ಜನತೆ ದಾರಿ ತಪ್ಪಿಸುತ್ತಿರುವ ಮುಖ್ಯಮಂತ್ರಿ:ರೇವಣ್ಣ

7

ಜನತೆ ದಾರಿ ತಪ್ಪಿಸುತ್ತಿರುವ ಮುಖ್ಯಮಂತ್ರಿ:ರೇವಣ್ಣ

Published:
Updated:

ಸಾಲಿಗ್ರಾಮ: ವಿಧಾನ ಸೌಧದಲ್ಲಿ ಮೂವರು ಸಚಿವರು ನೀಲಿಚಿತ್ರ ವೀಕ್ಷಿಸಿ ಮಾಧ್ಯಮದ ಎದುರು ಸಿಕ್ಕಿಕೊಂಡಿದ್ದರೂ ಸದನ ಸಮತಿ ನೇಮಕ ಮಾಡುವುದಾಗಿ ಹೇಳುತ್ತಿರುವ ಮುಖ್ಯಮಂತ್ರಿ ಸದಾನಂದಗೌಡ ಜನತೆಯನ್ನು ದಾರಿ ತಪ್ಪಿಸುತ್ತಿದ್ದಾರೆ ಎಂದು ಜೆಡಿಎಸ್ ಶಾಸಕಾಂಗ ಪಕ್ಷದ ನಾಯಕ ಎಚ್.ಡಿ. ರೇವಣ್ಣ ಕಿಡಿ ಕಾರಿದರು.ಪಟ್ಟಣದಲ್ಲಿ ನಿರ್ಮಿಸಿರುವ ಮಹಿಳಾ ಸರ್ಕಾರಿ ಪದವಿಪೂರ್ವ ಕಾಲೇಜು ಕಟ್ಟಡವನ್ನು ಶನಿವಾರ ಉದ್ಘಾಟಿಸಿ ಮಾತನಾಡಿದ ಅವರು, ಮುಖ್ಯಮಂತ್ರಿ ಕುಮಾರಸ್ವಾಮಿ ಅವರು ಮುಖ್ಯಮಂತ್ರಿ ಯಾಗಿದ್ದಾಗ ರಾಜ್ಯದಲ್ಲಿ 1200 ಪದವಿಪೂರ್ವ ಕಾಲೇಜು ಮಂಜೂರು ಮಾಡಿ, ರೂ.600 ಕೋಟಿ ಅನುದಾನ ಬಿಡುಗಡೆ ಮಾಡಿದ್ದರು. ಹೊಳೆನರಸೀಪುರ ಸಾಲಿಗ್ರಾಮ ಮಾರ್ಗದ ರಸ್ತೆ ಅಭಿವೃದ್ಧಿಗೆ ರೂ.100 ಕೋಟಿ ಮೀಸಲಿಟ್ಟಿದ್ದರು.ಇದರೊಂದಿಗೆ ರಾಮನಗರ ಮಾಗಡಿ ಮಾರ್ಗ ಸಾಲಿಗ್ರಾಮ ರಸ್ತೆ ಅಭಿವೃದ್ಧಿಗೆ ರೂ.200 ಕೋಟಿ ಅನುದಾನ ಮೀಸಲಿಟ್ಟಿದ್ದರು. ನಂತರ ಬಂದ ಬಿ.ಎಸ್. ಯಡಿಯೂರಪ್ಪ ರಾಜಕೀಯ ದ್ವೇಷದಿಂದ ಕುಮಾರ ಸ್ವಾಮಿ ಮಂಜೂರು ಮಾಡಿದ್ದ ಯೋಜನೆಗಳನ್ನು ಮೂಲೆಗುಂಪು ಮಾಡಿದರು ಎಂದು ದೂರಿದರು.ರಾಜ್ಯದಲ್ಲಿ ಬಿಜೆಪಿ ಸರ್ಕಾರ ಅಧಿಕಾರಕ್ಕೆ ಬಂದ ನಂತರ ಕನ್ನಡ ಶಾಲೆ ಮುಚ್ಚುತ್ತಿರುವುದೇ ಆ ಪಕ್ಷದ ಸಾಧನೆ. ಗ್ರಾಮೀಣ ಪ್ರದೇಶಗಳಿಗೆ ಸೌಲಭ್ಯ ಕಲ್ಪಿಸುವ ಶಕ್ತಿ ಇಲ್ಲದ ಈ ಸರ್ಕಾರದಿಂದ ಗ್ರಾಮೀಣ ಜನರು ಏನನ್ನು ನಿರೀಕ್ಷಿಸಲು ಸಾಧ್ಯ ಎಂದು ಪ್ರಶ್ನಿಸಿದರು. ಶಾಸಕ ಸಾ.ರಾ. ಮಹೇಶ್ ಮಾತನಾಡಿದರು. ಗ್ರಾಮ ಪಂಚಾಯಿತಿ ಅಧ್ಯಕ್ಷ ಎಸ್.ಕೆ. ಶಿವಣ್ಣ, ತಾಲ್ಲೂಕು ಪಂಚಾಯಿತಿ ಅಧ್ಯಕ್ಷೆ ಹೇಮಾವತಿ, ಜಿಲ್ಲಾ ಪಂಚಾಯಿತಿ ಸದಸ್ಯ           ದ್ವಾರಕೀಶ್, ಜೆಡಿಎಸ್ ಮುಖಂಡ ಮೆಡಿಕಲ್ ರಾಜಣ್ಣ, ಎಂ.ಟಿ. ಕುಮಾರ್, ಎ.ಟಿ. ಸೋಮಶೇಖರ್, ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿ ಸದಸ್ಯ ಕುಪ್ಪಳ್ಳಿ ಸೋಮು ಮತ್ತು ಎಸ್.ಎಸ್. ಪ್ರಕಾಶ್‌ಗೌಡ, ತಾಲ್ಲೂಕು ಜೆಡಿಎಸ್ ಅಧ್ಯಕ್ಷ ಚಂದ್ರಶೇಖರ್, ಪಿಎಲ್‌ಡಿ ಬ್ಯಾಂಕ್ ಅಧ್ಯಕ್ಷೆ ರಾಮಕೃಷ್ಣೇಗೌಡ ಮತ್ತು  ದಿನೇಶ್  ಹಾಜರಿದ್ದರು.

 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry