ಮಂಗಳವಾರ, ಜೂನ್ 22, 2021
28 °C

ಜನತಂತ್ರದ ಘನತೆ ಕಾಪಾಡಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ನಿರೀಕ್ಷೆಯಂತೆ ಲೋಕಸಭಾ ಚುನಾವಣೆಯ ವೇಳಾಪಟ್ಟಿ ಪ್ರಕಟವಾಗಿದೆ. ಏಪ್ರಿಲ್‌ 7 ರಿಂದ ಮೇ 12ರ ಮಧ್ಯೆ ಒಟ್ಟು ಒಂಬತ್ತು ದಿನ ದೇಶದ ವಿವಿಧೆಡೆ ಮತದಾನ ನಡೆಯಲಿದ್ದು, ಮೇ 16ರಂದು ಫಲಿತಾಂಶ ಪ್ರಕಟವಾಗಲಿದೆ. ಕರ್ನಾಟಕದಲ್ಲಿ ಏ. 17ರಂದು ಒಂದೇ ದಿನ ಎಲ್ಲ 28 ಕ್ಷೇತ್ರಗಳಲ್ಲಿ ಮತದಾನಕ್ಕೆ ಆಯೋಗ ತೀರ್ಮಾನಿಸಿದೆ. ರಾಷ್ಟ್ರದಾದ್ಯಂತ   ಇಡೀ ಪ್ರಕ್ರಿಯೆ ಹಿಂದಿನ ಚುನಾವಣೆಗಿಂತ ಮೂರು ದಿನ ಮೊದಲೇ ಅಂದರೆ 72 ದಿನಗಳಲ್ಲಿ ಮುಗಿಯಲಿದೆ.ವಿಶ್ವಾಸಾರ್ಹ ಚುನಾವಣೆ ಪ್ರಜಾಪ್ರಭುತ್ವದ  ದೊಡ್ಡ ಸಂಕೇತ. ಹೀಗಾಗಿ ಚುನಾವಣೆಯ ವಿಶ್ವಾಸಾರ್ಹತೆ ಉಳಿಸಲು ರಾಜಕೀಯ ಪಕ್ಷಗಳು ಚುನಾವಣಾ ಆಯೋಗಕ್ಕೆ ಎಲ್ಲ ರೀತಿಯ ಸಹಕಾರ ನೀಡುವುದು ಅವಶ್ಯ. ಇಡೀ ಚುನಾವಣೆ ಮುಕ್ತ ಮತ್ತು ನ್ಯಾಯಸಮ್ಮತವಾಗಿ ನಡೆಯುವಂತೆ ನೋಡಿಕೊಳ್ಳುವ ಹೊಣೆ ಆಯೋಗಕ್ಕೆ ಮಾತ್ರ ಸಂಬಂಧಿಸಿದ್ದಲ್ಲ; ರಾಜಕೀಯ ಪಕ್ಷಗಳು ಮತ್ತು ಅಭ್ಯರ್ಥಿಗಳಿಗೂ ಈ ಹೊಣೆ ಇದೆ. ಆದ್ದರಿಂದ, ವಿಶ್ವದ ಅತಿ ದೊಡ್ಡ ಪ್ರಜಾಸತ್ತೆಯ ಘನತೆ ಮತ್ತು ಗೌರವಕ್ಕೆ ಧಕ್ಕೆ ಬರದಂತೆ ರಾಜಕಾರಣಿಗಳು ನಡೆದುಕೊಳ್ಳಬೇಕು.ಎದು ರಾಳಿಗಳ ವಿರುದ್ಧ ವೈಯಕ್ತಿಕ ನಿಂದನೆ, ಅಶ್ಲೀಲ ಮತ್ತು ಕೀಳು ಅಭಿರುಚಿಯ ಭಾಷೆ ಬಳಸಿ ಅಪಪ್ರಚಾರಕ್ಕೆ ಇಳಿಯದಿರುವುದು ಲೇಸು. ನೀತಿ ಸಂಹಿತೆ ವಿಷಯದಲ್ಲಿ ಆಯೋಗದ ನಿರ್ದೇಶನಗಳನ್ನು  ಚಾಚೂತಪ್ಪದೆ ಪಾಲಿಸು ವುದು ಅವಶ್ಯ.   ಹಣಬಲ, ತೋಳ್ಬಲದ ಅಸಹ್ಯ ಪ್ರದರ್ಶನದಿಂದ ದೂರ ಇರಬೇಕು. ಏಕೆಂದರೆ ಮತದಾರರೇನೂ ಮೂರ್ಖರಲ್ಲ. ಅವರು ಎಲ್ಲವನ್ನೂ, ಎಲ್ಲರನ್ನೂ ಸೂಕ್ಷ್ಮವಾಗಿ ಗಮನಿಸುತ್ತಲೇ ಇರುತ್ತಾರೆ. ಮತ ಚಲಾವಣೆ ಮೂಲಕ ತಮಗೆ ಬೇಕಾದ ಸರ್ಕಾರವನ್ನು ಆರಿಸಿಕೊಳ್ಳುವ ಅವರ ಅಧಿಕಾರ, ವಿಶ್ವಾಸಕ್ಕೆ ಚ್ಯುತಿ ಬರದಂತೆ ರಾಜಕಾರಣಿಗಳು ನಡೆದುಕೊಳ್ಳ ಬೇಕು.ಎಷ್ಟೇ ಜಾಗೃತಿ ಮೂಡಿಸುತ್ತಿದ್ದರೂ ಮತ ಚಲಾವಣೆ ಪ್ರಮಾಣ ತೃಪ್ತಿಕರವಾಗಿಲ್ಲ ಎಂಬುದನ್ನು ಹಿಂದಿನ ಚುನಾವಣೆಗಳಲ್ಲಿ ನೋಡುತ್ತಲೇ ಬಂದಿದ್ದೇವೆ. ಮತದಾರರಲ್ಲಿ ಇಂಥ ಸಿನಿಕತನ ಹೆಚ್ಚಲು ರಾಜಕೀಯ ಪಕ್ಷಗಳೇ ಮುಖ್ಯ ಕಾರಣ ಎಂಬುದರಲ್ಲಿ ಎರಡು ಮಾತಿಲ್ಲ. ಆದ್ದರಿಂದ ಹೆಚ್ಚು ಹೆಚ್ಚು ಮತದಾರರು ಮತಗಟ್ಟೆಗಳಿಗೆ ಬರುವಂತೆ ಪ್ರೇರೇಪಿಸುವ ಕಾರ್ಯ ದಲ್ಲಿ ಚುನಾವಣಾ ಆಯೋಗ ಮತ್ತು ಸ್ವಯಂಸೇವಾ ಸಂಸ್ಥೆಗಳ ಜತೆ ರಾಜಕೀಯ ಪಕ್ಷಗಳು ತೊಡಗಿಸಿಕೊಳ್ಳಬೇಕು.    

  

ಚುನಾವಣಾ ಕಾರ್ಯಕ್ಕಾಗಿ ಶಿಕ್ಷಕರು ಮತ್ತು ಶಾಲಾ ಕಟ್ಟಡಗಳ ಬಳಕೆಯಿಂದಾಗಿ ಕೆಲವು ಕಡೆ ಪರೀಕ್ಷಾ ಕಾರ್ಯ, ಪಾಠ ಪ್ರವಚನಗಳು  ಸ್ವಲ್ಪ ಏರುಪೇರಾಗಲಿವೆ. ಅಲ್ಲದೆ ಪ್ರಚಾರದ ಆರ್ಭಟ, ಧ್ವನಿವರ್ಧಕಗಳ ಅಬ್ಬರ ಮಕ್ಕಳ ಓದಿನ ಏಕಾಗ್ರತೆಗೆ ಭಂಗ ತರುವಂತಾಗಬಾರದು. ಈ ಬಾರಿ  81 ಕೋಟಿ ಮತದಾರರಿದ್ದಾರೆ. ಕಳೆದ ಚುನಾವಣೆಗೆ ಹೋಲಿಸಿದರೆ ಮತದಾರರ ಸಂಖ್ಯೆ 10 ಕೋಟಿ ಹೆಚ್ಚಾಗಿದೆ. ಭಾರತದ ಜನತಂತ್ರ ಗಟ್ಟಿಮುಟ್ಟಾಗಿದೆ, ಮಾದರಿಯಾಗಿದೆ ಎಂಬುದನ್ನು ಇಡೀ ವಿಶ್ವಕ್ಕೆ ಪ್ರದರ್ಶಿಸಲು ಲೋಕಸಭಾ ಚುನಾವಣೆ ನಮಗೊಂದು ಅವಕಾಶ ಎಂಬುದು ನಮ್ಮ ಗಮನದಲ್ಲಿ ಇರಲಿ.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.