ಜಗನ್ 51 ಕೋಟಿ ಆಸ್ತಿ ಜಪ್ತಿಗೆ ಆದೇಶ

7

ಜಗನ್ 51 ಕೋಟಿ ಆಸ್ತಿ ಜಪ್ತಿಗೆ ಆದೇಶ

Published:
Updated:

ನವದೆಹಲಿ/ಹೈದರಾಬಾದ್ (ಪಿಟಿಐ): ವೈಎಸ್‌ಆರ್ ಕಾಂಗ್ರೆಸ್ ಮುಖ್ಯಸ್ಥರಾಗಿರುವ ಸಂಸದ ಜಗನ್‌ಮೋಹನ್ ರೆಡ್ಡಿ ಮತ್ತು ಅವರ ಆಪ್ತರಿಗೆ ಸೇರಿದ 51 ಕೊಟಿ ರೂಪಾಯಿ ಮೌಲ್ಯದ ಆಸ್ತಿಯನ್ನು ಜಪ್ತಿ ಮಾಡಲು ಜಾರಿ ನಿರ್ದೇಶನಾಲಯ ಗುರುವಾರ ಆದೇಶ ಹೊರಡಿಸಿದೆ.

ಅಕ್ರಮ ಹಣ ವರ್ಗಾವಣೆ ಮತ್ತು ತಮ್ಮ ತಂದೆ ವೈ.ಎಸ್. ರಾಜಶೇಖರ ರೆಡ್ಡಿ  ಮುಖ್ಯಮಂತ್ರಿಯಾಗಿದ್ದ ಅವಧಿಯಲ್ಲಿ ಖಾಸಗಿ ಕಂಪೆನಿಗಳಿಗೆ ಅನುಕೂಲ ಕಲ್ಪಿಸಿಕೊಡಲು ಲಂಚ ಪಡೆದ ಹಗರಣಕ್ಕೆ ಸಂಬಂಧಿಸಿದಂತೆ ಜಾರಿ ನಿರ್ದೇಶನಾಲಯ ಜಗನ್ ವಿರುದ್ಧ ಈ ಕ್ರಮ ಕೈಗೊಂಡಿದೆ.ಜನನಿ ಇನ್ಫ್ರಾಸ್ಟ್ರಕ್ಚರ್ ಪ್ರೈವೇಟ್ ಲಿಮಿಟೆಡ್‌ಗೆ ಸೇರಿದ 13 ಎಕರೆ ಜಮೀನು ಹಾಗೂ ಜಗತಿ ಪಬ್ಲಿಕೇಶನ್ ಲಿಮಿಟೆಡ್‌ಗೆ ಸೇರಿದ 14.50 ಕೊಟಿ ರೂಪಾಯಿ ಸ್ಥಿರ ಠೇವಣಿಯನ್ನು ಜಪ್ತಿ ಮಾಡಲು ಜಾರಿ ನಿರ್ದೇಶನಾಲಯ ಆದೇಶ ಹೊರಡಿಸಿದೆ. ಈ ಎರಡು ಸಂಸ್ಥೆಗಳು ಜಗನ್ ಒಡೆತನಕ್ಕೆ ಸೇರಿವೆ. ಸದ್ಯ ಅವರು ಹೈದರಾಬಾದ್‌ನ ಚಂಚಲಗುಡ ಕೇಂದ್ರ ಕಾರಾಗೃಹದಲ್ಲಿ ನ್ಯಾಯಾಂಗ ಬಂಧನದಲ್ಲಿದ್ದಾರೆ.ಅಕ್ರಮ ಹಣ ವರ್ಗಾವಣೆ ತಡೆ ಕಾಯ್ದೆ (ಪಿಎಂಎಲ್‌ಎ)ಯ ಕಠಿಣ ನಿಬಂಧನೆಗಳ ಅಡಿ ಪ್ರಕರಣ ದಾಖಲಿಸಿಕೊಳ್ಳಲಾಗಿದೆ. ಹೆಟ್ರೊ ಡ್ರಗ್ಸ್ ಲಿಮಿಟೆಡ್ ಕಂಪೆನಿಯ 35 ಎಕರೆ ಜಮೀನು ಮತ್ತು 3 ಕೊಟಿ ರೂಪಾಯಿ ಸ್ಥಿರ ಠೇವಣಿ, ಎಪಿಎಲ್ ರಿಸರ್ಚ್ ಸೆಂಟರ್ ಲಿಮಿಟೆಡ್‌ನ 96 ಎಕರೆ ಜಮೀನು, ಅರಬಿಂದೊ ಫಾರ್ಮಾದ ಮೂರು ಕೋಟಿ ರೂಪಾಯಿ ಸ್ಥಿರ ಠೇವಣಿ ಜಪ್ತಿಗೂ ಆದೇಶ ಹೊರಡಿಸಲಾಗಿದೆ.

 

ವೈ.ಎಸ್. ರಾಜಶೇಖರ ರೆಡ್ಡಿ ಅವರ ಅಧಿಕಾರದ ಅವಧಿಯಲ್ಲಿ ಈ ಸಂಸ್ಥೆಗಳು ಆಂಧ್ರ ಸರ್ಕಾರದಿಂದ ಅಕ್ರಮವಾಗಿ ಲಾಭ ಗಳಿಸಿವೆ ಎನ್ನಲಾಗಿದೆ. ಜಪ್ತಿ ಮಾಡಲಾದ ಈ ಆಸ್ತಿಗಳ ಉಪಯೋಗ ಮತ್ತು ಅವುಗಳಿಂದ ಯಾವುದೇ ರೀತಿಯ ಲಾಭಗಳನ್ನು ಆರೋಪಿಗಳು ಪಡೆಯುವಂತೆ ಇಲ್ಲ ಎಂದು ಜಾರಿ ನಿರ್ದೇಶನಾಲಯ ಆದೇಶ ತಿಳಿಸಿದೆ.ಜಗನ್ ವಿರುದ್ಧ ಸಿಬಿಐ ದಾಖಲಿಸಿದ್ದ ಎಫ್‌ಐಆರ್ ಆಧಾರದ ಮೇಲೆ ಜಾರಿ ನಿರ್ದೇಶನಾಲಯ ತನಿಖೆ ನಡೆಸಿತ್ತು. ಇದೇ ಪ್ರಕರಣಕ್ಕೆ ಸಂಬಂಧಿಸಿದಂತೆ ಸಿಬಿಐ ಈಗಾಗಲೇ ವಿಶೇಷ ನ್ಯಾಯಾಲಯದಲ್ಲಿ ಆರೋಪಪಟ್ಟಿ ಸಲ್ಲಿಸಿದೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry