಷಗಳು ರಾಜಕಾರಣ ಮಾಡಬಾರದು. ಕೆಲವರು ಈ ಬೆಳವಣಿಗೆಯ ಲಾಭ ಪಡೆಯಲು ಪ್ರಯತ್ನಿಸುತ್ತಿರುವುದು ಸರಿಯಲ್ಲ. 2002ರಲ್ಲಿ ಎನ್‌ಡಿಎ ಸರ್ಕಾರ ರಾಜ್ಯದ ಬೇಡಿಕೆಯನ್ನು ತಿರಸ್ಕರಿಸಿತ್ತು. ಈಗ ಯುಪಿಎ ಸರ್ಕಾರ ಹೈದರಾಬಾದ್-ಕರ್ನಾಟಕಕ್ಕೆ ವಿಶೇಷ ಸ್ಥಾನಮಾನ ನೀಡಲು ಮುಂದಾಗಿರುವುದನ್ನು ಎಲ್ಲರೂ ಸ್ವಾಗತಿಸಬೇಕು ಎಂದು ಪರಮೇಶ್ವರ್ ಹೇಳಿದರು.

 

`ದಿವಾಕರ್ ಹಿಂದೆ ಕಾಂಗ್ರೆಸ್‌ನಲ್ಲಿಯೇ ಇದ್ದರು. ಎನ್‌ಎಸ್‌ಯುಐ, ಯುವ ಕಾಂಗ್ರೆಸ್‌ನಲ್ಲಿ ಸಕ್ರಿಯ ಕಾರ್ಯಕರ್ತರಾಗಿದ್ದರು. ಬಳಿಕ ಬಿಜೆಪಿ ಸೇರಿದ್ದ ಅವರು ಈಗ ಮರಳಿ ಗೂಡಿಗೆ ಬಂದಿದ್ದಾರೆ. ಯಾವುದೇ ಬೇಡಿಕೆ ಅಥವಾ ಷರತ್ತುಗಳಿಲ್ಲದೇ ಪಕ್ಷಕ್ಕೆ ಬಂದಿದ್ದಾರೆ' ಎಂದರು.

 

`ಬೇಸತ್ತು ಬಂದೆ': `ಬಿಜೆಪಿ ಒಂದು ಕೋಮುವಾದಿ ರಾಜಕೀಯ ಪಕ್ಷ. ಅಲ್ಲಿನ ಗರ್ಭಗುಡಿ ಸಂಸ್ಕೃತಿ ನಮ್ಮಂತಹವರಿಗೆ ಸರಿ ಹೊಂದುವುದಿಲ್ಲ. 1980ರಿಂದಲೂ ನಾನು ಕಾಂಗ್ರೆಸ್‌ನಲ್ಲಿ ಸಕ್ರಿಯನಾಗಿದ್ದೆ. ಮಾಜಿ ಮುಖ್ಯಮಂತ್ರಿ ಎಸ್.ಬಂಗಾರಪ್ಪ ಅವರೊಂದಿಗೆ ಬಿಜೆಪಿಗೆ ಸೇರಿದ್ದೆ. ಈಗ ಆ ಪಕ್ಷ ರಾಜ್ಯದ ಅಭಿವೃದ್ಧಿಗೆ ಪೂರಕವಾಗಿ ಕೆಲಸ ಮಾಡುವುದಿಲ್ಲ ಎಂಬುದು ಮನವರಿಕೆಯಾಗಿದೆ' ಎಂದು ದಿವಾಕರ್ ಹೇಳಿದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry