ಭಾನುವಾರ, ಏಪ್ರಿಲ್ 11, 2021
32 °C

ಜನಗಣತಿಯಲ್ಲೂ ರಾಜಕಾರಣ: ಡಾ. ಮೀನಾಕ್ಷಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಗುಲ್ಬರ್ಗ: ಸೋನೋಗ್ರಫಿ ಬಳಕೆಗೆ ಬಂದ ನಂತರದಲ್ಲಿ ಇಲ್ಲಿಯವರೆಗೆ ಸುಮಾರು 50 ಲಕ್ಷ ಹೆಣ್ಣುಭ್ರೂಣ ಹತ್ಯೆಯಾಗಿದೆ ಎನುವ ಅಂಶ ಸರ್ಕಾರಿ ವರದಿಯಲ್ಲೇ ಇದೆ. ಮಹಿಳಾ ಪರವಾಗಿನ ವಿಚಾರಗಳಲ್ಲಿ ಇನ್ನೂ ಬದಲಾವಣೆಯಾಗಬೇಕಿದೆ. ಸರ್ಕಾರ ನಡೆಸುತ್ತಿರುವ ಈ ಸಲದ ಜನಗಣತಿಯಲ್ಲೂ ರಾಜಕಾರಣ ನಡೆದಿದೆ ಎಂದು ಹಿರಿಯ ಸಾಹಿತಿ ಡಾ. ಮೀನಾಕ್ಷಿ ಬಾಳಿ ಸೋಮವಾರ ಇಲ್ಲಿ ಆರೋಪ ಮಾಡಿದರು.ಕರ್ನಾಟಕ ರಾಜ್ಯ ವಿಜ್ಞಾನ ಪರಿಷತ್, ಜಿಲ್ಲಾ ವಿಜ್ಞಾನ ಸಮಿತಿ ಹಾಗೂ ಕನ್ಯಾ ಪ್ರೌಢಶಾಲೆಗಳು ಸಹಯೋಗದಲ್ಲಿ ಆಯೋಜಿಸಿದ್ದ ‘ರಾಷ್ಟ್ರೀಯ ವಿಜ್ಞಾನ ದಿನಾಚರಣೆ’ ಕಾರ್ಯಕ್ರಮದಲ್ಲಿ ‘ಲಿಂಗ ಸಮಾನತೆಯಿಂದ ಶಾಂತಿ ಹಾಗೂ ಸಮೃದ್ಧಿ’ ವಿಷಯ ಕುರಿತು ಉಪನ್ಯಾಸ ನೀಡಿದರು.ಯಾವುದೇ ಪ್ರದೇಶದಲ್ಲಿ ಹೆಣ್ಣು ಮಕ್ಕಳ ಸಂಖ್ಯೆ ಕಡಿಮೆ ಇದೆ ಎನ್ನುವ ಅಂಶವನ್ನು ತೋರಿಸಬಾರದು ಎಂದು ಜನಗಣತಿ ಮಾಡುವವರಿಗೆ ಸೂಚಿಸಲಾಗಿದೆ. ಮಹಿಳೆಯನ್ನುರಕ್ಷಿಸಲು ಅನೇಕ ಕಾನೂನುಗಳು ಜಾರಿಯಲ್ಲಿದ್ದರೂ ವರದಕ್ಷಿಣೆ ಸೇರಿದಂತೆ ಅನೇಕ ಮನೋಭಾವನೆಗಳನ್ನು ಮಹಿಳೆಯನ್ನು ಇಂದಿಗೂ ಕಟ್ಟಿಹಾಕಿವೆ ಎಂದು ತಿಳಿಸಿದರು.ಹೆಣ್ಣು ಯಾವುದೇ ರೀತಿಯಲ್ಲಿ ಕನಿಷ್ಠ ಅಲ್ಲ. ಪುರುಷನೇ ಶ್ರೇಷ್ಠ ಅಲ್ಲ. ಎಲ್ಲರೂ ಸಮಾನರು. ನಿಸರ್ಗದಲ್ಲಿ ಬಗೆಬಗೆಯ ಹೂವು, ಹಣ್ಣುಗಳಿರುವಂತೆಯೆ ಮನುಷ್ಯರಲ್ಲೂ  ಹೆಣ್ಣು, ಗಂಡು ಎಂಬ ಜೈವಿಕ ವೈವಿಧ್ಯತೆ ಇದೆ. ಸದಾಕಾಲ ಇದೇ ಸತ್ಯ ಮತ್ತು ಸುಂದರ. ಹಿಂದಿನ ಕಾಲದಿಂದಲೂ ಹೆಣ್ಣನ್ನು ಬರೀ ದೇವತೆ ಅಥವಾ ರಾಕ್ಷಸಿಯನ್ನಾಗಿ ಮಾಡಿದರು. ಸಮಾಜಕ್ಕೆ ಹೆಣ್ಣು ಮನುಷ್ಯಳಾಗಿ ಕಾಣಲೇ ಇಲ್ಲ ಎಂದು ವಿಷಾದಿಸಿದರು.ಶ್ರೀಮಂತ, ಮಧ್ಯಮ ಅಥವಾ ಬಡತನ ವರ್ಗದಲ್ಲಿ ಇಂದಿಗೂ ಮಹಿಳೆ ಅಬಲೆ. ನೌಕರಿ ಜೊತೆಗೆ ಮನೆಗೆಲಸವನ್ನು ಮಹಿಳೆಯೇ ಮಾಡಬೇಕು ಎನ್ನುವ ಧೋರಣೆಯನ್ನು ಪುರುಷರು ಹೊಂದಿದ್ದಾರೆ. ಹೊಸ ತರದ ಸಮಸ್ಯೆಗಳನ್ನು ಮಹಿಳೆ ಎದುರಿಸುತ್ತಿದ್ದಾಳೆ. ಈಗಲಾದರೂ ಸಮಾಜ ಮಹಿಳೆಗೆ ಗೌರವ ಕೊಡಬೇಕು ಎಂದರು.ವಿಶ್ವಸಂಸ್ಥೆಯ ವರದಿ ಪ್ರಕಾರ ಮಹಿಳೆಯು ಪುರುಷನಿಗಿಂತ ಮೂರು ಪಟ್ಟು ಹೆಚ್ಚಿಗೆ ಕೆಲಸ ಮಾಡುವ ಸಾಮರ್ಥ್ಯ ಹೊಂದಿದ್ದಾಳೆ. ಮಹಿಳೆಗೆ ಸಮಾನವಾದ ಅವಕಾಶಗಳನ್ನು ಕಲ್ಪಿಸಬೇಕಿದೆ. ತೀರಾ ಇತ್ತೀಚೆಗೆ ಶಿಕ್ಷಣ ಸಂಬಂಧಿ ವಿಷಯದಲ್ಲಿ ಮಹಿಳೆಗೆ ಸಮಾನತೆ ದೊರೆಯುತ್ತಿದೆ ಎಂದು ತಿಳಿಸಿದರು.ವಿಜ್ಞಾನದಲ್ಲಿನ ಪ್ರತಿಯೊಂದು ಬದಲಾವಣೆ ಮಾನವನ ವಿಚಾರ ಲಹರಿಯ ಮೇಲೆ ಪ್ರಭಾವ ಬೀರುತ್ತದೆ. ಇತರೆ ಪ್ರಾಣಿಗಳಿಗೆ ಹೋಲಿಸಿದರೇ ಮನುಷ್ಯ ಕನಿಷ್ಠ. ಇರುವೆಯಷ್ಟು ಸೂಕ್ಷ್ಮತೆ, ಹಿಮಗರಡಿಯಷ್ಟು ಆಹಾರ ಸೇವನೆ, , ಒಂಟೆಯಷ್ಟು ನೀರು ಕುಡಿಯುವ ಸಾಮರ್ಥ್ಯ ಮನುಷ್ಯನಿಗೆ ಇಲ್ಲ. ಆದರೆ, ಇವೆಲ್ಲ ಪ್ರಾಣಿಗಳನ್ನು ನಿಯಂತ್ರಿಸುವ ಬುದ್ಧಿಶಕ್ತಿ ಮಾನವನಲ್ಲಿದೆ.ಇವೆಲ್ಲವುಗಳೊಂದಿಗೆ ಸಮಾನತೆ ಸಾಧಿಸಲು ಮನುಷ್ಯ ಸದಾಕಾಲ ಹೋರಾಡುತ್ತಾನೆ. ಆದರೆ, ಜತೆಯಲ್ಲಿರುವ ಮಹಿಳೆಗೆ ಮಾತ್ರ ಇನ್ನೂ ಸಮಾನತೆ ನೀಡಿಲ್ಲ ಎಂದು ಮನವರಿಕೆ ಮಾಡಿದರು.ಗುಲ್ಬರ್ಗ ವಿಶ್ವವಿದ್ಯಾಲಯದ ಸಸ್ಯಶಾಸ್ತ್ರ ವಿಭಾಗದ ಮುಖ್ಯಸ್ಥ ಪ್ರೊ. ಶ್ರೀನಾಥರಾವ್, ಪರಿಷತ್ ರಾಜ್ಯ ಘಟಕದ ಖಜಾಂಚಿ ಗಿರೀಶ ಕಡ್ಲೇವಾಡ ಮಾತನಾಡಿದರು. ಪರಿಷತ್ ರಾಜ್ಯ ಘಟಕದ ಕಾರ್ಯಕಾರಿ ಸಮಿತಿ ಸದಸ್ಯ ಶ್ರೀಶೈಲ ಘೂಳಿ ಸ್ವಾಗತಿಸಿದರು. ಹೈ.ಕ. ಶಿಕ್ಷಣ ಸಂಸ್ಥೆಯ ಕನ್ಯಾ ಪ್ರೌಢಶಾಲೆಯ ಮುಖ್ಯ ಗುರುಗಳು ಕಮಲಾ ಎಸ್. ಬಿರಾದಾರ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.