ಜಗವೇ ನಾಟಕರಂಗ!

7

ಜಗವೇ ನಾಟಕರಂಗ!

Published:
Updated:

‘ಗುಂಡ ತೇಲಿಸಿದೆವ್ವ ಬೆಂಡ ಮುಳುಗಿಸಿದಿ .... ಗಂಡ ಗಂಡರನೆಲ್ಲ ಹೆಂಡೀರ ಮಾಡಿ .... ತಾಯೇ’ ಎಂದು ತಾರಕ ಸ್ವರದಲ್ಲಿ ಹಾಡುತ್ತ ಚಹಾದಂಗಡಿಗೆ ಬಂದ ತೆಪರೇಸಿ. ಅವನ ಕರ್ಕಶ ಧ್ವನಿ ಕೇಳೋಕಾಗದೆ ಕಿವಿ ಮುಚ್ಚಿಕೊಂಡ ಅಂಗಡಿ ಮಾಲೀಕ ದುಬ್ಬೀರ ‘ಲೇ... ಥೂ ನಿನ್ನ, ಏನಾಗೆತಲೆ ನಿನಗೆ? ಎಂದು ರೇಗಿದ.ತೆಪರೇಸಿ ಜೋರಾಗಿ ನಗುತ್ತ ‘ಯಾಕ್ ಬೈತಿಯಲೆ, ಬಳ್ಳಾರಿ ಹತ್ರ ಯಾವುದೋ ಊರಾಗೆ ಗುಂಡುಕಲ್ಲು ನೀರಾಗೆ ತೇಲಾಕತ್ತೇತಂತೆ. ಟೀವ್ಯಾಗೆ ತೋರಿಸ್ತಿದ್ರು. ಅದ್ಕೆ ಹಾಡಿದ್ನೆಪ, ಹೋಗ್ಲಿ ಅರ್ಧ ಕೆ.ಟಿ. ಹಾಕು’ ಎಂದ.  ‘ನಿನ್ತೆಲಿ, ಅದು ಹುಳಕ ಕಲ್ಲಿರಬೇಕು, ಅದ್ಕೆ ತೇಲ್ತತಿ... ಕಾಲ ಕೆಟ್ಟೋತು...’ ಎಂದ ದುಬ್ಬೀರ ಸ್ಟೌವ್ ಹಚ್ಚುತ್ತ.  ‘ಮೊನ್ನಿ ಅದೆಲ್ಲೋ ಉತ್ತರ ಭಾರತದ ಕಡಿ ಹನುಮಂತ ದೇವರ ಕಣ್ಣಾಗ ನೀರು ಬರಾಕತ್ತಿತ್ತಂತೆ. ಪಾಪ, ದೇವರೇ ಅಳಾಕತ್ತಿದ ಮೇಲೆ ನಮ್ಮ ಗತಿ ಏನು ಅಂತ ಪೂಜಿ ಪುನಸ್ಕಾರ ಮಾಡಿದ್ರಂತಪ’ ‘ಪಾಪ ಆಂಜನೇಯ ಈ ದೇಶದ ರಾಜಕೀಯ, ಭ್ರಷ್ಟಾಚಾರ ನೋಡಿ ದುಃಖ ತಡೀಲಾಗದೆ ಒಂಟಿ ಕಣ್ಣಾಗ ಅತ್ತ ಅನಸ್ತತಿ. ದೇವರೇ ಅಳಾಕತ್ತಿದ ಮೇಲೆ ನಂ ಯಡೆಯೂರಪ್ಪ ಅಳೋದೇನು ದೊಡ್ಡ ಮಾತಲ್ಲ ಬಿಡು..’  ದುಬ್ಬೀರ ವಿಚಿತ್ರವಾಗಿ ನಕ್ಕ.  ‘ನೀನೊಬ್ಬ, ಎಲ್ಲದಕ್ಕೂ ರಾಜಕೀಯ ಹಚ್ಚಿ ಮಾತಾಡ್ತಿಯಪ. ಯಡೆಯೂರಪ್ಪ ನಗೋದಿರ್ಲಿ. ಅಳೋಕೂ ಬಿಡಲ್ಲ ಅಂದ್ರೆ ಹೆಂಗಲೆ? ಈಗ ನೋಡು ‘ಭೂ’ಫೋರ್ಸ್ ಫಿರಂಗಿ ಹಿಡ್ಕಂಡು ರಾಜ್ಯಪಾಲರು ನಿಂತುಬಿಟ್ಟಿದಾರೆ. ಏನಾಕ್ಕತೋ ಏನೋ...’ ಎಂದ ತೆಪರೇಸಿ.ಈ ಯಡೆಯೂರಪ್ಪ-ಹಂಸರಾಜ್ ಏಟು-ಎದಿರೇಟು ನೋಡ್ತಿದ್ರೆ ನಂಗೆ ಬಬ್ರುವಾಹನ-ಅರ್ಜುನರ ಕಾಳಗ ನೆನಪಾಗ್ತತಪ. ಮಾತಿಗೆ ಮಾತು, ಅಸ್ತ್ರಕ್ಕೆ ಪ್ರತಿಅಸ್ತ್ರ! ರಾಜ್ಯಪಾಲರತ್ರ ಎಂಥೆಂಥ ಬಾಣ ಅದಾವು ಅಂತಿ. ಗಣಿಅಸ್ತ್ರ, ‘ಭೂ’ಪತಾಸ್ತ್ರ, ಸಿದ್ದರಾಮಾಸ್ತ್ರ, ರೇವಣ್ಣಾಸ್ತ್ರ, ಕುಮಾರಾಸ್ತ್ರ ಈಗ ಹೊಸದಾಗಿ ವಕೀಲಾಸ್ತ್ರ!ಯಡಿಯೂರಪ್ಪನೋರತ್ರ ಬಂದ್ ಅಸ್ತ್ರ, ಈಗ ಕೇಸ್ ಬಿದ್ರೆ ಅದರಿಂದ ಬಚಾವಾಗೋಕೆ ಇನ್ಯಾವ ಅಸ್ತ್ರ ತರ್ತಾರೋ, ಒಟ್ಟಾರೆ  ‘ಜಗವೇ ನಾಟಕರಂಗ’ ಅನ್ನಂಗಾಗೇತಿ. ಜನರನ್ನ ದೇವರೇ ಕಾಪಾಡಬೇಕು’ ಎಂದ ತೆಪರೇಸಿ.  ‘ಇದ್ನೆಲ್ಲ ನೋಡಿ ನೋಡಿ ತೆಲಿಕೆಟ್ಟು ಯಡೆಯೂರಪ್ಪ ‘ನಿಮ್ ಸಾವಾಸನೇ ಬ್ಯಾಡ, ನಾನು ಶಿಕಾರಿಪುರನೇ ಸಪ್ರೇಟ್ ರಾಜ್ಯ ಮಾಡ್ಕಂತೀನಿ ಅಂತ ಹೊಂಟ್ರೆ?’  ‘ಪ್ರಯೋಜನ ಇಲ್ಲ’ ಎಂದ ಸಪ್ಲೆಯರ್ ಗುಡ್ಡೆ, ಒಳಗಿನಿಂದ ತೆಪರೇಸಿಗೆ ಟೀ ತಂದು ಕೊಡುತ್ತ.  ‘ಓ ಇವನೊಬ್ಬ ಬಂದ್ನಪ. ಇಟಾತಂಕ ಎಲ್ಲಿದ್ದೆಲೆ ಗುಡ್ಡೆ? ಎಂದು ನಕ್ಕ ತೆಪರೇಸಿ. ‘ಯಡಿಯೂರಪ್ಮೋರು ಸಪ್ರೇಟ್ ಸಪ್ರೇಟ್ ರಾಜ್ಯ ಮಾಡ್ಕಂಬಿಟ್ರೆ ಆತಾ? ಕೇಂದ್ರ ಸರ್ಕಾರದೋರು ಅವರ ರಾಜ್ಯಕ್ಕೆ ಈಗಿರೋ ಹಂಸರಾಜ ಅವುರ್ನೇ ರಾಜ್ಯಪಾಲರನ್ನಾಗಿ ಹಾಕಿದ್ರೆ ಆಗೇನ್ ಮಾಡ್ತಾರೆ?’ ಗುಡ್ಡೆ ಹುಬ್ಬು ಕುಣಿಸಿದ.ತೆಪರೇಸಿಗೆ ಆಶ್ಚರ್ಯ! ‘ಹೌದಲಲ್ಲೆ ಗುಡ್ಡೆ? ನಿಂಗೂ ತೆಲಿ ಐತಿ ಬಿಡಲೆ’ ಎಂದು ಅವನ ಡುಬ್ಬ ಚಪ್ಪರಿಸಿದ. ಅದೇ ವೇಳೆಗೆ ಯಬಡೇಶಿ, ಚಿಕ್ಕೇಶಿ ಒಟ್ಟಿಗೇ ನಗುತ್ತಾ ಅಲ್ಲಿಗೆ ಬಂದರು. ‘ಏನ್ರಲೆ ಇಬ್ರೂ ನಕ್ಕೋಂಡ್ ಬರಾಕತ್ತಿದೀರಿ, ಅದೇನ್ ನಮಗೂ ಹೇಳ್ರಲೆ ನಾವೂ ನಗ್ತೀವಿ’ ಎಂದ ತೆಪರೇಸಿ. ಏನಿಲ್ಲಪ, ‘ಹಂಸಕ್ಷೀರ ನ್ಯಾಯ’ ಅಂದ್ರೆ ಏನು ಅಂತ ಚಿಕ್ಕೇಶಿ ಕೇಳ್ತಿದ್ದ. ಅದಕ್ಕೆ ನಾನು ಹಾಲನ್ನ ಕುಡಿಯೋದು ನೀರನ್ನ ಬಿಡೋದು ಅಂದೆ. ಅಷ್ಟೆ ಅದ್ಕೆ ನಗ್ತಿದ್ವಿ’ ಎಂದ ಯಬಡೇಶಿ ‘ರಾಜ್ಯಪಾಲರು ‘ಕಳ್ಳನೇ ಪೋಲೀಸರ ಮೇಲೆ ಕೇಸು ಕೊಟ್ಟಂಗಾತು’ ಅಂದ್ರಂತಲ್ಲ, ಈ ಯಬಡ ಅದೇ ತರ ಇನ್ನೊಂದೆರಡು ಹೇಳಿದ.ಅದ್ಕೇ ನಗು ಬಂತು’ ಅಂದ ಚಿಕ್ಕೇಶಿ.  ‘ಅದೇ ತರ ಅಂದ್ರೆ?’ ದುಬ್ಬೀರ ಪ್ರಶ್ನಿಸಿದ.  ‘ಅಂದ್ರೆ ವಕೀಲರೇ ಜಡ್ಜ್‌ಗಳಾದ್ರೆ ಹೆಂಗೆ? ಭಕ್ತರೇ ಸ್ವಾಮಿಗಳಾದ್ರೆ ಹೆಂಗೆ? ಪೂಜಾರಿನೇ ದೇವರಾಗಿಬಿಟ್ರೆ ಹೆಂಗೆ? ಅಂತೆಲ್ಲ ಯಬಡೇಶಿ ಹೇಳ್ತಿದ್ದ. ಅದಕ್ಕೆ ನಾನು ಅದೆಲ್ಲ ಬ್ಯಾಡಪ, ಈಗ ಯಡೆಯೂರಪ್ಪನೋರೇ ರಾಜ್ಯಪಾಲರಾಗಿ, ಹಂಸರಾಜ್ ಅವರೇ ಮುಖ್ಯಮಂತ್ರಿ ಅದ್ರೆ ಹೆಂಗೆ? ಅಂದೆ. ಅದೇ ನಗ್ತಿದ್ವಿ’ ಎಂದ ಚಿಕ್ಕೇಶಿ. ‘ಕರೆಕ್ಟ್ ಕಣ್ರಲೆ, ಅದೇ ತರ ನಂ ದುಬ್ಬೀರ ಸಪ್ಲೆಯರ್ ಅಗಿ, ಸಪ್ಲೆಯರ್ ಗುಡ್ಡೇ ಚಾದಂಗಡಿ ಓನರ್ ಆದ್ರೆ ಹೆಂಗೆ?’ ತೆಪರೇಸಿ ಐಡಿಯಾ ಮುಂದಿಟ್ಟ.  ತಕ್ಷಣ ದುಬ್ಬೀರ ‘ಲೇ ರೊಕ್ಕ, ಇಟ್ಟು ಮೊದ್ಲು ಜಾಗ ಖಾಲಿ ಮಾಡ್ರಲೆ’ ಎಂದು ರೇಗಿದ. ಎಲ್ಲರೂ ನಕ್ಕರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry