ಜಗಳೂರಿಗೆ ಪುನೀತ್ ಅನಿರೀಕ್ಷಿತ ಭೇಟಿ

7

ಜಗಳೂರಿಗೆ ಪುನೀತ್ ಅನಿರೀಕ್ಷಿತ ಭೇಟಿ

Published:
Updated:

ಜಗಳೂರು: ಚಲನಚಿತ್ರ ನಟ ಪುನೀತ್ ರಾಜ್‌ಕುಮಾರ್ ಅವರು ಅನಿರೀಕ್ಷಿತವಾಗಿ ಶುಕ್ರವಾರ ಸಂಜೆ ಪಟ್ಟಣದಲ್ಲಿ ಕಾಣಿಸಿಕೊಂಡು ಯುವಜನರಲ್ಲಿ ಸಂಚಲನ ಮೂಡಿಸಿದರು.ಪವರ್‌ಸ್ಟಾರ್ ಪಟ್ಟಣದ ಹೃದಯಭಾಗದಲ್ಲಿ ಬಿಳಿ ಸ್ಕಾರ್ಪಿಯೋ ವಾಹನ ಚಲಾಯಿಸುತ್ತಾ ನಾಲ್ಕಾರು ಬಾರಿ ಸಂಚರಿಸಿದರು. ವಾಹನದ ಚಾಲಕರ ಸೀಟಿನಲ್ಲಿದ್ದ ಪುನೀತ್ ಅವರನ್ನು ಸಾರ್ವಜನಿಕರು ಕೊನೆಗೂ ಗುರುತಿಸಿ ವಿದ್ಯಾರ್ಥಿಗಳು ಹಾಗೂ ಯುವಕರು ಪುನೀತ್ ವಾಹನಕ್ಕೆ ಮುಗಿಬಿದ್ದರು. ವಾಹನದಲ್ಲಿ ಮತ್ತೊಬ್ಬ ನಾಯಕ ನಟ ಯೋಗೀಶ್ ಮತ್ತು ಇತರ ನಟರು ಕುಳಿತಿದ್ದರು. ಜನರು ಗುರುತು ಹಿಡಿಯುತ್ತಿದ್ದಂತೆ ಕಿಟಕಿ ಏರಿಸಿಕೊಂಡು ಪುನೀತ್ ವೇಗವಾಗಿ ವಾಹನ ಚಲಾಯಿಸುತ್ತಾ ಮಿಂಚಿನಂತೆ ಕಣ್ಮರೆಯಾದರು.

 

‘ಹುಡುಗರು’ ಕನ್ನಡ ಚಿತ್ರದ ಶೂಟಿಂಗ್‌ಗೆ ಆಗಮಿಸಿದ್ದ ಅವರು ಆರಂಭದಲ್ಲಿ ಯಾರ ಕಣ್ಣಿಗೂ ಬೀಳದೆ ಗೌಪ್ಯವಾಗಿ ಶೂಟಿಂಗ್ ಮುಗಿಸಿದರು. ನಾಯಕ ನಟರು ಪಟ್ಟಣದ ಪ್ರಮುಖ ರಸ್ತೆಗಳಲ್ಲಿ ವಾಹನದಲ್ಲಿ ತೆರಳುವುದನ್ನು ರಸ್ತೆ ಪಕ್ಕದ ಕಟ್ಟಡಗಳ ಮೇಲಿಂದ ಮೂರು ಸ್ಥಳಗಳಲ್ಲಿ ಕ್ಯಾಮರಾಗಳಲ್ಲಿ  ಚಿತ್ರೀಕರಿಸಲಾಯಿತು. ಚಳ್ಳಕೆರೆ ರಸ್ತೆಯಿಂದ ವಾಹನ ಚಲಾಯಿಸುತ್ತಾ ಪಟ್ಟಣದ ಪೊಲೀಸ್ ಠಾಣೆ ಆವರಣ ಪ್ರವೇಶಿಸಿದ ಪುನೀತ್ ಹಾಗೂ ಯೋಗೀಶ್ ಅವರು ಎಲ್ಲೂ ವಾಹನ ಬಿಟ್ಟು ಕೆಳಗೆ ಇಳಿಯಲೇ ಇಲ್ಲ.ಚಿತ್ರತಂಡ ಪಟ್ಟಣಕ್ಕೆ ಹಾಗೂ ಪೊಲೀಸ್‌ಠಾಣೆಗೆ ಆಗಮಿಸುವ ಬಗ್ಗೆ ಪೊಲೀಸ್ ಅಧಿಕಾರಿಗಳಿಗೆ ಯಾವುದೇ ಮಾಹಿತಿ ಇರಲಿಲ್ಲ. ಠಾಣೆ ಆವರಣದೊಳಗೆ ಸ್ಕಾರ್ಪಿಯೋದಲ್ಲಿ ಬಂದ ಪುನೀತ್ ಪೇದೆಯೊಬ್ಬರನ್ನು ಮಾತನಾಡಿಸಿದರು. ನಂತರ ಚಿತ್ರದುರ್ಗದತ್ತ ತಂಡ ಪಯಣ ಬೆಳೆಸಿತು. ಪಟ್ಟಣದಲ್ಲಿ ದಿಢೀರ್  ಕಾಣಿಸಿಕೊಂಡ ಪುನೀತ್ ಮಿಂಚಿನಂತೆ ಬಂದು ಹೋದದ್ದು ಅವರ ಅಭಿಮಾನಿಗಳಿಗೆ ಖುಷಿ ತಂದರೂ ವಾಹನ ಬಿಟ್ಟು ಇಳಿಯದೇ ಹೋಗಿದ್ದು ನಿರಾಶೆಗೆ ಕಾರಣವಾಯಿತು. ಪುನೀತ್ ಅವರನ್ನು ಮಾತಿಗೆಳೆಯುವ ಸುದ್ದಿಗಾರರ ಪ್ರಯತ್ನ ಫಲಿಸಲಿಲ್ಲ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry