ಜನತೆಗೆ ದ್ರೋಹ ಬಗೆದ ಬಿಜೆಪಿ ಸರ್ಕಾರ

7
ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಕಿಡಿ

ಜನತೆಗೆ ದ್ರೋಹ ಬಗೆದ ಬಿಜೆಪಿ ಸರ್ಕಾರ

Published:
Updated:

ಸುವರ್ಣ ವಿಧಾನಸೌಧ (ಬೆಳಗಾವಿ): ಕೃಷ್ಣರಾಜ ಸಾಗರ (ಕೆಆರ್‌ಎಸ್) ಜಲಾಶಯದಿಂದ ತಮಿಳುನಾಡಿಗೆ ನೀರು ಬಿಟ್ಟಿರುವ ವಿಷಯ ಶುಕ್ರವಾರ ವಿಧಾನಮಂಡಲದ ಉಭಯ ಸದನಗಳಲ್ಲೂ ಪ್ರತಿಧ್ವನಿಸಿ, ಕೋಲಾಹಲಕ್ಕೆ ಕಾರಣವಾಯಿತು. ನೀರು ಬಿಡುವುದನ್ನು ತಕ್ಷಣವೇ ನಿಲ್ಲಿಸುವಂತೆ ಪಟ್ಟುಹಿಡಿದು ಕಾಂಗ್ರೆಸ್ ಮತ್ತು ಜೆಡಿಎಸ್ ಸದಸ್ಯರು ಧರಣಿ ನಡೆಸಿದ ಪರಿಣಾಮವಾಗಿ ಎರಡೂ ಸದನಗಳ ಕಲಾಪವನ್ನೂ ಸೋಮವಾರಕ್ಕೆ ಮುಂದೂಡಲಾಯಿತು.ಬೆಳಿಗ್ಗೆ 10 ಗಂಟೆಗೆ ಆರಂಭವಾಗಬೇಕಿದ್ದ ವಿಧಾನಸಭೆಯ ಕಲಾಪ ಅರ್ಧ ಗಂಟೆ ತಡವಾಗಿ ಪ್ರಾರಂಭವಾಯಿತು. ಸದನ ಸೇರುತ್ತಿದ್ದಂತೆಯೇ ವಿಷಯ ಪ್ರಸ್ತಾಪಿಸಿದ ವಿರೋಧ ಪಕ್ಷದ ಉಪ ನಾಯಕ ಟಿ.ಬಿ.ಜಯಚಂದ್ರ, `ಸರ್ಕಾರ ರಾಜ್ಯದ ಜನರ ಕಣ್ಣಿಗೆ ಮಣ್ಣೆರಚುವ ಕೆಲಸ ಮಾಡುತ್ತಿದೆ. ಗುರುವಾರ ರಾತ್ರೋರಾತ್ರಿ 20,000 ಕ್ಯೂಸೆಕ್ ನೀರನ್ನು ಕೆಆರ್‌ಎಸ್ ಜಲಾಶಯದಿಂದ ಬಿಡಲಾಗುತ್ತಿದೆ. ತಕ್ಷಣವೇ ನೀರು ನಿಲ್ಲಿಸದೇ ಇದ್ದರೆ ರಾಜ್ಯದ ಆ ಭಾಗದ ಜನರು ಮತ್ತಷ್ಟು ಸಂಕಷ್ಟಕ್ಕೆ ಸಿಲುಕುತ್ತಾರೆ' ಎಂದರು.`ಎಂತಹ ಸಂದರ್ಭ ಬಂದರೂ ನೀರು ಬಿಡಬೇಡಿ ಎಂದು ಸದನದ ಬಹುತೇಕ ಸದಸ್ಯರು ಸರ್ಕಾರವನ್ನು ಆಗ್ರಹಿಸಿದ್ದೆವು. ರೈತರ ಹಿತ ಕಾಯುವುದಾಗಿ ಮುಖ್ಯಮಂತ್ರಿ ಜಗದೀಶ ಶೆಟ್ಟರ್ ಭರವಸೆಯನ್ನೂ ನೀಡಿದ್ದರು. ಆದರೆ, ರಾತ್ರೋರಾತ್ರಿ ತಮಿಳುನಾಡಿಗೆ ನೀರು ಬಿಟ್ಟಿರುವ ಸರ್ಕಾರ, ಇಡೀ ರಾಜ್ಯದ ಜನತೆಗೆ ದ್ರೋಹ ಬಗೆದಿದೆ' ಎಂದು ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಸರ್ಕಾರವನ್ನು ತರಾಟೆಗೆ ತೆಗೆದುಕೊಂಡರು.`ಸುವರ್ಣ ವಿಧಾನಸೌಧದಲ್ಲಿ ನಡೆಯುತ್ತಿರುವ ಚೊಚ್ಚಲ ಅಧಿವೇಶನದಲ್ಲಿ ಉತ್ತರ ಕರ್ನಾಟಕದ ಜ್ವಲಂತ ಸಮಸ್ಯೆಗಳ ಕುರಿತು ಹೆಚ್ಚಿನ ಚರ್ಚೆ ಆಗಬೇಕು ಎಂಬ ಬಯಕೆ ವಿರೋಧ ಪಕ್ಷಗಳದ್ದಾಗಿದೆ. ಈ ಕಾರಣಕ್ಕಾಗಿಯೇ ಧರಣಿ ಮುಂದುವರಿಸಬಾರದು ಎಂಬ ಯೋಚನೆಯಲ್ಲಿ ಇದ್ದೆವು. ಆದರೆ, ಸರ್ಕಾರ ಈಗ ನೀರು ಬಿಟ್ಟಿರುವುದು ಎಲ್ಲರಿಗೂ ಆಘಾತ ಉಂಟುಮಾಡಿದೆ. ನೀರು ನಿಲ್ಲಿಸುವವರೆಗೂ ಹೋರಾಟ ಅನಿವಾರ್ಯ' ಎಂದರು.ಆದೇಶ ಮರುಪರಿಶೀಲಿಸುವಂತೆ ಸರ್ಕಾರ ಸುಪ್ರೀಂಕೋರ್ಟ್‌ಗೆ ತಕ್ಷಣವೇ ಅರ್ಜಿ ಸಲ್ಲಿಸಿದ್ದರೆ ಇಂತಹ ಸಂದರ್ಭ ಸೃಷ್ಟಿಯಾಗುತ್ತಿರಲಿಲ್ಲ. ಈಗ ರಾಜ್ಯದ ಜನತೆಗೆ ದ್ರೋಹ ಮಾಡಿ ನೀರು ಬಿಡಲಾಗಿದೆ. ಆ ಭಾಗದ ಜನರ ಶಾಪಕ್ಕೆ ಸರ್ಕಾರ ಗುರಿಯಾಗುವುದು ಖಚಿತ. ರಾಜ್ಯದ ಹಿತ ರಕ್ಷಣೆಗಾಗಿ ಇಚ್ಛಾಶಕ್ತಿ ಪ್ರದರ್ಶಿಸಬೇಕಾದ ಬಿಜೆಪಿ ಹಲವು ಗುಂಪುಗಳಾಗಿ ಒಡೆದುಹೋಗಿದೆ ಎಂದು ತಿವಿದರು.ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ನೇತೃತ್ವದ ಕರ್ನಾಟಕ ಜನತಾ ಪಕ್ಷ ಹಾವೇರಿಯಲ್ಲಿ ಭಾನುವಾರ ನಡೆಸುತ್ತಿರುವ ಸಮಾವೇಶ, ಬಿಜೆಪಿಯ ಸಚಿವರು, ಶಾಸಕರು ಯಡಿಯೂರಪ್ಪ ಬೆಂಬಲಕ್ಕೆ ನಿಂತಿರುವ ವಿಷಯವನ್ನು ಪ್ರಸ್ತಾಪಿಸಿದ ಸಿದ್ದರಾಮಯ್ಯ, ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷರೂ ಆಗಿರುವ ಉಪ ಮುಖ್ಯಮಂತ್ರಿ ಕೆ.ಎಸ್.ಈಶ್ವರಪ್ಪ ಅವರನ್ನು ಕೆಣಕಿದರು. ಮಾತು ರಾಜಕೀಯದತ್ತ ಹೊರಳಿ ಗದ್ದಲ ಹೆಚ್ಚಾಯಿತು. ಸ್ಪೀಕರ್ ಕೆ.ಜಿ.ಬೋಪಯ್ಯ ಅರ್ಧ ಗಂಟೆ ಕಾಲ ಕಲಾಪ ಮುಂದೂಡಿದರು.ಅಷ್ಟರಲ್ಲಿ ಯಡಿಯೂರಪ್ಪ ಸುವರ್ಣಸೌಧಕ್ಕೆ ಬಂದರು. ಬೆಂಬಲಿಗ ಸಚಿವರು, ಶಾಸಕರು ಅವರನ್ನು ಹಿಂಬಾಲಿಸಿ ಹೋದರು. ಮತ್ತೆ ಸದನ ಸೇರುವಾಗ ಮಧ್ಯಾಹ್ನ 12.25 ಆಗಿತ್ತು. ಮಾತು ಮುಂದುವರಿಸಿದ ಸಿದ್ದರಾಮಯ್ಯ, ನೀರು ನಿಲ್ಲಿಸುವ ಭರವಸೆ ನೀಡುವಂತೆ ಪಟ್ಟು ಹಿಡಿದರು. ಅದಕ್ಕೆ ಸರ್ಕಾರ ಮಣಿಯದಿದ್ದಾಗ ಧರಣಿ ಮುಂದುವರಿಸಿದರು.ಹೇಳಿಕೆ ಪ್ರತಿ ಹರಿದರು: ನಂತರ ಮಾತನಾಡಿದ ಜೆಡಿಎಸ್ ಶಾಸಕಾಂಗ ಪಕ್ಷದ ಉಪ ನಾಯಕ ಬಂಡೆಪ್ಪ ಕಾಶೆಂಪುರ, `ರಾಜ್ಯದ ರೈತರ ಹಿತ ಕಾಯುವುದಾಗಿ ಮುಖ್ಯಮಂತ್ರಿಯವರು ಗುರುವಾರ ಸದನದಲ್ಲಿ ನೀಡಿದ್ದ ಮಾತನ್ನು ಉಳಿಸಿಕೊಂಡಿಲ್ಲ. ನಾಲ್ಕೂವರೆ ವರ್ಷಗಳಿಂದ ಸುಳ್ಳು ಹೇಳುತ್ತಾ ರಾಜ್ಯದ ಜನರನ್ನು ದಾರಿ ತಪ್ಪಿಸಿದ ಸರ್ಕಾರ, ಕಾವೇರಿ ವಿಷಯದಲ್ಲೂ ಸುಳ್ಳು ಹೇಳಿದೆ' ಎಂದು ಆಕ್ರೋಶ ವ್ಯಕ್ತಪಡಿಸಿ ಗುರುವಾರ ಮುಖ್ಯಮಂತ್ರಿಯವರು ನೀಡಿದ್ದ ಹೇಳಿಕೆಯ ಪ್ರತಿಯನ್ನು ಹರಿದು ಹಾಕಿದರು.ನ್ಯಾಯಾಂಗ ನಿಂದನೆ ಭೀತಿ: ಬಳಿಕ ಪ್ರತಿಪಕ್ಷಗಳ ಸದಸ್ಯರನ್ನು ಸಮಾಧಾನಪಡಿಸಲು ಕಾನೂನು ಸಚಿವ ಎಸ್.ಸುರೇಶಕುಮಾರ್ ಪ್ರಯತ್ನಿಸಿದರು. `ಗುರುವಾರ ರಾತ್ರಿ ರಾಜ್ಯದ ಪರ ವಕೀಲರಿಗೆ ಪತ್ರವೊಂದನ್ನು ಕಳುಹಿಸಿದ ತಮಿಳುನಾಡು ಸರ್ಕಾರದ ಪರ ವಕೀಲರು, ಸುಪ್ರೀಂಕೋರ್ಟ್ ಆದೇಶದಂತೆ ನೀರು ಬಿಡದೇ ಇರುವುದರಿಂದ ಶುಕ್ರವಾರ ಬೆಳಿಗ್ಗೆ 10.30ಕ್ಕೆ ಸುಪ್ರೀಂಕೋರ್ಟ್‌ನಲ್ಲಿ ಕರ್ನಾಟಕ ಸರ್ಕಾರದ ವಿರುದ್ಧ ನ್ಯಾಯಾಂಗ ನಿಂದನೆ ಮೊಕದ್ದಮೆ ಅರ್ಜಿ ಸಲ್ಲಿಸುವುದಾಗಿ ತಿಳಿಸಿದರು. ತಕ್ಷಣವೇ ನೀರು ಬಿಡುಗಡೆ ಮಾಡುವಂತೆ ನಮ್ಮ ವಕೀಲರು ಮತ್ತು ಕಾನೂನು ಸಲಹೆಗಾರರು ಸೂಚನೆ ನೀಡಿದರು. ಈ ಕಾರಣದಿಂದ ನೀರು ಬಿಡುವುದು ಅನಿವಾರ್ಯ ಆಯಿತು' ಎಂದರು.ರಾಜ್ಯದ ದೀರ್ಘಕಾಲೀನ ಹಿತವನ್ನು ಗಮನದಲ್ಲಿ ಇರಿಸಿಕೊಂಡು ಈ ಕ್ರಮ ಕೈಗೊಳ್ಳಲಾಗಿದೆ. ರಾಜ್ಯದ ಹಿತ ರಕ್ಷಿಸುವಂತೆ ಪ್ರಧಾನಿ ಮೇಲೆ ಒತ್ತಡ ತರಲು ಮುಖ್ಯಮಂತ್ರಿಯವರು ಸಂಸದರ ನಿಯೋಗ ಕರೆದೊಯ್ದಿದ್ದಾರೆ. ರಾಜ್ಯಕ್ಕೆ ನ್ಯಾಯ ದೊರಕಿಸಲು ಸರ್ಕಾರ ಪ್ರಾಮಾಣಿಕ ಪ್ರಯತ್ನ ನಡೆಸುತ್ತಿದೆ. ಸುಗಮ ಕಲಾಪ ನಡೆಸುವುದಕ್ಕೆ ಪೂರಕವಾಗಿ ಪ್ರತಿಪಕ್ಷಗಳು ಧರಣಿ ಹಿಂದಕ್ಕೆ ಪಡೆಯಬೇಕು ಎಂದು ಮನವಿ ಮಾಡಿದರು.ಆದರೆ, ಸರ್ಕಾರದ ಮನವಿಗೆ ಕಾಂಗ್ರೆಸ್, ಜೆಡಿಎಸ್ ಸದಸ್ಯರು ಕಿವಿಗೊಡಲಿಲ್ಲ. ತಕ್ಷಣವೇ ನೀರು ನಿಲ್ಲಿಸುವಂತೆ ಪಟ್ಟು ಹಿಡಿದರು. ಸಭಾಧ್ಯಕ್ಷರ ಪೀಠದ ಎದುರು ನಿಂತು ಸರ್ಕಾರದ ವಿರುದ್ಧ ಘೋಷಣೆ ಕೂಗಲಾರಂಭಿಸಿದರು. ಗದ್ದಲ ಮತ್ತಷ್ಟು ಹೆಚ್ಚಿತು. ಕಲಾಪ ನಡೆಸಲು ಅನುವು ಮಾಡಿಕೊಡುವಂತೆ ಸ್ಪೀಕರ್ ಮಾಡಿದ ಮನವಿಯೂ ವ್ಯರ್ಥವಾಯಿತು. ಸದನ ನಿಯಂತ್ರಣಕ್ಕೆ ಬಾರದೇ ಇದ್ದಾಗ, ಕಲಾಪವನ್ನು ಸೋಮವಾರದವರೆಗೆ ಮುಂದೂಡಿರುವುದಾಗಿ ಬೋಪಯ್ಯ ಪ್ರಕಟಿಸಿದರು.ಪರಿಷತ್‌ನಲ್ಲೂ ಗದ್ದಲ: ವಿಧಾನ ಪರಿಷತ್‌ನಲ್ಲಿ ನಿಗದಿಯಂತೆ ಬೆಳಿಗ್ಗೆ 10 ಗಂಟೆಗೆ ಕಲಾಪ ಆರಂಭವಾಯಿತು. ಕಾಂಗ್ರೆಸ್ ಮತ್ತು ಜೆಡಿಎಸ್ ಸದಸ್ಯರು ಧರಣಿ ಮುಂದುವರಿಸಿದರು. ಜೆಡಿಎಸ್ ನಾಯಕ ಎಂ.ಸಿ.ನಾಣಯ್ಯ ಮತ್ತು ಕಾಂಗ್ರೆಸ್‌ನ ವೀರಣ್ಣ ಮತ್ತಿಕಟ್ಟಿ, `ಮುಖ್ಯಮಂತ್ರಿಯವರು ಸದನಕ್ಕೆ ಸುಳ್ಳು ಮಾಹಿತಿ ನೀಡಿ, ಕೆಆರ್‌ಎಸ್‌ನಿಂದ ನೀರು ಬಿಡಿಸಿದ್ದಾರೆ' ಎಂದು ಟೀಕಾಪ್ರಹಾರ ಮಾಡಿದರು. ನೀರು ನಿಲ್ಲಿಸುವವರೆಗೆ ಧರಣಿ ಹಿಂದಕ್ಕೆ ಪಡೆಯುವುದಿಲ್ಲ ಎಂದು ಹಟ ಹಿಡಿದರು.ಸಭಾ ನಾಯಕರೂ ಆಗಿರುವ ವಸತಿ ಸಚಿವ ವಿ.ಸೋಮಣ್ಣ, ಪ್ರತಿಪಕ್ಷಗಳ ಸದಸ್ಯರನ್ನು ಸಮಾಧಾನಿಸಲು ಯತ್ನಿಸಿದರು. ಈ ಪ್ರಯತ್ನ ಕೈಗೂಡಲಿಲ್ಲ. ಧರಣಿ ಮುಂದುವರಿದಾಗ ಸಭಾಪತಿ ಡಿ.ಎಚ್.ಶಂಕರಮೂರ್ತಿ ಅರ್ಧ ಗಂಟೆ ಮಟ್ಟಿಗೆ ಕಲಾಪ ಮುಂದೂಡಿದರು. ಮತ್ತೆ ಸದನ ಸೇರಿದಾಗ 11.30 ಆಗಿತ್ತು. ಆಗಲೂ ಪ್ರತಿಪಕ್ಷಗಳು ಪಟ್ಟು ಸಡಿಲಿಸಲಿಲ್ಲ. ಧರಣಿ ಹಿಂದಕ್ಕೆ ಪಡೆಯುವಂತೆ ಉಪ ಮುಖ್ಯಮಂತ್ರಿ ಆರ್.ಅಶೋಕ ಮಾಡಿದ ಮನವಿಯನ್ನೂ ಲೆಕ್ಕಿಸಲಿಲ್ಲ. ಸದನವನ್ನು ಸುಸ್ಥಿತಿಗೆ ತರಲು ಹಲವು ಬಾರಿ ಪ್ರಯತ್ನಿಸಿದ ಸಭಾಪತಿ, ಕಲಾಪವನ್ನು ಸೋಮವಾರಕ್ಕೆ ಮುಂದೂಡಿದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry