ಜಡ್ಕಲ್, ಮುಧೂರು: ಕೋಟ್ಯಂತರ ಬೆಲೆ ಬಾಳುವ ಮರಗಳು ಧರಾಶಾಹಿ

ಭಾನುವಾರ, ಜೂಲೈ 21, 2019
26 °C

ಜಡ್ಕಲ್, ಮುಧೂರು: ಕೋಟ್ಯಂತರ ಬೆಲೆ ಬಾಳುವ ಮರಗಳು ಧರಾಶಾಹಿ

Published:
Updated:

ಕುಂದಾಪುರ: ಜಡ್ಕಲ್ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಮುದೂರು ಗ್ರಾಮದ ಜಡ್ಕಲ್ ಮದೂರು ಜಿಲ್ಲಾ ಮುಖ್ಯ ರಸ್ತೆ ಅಭಿವೃದ್ಧಿಗೆ ಅಡ್ಡಿಯಾಗುತ್ತಿದೆ ಎಂದು ಆಕ್ರೋಶಗೊಂಡ ಸ್ಥಳೀಯರು ರಸ್ತೆಯ ಎರಡೂ ಬದಿಯಲ್ಲಿದ್ದ ಭಾರಿ ಬೆಲೆ ಬಾಳುವ ಮರಗಳನ್ನು ಕಡಿದುರುಳಿಸಿದ್ದಾರೆ.ಸ್ಥಳೀಯರ ಕ್ರಮಕ್ಕೆ ಆಕ್ಷೇಪ ವ್ಯಕ್ತಪಡಿಸಿದ ಅರಣ್ಯ ಇಲಾಖೆಯ ಸಿಬ್ಬಂದಿ ಸ್ಥಳಕ್ಕೆ ಧಾವಿಸಿದಾಗ, ಗ್ರಾಮಸ್ಥರು ಪ್ರತಿರೋಧ ತೋರಿದ ಘಟನೆ ಕೊಲ್ಲೂರು ಠಾಣಾ ವ್ಯಾಪ್ತಿಯ ಉದಯನಗರ ಸಮೀಪದ ಹುಲಿಪಾರೆ ಎಂಬಲ್ಲಿ ಭಾನುವಾರ ತಡರಾತ್ರಿ ನಡೆದಿದೆ.ಘಟನೆ ವಿವರ: ಬಹುತೇಕ ವನ್ಯಜೀವಿ ಹಾಗೂ ರಕ್ಷಿತಾರಣ್ಯ ಪ್ರದೇಶ ಹೊಂದಿರುವ ನಕ್ಸಲ್ ಪೀಡಿತ ಮುಧೂರು ಸಮೀಪದ ಹುಲಿಪಾರೆ ಎಂಬಲ್ಲಿ ಜಡ್ಕಲ್- ಮುಧೂರು ಮಾರ್ಗವಾಗಿ ಸಾಗುವ ಸಂಪರ್ಕ ರಸ್ತೆಯ ವಿಸ್ತರಣೆ ಯೋಜನೆಗೆ ಸರ್ಕಾರದಿಂದ ಅನುಮೋದನೆ ದೊರಕಿತ್ತು. ಆದರೆ ಸಂಪರ್ಕ ರಸ್ತೆಯ ಮಧ್ಯೆ ವನ್ಯಜೀವಿ ವಿಭಾಗದ ವ್ಯಾಪ್ತಿಯಿದ್ದು, ಭಾರಿ ಗಾತ್ರದ ಬೆಲೆಬಾಳುವ ಮರಗಳಿದ್ದವು. ಹೀಗಾಗಿ ಅರಣ್ಯ ಇಲಾಖೆಯ ಕಾನೂನು ಹಾಗೂ ಕೋರ್ಟ್ ಆದೇಶ ವಿಸ್ತರಣೆಗೆ ತೊಡಕಾಗಿತ್ತು.ಆದರೆ ಬಹಳ ವರ್ಷಗಳಿಂದ ಬೇಡಿಕೆಯಿಟ್ಟಿದ್ದ ಊರಿನ ಸಂಪರ್ಕ ರಸ್ತೆ ವಿಸ್ತರಣೆಗೆ ಅಡ್ಡಿಯಾಗಿರುವ ಮರಗಳನ್ನು ಕಾನೂನು ಚೌಕಟ್ಟಿನೊಳಗೆ ಪರಿಹರಿಸಿಕೊಳ್ಳುವುದು ಕಷ್ಟದ ಕೆಲಸವೆಂಬ ತೀರ್ಮಾನಕ್ಕೆ ಬಂದ ಸ್ಥಳೀಯರು ರಾತ್ರೋರಾತ್ರಿ ಮರಗಳನ್ನು ಧರೆಗುರುಳಿಸುವ ತೀರ್ಮಾನಕ್ಕೆ ಬಂದರು. ಭಾನುವಾರ ತಡ ರಾತ್ರಿ ಅಂದಾಜು 12 ಗಂಟೆಯ ವೇಳೆಯಲ್ಲಿ ತಮ್ಮ ಕಾರ್ಯಾಚರಣೆಯನ್ನು ಪ್ರಾರಂಭಿಸಿದರು ಎನ್ನಲಾಗಿದೆ.ಮರಗಳಿಗೆ ಕೊಡಲಿಯೇಟು ಬೀಳುತ್ತಿರುವ ಮಾಹಿತಿ ಪಡೆದುಕೊಂಡ ಅರಣ್ಯಾಧಿಕಾರಿಗಳಾದ ಸದಾನಂದ, ರೂಪೇಶ್ ಮುಂತಾದವರು ಸಿಬ್ಬಂದಿ ಜತೆ ಸ್ಥಳಕ್ಕೆ ಧಾವಿಸಿದರು. ಕಾನೂನು ಬಾಹಿರವಾಗಿ ಮರಗಳನ್ನು ಕಡಿಯದಂತೆ ಸೂಚಿಸಿದರು. ಆದರೆ ಸ್ಥಳೀಯರು ತಮ್ಮ  ಕಾರ್ಯಾಚರಣೆ ಮುಂದುವರಿಸಿದ್ದರಿಂದ ಅರಣ್ಯಾಧಿಕಾರಿಗಳು ಪೊಲೀಸರಿಗೆ ಮಾಹಿತಿ ನೀಡಿದರು.ಸ್ಥಳಕ್ಕೆ ಧಾವಿಸಿದ ಕೊಲ್ಲೂರು ಠಾಣಾಧಿಕಾರಿ ದೇಜಪ್ಪ ಹಾಗೂ ಸಿಬ್ಬಂದಿ ಪರಿಸ್ಥಿತಿ ತಿಳಿಗೊಳಿಸುವ ಪ್ರಯತ್ನ ಮಾಡಿದರು. ಕುಂದಾಪುರ ಪೊಲೀಸ್ ಉಪವಿಭಾಗದ ಡಿವೈಎಸ್‌ಪಿ ಶೇಖರ ಅಗಡಿ ಹಾಗೂ ಕುಂದಾಪುರ ಸರ್ಕಲ್ ಇನ್ಸ್‌ಪೆಕ್ಟರ್ ಮದನ್ ಜಿ ಗಾಂವ್ಕರ್ ಅವರೂ ಹೆಚ್ಚಿನ ಸಿಬ್ಬಂದಿ ಜತೆ ಸ್ಥಳಕ್ಕೆ ಧಾವಿಸಿದ್ದಾರೆ. ಪರಿಸ್ಥಿತಿ ಈಗ ನಿಯಂತ್ರಣದಲ್ಲಿದೆ.ಕೋಟ್ಯಾಂತರ ರೂ. ಬೆಲೆ ಬಾಳುವ ಅಂದಾಜು 100 ಕ್ಕಿಂತಲೂ ಅಧಿಕ ಮರಗಳು ನೆಲಕ್ಕುರುಳಿವೆ. ಬೃಹತ್ ಮರಗಳು ಎಲ್ಲೆಂದರಲ್ಲಿ ಬಿದ್ದಿರುವ ಕಾರಣ ಜಡ್ಕಲ್‌ನಿಂದ ಮುಧೂರಿಗೆ ಸಾಗುವ ರಸ್ತೆ ಸಂಪರ್ಕಕ್ಕೆ ಅಡ್ಡಿಯಾಗಿದೆ. ವಿದ್ಯುತ್ ಕಂಬಗಳು ಉರುಳಿ ಬಿದ್ದಿರುವುದರಿಂದ ವಿದ್ಯುತ್ ಸಂಪರ್ಕ ಅಸ್ತವ್ಯಸ್ತಗೊಂಡಿತು.ಪ್ರಕರಣ ದಾಖಲು: ಅರಣ್ಯಾಧಿಕಾರಿಗಳ ಕರ್ತವ್ಯಕ್ಕೆ ಅಡ್ಡಿಪಡಿಸಿದ್ದಾರೆ ಎನ್ನುವ ದೂರು ಕೊಲ್ಲೂರು ಪೊಲೀಸ್ ಠಾಣೆಯಲ್ಲಿ ದಾಖಲಾಗಿದೆ. ಉದಯನಗರದ ಶಿಬು ಕುರಿಯನ್, ಕಾಟೇಯತ್ ವಿನೀಲ್, ಮೇಲ್ ಬೈಜೂ, ನವೀನ್ ಬೆಳ್ ಕಲ್ ಹಾಗೂ ಇತರ 45 ಜನರನ್ನು ಆರೋಪಿಗಳಾಗಿ ಗುರುತಿಸಲಾಗಿದೆ.ಮರುಕಳುಹಿಸಿದ ನೆನಪು: ಕೆಲವು ವರ್ಷ ಹಿಂದೆ ಇದೇ ಪ್ರದೇಶದಲ್ಲಿನ ಮುಧೂರು-ಹಳ್ಳಿಹೊಳೆ-ಕಮಲಶಿಲೆ ಮಾರ್ಗವಾಗಿ ಸಿದ್ದಾಪುರಕ್ಕೆ ತೆರಳುವ ಸಂಪರ್ಕ ರಸ್ತೆಯ ನಿರ್ಮಾಣ ವೇಳೆಯೂ ಸ್ಪಲ್ಪ ದೂರ ರಕ್ಷಿತಾರಣ್ಯ ಪ್ರದೇಶಗಳು ಬರುತ್ತಿದುದರಿಂದ ರಸ್ತೆ ಕಾಮಗಾರಿಗಳು ನಿಲ್ಲುವ ಸಮಸ್ಯೆ ಉದ್ಭವಿಸಿತ್ತು. ಈ ಸಂದರ್ಭ ಇಲ್ಲಿನ ಕೆಲವು ಮರಗಳನ್ನು ಕಡಿದು ಅರಣ್ಯ ಇಲಾಖೆಗೆ ದಂಡ ಪಾವತಿ ಮಾಡಿದ್ದಾರೆ ಎನ್ನುವ ಪ್ರಕರಣದ ಪ್ರೇರಣೆಯಿಂದಲೆ ಭಾನುವಾರದ ಘಟನೆ ನಡೆದಿದೆ ಎಂದು ಸ್ಥಳೀಯರೊಬ್ಬರು ~ಪ್ರಜಾವಾಣಿ~ ಜತೆ ಹಿಂದಿನ ಘಟನೆ ನೆನಪಿಸಿಕೊಂಡರು.ಸಿದ್ದಾಪುರ ವರದಿ: ಈ ಮಧ್ಯೆ ಸಾಮಾಜಿಕ ಅರಣ್ಯ ಅಧಿಕಾರಿಗಳು ಉರುಳಿದ ಮರಗಳ ಎಣಿಕೆ ನಡೆಸಿದ್ದು 68 ಮರಗಳನ್ನು  ಕಡಿಯಲಾಗಿದೆ ಎಂದು ತಿಳಿಸಿದ್ದಾರೆ. ಮೂಕಾಂಬಿಕಾ ಅಭಯಾರಣ್ಯ ವ್ಯಾಪ್ತಿಯಲ್ಲಿ ಹಾದು ಹೋಗುವ ಮರಗಳನ್ನು ತೆರವು ಮಾಡಲು ಕೇಂದ್ರ ಸರ್ಕಾರದ ಅನುಮತಿ ಬೇಕು. ಆದ್ದರಿಂದ ಅನುಮತಿ ನೀಡಿರಲಿಲ್ಲ ಎಂದು  ವನ್ಯಜೀವಿ ವಲಯ ಅರಣ್ಯಾಧಿಕಾರಿ ಆಸ್ಟಿನ್ ಪಿ.ಸೋನ್ಸ್ ಪ್ರತಿಕ್ರಿಯಿಸಿದ್ದಾರೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry