ಬುಧವಾರ, ನವೆಂಬರ್ 13, 2019
22 °C

ಜನತಾ ನ್ಯಾಯಾಲಯಕ್ಕೆ ಹೋಗುವೆ: ಕೆಂಪರಾಜು

Published:
Updated:

ಕಡೂರು(ಬೀರೂರು): ಕಾಂಗ್ರೆಸ್‌ನಿಂದ ತಮಗೆ ಮತ್ತು ತಮ್ಮ ಕುಟುಂಬಕ್ಕೆ ಅನ್ಯಾಯವಾಗಿದ್ದು, ಸ್ಪರ್ಧೆ ಮೂಲಕ ಜನತಾ ನ್ಯಾಯಾಲಯದ ಮುಂದೆ ಹೋಗುವುದಾಗಿ ಜಿಲ್ಲಾ ಪಂಚಾಯಿತಿ ಮಾಜಿ ಅಧ್ಯಕ್ಷ ಕೆ.ಎಂ.ಕೆಂಪರಾಜ್ ಪ್ರಕಟಿಸಿದರು.ಕಡೂರು ಪಟ್ಟಣದ ಎಂ.ಆರ್.ಎಂ.ಬಯಲು ರಂಗಮಂದಿರದಲ್ಲಿ ಸೋಮವಾರ ನಡೆದ ಚುನಾವಣೆ ಸ್ಪರ್ಧೆ ಕುರಿತ ಅಭಿಪ್ರಾಯ ಸಂಗ್ರಹ ಸಭೆಯಲ್ಲಿ ಅವರು ಈ ತೀರ್ಮಾನವನ್ನು ಘೋಷಿಸಿದರು.`ಕಡೂರು ವಿಧಾನಸಭಾ ಕ್ಷೇತ್ರದ ಶಾಸಕ ರಾಗಿದ್ದ ದಿ.ಕೆ.ಎಂ.ಕೃಷ್ಣಮೂರ್ತಿ ಅವರು 20 08ರ ಸಂದರ್ಭದಲ್ಲಿ ಬಿಜೆಪಿ- ಜೆಡಿಎಸ್ ಸಮ್ಮಿಶ್ರ ಸರ್ಕಾರದಲ್ಲಿ ಮಂತ್ರಿಯಾಗುವ ಅವಕಾಶ ಒದಗಿಬಂದಿತ್ತು. ಎಚ್.ಡಿ.ಕುಮಾರ ಸ್ವಾಮಿ ಯವರೇ ಅವರನ್ನು ಆಹ್ವಾನಿಸಿದ್ದರು. ಆದರೆ ನನ್ನ ಒತ್ತಾಯದ ಮೇರೆಗೆ ಅಹಿಂದ ಚಳವಳಿ ಬೆಂಬಲಿಸಿ ಸಿದ್ದರಾಮಯ್ಯ ಅವರ ಬೆನ್ನಿಗೆ ನಿಂತ ಕೃಷ್ಣಮೂರ್ತಿ ಅವರ ಕುಟುಂಬಕ್ಕೆ ಕಾಂಗ್ರೆಸ್ ಟಿಕೆಟ್ ನೀಡಲು ಸಿದ್ದರಾಮಯ್ಯನವರೇ ಒಲವು ತೋರಲಿಲ್ಲ' ಎಂದು ಅವರು ಆರೋಪಿಸಿದರು.`ಕಾಂಗ್ರೆಸ್ ನ್ಯಾಯಾಲಯದಲ್ಲಿ ನನ್ನ ಕೇಸ್ ವಜಾ ಆಗಿದೆ. ಆದರೆ ನನ್ನ ಪ್ರಭುಗಳಾದ ನಿಮ್ಮ ಜನತಾ ನ್ಯಾಯಾಲಯದಲ್ಲಿ ನನ್ನ ಕೇಸ್ ನಡೆಸು ವುದಾಗಿ ಅವರಿಗೆ ಹೇಳಿ ಬಂದಿದ್ದೇನೆ. ಅಧಿಕಾರ ಇರಲಿ ಇಲ್ಲದಿರಲಿ ಪಕ್ಷದ್ರೋಹ ಸಲ್ಲದು. ಇಲ್ಲಿ ನೆರೆದಿರುವ ಅಭಿಮಾನಿಗಳು, ಕಾರ್ಯಕರ್ತರು ಆತ್ಮವಂಚನೆ ಮಾಡಿಕೊಳ್ಳದೆ ತೀರ್ಮಾನ ಕೈಗೊಳ್ಳಿ. ನಿಮ್ಮ ಆಶೀರ್ವಾದ ಇದ್ದರೆ ಸೋಲು ಗೆಲುವಿಗೆ ಹೆದರದೆ ಸ್ಪರ್ಧೆ ಮಾಡುತ್ತೇನೆ. ಗೆದ್ದರೆ ಕೃಷ್ಣಮೂರ್ತಿ ಅವರ ಕನಸು ನನಸು ಮಾಡುವುದು ನನ್ನ ಗುರಿ. ಪಕ್ಷೇತರವಾಗಿ ಆಗಲಿ ಅಥವಾ ಯಾವುದಾದರೂ ಪಕ್ಷದ ಟಿಕೆಟ್ ಮೇಲೆ ಆಗಲಿ ಸ್ಪರ್ಧೆ ಮಾಡುವುದು ನಿಮ್ಮ ತೀರ್ಮಾನದ ಮೇಲೆ ನಿಂತಿದೆ. ನಿರ್ಣಯ ಕೈಗೊಳ್ಳುವ ಅಧಿಕಾರ ನಿಮ್ಮದು. ಒಪ್ಪಿಗೆ ಇದ್ದರೆ ಎಲ್ಲರೂ ಕೈಗಳನ್ನು ಮೇಲೆತ್ತಿ ಸ್ಪರ್ಧೆಗೆ ಒಮ್ಮತ ಸೂಚಿಸಿ' ಎಂದು ಕೋರಿದರು.ಕೆಂಪರಾಜು ಅವರ ಮನವಿಗೆ ಸ್ಪಂದಿಸಿದ ಸಭೆಯಲ್ಲಿ ನೆರೆದಿದ್ದ ನೂರಾರು ಅಭಿಮಾನಿಗಳು ಮತ್ತು ಕಾರ್ಯಕರ್ತರು ಹರ್ಷೋದ್ಗಾರಗಳೊಡನೆ ಕೈಗಳನ್ನು ಮೇಲೆತ್ತಿ ಸ್ಪರ್ಧೆ ಮಾಡುವಂತೆ ಒಪ್ಪಿಗೆ ನೀಡಿದರು. ಬಳಿಕ ಯಾವುದಾದರೂ ಪಕ್ಷದ ಚಿಹ್ನೆ ಅಡಿ ಅಥವಾ ಪಕ್ಷೇತರರಾಗಿ ಸ್ಪರ್ಧಿಸುವುದಾಗಿ ಕೆಂಪರಾಜ್ ಘೋಷಿಸಿದರು.ಸಭೆಯಲ್ಲಿ ಅಂತರಗಟ್ಟೆ ದೇವೇಂದ್ರಪ್ಪ, ಆಲಘಟ್ಟ ಪುರದಪ್ಪ, ತಂಗಲಿ ಚಂದ್ರಶೇಖರ್, ಹೈದರ್ ಮುಂತಾದವರು ಮಾತನಾಡಿದರು. ಕೆ.ಎಂ.ಶರತ್, ಕರಿಯಪ್ಪ, ಶಿವಮೂರ್ತಿನಾಯಕ, ಸಿದ್ದಪ್ಪ, ಕುಂಕಾನಾಡು ಮೂರ್ತಿ, ಶೆಟ್ಟಿಹಳ್ಳಿ ಮಲ್ಲಿಕಾರ್ಜುನ, ತಿಮ್ಮಯ್ಯ, ರವಿ ಸೇರಿದಂತೆ ನೂರಾರು ಅಭಿಮಾನಿಗಳು ಪಾಲ್ಗೊಂಡಿದ್ದರು.

ಪ್ರತಿಕ್ರಿಯಿಸಿ (+)