ಮಂಗಳವಾರ, ಏಪ್ರಿಲ್ 20, 2021
32 °C

ಜಗಳ ತಾರಕಕ್ಕೆ: ಮದುವೆ ರದ್ದು

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು:ವರನ ಕಡೆಯವರಿಗೆ ಸೂಕ್ತ ಸೌಲಭ್ಯ ಕಲ್ಪಿಸಲಿಲ್ಲವೆಂಬ ಕ್ಷುಲ್ಲಕ ಕಾರಣಕ್ಕೆ ಆರಂಭವಾದ ಜಗಳ ತಾರಕಕ್ಕೇರಿ ಮದುವೆಯೇ ಮುರಿದು ಬಿದ್ದ ಘಟನೆ ರಾಜಾಜಿನಗರ ಮಂಜುನಾಥನಗರದ ಶ್ರೀ ಸಿದ್ಧಗಂಗಾ ಸಮುದಾಯ ಭವನದಲ್ಲಿ ಮಂಗಳವಾರ ರಾತ್ರಿ ನಡೆದಿದೆ.ಹುಬ್ಬಳ್ಳಿಯ ವೀರಪ್ಪ ರೊಳ್ಳಿ ಮತ್ತು ಚಂದ್ರಕಲಾ ರೊಳ್ಳಿ ಅವರ ಪುತ್ರ ಡಾ.ಅಮಿತ್ ವಿ.ರೊಳ್ಳಿ ಹಾಗೂ ಬಸವೇಶ್ವರನಗರ 4ನೇ ಹಂತದ ಬಿ.ಎಸ್.ಪುಟ್ಟಚನ್ನಪ್ಪ ಅವರ ಪುತ್ರಿ ಡಾ.ಬಿ.ಪಿ.ಶ್ವೇತಾ ಅವರ ವಿವಾಹವು ಬುಧವಾರ (ಮಾ.09) ನಿಶ್ಚಯವಾಗಿತ್ತು. ಅದರಂತೆ ಮಂಗಳವಾರ ಆರತಕ್ಷತೆಗೆ ಸಿದ್ಧತೆ ನಡೆಯುತ್ತಿತ್ತು.ಈ ನಡುವೆ ವರನ ತಾಯಿ ಮತ್ತು ಸಂಬಂಧಿಕರು ಕಲ್ಯಾಣ ಮಂಟಪದ ವ್ಯವಸ್ಥೆ ಸರಿಯಿಲ್ಲ. ವಧುವಿನ ಕಡೆಯವರು ತಮ್ಮನ್ನು ವಿಶ್ವಾಸದಿಂದ ಕಾಣುತ್ತಿಲ್ಲ ಎಂದು ಸಣ್ಣಪುಟ್ಟ ವಿಚಾರಗಳಿಗೆ ಜಗಳ ತೆಗೆದರು. ಈ ವಿಷಯವಾಗಿ ವರ-ವಧುವಿನ ಕುಟುಂಬಗಳ ನಡುವೆ ವಾಗ್ವಾದ ನಡೆದು, ಮಾರಾಮಾರಿಯ ಹಂತಕ್ಕೆ ತಲುಪಿತು. ಈ ಸಂದರ್ಭದಲ್ಲಿ ವಧುವಿನ ಕಡೆಯವರು ವರನಿಗೆ ಥಳಿಸಿದರು. ಸ್ಥಳಕ್ಕೆ ಬಂದ ಪೊಲೀಸರು ಘರ್ಷಣೆ ನಿಯಂತ್ರಿಸಲು ಲಘು ಲಾಠಿ ಪ್ರಹಾರ ನಡೆಸಿದರು.ಅಮಿತ್ ಮತ್ತು  ಶ್ವೇತಾ ಹೋಮಿಯೊಪತಿ ವೈದ್ಯರಾಗಿದ್ದು, ಬೆಂಗಳೂರಿನ ಖಾಸಗಿ ಆಸ್ಪತ್ರೆಗಳಲ್ಲಿ ಕೆಲಸ ಮಾಡುತ್ತಿದ್ದಾರೆ.‘ಕಲ್ಯಾಣ ಮಂಟಪದಲ್ಲಿ ಸೂಕ್ತ ಕೊಠಡಿ ವ್ಯವಸ್ಥೆ ಇಲ್ಲ. ಹವಾನಿಯಂತ್ರಿತ ಕೊಠಡಿಗಳಿಲ್ಲ ಎಂದು ವರನ ತಾಯಿ ಚಂದ್ರಕಲಾ ರೊಳ್ಳಿ ಅವರು ಗಲಾಟೆ ಮಾಡಿದರು. ಹಾಗಾಗಿ ಹೋಟೆಲ್‌ವೊಂದರಲ್ಲಿ ಹವಾನಿಯಂತ್ರಿತ ಕೊಠಡಿಗಳನ್ನು ಬಾಡಿಗೆಗೆ ಪಡೆದು ನೀಡಲಾಯಿತು. ಆದರೂ ಸಣ್ಣಪುಟ್ಟ ವಿಚಾರಗಳಿಗೆ ಜಗಳ ತೆಗೆದರು. ತಮ್ಮ ಮಗನನ್ನು ಆರತಕ್ಷತೆ ಕಾರ್ಯಕ್ರಮಕ್ಕೆ ಬಿಡಲೇ ಇಲ್ಲ’ ಎಂದು ವಧುವಿನ ಸಂಬಂಧಿಯೊಬ್ಬರು ತಿಳಿಸಿದರು.‘ವರನ ಕಡೆಯವರು ಹುಬ್ಬಳ್ಳಿಯಿಂದ ಬರಲು ವಾಹನ ವ್ಯವಸ್ಥೆಯನ್ನೂ ಸಹ ವಧುವಿನ ಕಡೆಯವರೇ ಮಾಡಿದ್ದರು. ಅಲ್ಲದೇ ವರದಕ್ಷಿಣೆಯಾಗಿ ಹಣ, ಚಿನ್ನಾಭರಣವನ್ನು ಸಹ ನೀಡಲಾಗಿತ್ತು. ಮದುವೆಗೆ ಸುಮಾರು 10 ಲಕ್ಷ ರೂಪಾಯಿ ವೆಚ್ಚ ಮಾಡಲಾಗಿತ್ತು’ ಎಂದು ಅವರು ಹೇಳಿದರು.ಆರತಕ್ಷತೆಗೆ ಆಗಮಿಸಿದ್ದ ಶಾಸಕ ನೆ.ಲ.ನರೇಂದ್ರಬಾಬು ಅವರು ಎರಡೂ ಕುಟುಂಬಗಳ ನಡುವೆ ಸಂಧಾನ ನಡೆಸಿದರೂ ಪ್ರಯೋಜನವಾಗಲಿಲ್ಲ.  ಅಮಿತ್ ಮದುವೆಗೆ ಒಪ್ಪಿಕೊಂಡನಾದರೂ,  ಶ್ವೇತಾ ಒಪ್ಪಿಗೆ ನೀಡಲಿಲ್ಲ. ಅಮಿತ್‌ನನ್ನು ಸುಮಾರು ಮೂರು ಗಂಟೆಗಳ ಕಾಲ ಕೊಠಡಿಯಲ್ಲೇ ಕೂಡಿ ಹಾಕಲಾಗಿತ್ತು. ಮದುವೆ ಮುರಿದು ಬಿದ್ದ ನಂತರ ಸಂಬಂಧಿಕರೆಲ್ಲರೂ ತಮ್ಮ ಮನೆಗಳಿಗೆ ಹಿಂತಿರುಗಿದರು. ನಂತರ ಆತನನ್ನು ಪೊಲೀಸರು ವಶಕ್ಕೆ ಪಡೆದು ಠಾಣೆಗೆ ಕರೆದೊಯ್ದರು.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.