ಗುರುವಾರ , ನವೆಂಬರ್ 21, 2019
20 °C

`ಜನದ್ರೋಹ ಎಂದಿಗೂ ಮಾಡಲಿಲ್ಲ'

Published:
Updated:

ಗುಲ್ಬರ್ಗ: `ರಾಮಕೃಷ್ಣ ಹೆಗಡೆಯವರ ಕಾಲ 1983ರಿಂದಲೂ ಜನತಾ ಪರಿವಾರದೊಂದಿಗೆ ಗುರುತಿಸಿಕೊಂಡು ಬಂದಿದ್ದೇನೆ. ಪಕ್ಷ ಹೇಳಿದ ಕೆಲಸವನ್ನೆಲ್ಲ ಶಿರಸಾವಹಿಸಿ ಅನುಸರಿಸಿದ್ದೇನೆ. ಸಚಿವ ಸ್ಥಾನದಲ್ಲಿರಲಿ, ಇಲ್ಲದಿರಲಿ ಜನರಿಗೆ ದ್ರೋಹ ಬಗೆಯುವ ಕೆಲಸ ಯಾವತ್ತೂ ಮಾಡಿಲ್ಲ' ಎಂದು ಮಾಜಿ ಸಚಿವ ಎಸ್.ಕೆ. ಕಾಂತಾ ಶುಕ್ರವಾರ ಇಲ್ಲಿ ಹೇಳಿದರು.ನೂತನ ವಿದ್ಯಾಲಯ ಮೈದಾನದಲ್ಲಿ ಆಯೋಜಿಸಿದ್ದ `ಕೆಜೆಪಿ ನಡೆ ವಿಧಾನಸೌಧದ ಕಡೆ' ಗುಲ್ಬರ್ಗ ದಕ್ಷಿಣ ಮತಕ್ಷೇತ್ರದ ಕಾರ್ಯಕರ್ತರ ಸಮಾವೇಶದಲ್ಲಿ ಮಾತನಾಡಿದರು. `ಮೊದಲಿನಿಂದಲೂ ಮಾನ, ಮರ್ಯಾದೆ ಇಟ್ಟುಕೊಂಡು ಜೀವನ ನಡೆಸಿದ್ದೇನೆ. ಈಚೆಗೆ ನಡೆದ ಮಹಾನಗರ ಪಾಲಿಕೆ ಚುನಾವಣೆಯಲ್ಲಿ ನಾನು ಬಯಸಿದ್ದ ಇಬ್ಬರು ದಲಿತರಿಗೆ, ಮೂವರು ಅಲ್ಪಸಂಖ್ಯಾತರಿಗೆ ನನ್ನೆದುರು ಟಿಕೆಟ್ ನೀಡಿ, ಬೆಳಗಾಗುವುದರೊಳಗೆ ಕಸಿದುಕೊಳ್ಳಲಾಯಿತು. ಮರ್ಯಾದೆ ಇಲ್ಲದ ಮೇಲೆ ಜೆಡಿಎಸ್‌ನಲ್ಲಿ ಇರುವುದಕ್ಕೆ ಮನಸ್ಸು ಒಪ್ಪಲಿಲ್ಲ' ಎಂದರು.

`ರಾಜಕೀಯದಿಂದಲೇ ವಿಮುಖನಾಗಬೇಕೆಂದಿದ್ದ ನನಗೆ ಜನತಾ ಪರಿವಾರ ಸ್ನೇಹಿತರೆಲ್ಲ ಒತ್ತಾಯ ಮಾಡಿದ್ದರಿಂದ ಮತ್ತೆ ರಾಜಕೀಯ ಸೇರ್ಪಡೆಯಾಗಬೇಕಾಯಿತು. ನನ್ನ ಮೇಲೆ ಪ್ರೀತಿ ಇಟ್ಟು ಗುಲ್ಬರ್ಗ ದಕ್ಷಿಣಕ್ಕೆ ಕೆಜೆಪಿ ಅಭ್ಯರ್ಥಿ ಎಂದು ಯಡಿಯೂರಪ್ಪ ಘೋಷಿಸಿದರು. 20 ವರ್ಷದಿಂದ ಎಲ್ಲ ವೃತ್ತಿಯವರನ್ನು ಗೌರವದಿಂದ ಕಾಣುತ್ತಾ, ಜನರ ಸೇವೆ ಮಾಡುತ್ತಾ ಬಂದಿದ್ದೇನೆ. ಇದು ನನ್ನ ಕೊನೆಯ ಚುನಾವಣೆ, ಆಯ್ಕೆ ಮಾಡುವುದು ಬಿಡುವುದು ಜನರಿಗೆ ಬಿಟ್ಟ ವಿಚಾರ' ಎಂದು ಹೇಳಿದರು.`ರಾಜ್ಯದಲ್ಲಿ ಆಡಳಿತ ನಡೆಸಿದ ಎಲ್ಲ ಮುಖ್ಯಮಂತ್ರಿಗಳ  ಸಾಧನೆಯನ್ನು ತುಲನೆ ಮಾಡಿ ಮತದಾನ ಮಾಡಿ' ಮಾಜಿ ಸಚಿವೆ ಶೋಭಾ ಕರಂದ್ಲಾಜೆ ಕೋರಿದರು. `ವಿಧವಾ ವೇತನವನ್ನು ರೂ 100ರಿಂದ ರೂ 400ಕ್ಕೆ, ಸಂಧ್ಯಾ ಸುರಕ್ಷೆ ಯೋಜನೆ ಜಾರಿಗೊಳಿಸಿ 65 ವರ್ಷ ಮೇಲ್ಪಟ್ಟವರಿಗೆಲ್ಲ ರೂ 400 ಮಾಸಾಶನ, ಅಂಗವಿಕಲರ ಮಾಸಾಶನವನ್ನು ರೂ 400ರಿಂದ ರೂ 1000ಕ್ಕೆ, ಬಡವರಿಗೆ ರೂ 2 ಲಕ್ಷದವರೆಗೂ ಉಚಿತ ವೈದ್ಯಕೀಯ ಚಿಕಿತ್ಸೆ, ಎಸ್‌ಸಿ/ಎಸ್‌ಟಿ ವಸತಿ ನಿಲಯಗಳಿಗೆ ವಿದ್ಯಾರ್ಥಿ ಭತ್ಯೆಯನ್ನು ರೂ 400ರಿಂದ ರೂ 750ಕ್ಕೆ ಏರಿಕೆ.. ಮುಂತಾದ ಹೊಸ ಯೋಜನೆಗಳನ್ನು ಬಿ.ಎಸ್. ಯಡಿಯೂರಪ್ಪ ಒಂದೇ ನಿರ್ಧಾರದಲ್ಲಿ ಜಾರಿಗೊಳಿಸಿದ್ದಾರೆ' ಎಂದರು.ಗುಲ್ಬರ್ಗ ಉತ್ತರ ಮತಕ್ಷೇತ್ರದ ಕೆಜೆಪಿ ನಿಯೋಜಿತ ಅಭ್ಯರ್ಥಿ ನಾಸೀರ್ ಹುಸೇನ್ ಉಸ್ತಾದ ಮಾತನಾಡಿ, `ದೇಶದಲ್ಲಿ ಕಾಂಗ್ರೆಸ್ ಹಾಗೂ ಇನ್ನುಳಿದ ಪಕ್ಷಗಳು ಮುಸಲ್ಮಾನರನ್ನು ಬರೀ ಮತಬ್ಯಾಂಕ್ ರೀತಿಯಲ್ಲಿ ಬಳಸಿಕೊಳ್ಳುತ್ತಾ ಬಂದಿವೆ. ಕರ್ನಾಟಕದಲ್ಲಿ 50 ವರ್ಷ ಕಳೆದರೂ ಮುಸ್ಲಿಂ ಅಭಿವೃದ್ಧಿ ಅನುದಾನ ರೂ 40 ಕೋಟಿಯಷ್ಟಿತ್ತು. ಬಿ.ಎಸ್. ಯಡಿಯೂರಪ್ಪ ಮುಖ್ಯಮಂತ್ರಿಯಾದ ನಂತರ ಮೂರು ವರ್ಷಗಳ ಅವಧಿಯಲ್ಲಿ ಆ ಮೊತ್ತವು ರೂ 200 ಕೋಟಿ ದಾಟಿದೆ. ಬೆಂಗಳೂರಿನಲ್ಲಿ 10 ಎಕರೆ ಜಮೀನು ಹಾಗೂ ರೂ 40 ಕೋಟಿ ಅನುದಾನ ಒದಗಿಸಿ ಹಜ್ ಭವನ ನಿರ್ಮಾಣವಾಗಲು ಬಿಎಸ್‌ವೈ ಕಾರಣರಾಗಿದ್ದಾರೆ' ಎಂದರು.ಕೆಜೆಪಿ ಗುಲ್ಬರ್ಗ ನಗರ ಘಟಕದ ಅಧ್ಯಕ್ಷ ಬಸವರಾಜ ಇಂಗಿನ್ ಮತ್ತಿತರರು ಮಾತನಾಡಿದರು. ಮಾಜಿ ಉಪಸಭಾಪತಿ ಬಿ.ಆರ್. ಪಾಟೀಲ, ಸಿ. ಗುರುನಾಥ, ವಿಕ್ರಮ ಪಾಟೀಲ, ಮಾಜಿ ಸಚಿವ ಸುನೀಲ ವಲ್ಯ್‌ಪುರ, ಎಂ.ವೈ. ಪಾಟೀಲ, ಮಲ್ಲಿನಾಥ ಪಾಟೀಲ, ಪ್ರಭುಲಿಂಗ ಹಾದಿಮನಿ, ತಿಪ್ಪಣ್ಣಪ್ಪ ಕಮಕನೂರ ಮತ್ತಿತರ ಗಣ್ಯರು ವೇದಿಕೆಯಲ್ಲಿ ಹಾಜರಿದ್ದರು.

ಪ್ರತಿಕ್ರಿಯಿಸಿ (+)