ಜನತೆಗೆ ಕಾನೂನು ಕ್ಲಿನಿಕ್ ಸಹಕಾರಿ

ಶುಕ್ರವಾರ, ಜೂಲೈ 19, 2019
28 °C

ಜನತೆಗೆ ಕಾನೂನು ಕ್ಲಿನಿಕ್ ಸಹಕಾರಿ

Published:
Updated:

ಹರಪನಹಳ್ಳಿ: ಭೂದಾಖಲೆಗಳಿಗೆ ಸಂಬಂಧಿಸಿದಂತೆ ಬಹುತೇಕ ಕಾನೂನು ತೊಡಕುಗಳು ಕಂದಾಯ ಇಲಾಖೆಯಿಂದಲೇ ಆರಂಭವಾಗುತ್ತಿರುವ ಆರೋಪಗಳು ಕೇಳಿ ಬರುತ್ತಿರುವ ಹಿನ್ನೆಲೆಯಲ್ಲಿ, ಕೇಂದ್ರ ಸರ್ಕಾರ ಪ್ರತಿ ತಾಲ್ಲೂಕು ಕಚೇರಿಗಳಲ್ಲಿ `ಉಚಿತ ಕಾನೂನು ಕ್ಲಿನಿಕ್~ ತೆರೆಯಲು ಮುಂದಾಗಿದೆ ಎಂದು ಜೆಎಂಎಫ್‌ಸಿ ಹಿರಿಯ ವಿಭಾಗದ ನ್ಯಾಯಾಧೀಶ ಅಭಯ್ ಡಿ. ಚೌಗಲಾ ಹೇಳಿದರು.ಸೋಮವಾರ ಮಿನಿ ವಿಧಾನಸೌಧದ ಸಭಾಂಗಣದಲ್ಲಿ ಹಮ್ಮಿಕೊಂಡಿದ್ದ `ಉಚಿತ ಕಾನೂನು ಕ್ಲಿನಿಕ್~ಗೆ ಚಾಲನೆ ನೀಡಿ ಅವರು ಮಾತನಾಡಿದರು.ಮನುಷ್ಯ ತನ್ನ ಜೀವಿತದ ಕೊನೆಯ ಉಸಿರಿರುವವರೆಗೂ ಕಾನೂನಿನ ಪರಿಮಿತಿಯಲ್ಲಿ ಬದುಕು ಸಾಗಿಸಬೇಕಾಗಿರುವುದರಿಂದ ಮತ್ತು ತಂಟೆ-ತಕರಾರು ರಹಿತ ಕೌಟುಂಬಿಕ ಪದ್ಧತಿಯ ಸಮಾಜ ಸ್ಥಾಪಿಸಬೇಕಾದರೆ, ಪ್ರತಿಯೊಬ್ಬ ಮನುಷ್ಯನಿಗೂ ಕಾನೂನಿನ ತಿಳಿವಳಿಕೆ ಅವಶ್ಯವಾಗಿದೆ. ಸಣ್ಣಪುಟ್ಟ ಕಾಯಿಲೆಗಳು ಕಾಣಿಸಿಕೊಂಡು ಮೈಮನಸ್ಸನ್ನು ಬಾಧಿಸುತ್ತಿರುವಾಗ ವೈದ್ಯರ ನೆರವಿಗಾಗಿ ಕ್ಲಿನಿಕ್‌ಗಳಿಗೆ ಹೋಗುತ್ತೇವೆ. ಹಾಗೆಯೇ ಮನೆ-ಮನಗಳಲ್ಲಿ ಕಾಣಿಸಿಕೊಳ್ಳುವ ವ್ಯಾಜ್ಯಗಳ ಪರಿಹಾರಕ್ಕಾಗಿ ಇಂತಹ ಉಚಿತ ಕಾನೂನು ಕ್ಲಿನಿಕ್‌ಗಳು ತಕರಾರು ಶುಶ್ರೂಷೆಯ ಉದ್ದೇಶ ಹೊಂದಿವೆ ಎಂದು ವಿಶ್ಲೇಷಿಸಿದರು.ಗ್ರಾಮೀಣ ಪ್ರದೇಶದಲ್ಲಿನ ಬಹುಭಾಗದಲ್ಲಿ ಕಿತ್ತು ತಿನ್ನುತ್ತಿರವ ಬಡತನ ಹಾಗೂ ಅನಕ್ಷರತೆಯ ಪರಿಣಾಮ ವ್ಯಾಜ್ಯಗಳು ಉದ್ಭವಿಸುತ್ತಿವೆ. ಈ ಕಾರಣಕ್ಕಾಗಿ ಪ್ರತಿ ಗ್ರಾಮದಲ್ಲಿಯೂ ಶೀಘ್ರದಲ್ಲಿಯೇ ಇಂತಹ ಉಚಿತ ಕಾನೂನು ಕ್ಲಿನಿಕ್‌ಗಳನ್ನು ತೆರೆಯಲು ಉದ್ದೇಶಿಸಲಾಗಿದೆ. ಇಂತಹ ಉಚಿತ ಕಾನೂನು ಕ್ಲಿನಿಕ್‌ಗಳಲ್ಲಿ ಇಬ್ಬರೂ ನುರಿತ ವಕೀಲರನ್ನು ಸಲಹೆಗಾರರನ್ನಾಗಿ ನೇಮಕ ಮಾಡಲಾಗಿದೆ. ಪ್ರತಿ ಸೋಮವಾರ ಹಾಗೂ ಬುಧವಾರ ಮಿನಿ ವಿಧಾನಸೌಧದಲ್ಲಿ ಹಾಗೂ ವಾರದ ಇನ್ನುಳಿದ ದಿನಗಳಲ್ಲಿ ನ್ಯಾಯಾಲಯದ ಆವರಣದಲ್ಲಿಯೇ ಈ ಕ್ಲಿನಿಕ್‌ಗಳು ಕಾರ್ಯ ನಿರ್ವಹಿಸುತ್ತವೆ ಎಂದರು.ಜೆಎಂಎಫ್‌ಸಿ ಕಿರಿಯ ವಿಭಾಗದ ನ್ಯಾಯಾಧೀಶ ಎಚ್.ಕೆ. ನವೀನ್ ಮಾತನಾಡಿದರು. ಉಪತಹಶೀಲ್ದಾರ್ ಕೊಟ್ರಮ್ಮ ಅಧ್ಯಕ್ಷತೆ ವಹಿಸಿದ್ದರು. ವಕೀಲರ ಸಂಘದ ಅಧ್ಯಕ್ಷ ಕೆ. ಜಗದಪ್ಪ, ಬಸವರಾಜ ಇತರರು ಉಪಸ್ಥಿತರಿದ್ದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry