ಮಂಗಳವಾರ, ನವೆಂಬರ್ 12, 2019
20 °C

ಜಗಳೂರು ಕ್ಷೇತ್ರ: ದಕ್ಕೀತೆ ಹಳಬರಿಗೆ ಅಧಿಕಾರ

Published:
Updated:

ಜಗಳೂರು: ನೆತ್ತಿ ಸುಡುವ ಬಿಸಿಲು, ಬಿರಿದ ನೆಲದ ಒಡಲಿನಿಂದ  ಬಿಸಿಯ ಉಗಿ ಹೊತ್ತು ಭೋರ್ಗರೆವ ಒಣಗಾಳಿ, ನೆನಪಾದಾಗೊಮ್ಮೆ ಮುಖ ತೋರಿ ಮರೆಯಾಗುವ ಮಳೆರಾಯ. ಚುನಾವಣಾ ಕಾಲದಲ್ಲಿ ರಾಜಕೀಯ ನಾಯಕರು ಕೊಟ್ಟು ಹೋದ `ಭರವಸೆಯ ಗಂಟು' ಕಾಯುತ್ತಾ ಕುಳಿತ ಶ್ರೀಸಾಮಾನ್ಯ...-ಇದು ಸದಾ ಬರದ ಚಾದರ ಹೊದ್ದ ಜಗಳೂರು ವಿಧಾನಸಭಾ ಕ್ಷೇತ್ರದ ಚಿತ್ರಣ.ಸ್ವಾತಂತ್ರ್ಯ ಬಂದಾಗಿನಿಂದಲೂ ದಾಖಲೆಗಳಲ್ಲಿ `ಶಾಶ್ವತ ಬರಪೀಡಿತ ಪ್ರದೇಶ' ಎಂಬ ಹಣೆಪಟ್ಟಿ ಉಳಿಸಿಕೊಂಡು ಬಂದ ಅಗ್ಗಳಿಕೆ ಇಲ್ಲಿಯದು.ಕಾಂಗ್ರೆಸ್ ಭದ್ರಕೋಟೆ

1952ರಿಂದ 2010ರವರೆಗೆ ನಡೆದ 14 ಸಾರ್ವತ್ರಿಕ ಚುನಾವಣೆಗಳಲ್ಲಿ ಕಾಂಗ್ರೆಸ್ ಪಕ್ಷ 8 ಬಾರಿ ಗೆಲುವು ಪಡೆದಿದೆ. ಮೊದಲ ಸಾರ್ವತ್ರಿಕ ಚುನಾವಣೆಯಲ್ಲಿ ಮೈಸೂರು ಸಂಸ್ಥಾನದಲ್ಲಿ ಮಂತ್ರಿಯಾಗಿದ್ದ ಜೆ. ಇಮಾಮ್‌ಸಾಬ್ ಸ್ವಾತಂತ್ರ್ಯ ನಂತರ ಕೆ.ಸಿ. ರೆಡ್ಡಿ ನೇತೃತ್ವದ ಪ್ರಜಾಸರ್ಕಾರದಲ್ಲಿ ಶಾಸಕಾಂಗ ಸದಸ್ಯರಾಗಿದ್ದರು.

1952ರ ಮೊದಲ ಚುನಾವಣೆಯಲ್ಲಿ ಕಿಸಾನ್ ಮಜ್ದೂರ್ ಪ್ರಜಾಪಕ್ಷದಿಂದ ಗೆದ್ದು ರಾಜ್ಯದ ಪ್ರಥಮ ವಿರೋಧ ಪಕ್ಷದ ನಾಯಕರಾಗಿ ಕಾರ್ಯನಿರ್ವಹಿಸಿದರು. ನಂತರ 1957 ಮತ್ತು 1967ರಲ್ಲಿ ಚಿತ್ರದುರ್ಗದಿಂದ ಲೋಕಸಭೆಗೆ ಆಯ್ಕೆಯಾಗಿದ್ದರು.6 ಬಾರಿ ಗೆದ್ದ ಜಿ.ಎಚ್ ಅಶ್ವತ್ಥ್‌ರೆಡ್ಡಿ:  ಮಾಜಿ ಸಚಿವ ಜಿ.ಎಚ್. ಅಶ್ವತ್ಥ್‌ರೆಡ್ಡಿ 1972ರಿಂದ 1989ರವರೆಗೆ  ಸತತ ಐದು ಬಾರಿ ಗೆದ್ದು ಬಂದಿದ್ದು, 1999ರಲ್ಲಿ ಪಕ್ಷೇತರರಾಗಿ ಭಾರಿ ಬಹುಮತದಿಂದ ಆಯ್ಕೆಯಾಗಿದ್ದ ಅಶ್ವತ್ಥ್‌ರೆಡ್ಡಿ ಒಟ್ಟು 6 ಬಾರಿ ಇಲ್ಲಿಂದ ವಿಧಾನಸಭೆಗೆ ಆಯ್ಕೆಯಾದ ದಾಖಲೆ ಹೊಂದಿದ್ದಾರೆ. 1978ರಲ್ಲಿ ಜನತಾ ಪಕ್ಷದಿಂದ ಆಯ್ಕೆಯಾಗಿದ್ದರು. ಗುಂಡೂರಾವ್ ಮತ್ತು ಎಸ್. ಬಂಗಾರಪ್ಪ ಅವರ ಮಂತ್ರಿ ಮಂಡಲದಲ್ಲಿ ಎರಡು ಬಾರಿ  ಸಚಿವರಾಗಿ ಕಾರ್ಯನಿರ್ವಹಿಸಿದ್ದಾರೆ.ಸೋಲಿಲ್ಲದ ಸರದಾರ ಎಂದೇ ಹೆಸರಾಗಿದ್ದ ಅಶ್ವತ್ಥ್‌ರೆಡ್ಡಿ ಅವರನ್ನು 1994ರಲ್ಲಿ ಮೊದಲ ಬಾರಿ ಮಣಿಸುವ ಮೂಲಕ ಎಂ. ಬಸಪ್ಪ ಕೆಸಿಪಿಯಿಂದ ಆಯ್ಕೆಯಾಗಿದ್ದರು.  2004ರಲ್ಲಿ ಬಿಜೆಪಿಯ ಟಿ. ಗುರುಸಿದ್ದನಗೌಡ ಅವರು ಅಶ್ವತ್ಥ್‌ರೆಡ್ಡಿ ವಿರುದ್ಧ ಜಯಗಳಿಸಿದ್ದರು.1952ರಿಂದ 2010ರ ಉಪ ಚುನಾವಣೆ ಸೇರಿದಂತೆ 14 ಚುನಾವಣೆಗಳನ್ನು ಕ್ಷೇತ್ರ  ಕಂಡಿದ್ದು 8 ಬಾರಿ ಕಾಂಗ್ರೆಸ್, ಕೆಎಂಪಿ, ಜನತಾ ಪಕ್ಷ, ಕೆಸಿಪಿ ಪಕ್ಷಗಳು ತಲಾ ಒಂದು ಹಾಗೂ ಬಿಜೆಪಿ 2 ಬಾರಿ ಇಲ್ಲಿ ಗೆಲುವು ದಾಖಲಿಸಿವೆ.ಎಸ್‌ಟಿಗೆ ಮೀಸಲು

2008ರಲ್ಲಿ ಕ್ಷೇತ್ರ ವಿಂಗಡಣೆಯಾಗಿದ್ದು, ಪರಿಶಿಷ್ಟ ಪಂಗಡಕ್ಕೆ ಮೀಸಲಾಗಿದೆ. ಈ ಹಿಂದೆ 1962ರಲ್ಲಿ ಒಂದು ಅವಧಿಗೆ ಮಾತ್ರ ಈ ಕ್ಷೇತ್ರ ಪರಿಶಿಷ್ಟ ಜಾತಿಗೆ ಮೀಸಲಾಗಿತ್ತು. ಆಗ ಕಾಂಗ್ರೆಸ್ ಪಕ್ಷದ ಎಂ.ಎನ್. ಕೃಷ್ಣಾಸಿಂಗ್ ಅವರು ಪಿಎಸ್‌ಪಿಯ ಅಭ್ಯರ್ಥಿ ಜಗಳೂರು ಗೊಲ್ಲರಹಟ್ಟಿಯ ಕೆ.ವಿ. ವೆಂಕಟಪ್ಪ ಅವರ ವಿರುದ್ಧ ಅಲ್ಪ ಮತಗಳ ಅಂತರದಲ್ಲಿ ಗೆಲುವು ಕಂಡಿದ್ದರು.ಎಸ್‌ಟಿಗೆ ಮೀಸಲಾದ ಕ್ಷೇತ್ರದಲ್ಲಿ 2008ರಲ್ಲಿ ಪ್ರಥಮ ಬಾರಿ ಕಾಂಗ್ರೆಸ್ ಪಕ್ಷದ ಎಸ್.ವಿ. ರಾಮಚಂದ್ರ ಬಿಜೆಪಿಯ ಎಚ್.ಪಿ. ರಾಜೇಶ್ ಅವರನ್ನು ಮಣಿಸಿದ್ದರು. ನಂತರ ನಡೆದ ಬೆಳವಣಿಗೆಯಲ್ಲಿ ರಾಮಚಂದ್ರ ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿ ಕಮಲದ ತೆಕ್ಕೆಗೆ ಸರಿದಿದ್ದರು.

2010ರಲ್ಲಿ ನಡೆದ ಉಪ ಚುನಾವಣೆಯಲ್ಲಿ ಬಿಜೆಪಿಯಿಂದ ಕಣಕ್ಕೆ ಧುಮುಕಿದ ರಾಮಚಂದ್ರ ಪಕ್ಷೇತರ ಅಭ್ಯರ್ಥಿಯಾಗಿ ನಿಕಟ ಸ್ಪರ್ಧೆ ಒಡ್ಡಿದ ರಾಜೇಶ್ ಅವರನ್ನು ಅಲ್ಪ ಮತಗಳ ಅಂತರದಿಂದ ಮತ್ತೆ ಸೋಲಿಸಿ ಎರಡನೇ ಬಾರಿ ಆಯ್ಕೆಯಾದರು. ಕಾಂಗ್ರೆಸ್‌ನಿಂದ ಸ್ಪರ್ಧಿಸಿದ್ದ ವೈ. ದೇವೇಂದ್ರಪ್ಪ 3ನೇ ಸ್ಥಾನಕ್ಕೆ ತೃಪ್ತಿಪಟ್ಟುಕೊಳ್ಳಬೇಕಾಯಿತು. ಜೆಡಿಎಸ್ ನಾಲ್ಕನೇ ಸ್ಥಾನಕ್ಕೆ ತಳ್ಳಲ್ಪಟ್ಟಿತ್ತು.ಪ್ರಸ್ತುತ ಶಾಸಕ ರಾಮಚಂದ್ರ ಕೆಜೆಪಿಯತ್ತ ವಾಲಿದ್ದಾರೆ. ಕಾಂಗ್ರೆಸ್ ಟಿಕೆಟ್‌ಗಾಗಿ ರಾಜೇಶ್ ಮತ್ತು ದೇವೇಂದ್ರಪ್ಪ ಪೈಪೋಟಿ ನಡೆಸುತ್ತಿದ್ದಾರೆ.ಬರಪೀಡಿ ಕ್ಷೇತ್ರದಲ್ಲಿ ನೀರಾವರಿ ಯೋಜನೆ ಹಾಗೂ ಸಮಗ್ರ ಅಭಿವೃದ್ಧಿ ವಿಷಯಗಳು ಮತ್ತು ಬಿಜೆಪಿ ಸರ್ಕಾರದ ಸಾಧನೆ ಮತ್ತು  ವೈಫಲ್ಯಗಳು ಪ್ರಮುಖವಾಗಿ ಚುನಾವಣಾ ಸಂದರ್ಭದಲ್ಲಿ ಚರ್ಚೆಗೆ ಬರಲಿವೆ.ಕ್ಷೇತ್ರ ಪರಿಚಯ:  2008ರಲ್ಲಿ  ಕ್ಷೇತ್ರ ವಿಂಗಡಣೆಯಾಗಿ ಹರಪನಹಳ್ಳಿ ತಾಲ್ಲೂಕಿನ ಅರಸಿಕೆರೆ ಹೋಬಳಿಯ 7 ಗ್ರಾ.ಪಂ. ವ್ಯಾಪ್ತಿಯ 35 ಗ್ರಾಮಗಳು ಕ್ಷೇತ್ರಕ್ಕೆ ಸೇರ್ಪಡೆಯಾಗಿವೆ.2008ರಲ್ಲಿ ಕ್ಷೇತ್ರದಲ್ಲಿ 211 ಮತಗಟ್ಟೆಗಳು ಹಾಗೂ  1,44,906 ಮತದಾರರಿದ್ದರು.  ಪ್ರಸ್ತುತ ಮತಗಟ್ಟೆಗಳ ಸಂಖ್ಯೆ  245ಕ್ಕೇರಿದೆ.

ಈಗಿನ ಮತದಾರರ ಸಂಖ್ಯೆ- 1,64,103. ಇದರಲ್ಲಿ ಪುರುಷರು -84868, ಮಹಿಳೆಯರು79231 ಹಾಗೂ ಇತರೆ 4 ಮತದಾರರು ಒಳಗೊಂಡಿದ್ದಾರೆ.ನಾಯಕ ಜನಾಂಗ ಹಾಗೂ ಪರಿಶಿಷ್ಟ ಜಾತಿಯ ಎಲ್ಲಾ ಉಪ ಜಾತಿಗಳು ಸಮಬಲ ಹೊಂದಿವೆ. ವೀರಶೈವ ಹಾಗೂ ಹಿಂದುಳಿದ ಸಮುದಾಯದ ಪ್ರಾಬಲ್ಯ ಇದೆ.  ಅಲ್ಪ ಸಂಖ್ಯಾತರು ಇದ್ದಾರೆ.

ಪ್ರತಿಕ್ರಿಯಿಸಿ (+)