ಜಗಳೂರು: ದೊಡ್ಡ ಮಾರಿಕಾಂಬಾ ದೇವಿ ಜಾತ್ರೆ

7

ಜಗಳೂರು: ದೊಡ್ಡ ಮಾರಿಕಾಂಬಾ ದೇವಿ ಜಾತ್ರೆ

Published:
Updated:
ಜಗಳೂರು: ದೊಡ್ಡ ಮಾರಿಕಾಂಬಾ ದೇವಿ ಜಾತ್ರೆ

ಜಗಳೂರು: ಪಟ್ಟಣದಲ್ಲಿ ನಡೆಯುತ್ತಿರುವ  ದೊಡ್ಡ ಮಾರಿಕಾಂಬಾ ದೇವಿ ಜಾತ್ರೆಯ ಮೂರನೇ ದಿನವಾದ ಗುರುವಾರ ಸಹಸ್ರಾರು ಭಕ್ತರು ಭಕ್ತಿ, ಗೌರವಗಳೊಂದಿಗೆ ದೇವಿಯ ದರ್ಶನ ಪಡೆದರು.ಮಾರಿಕಾಂಬಾ ದೇವಸ್ಥಾನದ ಆವರಣದಲ್ಲಿ ದೊಡ್ಡ ಮಾರಿಕಾಂಬ ದೇವಿ ಮೂರ್ತಿಯನ್ನು ಪ್ರತಿಷ್ಠಾನ ಮಾಡಿರುವ ಗದ್ದುಗೆಗೆ ವಿವಿಧ ಜಿಲ್ಲೆಗಳಿಂದ ಆಗಮಿಸಿದ್ದ ಭಕ್ತರು ಪೂಜೆ ಸಲ್ಲಿಸಿದರು. ಬಿರುಬಿಸಿಲನ್ನೂ ಲೆಕ್ಕಿಸದೆ ಸಹಸ್ರಾರು ಸಂಖ್ಯೆಯಲ್ಲಿ ನೆರೆದಿದ್ದ ಭಕ್ತರು ದೇವಿಯ ದರ್ಶನ ಪಡೆದು ಪುನೀತರಾದರು.ಜಾತ್ರೆಯ ಮೂರನೇ ದಿನವಾದ ಗುರುವಾರ ಪಟ್ಟಣ ಹಾಗೂ ಸಮೀಪದ ಗೊಲ್ಲರಹಟ್ಟಿ ಗ್ರಾಮದಲ್ಲಿ ಸಂಪ್ರದಾಯದಂತೆ ಸಾವಿರಾರು ಕುರಿ, ಕೋಳಿ, ಆಡುಗಳನ್ನು ದೇವಿಯ ಹೆಸರಿನಲ್ಲಿ ಬಲಿ ನೀಡಲಾಯಿತು.

ಮಾರಿಕಾಂಬಾ ದೇವಸ್ಥಾನದ ಆವರಣದಲ್ಲಿ ಸಂಜೆ ಪೋತರಾಜರುಗಳು  ಉರಿಮೆಯ ಕುಣಿತಕ್ಕೆ ಲಯಬದ್ದವಾಗಿ ಹೆಜ್ಜೆ ಹಾಕಿದರು.ಪೋತರಾಜರ ಕುಣಿತದಿಂದ ಪ್ರೇರಿತರಾದ ಹಟ್ಟಿ ಚಿನ್ನದ ಗಣಿ ಅಧ್ಯಕ್ಷ ಎಸ್.ವಿ. ರಾಮಚಂದ್ರ ಅವರು ಪೋತರಾಜರೊಂದಿಗೆ ಸೇರಿ  ಭಕ್ತಿಪೂರ್ವಕವಾಗಿ ಹೆಜ್ಜೆಹಾಕಿದ್ದು ವಿಶೇಷವಾಗಿತ್ತು. ಜಿ.ಪಂ. ಸದಸ್ಯ ಎಚ್. ನಾಗರಾಜ್, ದೇವಸ್ದಾನ ಸಮಿತಿ ಮುಖಂಡರಾದ ಶಿವನಗೌಡ, ರಾಮರೆಡ್ಡಿ, ತಿರುಕಪ್ಪ, ವೈ. ಈಶ್ವರಪ್ಪ, ಪಟ್ಟಣ ಪಂಚಾಯ್ತಿ ಸದಸ್ಯ ವೈ.ಎನ್. ಮಂಜುನಾಥ್, ಪಿಎಸ್‌ಐ ಇ.ಆನಂದ್, ಇಮ್ರಾನ್ ಬೇಗ್ ಹಾಜರಿದ್ದರು. ಜಾತ್ರೆ ಅಂಗವಾಗಿ ಕಾಟಾ ನಿಕಾಲಿ ಜಂಗಿ ಕುಸ್ತಿಯನ್ನು ಏರ್ಪಡಿಸಲಾಗಿತ್ತು.   ಜಾತ್ರೆಯ ನಾಲ್ಕನೇ ಹಾಗೂ ಅಂತಿಮ ದಿನವಾದ ಮೇ18ರಂದು ದೇವಿಯ ರಥೋತ್ಸವ ಹಾಗೂ ಅಂತಿಮ ಕುಸ್ತಿ ಪಂದ್ಯಾವಳಿ ನಡೆಯಲಿದೆ.

 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry