ಜಡೆ...ಒಂದೆರಡೇ?

7

ಜಡೆ...ಒಂದೆರಡೇ?

Published:
Updated:

ಕೇಶ... ಹೆಣ್ಣಿನ ಸೌಂದರ್ಯದ ಅವಿಭಾಜ್ಯ ಅಂಗ. ಜಡೆ... ಕೇಶ ಸೌಂದರ್ಯವನ್ನು ಹೆಚ್ಚಿಸುವ ಕಲೆ. ಒಬ್ಬಳು ಎಷ್ಟು ಜಡೆ ಹಾಕಿಕೊಳ್ಳಲು ಸಾಧ್ಯ? ಒಂದು? ಎರಡು? ಕೇಶ ವಿನ್ಯಾಸದ ಹೆಸರಿನಲ್ಲಿ ನೆತ್ತಿಮೇಲೆ ಆಚೆ ಈಚೆ ಬೇಕಿದ್ದರೆ ಮತ್ತೆರಡು ಹೆಣೆದು ಮುತ್ತಿನಿಂದಲೋ, ಮಲ್ಲಿಗೆ ಮೊಗ್ಗಿನಿಂದಲೋ ಸಿಂಗರಿಸಿಕೊಳ್ಳಬಹುದು.ಆದರೆ ಆ ದಿನ ಬಸ್‌ನಲ್ಲಿ ಕಂಡ ವಿದೇಶಿ ಹೆಣ್ಣುಮಗಳು ತಲೆ ತುಂಬ ಜಡೆ ಹೆಣೆದುಕೊಂಡು ಕೂತಿದ್ದಳು. ಹೆಣೆದ ಜಡೆಗಳೆಷ್ಟು ಎಂದು ಕಣ್ಣಳತೆಗೆ ದಕ್ಕಿಸಿಕೊಳ್ಳುವ ಮನಸ್ಸಾಯಿತು. ಅಷ್ಟರಲ್ಲಿ ಅವಳು ಬಸ್ ಇಳಿದು ಹೋಗಿಬಿಟ್ಟಳು.ಐವತ್ತಕ್ಕೂ ಹೆಚ್ಚು ಪುಟ್ಟ ಪುಟ್ಟ ಜಡೆಗಳಿದ್ದಿರಬಹುದು. ಅವನ್ನು ಹೆಣೆಯಲು ಎಷ್ಟು ಹೊತ್ತು ಬೇಕಾದೀತು? ಹೀಗೆಲ್ಲಾ ಜಡೆ ಹೆಣೆದ ಇವರದ್ದು ಎಷ್ಟು ದಿನಕ್ಕೊಮ್ಮೆ ತಲೆ ಸ್ನಾನವೋ? ಹೀಗೆಯೇ ಮಲಗುತ್ತಾರೆಯೇ? ಇಂತಹ ಪ್ರಶ್ನೆಗಳಿಗೆ ಉತ್ತರ ಸಿಕ್ಕಿದ್ದು ಸರ್ಜಾಪುರ ರಸ್ತೆಯ ಕೃಪಾನಿಧಿ ಕಾಲೇಜು ಕ್ಯಾಂಪಸ್‌ನಲ್ಲಿ. ಅವರು ಸೂಡಾನಿನ ವಿದ್ಯಾರ್ಥಿಗಳು.ಕಾಲೇಜು ಕ್ಯಾಂಪಸ್‌ನಲ್ಲಿ ಹುಡುಗಿಯರ ಗುಂಪಿನ ಮಧ್ಯೆ `ಜಡೆಧಾರಿಣಿ'ಯೊಬ್ಬಳು ಇದ್ದರೂ ಎದ್ದುನಡೆದಳು. ಆದರೆ ಮಾತಿಗೆ ಸಿಕ್ಕಿದವನು ಸಾರಿಕ್. ಈ ಕೇಶ ವಿನ್ಯಾಸ ಸಂಪ್ರದಾಯವೇ ಫ್ಯಾಷನ್ನೇ ಎಂಬ ಪ್ರಶ್ನೆಗೆ ಅರೆಬರೆ ಇಂಗ್ಲಿಷ್‌ನಲ್ಲಿ ವಿವರಿಸಿದರು.

`ಇದು ಚಿಕ್ಕ ಚಿಕ್ಕ ಜಡೆ ಹಾಗೆ ಕಾಣಿಸುತ್ತಾ? ಇದು ಜಡೆ ಅಲ್ಲ. ನಾನೇ ಕೈಯಲ್ಲಿ ಸುರುಳಿ ಸುರುಳಿಯಾಗಿ ಸುತ್ತಿಕೊಂಡು ಮಾಡಿರೋದು. ಹೊಸ ಕೂದಲನ್ನೂ ಬಿಡದೆ ಸುರುಟುತ್ತೇನೆ. ನಾನು ಎಲ್ಲರಿಗಿಂತ ಡಿಫರೆಂಟ್ ಆಗಿ ಕಾಣಿಸ್ತಿಲ್ವಾ?' ಎಂದು ನಕ್ಕವನು ಕೂದಲ ಸುರುಳಿಯನ್ನು ಇನ್ನಷ್ಟು ಬಿರುಸಾಗಿ ಸುತ್ತತೊಡಗಿದ.`ಎಷ್ಟು ದಿನಕ್ಕೊಮ್ಮೆ ತಲೆಸ್ನಾನ ಮಾಡುತ್ತೀರಿ?' ಎಂದು ಕೇಳಿಯೇಬಿಟ್ಟೆ. ಗುಂಪಿನಲ್ಲಿದ್ದವರೆಲ್ಲಾ ಗೊಳ್ಳೆಂದು ನಕ್ಕರು. `ನಾವೂ ಮನುಷ್ಯರೇ ಅಲ್ವಾ? ಸ್ನಾನ ಮಾಡುತ್ತೇವೆ. ಆದರೆ ಕೂದಲು ಒಣಗಿಸಿದ ತಕ್ಷಣ ಪುನಃ ಸುರುಳಿ ಸುತ್ತಿಕೊಳ್ಳುತ್ತೇವೆ. ಅದಕ್ಕೆ ಸ್ವಲ್ಪ ಹೆಚ್ಚು ಸಮಯ ಹಿಡಿಯುತ್ತದೆ. ನನಗೆ ಸ್ಟೈಲ್ ಬಗ್ಗೆ ಜಾಸ್ತಿ ಕ್ರೇಜ್ ಇರುವುದರಿಂದ ಸಮಯದ ಬಗ್ಗೆ ತಲೆಕೆಡಿಸಿಕೊಳ್ಳುವುದಿಲ್ಲ. ಲಕ್ಸ್ ಶಾಂಪೂ ಹಾಕಿ ತಲೆ ತೊಳೆದುಕೊಳ್ಳುತ್ತೇನೆ' ಎಂದು ಸಾರಿಕ್ ಗುಟ್ಟು ರಟ್ಟು ಮಾಡಿದರು.`ನನ್ನಿಷ್ಟದ ಸಂಗೀತಗಾರನೊಬ್ಬ ಇದೇ ರೀತಿ ಕೇಶ ವಿನ್ಯಾಸ ಮಾಡಿಕೊಂಡಿದ್ದ. ಅವನನ್ನು ನೋಡಿ ನಾನು ಪ್ರಯತ್ನಿಸಿದೆ. ಚೆನ್ನಾಗಿ ಬಂತು. ಇಲ್ಲಿನವರು ಸ್ಪೈಕ್ಸ್ (ನೆತ್ತಿಯ ಕೂದಲನ್ನಷ್ಟೇ ಲಂಬವಾಗಿಸುವ ಮುಳ್ಳುಹಂದಿಯಂತಹ ಕೇಶವಿನ್ಯಾಸ) ಮುಂತಾಗಿ ಏನೇನೋ ವಿನ್ಯಾಸ ಮಾಡಿಕೊಳ್ಳುತ್ತಾರೆ ಇದು ನಮ್ಮ ಸ್ಟೈಲು'  ಎನ್ನುತ್ತಾರೆ ಸಾರಿಕ್.ಸೂಡಾನ್ ಸುಂದರಿಯರೂ ಅಲ್ಲಿ ಜಮಾಯಿಸಿದರು. ಮುಸ್ಲಿಂ ಹೆಣ್ಣುಮಗಳು ರಾವಾ ಸಾರ್ವಜನಿಕವಾಗಿ ತಲೆಯ ಸ್ಕಾರ್ಫ್ ತೆಗೆಯುವಂತಿರಲಿಲ್ಲ. ಹಾಗಾಗಿ ಪಕ್ಕದಲ್ಲೇ ಇದ್ದ ತನ್ನ ಹಾಸ್ಟೆಲ್ ರೂಮ್‌ಗೆ ಕರೆದುಕೊಂಡು ಹೋಗಿ ಸ್ಕಾರ್ಫ್ ಬಿಚ್ಚಿದಳು. ನೆತ್ತಿ ಮೇಲೆ ಬಿಡಿಗೂದಲೂ ಹಾರುತ್ತಿರಲಿಲ್ಲ. `ನೋಡಿ ಇದನ್ನು ಸುಲಭವಾಗಿ ಬಿಚ್ಚಬಹುದು ಹಾಗೇ ಹೆಣೆದುಕೊಳ್ಳಬಹುದು. ನೋಡುವವರಿಗೆ ಇದು ಕಷ್ಟ ಅನಿಸಬಹುದು. ನಮಗೆ ಇದು ಕಷ್ಟವಲ್ಲ' ಎನ್ನುತ್ತಾರೆ ಅವರು.`ಕೇಶ ಸಂರಕ್ಷಣೆಗೆ ಇದೊಂದು ಸುಲಭ ವಿಧಾನವೂ ಹೌದು. ಕೂದಲು ಬಿಚ್ಚಿಕೊಂಡಿದ್ದರೆ ದೂಳು ಮೆತ್ತಿಕೊಳ್ಳುತ್ತದೆ. ಈ ರೀತಿ ಜಡೆ ಹೆಣೆದುಕೊಂಡುಬಿಟ್ಟರೆ ಕೂದಲೂ ಚೆನ್ನಾಗಿ ಇರುತ್ತದೆ. ನಾನು ವಾರಕ್ಕೊಮ್ಮೆ ತಲೆಸ್ನಾನ ಮಾಡುತ್ತೇನೆ. ಒಣಗಿದ ಮೇಲೆ ಮತ್ತೆ ಜಡೆ ಹೆಣೆದುಕೊಳ್ಳುತ್ತೇನೆ. ತುಂಬಾ ಸಮಯ ಬೇಕಲ್ವಾ; ಅದಕ್ಕೇ ಭಾನುವಾರ ಇದಕ್ಕೆ ಮೀಸಲು. ತಿಂಗಳಿಗೊಮ್ಮೆ ಬ್ಯೂಟಿ ಪಾರ್ಲರ್‌ಗೆ ಹೋಗಿ ಬೇರೆ ಬೇರೆ ರೀತಿಯಲ್ಲಿ ಕೇಶ ವಿನ್ಯಾಸ ಮಾಡಿಕೊಳ್ಳುತ್ತೇನೆ. ಕಮ್ಮನಹಳ್ಳಿಯಲ್ಲಿರುವ ಪಾರ್ಲರ್‌ನಲ್ಲಿ ಈ ರೀತಿ ವಿನ್ಯಾಸ ಮಾಡುತ್ತಾರೆ. ಕೆಲವರು ಜಡೆ ಹೆಣೆದುಕೊಳ್ಳುತ್ತಾರೆ, ಇನ್ನು ಕೆಲವರು ನೇರವಾಗಿ ನಿಂತಿರುವ ಹಾಗೆ ಸುರುಳಿ ಮಾಡಿಕೊಳ್ಳುತ್ತಾರೆ.ನಮ್ಮ ತಲೆಗೂದಲು ಇಲ್ಲಿನವರ ಹಾಗೆ ಮೃದು, ನಯವಾಗಿರದೆ ಗಟ್ಟಿ ಮತ್ತು ಒರಟಾಗಿರುವುದರಿಂದ ಅದರಲ್ಲಿ ವಿಭಿನ್ನವಾದ ವಿನ್ಯಾಸಗಳನ್ನು ಮಾಡಿಕೊಳ್ಳಬಹುದು' ಎಂದು ವಿವರಿಸಿದರು ರಾವಾ.ಸೂಡಾನಿನಲ್ಲಿ ತಾಪಮಾನ ಜಾಸ್ತಿ ಇರುತ್ತದೆ. ಹಾಗಾಗಿ ಕೂದಲು ಕೂಡ ಗಟ್ಟಿಯಾಗಿ ಬೆಳೆಯುತ್ತದಂತೆ. ಇನ್ನೂ ಒಂದು ವಿಶೇಷ ಗೊತ್ತಾ? ಇವರ ಕೂದಲು ಉದರುವುದಿಲ್ಲವಂತೆ!

ಇಲ್ಲಿನ ಹವೆ ಇಷ್ಟವಂತೆ

ವಿದ್ಯಾಭ್ಯಾಸಕ್ಕಾಗಿ ನಗರಕ್ಕೆ ಬಂದಿರುವ ಸೂಡಾನ್ ವಿದ್ಯಾರ್ಥಿಗಳಿಗೆ ಬೆಂಗಳೂರಿನ ಹವಾಮಾನ ತುಂಬಾ ಇಷ್ಟವಂತೆ. `ಆದರೆ ಇಲ್ಲಿನ ಊಟ ಮಾತ್ರ ತಿನ್ನಲು ಆಗುವುದಿಲ್ಲ. ಸಖತ್ ಖಾರ. ನಾವು ಬ್ರೆಡ್, ಬಟಾಣಿ ಹೆಚ್ಚು ಇಷ್ಟಪಡುತ್ತೇವೆ. ಇಲ್ಲಿ ಅನ್ನ ಜಾಸ್ತಿ ತಿನ್ನುತ್ತಾರೆ. ಜತೆಗೆ ನಮಗೆ ಭಾಷೆಯ ಸಮಸ್ಯೆಯೂ ಇದೆ. ಇಲ್ಲಿನವರ ಉಚ್ಛಾರವನ್ನು ನಮಗೆ ಗ್ರಹಿಸುವುದು ಕಷ್ಟವಾಗುತ್ತದೆ' ಎಂದು ಹೇಳುತ್ತಾರೆ ಸೂಡಾನ್ ಹುಡುಗರು.

 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry