ಜಗ್ಗೇಶ್ ಟ್ವೀಟ್ ‘ನುಡಿಮುತ್ತು’

‘ಇದು ವಿವಾದವಲ್ಲ; ದೌರ್ಭಾಗ್ಯ’ ಎಂದರು ಜಗ್ಗೇಶ್. ನಿಶ್ಶಬ್ದಗೊಂಡಿದ್ದ ಟ್ವೀಟ್ ಸಮರ ಮತ್ತೆ ಶುರುವಾದಂತಾಗಿದೆ. ಐದಾರು ದಿನಗಳಿಂದ ನಟ ಜಗ್ಗೇಶ್ ಟ್ವೀಟ್ ಮಾಡಿದ್ದು ಸದ್ದುಗದ್ದಲ ಎಬ್ಬಿಸಿದೆ. ಲೋಕಸಭೆ ಚುನಾವಣೆಯಲ್ಲಿ ಪರಾಭವಗೊಂಡ ಬಳಿಕ ನಟಿ ರಮ್ಯಾ ಮತ್ತೆ ಸಿನಿಮಾದೆಡೆ ಒಲವು ತೋರಿದ್ದಕ್ಕೆ ಪ್ರತಿಯಾಗಿ ಜಗ್ಗೇಶ್ ಟ್ವೀಟ್ ಮಾಡಿದ್ದಾರೆ ಎಂಬುದು ರಮ್ಯಾ ಅಭಿಮಾನಿಗಳ ಆಕ್ರೋಶ. ‘ನನ್ನಷ್ಟಕ್ಕೆ ನಾನು ಟ್ವೀಟ್ ಮಾಡುತ್ತಾ ಇರುತ್ತೇನೆ. ಅದನ್ನು ತಮ್ಮ ಕುರಿತೇ ಮಾಡಿದ್ದಾರೆ ಎಂದು ಯಾರೋ ಭಾವಿಸಿದರೆ ನಾನೇನೂ ಹೇಳುವುದಿಲ್ಲ’ ಎಂದು ಜಗ್ಗೇಶ್ ತಣ್ಣಗೇ ಪ್ರತಿಕ್ರಿಯಿಸುತ್ತಾರೆ. ‘ಸಿನಿಮಾ ರಂಜನೆ’ ಜತೆ ಮಾತನಾಡಿದ ಅವರು, ‘ನನ್ನ ಟ್ವೀಟ್ಗಳು ಯಾರ ವಿರುದ್ಧವೂ ಅಲ್ಲ’ ಎಂದು ಸ್ಪಷ್ಟಪಡಿಸಿದರು.
ವಿಜಯಪ್ರಸಾದ್ ನಿರ್ದೇಶನದ ‘ನೀರ್ ದೋಸೆ’ ಚಿತ್ರೀಕರಣ ವಿವಾದ ಎಂಟು ತಿಂಗಳ ಹಿಂದೆಯೇ ಶುರುವಾಗಿತ್ತು. ರಮ್ಯಾ ಲೋಕಸಭೆ ಪ್ರವೇಶಿಸಿದ ಬಳಿಕ, ಚಿತ್ರೀಕರಣಕ್ಕೆ ಸಹಕರಿಸುತ್ತಿಲ್ಲ ಎಂಬ ದೂರು ವಿವಾದ ಸೃಷ್ಟಿಸಿತ್ತು. ತಾವು ಲಭ್ಯವಿರುವುದಾಗಿ ಹೇಳಿದ ನಿಗದಿತ ದಿನಗಳಲ್ಲಿ ಶೂಟಿಂಗ್ ನಡೆಸಿಲ್ಲ ಎಂಬುದು ರಮ್ಯಾ ವಾದಿಸಿದ್ದರು. ಈ ಚಕಮಕಿ ತಣ್ಣಗಾಗಿತ್ತು. ಈ ಮಧ್ಯೆ ‘ಆರ್ಯನ್’ ತಮ್ಮ ಕೊನೆಯ ಚಿತ್ರ. ಮುಂದೆ ಸಕ್ರಿಯವಾಗಿ ರಾಜಕೀಯದಲ್ಲಿ ತೊಡಗಿಕೊಳ್ಳುವುದಾಗಿ ರಮ್ಯಾ ಹೇಳಿದ್ದರು. ಆದರೆ ಲೋಕಸಭೆ ಚುನಾವಣೆಯಲ್ಲಿ ಸೋತರು. ಅವರು ಮತ್ತೆ ಚಿತ್ರರಂಗಕ್ಕೆ ಬರುವ ಸುದ್ದಿ ಹಬ್ಬಿದೆ.
ತಕ್ಷಣ ಜಗ್ಗೇಶ್ ಮಾಡಿದ ‘ಫ್ರೆಂಡ್ಸ್, ನಾನು ಹೇಳಿರಲಿಲ್ಲವೇ? ಯೋಗ ಒಮ್ಮೆ ಬರುತ್ತದೆ. ಯೋಗ್ಯತೆ ಕೊನೆಯವರೆಗೂ ಇರುತ್ತದೆ’ ಎಂಬ ಟ್ವೀಟ್ ವಿವಾದಕ್ಕೆ ಕಿಡಿ ಹಚ್ಚಿತು. ‘ಚುನಾವಣೆಯಲ್ಲಿ ಗೆದ್ದ ಬಳಿಕ ಸಿನಿಮಾವನ್ನು ಡಿಗ್ರೇಡ್ ಮಾಡಿದವರು, ಸೋತ ಕೂಡಲೇ ಮತ್ತೆ ಇತ್ತ ಕಡೆ ಬರುವುದಾಗಿ ಹೇಳುತ್ತಿದ್ದಾರೆ. ಅಂಥವರು ಅವಕಾಶವಾದಿಗಳು’ ಎಂಬ ಇನ್ನೊಂದು ಟ್ವೀಟ್ ಈ ಬೆಂಕಿಗೆ ಇನ್ನಷ್ಟು ತುಪ್ಪ ಸುರಿಯಿತು. ರಮ್ಯಾ ಅಭಿಮಾನಿಗಳು ಜಗ್ಗೇಶ್ ವಿರುದ್ಧ ಟ್ವೀಟ್ ಪ್ರತಿದಾಳಿ ನಡೆಸಿದಾಗ, ಜಗ್ಗೇಶ್ ಅಂಥವರನ್ನು ಬ್ಲಾಕ್ ಮಾಡಿಬಿಟ್ಟರಂತೆ!
‘ಅಷ್ಟಕ್ಕೂ ನಾನು ನನ್ನಷ್ಟಕ್ಕೆ ನನಗೆ ಅನಿಸಿದ್ದನ್ನು ಟ್ವೀಟ್ ಮಾಡುತ್ತೇನೆ. ಅದು ತಮ್ಮ ಬಗ್ಗೆ ಅಂತ ಯಾಕೆ ಯಾರಾದರೂ ಭಾವಿಸಬೇಕು’ ಎಂದು ಪ್ರಶ್ನಿಸುತ್ತಾರೆ ಜಗ್ಗೇಶ್.
ರಾಜಕೀಯ ಎಂದೂ ಕಲಾವಿದನಿಗೆ ಅಡ್ಡಿಯಾಗುವುದಿಲ್ಲ ಎನ್ನುವ ಜಗ್ಗೇಶ್, ಇದಕ್ಕೆ ತಮ್ಮದೇ ಉದಾಹರಣೆ ಕೊಡುತ್ತಾರೆ. ‘11 ವರ್ಷಗಳಿಂದಲೂ ಸಕ್ರಿಯ ರಾಜಕಾರಣದಲ್ಲಿರುವ ನಾನು ಸಿನಿಮಾಕ್ಕೆ ಮೊದಲ ಆದ್ಯತೆ ಕೊಡುತ್ತೇನೆ. ನನಗೆ ಅನ್ನ ನೀಡಿದ್ದು ಸಿನಿಮಾ. ಅಲ್ಲಿ ಸ್ಟಾರ್ ಆಗಿದ್ದರಿಂದಲೇ ನನ್ನನ್ನು ರಾಜಕೀಯಕ್ಕೆ ಕರೆದರು. ರಾಜಕೀಯದಲ್ಲಿ ಆ್ಯಕ್ಟಿವ್ ಆದ ಕೂಡಲೇ ಸಿನಿಮಾ ಬಿಡಬೇಕು ಎಂದೇನೂ ಇಲ್ಲ. ನನ್ನ ಎಂಎಲ್ಸಿ ಅವಧಿ ಇನ್ನೂ ಮೂರು ವರ್ಷ ಇದೆ. ಇಲ್ಲಿಯವರೆಗೆ ಚುನಾವಣಾ ಪ್ರಚಾರ ಸಭೆಗೆ ಹೋಗಿದ್ದೇನೆ. ಸಿನಿಮಾಗಳಲ್ಲೂ ಅಭಿನಯಿಸಿದ್ದೇನೆ. ಮನಸ್ಸಿದ್ದರೆ ಮಾರ್ಗ. ಅದನ್ನು ಅರಿತು ಸಿನಿಮಾಕ್ಕೆ ಮರ್ಯಾದೆ ಕೊಡಬೇಕು’ ಎಂಬುದು ಅವರ ಕಿವಿಮಾತು.
ಯಾರೂ ಟಾರ್ಗೆಟ್ ಅಲ್ಲ
ಕಿಡಿ ಹೊತ್ತಿಸಿದ ಟ್ವೀಟ್ಗಳ ಬಗ್ಗೆ ಜಗ್ಗೇಶ್ ಅವರದು ತಟಸ್ಥ ಭಾವ! ಯಾರನ್ನೂ ಗುರಿಯಾಗಿಟ್ಟುಕೊಂಡು ತಾವು ಹೇಳಿಲ್ಲ. ತಮ್ಮ ಅನಿಸಿಕೆಯನ್ನು ಟ್ವೀಟ್ ಮಾಡಿದ್ದಷ್ಟೇ. ಕೆಲವರು ಅವರವರ ದೃಷ್ಟಿಕೋನದಲ್ಲಿ ಅರ್ಥ ಮಾಡಿಕೊಂಡು, ಇಂಥವರಿಗೆ ಹೇಳಿರಬಹುದು ಎಂದು ಊಹೆ ಮಾಡಿಕೊಳ್ಳುತ್ತಾರೆ ಎಂಬ ಗುಮಾನಿ ಅವರದು!
‘‘ನೋಡಿ... ಇವತ್ತು ಕೂಡ ಟ್ವೀಟ್ ಮಾಡಿದ್ದೇನೆ. ಯುವಕ ಯುವತಿಯರಿಗೆ ಉಪಯುಕ್ತವಾಗಿದ್ದನ್ನು ಹೇಳಿದ್ದೇನೆ. ಉದಾಹರಣೆಗೆ ‘ಮಾತುಗಳು ಮನೆತನವನ್ನು ಬಿಂಬಿಸುತ್ತವೆ. ವಿದ್ಯೆ ಬಲ್ಲವನು ಮಾತು ಬಲ್ಲ. ಆದರೆ ಎಷ್ಟೋ ಬಾರಿ ಆತನ ಮಾತುಗಳು ಇತಿಹಾಸದಲ್ಲಿ ಉಳಿಯುವುದಿಲ್ಲ’ ...ಹೀಗೆ. ಸೋಶಿಯಲ್ ಮೀಡಿಯಾದಲ್ಲಿ ತುಂಬ ವಿದ್ಯಾವಂತರಿದ್ದಾರೆ. ಕೆಲವರು ನನ್ನ ಟ್ವೀಟ್ಗಳಿಂದ ಪ್ರಭಾವಿತರಾಗಿದ್ದಾರೆ’’ ಎನ್ನುತ್ತಾರೆ.
ರಮ್ಯಾ ಕುರಿತೇ ಟ್ವೀಟ್ ಮಾಡಲಾಗಿದೆ ಎಂದು ಅವರ ಕೆಲವು ಅಭಿಮಾನಿಗಳು ಟ್ವೀಟ್ ಪ್ರತಿದಾಳಿ ನಡೆಸಿದ್ದಕ್ಕೆ ಅಂಥವರನ್ನು ಜಗ್ಗೇಶ್ ತಮ್ಮ ಗ್ರೂಪ್ನಿಂದ ಹೊರ ಹಾಕಿದ್ದಾರೆ. ಈ ಬಗ್ಗೆ ಕೇಳಿದರೆ, ‘ಈಗ ಸೋಶಿಯಲ್ ಮೀಡಿಯಾ ಕೂಡ ಕಲುಷಿತವಾಗಿದೆ. ವಿದ್ಯೆ ಇದ್ದವರೂ ಅವಿದ್ಯಾವಂತರ ಥರ ವರ್ತಿಸುತ್ತಾರೆ. ನನ್ನ ಟ್ವೀಟ್ ಫಾಲೋ ಮಾಡುವವರ ಪೈಕಿ ಕೆಟ್ಟವರೂ ಇದ್ದಾರೆ. ನಾನು ಅವರನ್ನು ಬ್ಲಾಕ್ ಮಾಡಿ ಬಿಸಾಕ್ತೀನಿ’ ಎಂದರು ಜಗ್ಗೇಶ್!
ಅದೊಂದು ನುಡಿಮುತ್ತು
‘ವಿಶೇಷ ಅರ್ಥ’ ಹೊರಡಿಸಿದ ತಮ್ಮ ಟ್ವೀಟ್ಗಳ ಬಗ್ಗೆ ಜಗ್ಗೇಶ್ ಅವರ ವಾದ ಹೀಗಿದೆ: ‘‘ನನಗೆ ರಾಜ್ಕುಮಾರ್ ಗುರುಗಳು. ಏನಾದರೂ ಅಮೂಲ್ಯ ನುಡಿಮುತ್ತು ನನಗೆ ಹೇಳಿ ಅಂತ ಅವರನ್ನು ಒಮ್ಮೆ ಕೇಳಿದ್ದೆ. ಆಗ ಅವರು ‘ಯೋಗ ಒಮ್ಮೆ ಬರುತ್ತದೆ. ಯೋಗ್ಯತೆ ಕಡೆಯವರೆಗೂ ಉಳಿಯುತ್ತದೆ’ ಅಂತ ಹೇಳಿದ್ದರು. ಯೋಗ ಬಂದಾಗ ಯೋಗ್ಯತೆ ಇಲ್ಲದೇ ಹೋದರೂ ಅದು ಹೊರಟು ಹೋಗುತ್ತದೆ ಅನ್ನುವುದು ಅದರ ಅರ್ಥ. ಈ ಮಾತಿನಿಂದ ನಾನು ಪ್ರಭಾವಿತನಾಗಿದ್ದೆ. ಯಾಕೋ ನೆನಪಾಯ್ತು. ಅದನ್ನು ನಾನು ಈಗ ಟ್ವೀಟ್ ಮಾಡಿದೆ.’’
‘ಸಿನಿಮಾ ಡಿಗ್ರೇಡ್ ಮಾಡಿದವರು..’ ‘ಅವಕಾಶವಾದಿಗಳು’ ಎಂಬ ಟ್ವೀಟ್ ಬಗ್ಗೆಯೂ ಜಗ್ಗೇಶ್ ಅವರದ್ದು ಇದೇ ನಿಲುವು. ‘ಅವರವರ ಅನಿಸಿಕೆ ಪ್ರಕಾರ ಅವರವರು ಅರ್ಥ ಮಾಡಿಕೊಂಡಿದ್ದು. ಅವರ ಅಭಿಮಾನಿಗಳಿಗೆ ಬಿಟ್ಟಿದ್ದು’ ಎಂಬ ಚುಟುಕು ಉತ್ತರ ಜಗ್ಗೇಶರದ್ದು.
‘ನಾನು ಯಾರನ್ನೂ ಟಾರ್ಗೆಟ್ ಮಾಡಿಲ್ಲ. ನನ್ನ ಅನಿಸಿಕೆ ಹೇಳಿದ್ದೇನೆ’ ಎನ್ನುವ ಜಗ್ಗೇಶ್, ಕನ್ನಡದ ಇತರ ನಟಿಯರ ಬಗ್ಗೆ ತಾವು ಮಾಡಿದ ಟ್ವೀಟ್ಗೆ ಏನೇನೋ ಅರ್ಥ ಕಲ್ಪಿಸುವುದೇಕೆ ಎಂದು ಕೇಳುತ್ತಾರೆ.
ಹರ್ಷಿಕಾ ಪೂಣಚ್ಚ, ಅಮೂಲ್ಯ, ರಾಧಿಕಾ ಪಂಡಿತ್ರಂಥ ಕಲಾವಿದೆಯರಿಗೆ ಒಳ್ಳೆಯ ಗುಣ ಇವೆ. ಚಿತ್ರರಂಗದಲ್ಲಿ ಅವರಿಗೆ ಭವಿಷ್ಯ ಇದೆ ಅಂತ ತಾವು ಮಾಡಿದ ಟ್ವೀಟ್ ಅನ್ನು ವಿವಾದ ಮಾಡಲಾಗಿದೆ ಎಂಬುದು ಅವರ ಆಕ್ಷೇಪ. ‘ಇದು ರಮ್ಯಾ ಅವರನ್ನು ಗುರಿಯಾಗಿಟ್ಟುಕೊಂಡು ಮಾಡಿದ ಟ್ವೀಟ್ ಅಂತ ಟೀವಿಯವರು ಹೇಳಿದರು. ಅದು ಅವರ ಅಭಿಪ್ರಾಯ. ಅದು ಸರಿ ಅಲ್ಲ ಅಂತ ನಾನು ಯಾರು ಹೇಳೋಕೆ? ಕೇಳಿದರೆ, ‘ಅದು ನನ್ನ ಅಭಿಪ್ರಾಯ ಅಲ್ಲ ಅಂತ ಹೇಳುತ್ತೇನೆ ಅಷ್ಟೇ’ ಎಂದು ಗರಂ ಆಗುತ್ತಾರೆ ಜಗ್ಗೇಶ್.
‘ನೀರ್ ದೋಸೆ’ ರೆಡಿ
ಒಟ್ಟಾರೆ ಸಿನಿಮಾವೊಂದಕ್ಕೆ ಸುತ್ತಿಕೊಂಡ ಈ ವಿವಾದದ ಬಗ್ಗೆ ಜಗ್ಗೇಶ್ ಹೇಳುವುದು ಹೀಗೆ: ‘ಅಲ್ಲ... ಇದು ವಿವಾದ ಅಲ್ಲ. ದೌರ್ಭಾಗ್ಯ! ಹಲವು ಕಾರಣಗಳಿಂದ ಮನಸು–ಮನಸುಗಳು ಒಂದಾಗಿಲ್ಲ. ಮನಸುಗಳು ಒಂದಾಗಿಲ್ಲ ಅಂದ ಮೇಲೆ ಉತ್ತಮವಾದ ಕೃತಿ ಹಾಳಾಗಬಾರದು. ಹೀಗಾಗಿ ಮನಸು ಹಾಳಾದವರನ್ನು ಬಿಟ್ಟು ಸಿನಿಮಾ ಮುಗಿಸುತ್ತಾರೆ ಎಂಬ ನಂಬಿಕೆ ನನ್ನದು.’
ಹಾಗಿದ್ದರೆ ‘ನೀರ್ ದೋಸೆ’ಗೆ ರಮ್ಯಾ ಬರುತ್ತಾರೆಯೇ? ಎಂದಾಗ, ‘ಆ ಬಗ್ಗೆ ಮಾಹಿತಿ ಇಲ್ಲ. ನಿರ್ಮಾಪಕರು ಸಿನಿಮಾ ಪೂರ್ಣಗೊಳಿಸಲಿದ್ದಾರೆ. ಕಥೆ ಸ್ಟ್ರಾಂಗ್ ಆಗಿದೆ. ನಿರ್ದೇಶಕ ಪ್ರತಿಭಾವಂತ. ಹೀಗಾಗಿ ಜಗ್ಗೇಶ್ ಇಲ್ಲದೇ ಹೋದರೂ ಮುಗಿಯುತ್ತದೆ; ರಮ್ಯಾ ಇಲ್ಲದೇ ಹೋದರೂ ಮುಗಿಯುತ್ತದೆ. ಆ ಚಿತ್ರಕ್ಕೂ ಅದರ ನಿರ್ದೇಶಕರಿಗೂ ಅಂಥ ತಾಕತ್ತು ಇದೆ’ ಎಂದು ಮಾತು ಮುಗಿಸಿದರು.
ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್ಬುಕ್ ಪುಟವನ್ನುಫಾಲೋ ಮಾಡಿ.