ಗುರುವಾರ , ಅಕ್ಟೋಬರ್ 17, 2019
22 °C

ಜಡ್ಜ್‌ಗಳ ನೇಮಕ ಮಾಡಿ ಬಹಿರಂಗ

Published:
Updated:

ನವದೆಹಲಿ (ಪಿಟಿಐ): ಹೈಕೋರ್ಟ್ ಮತ್ತು ಸುಪ್ರೀಂ ಕೋರ್ಟಿನ ನ್ಯಾಯಮೂರ್ತಿಗಳ ನೇಮಕಾತಿ ಪ್ರಕ್ರಿಯೆ ಹಾಗೂ ಇದರಲ್ಲಿನ ಉದ್ದೇಶಿತ ಬದಲಾವಣೆಗೆ ಸಂಬಂಧಿಸಿದ ಮಾಹಿತಿಗಳನ್ನು ಬಹಿರಂಗಪಡಿಸಬೇಕು ಎಂದು ಮಹತ್ವದ ಆದೇಶದಲ್ಲಿ ಕೇಂದ್ರ ಮಾಹಿತಿ ಆಯೋಗವು (ಸಿಐಸಿ)ಬುಧವಾರ ಸುಪ್ರೀಂಕೋರ್ಟ್‌ಗೆ ನಿರ್ದೇಶನ ನೀಡಿದೆ.ನ್ಯಾಯಮೂರ್ತಿಗಳ ನೇಮಕಾತಿ ಪ್ರಕ್ರಿಯೆಯಲ್ಲಿನ ಉದ್ದೇಶಿತ ಬದಲಾವಣೆಗಳ ಬಗ್ಗೆ ಮುಖ್ಯನ್ಯಾಯಮೂರ್ತಿ ಹಾಗೂ ಕಾನೂನು ಸಚಿವಾಲಯದ ಮಧ್ಯೆ ನಡೆದ ಮಾತುಕತೆಯ ವಿವರಗಳನ್ನು ಬಹಿರಂಗಪಡಿಸಬೇಕು. ಇದರಿಂದ ಸಾರ್ವಜನಿಕರಿಗೆ ಇಲ್ಲಿನ ವಿದ್ಯಮಾನಗಳು ತಿಳಿಯುತ್ತವೆ ಎಂದು ಅದು ಹೇಳಿದೆ.ನಿರ್ಬಂಧ ಇರುವ ಕಾರಣ ಇಂಥ ಮಾಹಿತಿಯನ್ನು ಬಹಿರಂಗಪಡಿಸಲಾಗದು ಎದು ಸುಪ್ರೀಂಕೋರ್ಟ್ ಮಂಡಿಸಿದ ವಾದವನ್ನು ಅಲ್ಲಗಳೆದ ಮುಖ್ಯ ಮಾಹಿತಿ ಆಯುಕ್ತ ಸತ್ಯಾನಂದ ಮಿಶ್ರಾ, ವ್ಯಕ್ತಿಯೊಬ್ಬರನ್ನು ನ್ಯಾಯಮೂರ್ತಿಯನ್ನಾಗಿ ನೇಮಕ ಮಾಡುವ ಪ್ರಕ್ರಿಯೆ ಹಾಗೂ ಇಂಥ ನೇಮಕಗಳ ಕಾರ್ಯವಿಧಾನಗಳ ಮಧ್ಯೆ ಭಿನ್ನತೆ ಇರಬೇಕಾಗುತ್ತದೆ ಎಂದು ಹೇಳಿದ್ದಾರೆ.ಹೈಕೋರ್ಟ್ ನ್ಯಾಯಮೂರ್ತಿಗಳ ನೇಮಕಾತಿ ಪ್ರಕ್ರಿಯೆಗೆ ಸಂಬಂಧಿಸಿದಂತೆ ಕಾನೂನು ಸಚಿವಾಲಯ ರೂಪಿಸಿದ ಪರಿಷ್ಕೃತ ಕರಡು ಪ್ರತಿ ಹಾಗೂ ಈ ಸಂಬಂಧ ಮುಖ್ಯನ್ಯಾಯಮೂರ್ತಿ ಎಸ್.ಎಚ್.ಕಪಾಡಿಯಾ ಮತ್ತು ಕಾನೂನು ಸಚಿವರ ನಡುವಿನ ಮಾತುಕತೆ ವಿವರ ಬಹಿರಂಗಪಡಿಸುವಂತೆ ಕೋರಿ ಮಾಹಿತಿ ಹಕ್ಕು ಕಾರ್ಯಕರ್ತ ಸುಭಾಷ್ ಅಗರ್‌ವಾಲ್ ಮನವಿ ಸಲ್ಲಿಸಿದ್ದರು. ಆದರೆ ಈ ಮಾಹಿತಿ ನೀಡಲು ಸುಪ್ರೀಂಕೋರ್ಟ್ ನಿರಾಕರಿಸಿತ್ತು.`ಕಾನೂನು ಪ್ರಕಾರ ಮುಖ್ಯನ್ಯಾಯಮೂರ್ತಿ ಕಚೇರಿ ಈ ಮಾಹಿತಿಯನ್ನು ಇಟ್ಟುಕೊಳ್ಳುವ ಅಗತ್ಯವಿಲ್ಲ. ಅಲ್ಲದೇ ಇದು, ಮಾಹಿತಿ ಹಕ್ಕು ಕಾಯ್ದೆಯ ಸೆಕ್ಷನ್ 2(ಜೆ) ವ್ಯಾಪ್ತಿಗೆ ಒಳಪಡುವುದಿಲ್ಲ~ ಎಂದೂ ಹೇಳಿತ್ತು. ಆದರೆ ಮಾಹಿತಿ ಆಯೋಗ ಈ ವಾದವನ್ನು ತಳ್ಳಿಹಾಕಿದೆ.`ಕಾನೂನುಬದ್ಧ ಅಧಿಕಾರ ಇದ್ದ ಮಾತ್ರಕ್ಕೆ ಅಧಿಕಾರಿಗಳು ಇಂಥ ಮಾಹಿತಿಗಳನ್ನು ಇಟ್ಟುಕೊಳ್ಳಬೇಕಾಗುತ್ತದೆ ಎಂದು ಮಾಹಿತಿ ಹಕ್ಕು ಕಾಯ್ದೆಯಲ್ಲಿ ಎಲ್ಲಿಯೂ ಹೇಳಿಲ್ಲ. ಮಾಹಿತಿ ಮೂಲಗಳು ಪತ್ರ ಹಾಗೂ ಇ-ಮೇಲ್ ಸ್ವರೂಪದಲ್ಲಿಯೂ ಸಂಬಂಧಪಟ್ಟ ಇಲಾಖೆಗೆ ಬರುತ್ತವೆ. ಅಷ್ಟಕ್ಕೂ ಅಗರ್‌ವಾಲ್ ಅವರು ಕೇಳಿದ ಮಾಹಿತಿಯು ಸುಪ್ರೀಂಕೋರ್ಟ್‌ನ `ಮಾಹಿತಿ ನಿರ್ಬಂಧ~ ವ್ಯಾಪ್ತಿಗೆ ಬರುವುದಿಲ್ಲ. ಸುಪ್ರೀಂಕೋರ್ಟ್ ತಡೆ ನೀಡಿರುವ ಕಾರಣ ಹೈಕೋರ್ಟ್ ಹಾಗೂ ನ್ಯಾಯಮೂರ್ತಿಗಳ ನೇಮಕ ಪ್ರಕ್ರಿಯೆ ವಿವರಗಳನ್ನು ಬಹಿರಂಗಪಡಿಸಲಾಗದು ಎನ್ನುವ ವಾದ ಸಮರ್ಥನೀಯವಲ್ಲ~ ಎಂದು ಮಿಶ್ರಾ ಹೇಳಿದರು.ನ್ಯಾಯಮೂರ್ತಿಗಳ ನೇಮಕ ಪ್ರಕ್ರಿಯಲ್ಲಿನ ಬದಲಾವಣೆಯು ದೇಶದ ಪ್ರಜೆಗಳ ಗಮನಕ್ಕೆ ಅಥವಾ ಅರಿವಿಗೆ ಬಾರದಂತೆ ನಡೆಯಬೇಕೆಂದೇನೂ ಇಲ್ಲ. ಯಾವುದೇ ವಿದ್ಯಮಾನವು ಪ್ರಜೆಗಳ ಅರಿವಿಗೆ ಬರುವಂತೆ ಮಾಡವುದು ಮಾಹಿತಿ ಹಕ್ಕು ಕಾಯ್ದೆಯ ಉದ್ದೇಶವಾಗಿದೆ ಎಂದು ಮಿಶ್ರಾ ಹೇಳಿದ್ದಾರೆ.

Post Comments (+)