ಗುರುವಾರ , ಮೇ 26, 2022
30 °C

ಜನತಂತ್ರದ ಅಣಕು

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಸರ್ಕಾರವು ಮಂಡಿಸುವ ಯಾವುದೇ ಮಸೂದೆಯು ವಿಧಾನಮಂಡಲದಲ್ಲಿ ವ್ಯಾಪಕವಾಗಿ ಚರ್ಚಿಸಿ ಒಪ್ಪಿಗೆ ಪಡೆಯಬೇಕೆನ್ನುವುದು ಪ್ರಜಾಪ್ರಭುತ್ವ ವ್ಯವಸ್ಥೆಯ ಆಶಯ. ಆದರೆ ಇತ್ತೀಚಿನ ವರ್ಷಗಳಲ್ಲಿ ಸದನದಲ್ಲಿ ಗೊಂದಲದ ಪರಿಸ್ಥಿತಿ ಇರುವಾಗ ಸರ್ಕಾರ ಹಲವಾರು ಮಸೂದೆಗಳನ್ನು ಮಂಡಿಸಿ ಚರ್ಚೆ ನಡೆಸದೆ ಒಪ್ಪಿಗೆ ಪಡೆಯುತ್ತಿದೆ. ಇದು ಅತ್ಯಂತ ದುರದೃಷ್ಟಕರ ಬೆಳವಣಿಗೆ. ಹಿಂದಿನ ಎರಡೂ ಅಧಿವೇಶನಗಳಲ್ಲಿ ಸರ್ಕಾರ ಕೊನೆಯ ದಿನಗಳಲ್ಲಿ ಹಲವಾರು ಮಸೂದೆಗಳನ್ನು ಮಂಡಿಸಿ ಚರ್ಚೆ ನಡೆಸದೆ ಒಪ್ಪಿಗೆ ಪಡೆದಿದೆ.ಈ ಬೆಳವಣಿಗೆಗೆ ಆಡಳಿತ ಪಕ್ಷ ಹಾಗೂ ವಿರೋಧ ಪಕ್ಷಗಳ ಹೊಣೆಗೇಡಿತನವೇ ಕಾರಣ. ಜನಹಿತಕ್ಕಿಂತ ರಾಜಕೀಯ ಪ್ರತಿಷ್ಠೆಯೇ ಅವುಗಳಿಗೆ ಮುಖ್ಯವಾಗಿದೆ. ಬುಧವಾರ ವಿಧಾನಸಭೆಯಲ್ಲಿ ಕಾಂಗ್ರೆಸ್ ಮತ್ತು ಜೆಡಿಎಸ್ ಸದಸ್ಯರು ‘ಪ್ರೇರಣಾ ಟ್ರಸ್ಟ್’ ಪ್ರಕರಣವನ್ನು ಮುಂದಿಟ್ಟುಕೊಂಡು ಸದನದಲ್ಲಿ ಧರಣಿ ನಡೆಸುತ್ತಿದ್ದ ಸಂದರ್ಭದಲ್ಲಿ ಸರ್ಕಾರ ಹನ್ನೊಂದು ಮಸೂದೆಗಳನ್ನು ಮಂಡಿಸಿ ತರಾತುರಿಯಲ್ಲಿ ಒಪ್ಪಿಗೆ ಪಡೆದಿದೆ. ವಿರೋಧ ಪಕ್ಷಗಳು ಕಲಾಪಕ್ಕೆ ಅಡ್ಡಿ ಮಾಡಿದ್ದರಿಂದ ಇಂತಹ ಕ್ರಮ ಅನಿವಾರ್ಯವಾಯಿತು ಎಂದು ಸರ್ಕಾರ ಸಮರ್ಥನೆ ನೀಡಬಹುದು. ಆದರೆ ಯಾವುದೇ ಮಸೂದೆ ಚರ್ಚೆಯಾಗದೆ ಒಪ್ಪಿಗೆ ಪಡೆಯುವುದೆಂದರೆ ಜನರ ಹಿತವನ್ನು ಕಡೆಗಣಿಸಿದಂತೆ. ಚರ್ಚೆಯ ಸಂದರ್ಭದಲ್ಲಿ ಅನುಭವಿ ಸದಸ್ಯರು ನೀಡುವ ಸಲಹೆಗಳು ಉತ್ತಮ ಶಾಸನದ ರಚನೆಗೆ ನೆರವಾಗುತ್ತವೆ ಹಾಗೂ ಜನವಿರೋಧಿ ಅಂಶಗಳನ್ನು ತಿದ್ದಿಕೊಳ್ಳಲು ಸಹಕಾರಿ ಆಗುತ್ತದೆ. ಆದರೆ ಚರ್ಚೆಯನ್ನೇ ಮಾಡದೆ ಮಸೂದೆಗಳಿಗೆ ಒಪ್ಪಿಗೆ ಪಡೆಯುವುದೆಂದರೆ ಪ್ರಜಾಪ್ರಭುತ್ವ ವ್ಯವಸ್ಥೆಯನ್ನೇ ಅಣಕಿಸಿದಂತೆ. ಬಿಜೆಪಿ ಸರ್ಕಾರ ಅಧಿಕಾರಕ್ಕೆ ಬಂದಾಗಿನಿಂದ ಸದನ ವ್ಯವಸ್ಥಿತವಾಗಿ ನಡೆಯುತ್ತಿಲ್ಲ. ವ್ಯವಸ್ಥಿತವಾಗಿ ನಡೆಯಬೇಕು ಎಂದು ಆಡಳಿತ ಹಾಗೂ ವಿರೋಧ ಪಕ್ಷಗಳು ಬಯಸಿದಂತಿಲ್ಲ. ಕಲಾಪದ ಉದ್ದಕ್ಕೂ ಗದ್ದಲ, ಕೂಗಾಟ, ಆರೋಪ- ಪ್ರತ್ಯಾರೋಪ. ಜನಹಿತದ ಹೆಸರಿನಲ್ಲಿ ರಾಜಕೀಯ ಮೇಲುಗೈ ಪಡೆಯುತ್ತಿದೆ. ಸರ್ಕಾರದ ವೈಫಲ್ಯಗಳು ಬೆಳಕಿಗೆ ಬಾರದಂತೆ ತಡೆಯುವ ಪ್ರಯತ್ನವನ್ನು ಆಡಳಿತ ಪಕ್ಷ ಮಾಡುತ್ತಿದೆ. ವಿಧಾನಸಭೆಯ ಅಧಿವೇಶನಕ್ಕೆ ಮೊದಲೇ ಆಡಳಿತ ಹಾಗೂ ವಿರೋಧ ಪಕ್ಷಗಳು ಪರಸ್ಪರ ಚರ್ಚಿಸಿ ಕಲಾಪ ಸುಗಮವಾಗಿ ನಡೆಯಲು ಏನು ಮಾಡಬೇಕು ಎಂದು ಸಮಾಲೋಚಿಸುವ ಪ್ರಯತ್ನಗಳು ನಡೆಯುತ್ತಿಲ್ಲ.ವಿಧಾನ ಸಭಾಧ್ಯಕ್ಷರ ಬಗೆಗೆ ವಿರೋಧ ಪಕ್ಷಗಳಿಗೆ ವಿಶ್ವಾಸ ಇದ್ದಂತಿಲ್ಲ. ಅಧಿವೇಶನದ ಕೊನೆಯ ದಿನ ಹಲವಾರು ಮಸೂದೆಗಳನ್ನು ಮಂಡಿಸಿ ಒಪ್ಪಿಗೆ ಪಡೆಯುವ ಸರ್ಕಾರದ ಕ್ರಮಕ್ಕೆ ಸಭಾಧ್ಯಕ್ಷರು ಕಡಿವಾಣ ಹಾಕಬೇಕು. ಕಳೆದ ವರ್ಷ ಅಕ್ರಮ ನಿವೇಶನ ಹಾಗೂ ಕಟ್ಟಡಗಳನ್ನು ಸಕ್ರಮಗೊಳಿಸುವ ಮಸೂದೆಗೆ ಸರ್ಕಾರ ವಿಧಾನ ಮಂಡಲದಲ್ಲಿ ಚರ್ಚೆಯಾಗದೆ ಒಪ್ಪಿಗೆ ಪಡೆದಿತ್ತು. ಮಸೂದೆಯಲ್ಲಿ ಲೋಪವಿದೆ ಎಂಬ ಕಾರಣ ನೀಡಿ ಅದಕ್ಕೆ ಒಪ್ಪಿಗೆ ನೀಡಲು ರಾಜ್ಯಪಾಲರು ನಿರಾಕರಿಸಿದ್ದಾರೆ. ಇದರಿಂದ ತೊಂದರೆ ಆಗಿದ್ದು ಜನರಿಗೆ. ಆ ಬಗ್ಗೆ ಯಾರಿಗೂ ಕಾಳಜಿ ಇಲ್ಲ. ಇಂತಹ ವ್ಯವಸ್ಥೆ ಇನ್ನೂ ಎಷ್ಟು ದಿನ ಮುಂದುವರಿಯಬೇಕು? ವಿಧಾನ ಸಭಾಧ್ಯಕ್ಷರು ಆಡಳಿತ ಹಾಗೂ ವಿರೋಧ ಪಕ್ಷಗಳ ಜತೆ ಸಮಾಲೋಚನೆ ನಡೆಸಿ ವಿಧಾನ ಸಭೆ ವ್ಯವಸ್ಥಿತವಾಗಿ ನಡೆಯುವಂತೆ ನೋಡಿಕೊಳ್ಳಬೇಕು. ಅದು ಅವರ ಕರ್ತವ್ಯ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.