ಜನಜೀವನ ಬಾಧಿಸದ ಮುಷ್ಕರ

7

ಜನಜೀವನ ಬಾಧಿಸದ ಮುಷ್ಕರ

Published:
Updated:
ಜನಜೀವನ ಬಾಧಿಸದ ಮುಷ್ಕರ

ಬೆಂಗಳೂರು:  ದೇಶದ ಪ್ರಮುಖ ಕಾರ್ಮಿಕ ಸಂಘಟನೆಗಳು ಕರೆ ನೀಡಿದ ಎರಡು ದಿನಗಳ ರಾಷ್ಟ್ರವ್ಯಾಪಿ ಮುಷ್ಕರದ ಮೊದಲ ದಿನವಾದ ಬುಧವಾರ ರಾಜಧಾನಿ ಬೆಂಗಳೂರಿನಲ್ಲಿ  ವಾರಾಂತ್ಯದ ರಜಾ ದಿನದ ಅನುಭವ ಕಂಡು ಬಂದಿತು. ಅರ್ಧದಷ್ಟು ಬಸ್ಸುಗಳು, ಆಟೊಗಳು ಮತ್ತು ಟ್ಯಾಕ್ಸಿಗಳು ರಸ್ತೆಗೆ ಇಳಿಯದ ಕಾರಣ ನಿತ್ಯದ ಗೌಜು-ಗದ್ದಲ ದೂರವಾಗಿತ್ತು.ಮುಷ್ಕರದಿಂದ ಹೆಚ್ಚಿನ ವ್ಯತ್ಯಯವಾಗದೆ ಜನಜೀವನ ಸಾಮಾನ್ಯವಾಗಿತ್ತು. ಬೆಂಗಳೂರಲ್ಲಿ ಕಲ್ಲು ತೂರಾಟದ ಪ್ರಸಂಗವೊಂದನ್ನು  ಹೊರತುಪಡಿಸಿದರೆ ಯಾವುದೇ ಅಹಿತಕರ ಘಟನೆಗಳೂ ವರದಿಯಾಗಿಲ್ಲ. ವಿವಿಧ ಕಾರ್ಮಿಕ ಸಂಘಟನೆಗಳು ಬೀದಿಗಿಳಿದು ಪ್ರತಿಭಟನೆ ನಡೆಸಿದ್ದರಿಂದ ಕೆಂಬಾವುಟಗಳು ಹಾರಾಡಿದವು.ಶಾಲಾ-ಕಾಲೇಜುಗಳಿಗೆ ಮೊದಲೇ ರಜೆ ಘೋಷಣೆ ಮಾಡಿದ್ದರಿಂದ ಬೆಳಗಿನ ಗಡಿಬಿಡಿ ಕಾಣಲಿಲ್ಲ. ಬ್ಯಾಂಕ್ ಕಚೇರಿಗಳು ಸಿಬ್ಬಂದಿ ಇಲ್ಲದೆ ಬಿಕೋ ಎನ್ನುತ್ತಿದ್ದವು. `ಬಸ್ಸುಗಳ ಸೇವೆಯೇ ಇರುವುದಿಲ್ಲ' ಎನ್ನುವ ಆತಂಕವನ್ನು ಹೋಗಲಾಡಿಸಿದ ಬಿಎಂಟಿಸಿ, ಎಲ್ಲ ಪ್ರದೇಶಗಳಿಗೆ ಸಾರಿಗೆ ಸೌಲಭ್ಯ ಒದಗಿಸಿತ್ತು. ಆದರೆ, ರಸ್ತೆಗಿಳಿದ ಬಸ್ಸುಗಳ ಸಂಖ್ಯೆ ನಿತ್ಯಕ್ಕೆ ಹೋಲಿಸಿದರೆ ಅರ್ಧದಷ್ಟು ಕಡಿಮೆ ಇತ್ತು.ಮುಷ್ಕರದ ಪರಿಣಾಮ ಬಹಳಷ್ಟು ಪ್ರಮಾಣದ ಜನ ಮನೆ ಬಿಟ್ಟು ಆಚೆ ಬರಲು ಮನಸ್ಸು ಮಾಡಲಿಲ್ಲ ಹೀಗಾಗಿ ಮೆಜಿಸ್ಟಿಕ್ ಸೇರಿದಂತೆ ಎಲ್ಲ ನಿಲ್ದಾಣಗಳಲ್ಲಿ ಬಸ್ಸುಗಳು `ಪ್ರಯಾಣಿಕರಿಗಾಗಿ ಕಾಯುತ್ತಾ' ನಿಲ್ಲಬೇಕಾಯಿತು. ಗಿಜಿಗುಡುತ್ತಿದ್ದ ಮೆಜಿಸ್ಟಿಕ್ ಜನರ ಬರ ಅನುಭವಿಸುತ್ತಿತ್ತು.ರಾಜ್ಯದ ವಿವಿಧ ಕಡೆಗಳಿಂದ ಮಂಗಳವಾರ ರಾತ್ರಿ ಹೊರಟಿದ್ದ ಬಸ್‌ಗಳು ಬುಧವಾರ ಬೆಳಿಗ್ಗೆ ಎಂದಿನಂತೆ ಆಗಮಿಸಿದವು. ನಿಲ್ದಾಣದಲ್ಲಿ ಪ್ರಯಾಣಿಕರಿಗೆ ಅನುಗುಣವಾಗಿ ಆಯಾ ಮಾರ್ಗಕ್ಕೆ ಬಸ್‌ಗಳನ್ನು ಕಳುಹಿಸಲಾಯಿತು. ಸಂಜೆವರೆಗೆ ಸುಮಾರು 700 ಕೆಎಸ್‌ಆರ್‌ಟಿಸಿ ಬಸ್‌ಗಳು ಸಂಚಾರ ನಡೆಸಿದವು.ಶಾಲೆಗೆ ರಜೆ ಇಲ್ಲ: ಕಾರ್ಮಿಕರ ಮುಷ್ಕರ ಗುರುವಾರವೂ ಮುಂದುವರಿಯಲಿದೆ. ಆದರೆ, ಶಾಲಾ-ಕಾಲೇಜುಗಳ ರಜೆಯನ್ನು ಮುಂದುವರಿಸಿಲ್ಲ. ಯಥಾಪ್ರಕಾರ ಅವುಗಳು ಕಾರ್ಯ ನಿರ್ವಹಿಸಲಿವೆ ಎಂದು ಅಧಿಕಾರಿಗಳು ಸ್ಪಷ್ಟಪಡಿಸಿದ್ದಾರೆ.ಓಡಾಡಲಿವೆ ಬಸ್ಸುಗಳು: ಮುಷ್ಕರದ ಮೊದಲ ದಿನವೇ ಬಸ್ಸುಗಳ ಓಡಾಟ ಸಾಮಾನ್ಯವಾಗಿತ್ತು. ಗುರುವಾರ ಅವುಗಳ ಸಂಖ್ಯೆ ಹೆಚ್ಚಲಿದ್ದು, ಸಂಪೂರ್ಣ ಸಹಜಸ್ಥಿತಿಗೆ ಮರಳಲಿದೆ. ಎಲ್ಲ ಕಾರ್ಮಿಕರು ಕರ್ತವ್ಯಕ್ಕೆ ಹಾಜರಾಗಲಿದ್ದು, ಬಸ್ ಸೇವೆ ಎಂದಿನಂತೆ ನಡೆಯಲಿದೆ ಎಂದು ಸಾರಿಗೆ ಸಂಸ್ಥೆ ಅಧಿಕಾರಿಗಳು ತಿಳಿಸಿದ್ದಾರೆ.`ಎರಡೂ ದಿನ ರಸ್ತೆಗೆ ಇಳಿಯಬಾರದು ಎನ್ನುವುದು ನಮ್ಮ ನಿರ್ಧಾರವಾಗಿತ್ತು. ಆದರೆ, ತುರ್ತು ಸೇವೆಗಳಿಗೆ ಆಟೊ ಮತ್ತು ಟ್ಯಾಕ್ಸಿಗಳು ಲಭ್ಯವಾಗಲಿವೆ' ಎಂದು ಕಾರ್ಮಿಕ ಸಂಘಟನೆಗಳ ಮುಖಂಡರು ಹೇಳಿದ್ದಾರೆ.ಪೆಟ್ರೋಲ್ ಬಂಕ್‌ಗಳು, ಆಸ್ಪತ್ರೆಗಳು, ಔಷಧಿ ಮಳಿಗೆಗಳು ಬುಧವಾರ ಯಾವುದೇ ವ್ಯತ್ಯಯ ಇಲ್ಲದೆ ಕಾರ್ಯ ನಿರ್ವಹಿಸಿದ್ದು, ಗುರುವಾರವೂ ಈ ವಲಯದ ಚಟುವಟಿಕೆಗಳಿಗೆ ಯಾವುದೇ ಸಮಸ್ಯೆ ಇಲ್ಲ ಎಂದು ಹೇಳಲಾಗಿದೆ. ಮಾರುಕಟ್ಟೆಗಳು ಎಂದಿನಂತೆ ವಹಿವಾಟು ನಡೆಸಲಿವೆ.ವಿವಿಧೆಡೆ ಹೀಗಿತ್ತು ಮುಷ್ಕರ

* ಗುಲ್ಬರ್ಗ, ರಾಯಚೂರಲ್ಲಿ ಬಸ್ ಸಂಚಾರ ಸ್ಥಗಿತ* ಕೊಪ್ಪಳದಲ್ಲಿ ಅಂಗಡಿ-ಮುಂಗಟ್ಟು ಬಂದ್* ಬೀದರ್, ಯಾದಗಿರಿ, ದಕ್ಷಿಣ ಕನ್ನಡ, ಉಡುಪಿ, ಕಾಸರಗೋಡು, ಹಾವೇರಿ, ಮಂಡ್ಯ, ಶಿವಮೊಗ್ಗ, ಚಿತ್ರದುರ್ಗ ಜಿಲ್ಲೆಗಳಲ್ಲಿ ಮಿಶ್ರ ಪ್ರತಿಕ್ರಿಯೆ.* ಮಂಗಳೂರಲ್ಲಿ ಆಟೊ, ಟ್ಯಾಕ್ಸಿ ಸಂಚಾರ ಎಂದಿನಂತೆ.* ಚಿಕ್ಕಮಗಳೂರು ಜಿಲ್ಲೆಯಲ್ಲಿ ಖಾಸಗಿ ಬಸ್ ಸಂಚಾರ ಅಬಾಧಿತ* ತುಮಕೂರು, ಗುಬ್ಬಿ ಕೋರ್ಟ್‌ಗೆ ವಕೀಲರ ಬಹಿಷ್ಕಾರ* ಕೋಲಾರ, ಚಿಕ್ಕಬಳ್ಳಾಪುರ, ಬಾಗಲಕೋಟೆ, ಬಳ್ಳಾರಿ, ವಿಜಾಪುರಗಳಲ್ಲಿ ಯಶಸ್ವಿ ಬಂದ್* ಬೆಳಗಾವಿ ಜಿಲ್ಲೆ ಶಾಲೆ-ಕಾಲೇಜುಗಳಲ್ಲಿ ಎಂದಿನಂತೆ ಪಾಠ ಪ್ರವಚನ.* ಹಾಸನ ನಗರ ಮತ್ತು ಅರಕಲಗೂಡು ತಾಲ್ಲೂಕಿನಲ್ಲಿ ಉತ್ತಮ ಪ್ರತಿಕ್ರಿಯೆ.

* ಉತ್ತರ ಕನ್ನಡ, ಗದಗ, ಚಾಮರಾಜನಗರ ಮತ್ತು ಧಾರವಾಡ ಜಿಲ್ಲೆಗಳ ನೀರಸ ಪ್ರತಿಕ್ರಿಯೆ* ಮೈಸೂರಿನಲ್ಲಿ ಭಾಗಶಃ ಯಶಸ್ವಿ, ಸಾರಿಗೆ ಸ್ಥಗಿತ.* ಸಿದ್ದಾಪುರ ಹೊರತುಪಡಿಸಿ ಕೊಡಗು ಜಿಲ್ಲೆಯಲ್ಲಿ ಸಾಮಾನ್ಯ ಜನಜೀವನ* ದಾವಣಗೆರೆಯಲ್ಲಿ ಅಂಗಡಿ, ಚಿತ್ರಮಂದಿರಗಳು ಬಂದ್

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry