ಮಂಗಳವಾರ, ಮೇ 17, 2022
23 °C

ಜನತಾ ಬಜಾರ್ ಜೆನರಿಕ್ ಔಷಧಿ ಮಳಿಗೆಗೆ ನಾಳೆ ಚಾಲನೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು:  ರಾಜ್ಯದಲ್ಲಿನ ಸರ್ಕಾರಿ ವೈದ್ಯಕೀಯ ಕಾಲೇಜುಗಳ ಆಸ್ಪತ್ರೆಗಳಲ್ಲಿ `ಜನತಾ ಬಜಾರ್ ಜೆನರಿಕ್ ಔಷಧಿ ಮಳಿಗೆ~ಗಳನ್ನು ತೆರೆದು ಶೇ 50ರಷ್ಟು ರಿಯಾಯಿತಿ ದರದಲ್ಲಿ ಔಷಧಿಗಳನ್ನು ಪೂರೈಸುವ ಯೋಜನೆಗೆ ಗುರುವಾರ ಚಾಲನೆ ನೀಡಲಾಗುವುದು ಎಂದು ವೈದ್ಯಕೀಯ ಶಿಕ್ಷಣ ಸಚಿವ ಎಸ್.ಎ.ರಾಮದಾಸ್ ತಿಳಿಸಿದರು.ಈ ಯೋಜನೆಯಿಂದ ರೋಗಿಗಳಿಗೆ ಕಡಿಮೆ ದರದಲ್ಲಿ ಔಷಧಿಗಳು ಲಭ್ಯವಾಗಲಿವೆ. ಇದೇ 21ರಂದು ಮುಖ್ಯಮಂತ್ರಿ ಡಿ.ವಿ.ಸದಾನಂದಗೌಡ ಅವರು ನಗರದ ವಿಕ್ಟೋರಿಯಾ ಆಸ್ಪತ್ರೆಯ ಆವರಣದಲ್ಲಿ ಜನತಾ ಬಜಾರ್ ಜೆನರಿಕ್ ಔಷಧಿ ಮಳಿಗೆಯನ್ನು ಉದ್ಘಾಟಿಸಲಿದ್ದಾರೆ ಎಂದು ಮಂಗಳವಾರ ಇಲ್ಲಿ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು.ಸದ್ಯಕ್ಕೆ ಸರ್ಕಾರಿ ವೈದ್ಯಕೀಯ ಕಾಲೇಜುಗಳಿಗೆ ಹೊಂದಿಕೊಂಡಿರುವ ಆಸ್ಪತ್ರೆಗಳಲ್ಲಿ ಈ ರೀತಿಯ ಮಳಿಗೆಗಳು ಆರಂಭವಾಗಲಿವೆ. ಒಂದು ತಿಂಗಳಲ್ಲಿ ವೈದ್ಯಕೀಯ ಶಿಕ್ಷಣ ಇಲಾಖೆ ವ್ಯಾಪ್ತಿಗೆ ಬರುವ ಎಲ್ಲ ಆಸ್ಪತ್ರೆಗಳಲ್ಲೂ ಮಳಿಗೆಗಳನ್ನು ತೆರೆಯಲಾಗುವುದು ಎಂದರು.ಕೇಂದ್ರ ಸರ್ಕಾರದ ಔಷಧಿ ನೀತಿಯಡಿ ಸದ್ಯ 170 ಔಷಧಿಗಳು ಮಾತ್ರ ಬರುತ್ತವೆ. ಇದರ ವ್ಯಾಪ್ತಿಗೆ ಬಾರದ ಇನ್ನೂ 270 ಜೀವರಕ್ಷಕ ಔಷಧಿಗಳ ಬೆಲೆ ದುಬಾರಿಯಾಗಿದೆ. ಕೇಂದ್ರ ಸರ್ಕಾರ ಮನಸ್ಸು ಮಾಡಿದರೆ ಇವುಗಳ ಬೆಲೆಯನ್ನು ಕಡಿಮೆ ಮಾಡಬಹುದಾಗಿದೆ ಎಂದು ಅವರು ತಿಳಿಸಿದರು.ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯೊಂದಿಗೆ ಚರ್ಚಿಸಿ ಮುಂದಿನ ದಿನಗಳಲ್ಲಿ ರಾಜ್ಯದ ಎಲ್ಲ ಸರ್ಕಾರಿ ಆಸ್ಪತ್ರೆಗಳಲ್ಲಿ ಈ ರೀತಿಯ ಔಷಧಿಗಳು ಲಭ್ಯವಾಗುವಂತೆ ಮಾಡಲಾಗುವುದು. ಮಧುಮೇಹ, ಹೃದಯ ಸಂಬಂಧಿ, ಕಿಡ್ನಿ ತೊಂದರೆ ಸೇರಿದಂತೆ ವಿವಿಧ ರೋಗಗಳಿಗೆ ತುತ್ತಾಗಿರುವ ಜನರಿಗೆ ಕಡಿಮೆ ದರದಲ್ಲಿ ಔಷಧಿ ದೊರೆಯುವುದರಿಂದ ಅನುಕೂಲವಾಗಲಿದೆ ಎಂದರು.ಸರ್ಕಾರಿ ಆಸ್ಪತ್ರೆಗಳ ವೈದ್ಯರು ಅಷ್ಟೇ ಅಲ್ಲದೆ, ಖಾಸಗಿ ಆಸ್ಪತ್ರೆಗಳ ವೈದ್ಯರು ಶಿಫಾರಸು ಮಾಡುವ ಔಷಧಿಗಳನ್ನು ಸಹ ರಿಯಾಯಿತಿ ದರದಲ್ಲಿ ನೀಡಲಾಗುತ್ತದೆ. ರಾಜ್ಯ ಸಹಕಾರಿ ಗ್ರಾಹಕರ ಮಹಾಮಂಡಲದೊಂದಿಗೆ ಒಪ್ಪಂದ ಮಾಡಿಕೊಂಡು ಜನತಾ ಬಜಾರ್ ಜೆನರಿಕ್ ಔಷಧಿ ಮಳಿಗೆಗಳನ್ನು ಪ್ರಾರಂಭಿಸಲಾಗುತ್ತದೆ ಎಂದು ತಿಳಿಸಿದರು. ಕಡಿಮೆ ದರದಲ್ಲಿ ಔಷಧಿಗಳು ಲಭ್ಯವಾಗುವುದರಿಂದ ಬಡವರಿಗೆ, ಮಧ್ಯಮ ವರ್ಗದವರಿಗೆ ಅನುಕೂಲವಾಗುತ್ತದೆ. ಆದರೆ ಇದಕ್ಕೆ ದೊಡ್ಡ ದೊಡ್ಡ ಔಷಧ ಕಂಪೆನಿಗಳು ಮತ್ತು ಡೀಲರ್‌ಗಳು ವಿರೋಧ ವ್ಯಕ್ತಪಡಿಸುವುದು ಸಹಜ. ಇದಕ್ಕೆ ಹೆದರುವ ಪ್ರಶ್ನೆಯೇ ಇಲ್ಲ. ಯೋಜನೆ ಜಾರಿಗೊಳಿಸಲು ಸರ್ಕಾರ ಬದ್ಧವಾಗಿದೆ ಎಂದು ಅವರು ಸ್ಪಷ್ಟಪಡಿಸಿದರು.ಗ್ರಾಮೀಣ ಸೇವೆ ಕಡ್ಡಾಯ: ಗ್ರಾಮೀಣ ಪ್ರದೇಶದಲ್ಲಿ ಸೇವೆ ಸಲ್ಲಿಸಲು ನಿರಾಕರಿಸುವ ವೈದ್ಯರಿಗೆ ಅಧಿಕ ದಂಡ ವಿಧಿಸುವ ಸಂಬಂಧ ಶೀಘ್ರದಲ್ಲೇ ಸುಗ್ರೀವಾಜ್ಞೆ ಹೊರಡಿಸಲಾಗುವುದು ಎಂದು ಸಚಿವರು ತಿಳಿಸಿದರು.

ಸರ್ಕಾರಿ ಕೋಟಾದಡಿ ಎಂಬಿಬಿಎಸ್ ಪದವಿ ಪಡೆದ ನಂತರ ಹಳ್ಳಿಗಳಲ್ಲಿ ಸೇವೆ ಸಲ್ಲಿಸಲು ನಿರಾಕರಿಸಿದರೆ ಹತ್ತು ಲಕ್ಷ ರೂಪಾಯಿ ದಂಡ ವಿಧಿಸಲಾಗುವುದು.ಅದೇ ರೀತಿ ಸ್ನಾತಕೋತ್ತರ ಡಿಪ್ಲೊಮಾ, ಸ್ನಾತಕೋತ್ತರ ಪದವಿ ಪಡೆದ ನಂತರ ಗ್ರಾಮೀಣ ಪ್ರದೇಶಕ್ಕೆ ಹೋಗಲು ನಿರಾಕರಿಸಿದರೆ ಕ್ರಮವಾಗಿ 15 ಲಕ್ಷ , 25 ಲಕ್ಷ ರೂಪಾಯಿ ದಂಡ ವಿಧಿಸಲು ಸುಗ್ರೀವಾಜ್ಞೆ ಮೂಲಕ ಅವಕಾಶ ಕಲ್ಪಿಸಲಾಗುವುದು ಎಂದು ತಿಳಿಸಿದರು.ಸುಗ್ರೀವಾಜ್ಞೆಯ ಕರಡು ಸಿದ್ಧವಾಗಿದೆ. 2-3 ದಿನದಲ್ಲಿ ಆದೇಶ ಹೊರ ಬೀಳಲಿದೆ.ಜುಲೈನಲ್ಲಿ ನಡೆಯುವ ಅಧಿವೇಶನದಲ್ಲಿ ಇದಕ್ಕೆ ಕಾನೂನು ರೂಫ ನೀಡಲಾಗುವುದು ಎಂದರು.

ಈ ರೀತಿ ಮಾಡುವುದರಿಂದ ಮುಂದಿನ ದಿನಗಳಲ್ಲಿ ಗ್ರಾಮೀಣ ಪ್ರದೇಶದ ಆಸ್ಪತ್ರೆಗಳಲ್ಲಿ ವೈದ್ಯರ ಕೊರತೆ ನೀಗಲಿದೆ. ರೋಗಿಗಳಿಗೆ ವೈದ್ಯರ ಸೇವೆ ಲಭ್ಯವಾಗಲಿದೆ ಎಂಬ ವಿಶ್ವಾಸ ವ್ಯಕ್ತಪಡಿಸಿದರು.

ಏನಿದು ಜೆನರಿಕ್ ?

ಟ್ರೇಡ್ ಹೆಸರು ಬಳಸದೆ ಕೇವಲ ರಾಸಾಯನಿಕಗಳ ಹೆಸರಿನಿಂದ ಕರೆಯುವ ಔಷಧಿಗಳಿಗೆ ಜೆನರಿಕ್ ಎನ್ನುತ್ತಾರೆ. ಉದಾಹರಣೆಗೆ ಒಂದೇ ಔಷಧಿ ಬೇರೆ ಬೇರೆ ಹೆಸರಿನಲ್ಲಿ ಮಾರುಕಟ್ಟೆಗೆ ಬಂದರೂ, ಅದರಲ್ಲಿನ ಮೂಲ ಅಂಶ ಒಂದೇ ಇರುತ್ತದೆ. ಮೂಲ ಅಂಶದ ಹೆಸರಿನಲ್ಲಿ ಮಾರಾಟವಾಗುವ ಔಷಧಿಗಳಿಗೆ ಜೆನರಿಕ್ ಎಂದು ಕರೆಯಲಾಗುತ್ತದೆ.

- ಡಾ.ಜಿ.ಎಸ್.ವೆಂಕಟೇಶ್, ನಿರ್ದೇಶಕರು, ವೈದ್ಯಕೀಯ ಶಿಕ್ಷಣ ಇಲಾಖೆ

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.