ಶನಿವಾರ, ಜೂನ್ 12, 2021
24 °C

ಜಗಳೂರು ತಾಲ್ಲೂಕು: ಒಣಗಿದ ಚೆಕ್ ಡ್ಯಾಂಗಳು; ಭಣಗುಡುವ ಕರೆಕಟ್ಟೆ...

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಜಗಳೂರು: ತಾಲ್ಲೂಕಿನಲ್ಲಿ ಮುಂಗಾರು ಹಾಗೂ ಹಿಂಗಾರು ಮಳೆ ಸಂಪೂರ್ಣ ವಿಫಲವಾಗಿದ್ದರಿಂದ ಪ್ರಸ್ತುತ ಅಂತರ್ಜಲ ಪಾತಾಳಕ್ಕೆ ಕುಸಿದಿದ್ದು, 100ಕ್ಕೂ ಹೆಚ್ಚು ಗ್ರಾಮಗಳಲ್ಲಿ ಕುಡಿಯುವ ನೀರಿನ ಸಮಸ್ಯೆ ಎದುರಾಗಿದೆ.

ಬೇಸಿಗೆ ಆರಂಭದ ಈ ಸಂದರ್ಭದಲ್ಲಿ ತಾಲ್ಲೂಕಿನ ಎಲ್ಲಾ ಕೆರೆೆಕಟ್ಟೆಗಳು, ಚೆಕ್‌ಡ್ಯಾಂಗಳು ಸಂಪೂರ್ಣ ಒಣಗಿ ನಿಂತಿವೆ.

 

ತಾಲ್ಲೂಕಿನ ದೊಡ್ಡ ಕೆರೆಗಳಾದ ತುಪ್ಪದಹಳ್ಳಿ ಕೆರೆ, ಗಡಿಮಾಕುಂಟೆ ಕೆರೆ, ಜಗಳೂರು ಕೆರೆ ಸೇರಿದಂತೆ ದೊಡ್ಡ ಮತ್ತು ಮಧ್ಯಮ ಪ್ರಮಾಣದ 50ಕ್ಕೂ ಹೆಚ್ಚು ಕೆರೆಗಳು ನೀರಿಲ್ಲದೆ ಭಣಗುಡುತ್ತಿವೆ. ಗ್ರಾಮೀಣ ಪ್ರದೇಶದಲ್ಲಿ ಕುಡಿಯುವ ನೀರು ಪೂರೈಕೆ ಮತ್ತು ಕೈಪಂಪ್  ಕೊಳವೆಬಾವಿಗಳ ಮೂಲಸೆಲೆಯಾಗಿದ್ದ ಕೆರೆಗಳು ಬರಿದಾದ ಕಾರಣ ಸಾವಿರಾರು ಕೊಳವೆಬಾವಿಗಳು ವಿಫಲವಾಗಿವೆ.

 

ನೀರಿಲ್ಲದೆ ನೀರಾವರಿ ಆಧಾರಿತ ಬೆಳೆಗಳು ಒಣಗುತ್ತಿವೆ. ನೂರಾರು ಹಳ್ಳಿಗಳಲ್ಲಿ ಕುಡಿಯುವ ನೀರಿಗೆ ತತ್ವಾರ ಎದುರಾಗಿದೆ. ಎಲ್ಲಿಯೂ  ಹಸಿರೇ ಇಲ್ಲದಂತಾಗಿದ್ದು, ಬಿಸಿಲಿನ ಪ್ರಖರತೆಗೆ ಜನ, ಜಾನುವಾರು ತತ್ತರಿಸಿದೆ.

ತಾಲ್ಲೂಕಿನಲ್ಲಿ 506 ಮಿ.ಮೀ. ವಾಡಿಕೆ ಮಳೆ ಪ್ರಮಾಣ ಇದೆ. ಆದರೆ, ಕಳೆದ ಜನವರಿ ತಿಂಗಳಿಂದ ಡಿಸೆಂಬರ್‌ವರೆಗೆ ಕೇವಲ 375 ಮಿ.ಮೀ. ಮಳೆಯಾಗಿದೆ. ಹಿಂದಿನ ವರ್ಷ 845 ಮಿ.ಮೀ. ಮಳೆಯಾಗಿದ್ದರಿಂದ ಬಹುತೇಕ ಕೆರೆಕಟ್ಟೆಗಳು ಮೈದುಂಬಿಕೊಂಡಿದ್ದವು.ಖಾಲಿಯಾದ ಕೆರೆಗಳು:  ಕಳೆದ ಬೇಸಿಗೆಯಲ್ಲಿ ಬಹುತೇಕ ಕೆರೆಗಳಲ್ಲಿ ನೀರಿನ ಸಂಗ್ರಹ ಇತ್ತು. ಆದರೆ, ಈ ಬಾರಿ ಸಂಗೇನಹಳ್ಳಿ ಕೆರೆಯಲ್ಲಿ ಸ್ವಲ್ಪ ನೀರಿನ ಸಂಗ್ರಹ ಹೊರತುಪಡಿಸಿದಂತೆ ಉಳಿದ ಯಾವುದೇ ಕೆರೆಗಳಲ್ಲೂ ಹನಿ ನೀರಿಲ್ಲ. ಎಲ್ಲಾ ಕೆರೆಗಳು ಬತ್ತಿ ಹೋಗಿವೆ ಎಂದು ಸಣ್ಣ ನೀರಾವರಿ ಇಲಾಖೆ ಸಹಾಯಕ ಕಾರ್ಯಪಾಲಕ ಎಂಜಿನಿಯರ್ ಸಿ. ಶಂಕರಾನಂದಮೂರ್ತಿ `ಪ್ರಜಾವಾಣಿ~ಗೆ ಸ್ಪಷ್ಟಪಡಿಸಿದರು.  ತಾಲ್ಲೂಕಿನಲ್ಲಿ ಸುಮಾರು 8 ಸಾವಿರ ಅಧಿಕೃತ ನೀರಾವರಿ ಪಂಪ್‌ಸೆಟ್‌ಗಳಿದ್ದು, ವಿದ್ಯುತ್ ಪೂರೈಕೆಗೆ ಸಂಬಂಧಿಸಿದಂತೆ ಕಳೆದ ನವೆಂಬರ್ ತಿಂಗಳಲ್ಲಿ ಇದ್ದ ಒತ್ತಡ ಈಗ ಇಲ್ಲ. ಈಗ ಶೇ 30ರಷ್ಟು ಕೊಳವೆಬಾವಿಗಳು ಅಂತರ್ಜಲ ಕುಸಿತದಿಂದ ಬತ್ತಿಹೋಗಿವೆ ಎಂದು ಬೆಸ್ಕಾಂ ಇಲಾಖೆ ಎಇಇ ಜಿ. ಮಂಜುನಾಥ್ ಹೇಳುತ್ತಾರೆ.ಸಮಸ್ಯಾತ್ಮಕ ಗ್ರಾಮಗಳು: ಹೊನ್ನಮರಡಿ, ಆಕನೂರು, ಹುಚ್ಚಂಗಿಪುರ, ಮಾಗಡಿ, ಜಾಡನಕಟ್ಟೆ, ಅಸಗೋಡು, ವಡ್ಡರಹಟ್ಟಿ, ಸೂರಗೊಂಡನಹಳ್ಳಿ, ಉರ‌್ಲಕಟ್ಟೆ, ಹುಚ್ಚವ್ವನಹಳ್ಳಿ ಕೊರಚರಹಟ್ಟಿ, ಕಮಂಡಲಗುಂದಿ ಸೇರಿದಂತೆ ಇದುವರೆಗೆ 100ಕ್ಕೂ ಹೆಚ್ಚು ಹಳ್ಳಿಗಳಲ್ಲಿ ನೀರಿನ ಸಮಸ್ಯೆ ಎದುರಾಗಿದೆ.  ತಾಲ್ಲೂಕಿನಲ್ಲಿ ಹಂತಹಂತವಾಗಿ ಕುಡಿಯುವ ನೀರಿನ ಸಮಸ್ಯೆ ಇರುವ ಗ್ರಾಮಗಳನ್ನು ಪಟ್ಟಿ ಮಾಡಿ ತುರ್ತು ಪರಿಹಾರ ಕ್ರಮ ಕೈಗೊಳ್ಳಲಾಗುವುದು. ಬರಪರಿಹಾರ ಕಾರ್ಯಕ್ರಮಕ್ಕಾಗಿ ರೂ 1ಕೋಟಿ ಬಿಡುಗಡೆಯಾಗಿದೆ. ಜಿ.ಪಂ. ಇಲಾಖೆಯ ಸಹಯೋಗದೊಂದಿಗೆ ತುರ್ತು ಕೊಳವೆಬಾವಿ ಕೊರೆಸುವುದು, ಪೈಪ್‌ಲೈನ್ ನಿಮಾರ್ಣ ಮುಂತಾದ ಕಾಮಗಾರಿಗಳನ್ನು 40ಕ್ಕೂ ಹೆಚ್ಚು ಗ್ರಾಮಗಳಲ್ಲಿ ನಿರ್ವಹಿಸಲಾಗುತ್ತಿದೆ ಎಂದು ತಹಶೀಲ್ದಾರ್ ಎಚ್.ಪಿ. ನಾಗರಾಜ್ ಹೇಳಿದರು.ರೂ 11 ಲಕ್ಷ ವೆಚ್ಚದಲ್ಲಿ ಗುರುಸಿದ್ದಾಪುರ ಅರಣ್ಯ ಪ್ರದೇಶದಲ್ಲಿ ಗೋಶಾಲೆ ಸ್ಥಾಪನೆ ಕಾರ್ಯ ಭರದಿಂದ ನಡೆದಿದೆ. ಮೇವು ಬಂದ ಕೂಡಲೇ ಗೋಶಾಲೆ ಪ್ರಾರಂಭಿಸಲಾಗುವುದು. ಅರಣ್ಯ ವ್ಯಾಪ್ತಿಯಲ್ಲಿ ಜಾನುವಾರುಗಳಿಗೆ ಮೇವು ಬೆಳೆಸಲು ಕ್ರಮ ಕೈಗೊಳ್ಳಲಾಗಿದೆ ಎಂದು ಅವರು ಮಾಹಿತಿ ನೀಡಿದರು.ತಾಲ್ಲೂಕಿನಲ್ಲಿ ಭೀಕರ ಬರ ಪರಿಸ್ಥಿತಿ ಹಿನ್ನೆಲೆಯಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಎಸ್.ಎ. ರವೀಂದ್ರನಾಥ್ ಹಾಗೂ ಶಾಸಕ ಎಸ್.ವಿ. ರಾಮಚಂದ್ರ ಅವರ ನೇತೃತ್ವದಲ್ಲಿ ಹಲವು ಸಭೆಗಳು ನಡೆದಿದ್ದು, ವಿಳಂಬವಿಲ್ಲದಂತೆ ಪರಿಹಾರ ಕಾರ್ಯಗಳನ್ನು ಕೈಗೊಳ್ಳಬೇಕು ಎನ್ನುವುದು ಸಾರ್ವಜನಿಕರ ಒತ್ತಾಯವಾಗಿದೆ.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.