ಜಗಳೂರು: ತಾಲ್ಲೂಕು ಪಂಚಾಯ್ತಿ ಕಚೇರಿಗೆ ಮುತ್ತಿಗೆ

7

ಜಗಳೂರು: ತಾಲ್ಲೂಕು ಪಂಚಾಯ್ತಿ ಕಚೇರಿಗೆ ಮುತ್ತಿಗೆ

Published:
Updated:

ಜಗಳೂರು: ಮಹಾತ್ಮಾಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತ್ರಿ ಯೋಜನೆಯ ಕಾಮಗಾರಿಯಲ್ಲಿ ಕೆಲಸ ಮಾಡಿದ ಕೂಲಿ ಹಣ ನೀಡುತ್ತಿಲ್ಲ ಎಂದು ಆರೋಪಿಸಿ ತಾಲ್ಲೂಕಿನ ಬಿಸ್ತುವಳ್ಳಿ ಗ್ರಾಮ ಪಂಚಾಯ್ತಿ ವ್ಯಾಪ್ತಿಯ ದಿಬ್ಬದಹಟ್ಟಿ ಗ್ರಾಮದ ಕೂಲಿ ಕಾರ್ಮಿಕರು ಬುಧವಾರ ಇಲ್ಲಿನ ತಾಲ್ಲೂಕು ಪಂಚಾಯ್ತಿ ಕಚೇರಿಗೆ ಮುತ್ತಿಗೆ ಹಾಕಿ ಪ್ರತಿಭಟನೆ ನಡೆಸಿದರು.

ದಿಬ್ಬದಹಟ್ಟಿ ಗ್ರಾಮದಲ್ಲಿ ಉದ್ಯೋಗ ಖಾತ್ರಿ ಯೋಜನೆ ಅಡಿ ರೂ 12 ಲಕ್ಷ ವೆಚ್ಚದ ಚೆಕ್‌ಡ್ಯಾಂ ಕಾಮಗಾರಿಯಲ್ಲಿ ಕೆಲಸ ಮಾಡಿರುವ 120ಕ್ಕೂ ಹೆಚ್ಚು ಕೂಲಿಕಾರರಿಗೆ ಒಂದು ವರ್ಷವಾದರೂ ಕೂಲಿ ಹಣ ನೀಡದೆ ಸತಾಯಿಸಲಾಗುತ್ತಿದೆ. ಕೂಲಿ ಹಣ ಇಲ್ಲದೆ ಜೀವನ ನಿರ್ವಹಣೆ ಕಷ್ಟಕರವಾಗಿ ಪರಿಣಮಿಸಿದೆ ಎಂದು ಕೂಲಿಕಾರ್ಮಿಕರಾದ ಬಸಮ್ಮ, ರಂಗಮ್ಮ ಇತರರು ಆರೋಪಿಸಿದರು.

ಬಿಸ್ತುವಳ್ಳಿ ಗ್ರಾಮ ಪಂಚಾಯ್ತಿಗೆ ಉದ್ಯೋಗ ಖಾತ್ರಿ ಯೋಜನೆ ಅಡಿ ರೂ. 1 ಕೋಟಿಗೂ ಹೆಚ್ಚು ಹಣ ಬಿಡುಗಡೆಯಾಗಿದೆ. ಗ್ರಾಮದಲ್ಲಿನ ಚೆಕ್‌ಡ್ಯಾಂ ಹಾಗೂ ಗೋಕಟ್ಟೆ ಕಾಮಗಾರಿ ಪೂರ್ಣಗೊಂಡಿದೆ. ಕಾಮಗಾರಿಗೆ ಸಂಬಂಧಪಟ್ಟಂತೆ ಎಂಬಿ,  ಎಂಐಎಸ್ ಆಗಿದೆ. ತಾಲ್ಲೂಕು ಪಂಚಾಯ್ತಿ ಕಾರ್ಯ ನಿರ್ವಾಹಕ ಅಧಿಕಾರಿ, ಪಿಆರ್‌ಇಡಿ ಎಇಇ ಸೇರಿದಂತೆ ಎಲ್ಲ ಅಧಿಕಾರಿಗಳು ಕಾಮಗಾರಿ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಆದರೂ ಕೂಲಿಕಾರರಿಗೆ ಹಣ ನೀಡದೆ ತಾರತಮ್ಯ ಮಾಡಲಾಗುತ್ತಿದೆ ಎಂದು ಗ್ರಾಮ ಪಂಚಾಯ್ತಿ ಸದಸ್ಯ ಕಂಪಳೇಶ್ ದೂರಿದರು.

ಗ್ರಾಮ ಪಂಚಾಯ್ತಿ ವ್ಯಾಪ್ತಿಯಲ್ಲಿ 35 ಕಾಮಗಾರಿಗಳಿಗೆ ಹಣ ಬಿಡುಗಡೆ ಮಾಡಲಾಗಿದೆ. ದಿಬ್ಬದಹಟ್ಟಿ ಕಾಮಗಾರಿಗಳಿಗೆ ಏಕೆ ಹಣ ಮಂಜೂರು ಮಾಡಿಲ್ಲ ಎಂದು ಪಿಡಿಒ ಅವರನ್ನು ಪ್ರಶ್ನಿಸಿದರೆ, ನಾನು ಹಣ ಬಿಡುಗಡೆ ಮಾಡವುದಿಲ್ಲ. ಅದೇನು ಮಾಡಿಕೊಳ್ಳುತ್ತೀರೋ ಮಾಡಿಕೊಳ್ಳಿ ಎಂದು ಪಿಡಿಒ ಉತ್ತರಿಸುತ್ತಾರೆ. 5 ತಿಂಗಳಿಂದ ಗ್ರಾಮ ಪಂಚಾಯ್ತಿ ಸಭೆ ಕರೆದಿಲ್ಲ. ಸದಸ್ಯರ ಗಮನಕ್ಕೆ ತಾರದೆ ಎಲ್ಲಾ ವಿಷಯಗಳಲ್ಲಿ ಅವರು ಸರ್ವಾಧಿಕಾರಿಯಂತೆ ಕಾರ್ಯ ನಿರ್ವಹಿಸುತ್ತಿದ್ದಾರೆ ಎಂದು ಕಂಪಳೇಶ್ ಹರಿಹಾಯ್ದರು.

ಪಿಡಿಒ ಸ್ಪಷ್ಟನೆ: ದಿಬ್ಬದಹಟ್ಟಿಯ ನಾಲ್ಕು ಕಾಮಗಾರಿಗಳ ಸ್ಥಳ ಪರೀಶೀಲನೆ ಮಾಡುವ ಸಂದರ್ಭದಲ್ಲಿ ಗ್ರಾಮ ಪಂಚಾಯ್ತಿ ಸದಸ್ಯ ಕಂಪಳೇಶ್ ಅವರು ಅಧಿಕಾರಿಗಳೊಂದಿಗೆ ಅನುಚಿತವಾಗಿ ವರ್ತಿಸಿ ಕಾಮಗಾರಿ ವೀಕ್ಷಣೆಗೆ ಅಡ್ಡಿಪಡಿಸಿದ್ದಾರೆ. ಸ್ಥಳ ತನಿಖೆ ಕೈಗೊಳ್ಳದ ಹೊರತು ಹಣ ಬಿಡುಗಡೆ ಮಾಡಲು ಸಾಧ್ಯವಿಲ್ಲ ಎಂದು ಪಿಡಿಒ ಲಕ್ಷ್ಮೀಪತಿ ಸುದ್ದಿಗಾರರಿಗೆ ಸ್ಪಷ್ಟಪಡಿಸಿದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry