ಗುರುವಾರ , ಮೇ 26, 2022
23 °C

ಜನತೆಯ ಅಭಿವೃದ್ಧಿಯೇ ಬ್ಯಾಂಕ್ ಪ್ರಗತಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಚಿತ್ತಾಪುರ:  ಜನತೆಯ ಸಮಗ್ರ ಅಭಿವೃದ್ಧಿಯೇ ಬ್ಯಾಂಕ್‌ನ ಪ್ರಗತಿ. ಜನರ ಒಳಿತಿಗಾಗಿ ಸ್ಥಾಪನೆಯಾದ ಬ್ಯಾಂಕ್ ಜನರಿಗೆ ಉತ್ತಮ ಸೇವೆ ನೀಡುವ ಮೂಲಕ ಅಭಿವೃದ್ಧಿಯ ಪಥದಲ್ಲಿ ಸಾಗಿದೆ ಎಂದರೆ ಜನತೆ ಅಭಿವೃದ್ಧಿ ಸಾಧಿಸುತ್ತಿದ್ದಾರೆ ಎನ್ನುವುದು ಖಚಿತವಾಗುತ್ತದೆ ಎಂದು ಕೃಷ್ಣಾ ಗ್ರಾಮೀಣ ಬ್ಯಾಂಕ್ ಗುಲ್ಬರ್ಗದ ಅಧ್ಯಕ್ಷ ವಿ.ಎಂ. ಹಾಗರಗಿ ಹೇಳಿದರು.ತಾಲ್ಲೂಕಿನ ದಂಡೋತಿ ಗ್ರಾಮದಲ್ಲಿ ಮಂಗಳವಾರ ಹಮ್ಮಿಕೊಂಡಿದ್ದ 18ನೇ ವರ್ಷದ ಸ್ವಯಂಪ್ರೇರಿತ ಸಾಲ ಮರುಪಾವತಿ ಶಿಬಿರ ಉದ್ಘಾಟಿಸಿ ಮಾತನಾಡಿದ ಅವರು, “ನಿಷ್ಕ್ರಿಯವಾಗಿರುವ ಸ್ವಸಹಾಯ ಸಂಘಗಳ ಪುನರುಜ್ಜೀವನಕ್ಕೆ ಬೇಕಾದ ಅಗತ್ಯ ಕ್ರಮ ತೆಗೆದುಕೊಂಡು ಸಹಾಯ ಮಾಡುವ ಕೆಲಸ ಮಾಡಲಾಗುವುದು” ಎಂದರು.

ಸಾಲ ಮರುಪಾವತಿ ಬಗ್ಗೆ ಬ್ಯಾಂಕಿನ ಎಲ್ಲ ಶಾಖೆಗಳಲ್ಲಿ ಶಿಬಿರ ನಡೆಸುವ ಕಾರ್ಯಕ್ರಮ ಕೈಗೊಳ್ಳಲಾಯಿತು. ಆದರೆ ಸಾಧ್ಯವಾಗಲಿಲ್ಲ. ಈ ನೂತನ ಪ್ರಯೋಗ ಮಾತ್ರ ದಂಡೋತಿ ಗ್ರಾಮದಲ್ಲಿರುವ ಶಾಖೆಯಲ್ಲಿ ಅದರ ಸೇವಾಕ್ಷೇತ್ರಗಳ ಗ್ರಾಮಗಳ ರೈತರ, ವ್ಯಾಪಾರಸ್ಥರ ಸಹಕಾರದಿಂದ ಯಶಸ್ವಿಯಾಗಿದೆ. ಇದು ದೇಶಕ್ಕೆ ಮಾದರಿಯಾಗಿದೆ. ಇದನ್ನು ದೇಶದ ತುಂಬಾ ಪ್ರಚಾರ ಮಾಡಲು ವ್ಯವಸ್ಥೆ ಮಾಡಲಾಗುತ್ತಿದೆ ಎಂದು ವಿವರಿಸಿದರು.ಬ್ಯಾಂಕ್‌ನ ಪ್ರಧಾನ ವ್ಯವಸ್ಥಾಪಕರಾದ ಟಿ. ನಾಗಪ್ಪ, ಭಕ್ತವಚಲಂ, ಪ್ರಾದೇಶಿಕ ವ್ಯವಸ್ಥಾಪಕ ಕೆ.ಬಿ. ಜಾಧವ್, ಮಹಾಪ್ರಬಂಧಕ ಸುಧೀಂದ್ರರಾವ್ ಮುಖ್ಯ ಅತಿಥಿಗಳಾಗಿದ್ದರು. ಪ್ರಗತಿಪರ ರೈತರಾದ ರಾಜಶೇಖರ ತಿಮ್ಮನಾಯಕ, ಮಹ್ಮದ್ ಉಸ್ಮಾನ್ ಸೌದಾಗರ, ಅಜೀಜುದ್ದೀನ್ ಸರಡಗಿ ಮಾತನಾಡಿ, ಬ್ಯಾಂಕ್‌ನ ಸೇವೆ ಶ್ಲಾಘಿಸಿದರು.ಪ್ರಗತಿಪರ ರೈತರಾದ ಚಂದ್ರಶೇಖರ ವಾರದ, ಸೀತಾರಾಂ ಆಚಾರ್ಯ, ಶ್ರೀಮಂತ ದಿಡ್ಡಿಮನಿ, ನರಸಪ್ಪ ವಾಲೀಕಾರ, ರೇವಣಸಿದ್ದಪ್ಪ ಪಾಟೀಲ್ ಅವರಿಗೆ ಬ್ಯಾಂಕ್ ವತಿಯಿಂದ ವಿ.ಎಂ. ಹಾಗರಗಿ ಸನ್ಮಾನಿಸಿದರು. ಸ್ತ್ರೀಶಕ್ತಿ ಸಂಘಗಳನ್ನು ಸರಿಯಾಗಿ ನಿರ್ವಹಣೆ ಮಾಡಿ ಬ್ಯಾಂಕ್‌ಗೆ ಸಹಕರಿಸಿದ ಅಂಗನವಾಡಿ ಕಾರ್ಯಕರ್ತೆಯರಾದ ಅಕ್ಕಮಹಾದೇವಿ, ಶಕುಂತಲಾ ಅವರನ್ನು ಸನ್ಮಾನಿಸಲಾಯಿತು.ಶಾಖಾ ವ್ಯವಸ್ಥಾಪಕ ಕೆ.ವೈ.ದೇವಿಕೇರಿ ಪ್ರಾರ್ಥಿಸಿದರು. ಸಾಹೇಬಗೌಡ ಮೂಲಿಮನಿ ನಿರೂಪಿಸಿದರು. ಸುರೇಶ ನೀಲಂಗಿ ವಂದಿಸಿದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.