ಜನನ-ಮರಣ ದಾಖಲಾತಿ ಕಡ್ಡಾಯ

6
ನಾಗರಿಕ ನೋಂದಣಿ ಪದ್ಧತಿ ಜಿಲ್ಲಾಮಟ್ಟದ ಸಮನ್ವಯ ಸಮಿತಿ ಸಭೆ

ಜನನ-ಮರಣ ದಾಖಲಾತಿ ಕಡ್ಡಾಯ

Published:
Updated:

ಚಿತ್ರದುರ್ಗ: ಜನನ- ಮರಣ ದಾಖಲಿಸುವುದು ಕಡ್ಡಾಯವಾಗಿದ್ದು, ಇದರ ದಾಖಲಾತಿ, ಮಾಹಿತಿ ಸಂಗ್ರಹಣೆ ಹಾಗೂ ವರದಿಗಳನ್ನು ವ್ಯವಸ್ಥಿತವಾಗಿ ಸಿದ್ಧಪಡಿಸಿ ವರದಿ ಸಲ್ಲಿಸುವಾಗ ಅಗತ್ಯ ಕ್ರಮವಹಿಸಬೇಕು ಎಂದು ಜಿಲ್ಲಾಧಿಕಾರಿ ವಿ.ಪಿ. ಇಕ್ಕೇರಿ ಸೂಚಿಸಿದರು.ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಈಚೆಗೆ ನಡೆದ ನಾಗರಿಕ ನೋಂದಣಿ ಪದ್ಧತಿ ಜಿಲ್ಲಾಮಟ್ಟದ ಸಮನ್ವಯ ಸಮಿತಿ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.ಗ್ರಾಮಾಂತರ ನಗರ ಪ್ರದೇಶದ ಆಸ್ಪತ್ರೆಗಳಲ್ಲಿ ಹಾಗೂ ನರ್ಸಿಂಗ್ ಹೋಂಗಳಲ್ಲಿ ಜನಿಸುವ ಎಲ್ಲ ಮಕ್ಕಳನ್ನು ದಾಖಲಿಸಿ ವರದಿ ಸಂಗ್ರಹಿಸಿ ಕ್ರೋಡೀಕರಿಸಿಕೊಂಡು ವರದಿ ನೀಡುವಂತೆ ತಹಶೀಲ್ದಾರ್ ಮತ್ತು ಪುರಸಭೆ ಅಧಿಕಾರಿಗಳಿಗೆ ತಿಳಿಸಿದರು.ಜನಿಸುವ ಮಕ್ಕಳ ದಾಖಲಾತಿ ವಿವರಗಳನ್ನು ಸಂಗ್ರಹಿಸುವಲ್ಲಿ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಹಾಗೂ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಅಧಿಕಾರಿಗಳ ಸಹಯೋಗವನ್ನು ಪಡೆಯುವಂತೆ ಜಿಲ್ಲಾಧಿಕಾರಿ ಸಭೆಯಲ್ಲಿ ತಿಳಿಸಿದರು.ಅಂಕಿ-ಅಂಶಗಳ ಸಂಗ್ರಹಣ ಮಾಡುವುದು ಪ್ರಾಥಮಿಕ ಜವಾಬ್ದಾರಿ ಆಗಿರುತ್ತದೆ. ಯಾವುದೇ ಯೋಜನೆ ಸಿದ್ಧಪಡಿಸುವಲ್ಲಿ ಪ್ರಾಥಮಿಕ ಮಾಹಿತಿ ಬಹುಮುಖ್ಯವಾಗಿದ್ದು, ಅಂಕಿ- ಅಂಶಗಳನ್ನು ಕ್ರೋಡೀಕರಿಸಿ ವರದಿ ಸಿದ್ಧಪಡಿಸುವಲ್ಲಿ ಹೆಚ್ಚಿನ ಆಸಕ್ತಿ ವಹಿಸುವಂತೆ ಅಧಿಕಾರಿಗಳಿಗೆ ಸಲಹೆ ನೀಡಿದರು.ಜಿಲ್ಲೆಯಲ್ಲಿ ಅವಶ್ಯಕವಾಗಿ ಬೇಕಾಗಿರುವಂತಹ ಕಾರ್ಯಕ್ರಮಗಳು ಹಾಗೂ ಯೋಜನೆಗಳನ್ನು ಕೈಗೊಳ್ಳಲು ಅನುಕೂಲವಾಗಲು ಅಗತ್ಯ ಅಂಕಿ-ಅಂಶಗಳನ್ನು ಸಂಗ್ರಹಿಸುವ ಬಗ್ಗೆಯೂ ಚಿಂತನೆ ಹರಿಸುವಂತೆ ಅಧಿಕಾರಿಗಳಿಗೆ ತಿಳಿಸಿದರು.ಕೃಷಿ ಅಂಕಿ-ಅಂಶಗಳ ಮಹತ್ವದ ಕುರಿತು ಪಹಣಿ ಸಿದ್ಧಪಡಿಸುವುದು ಬಹಳ ಅವಶ್ಯಕವಾಗಿದ್ದು, ಪಹಣಿಯಲ್ಲಿ ಬೆಳೆಗಳ ದಾಖಲಾತಿ ಮತ್ತು ಬೆಳೆ ಕಟಾವು ಪ್ರಯೋಗಗಳನ್ನು ಕೈಗೊಳ್ಳುವ ಬಗ್ಗೆ ಅಧಿಕಾರಿಗಳಿಗೆ ಮತ್ತು ಗ್ರಾಮ ಪಂಚಾಯ್ತಿ ಚುನಾಯಿತ ಪ್ರತಿನಿಧಿಗಳ್ಲ್ಲಲಿ ಅರಿವು ಮೂಡಿಸುವ ಕೆಲಸ ಅವಶ್ಯಕವಾಗಿದ್ದು, ಈ ಬಗ್ಗೆ ತರಬೇತಿ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುವಂತೆ ಅಧಿಕಾರಿಗಳಿಗೆ ತಿಳಿಸಿದರು.ಸಭೆಗೆ ಅಧಿಕಾರಿಗಳ ಗೈರು: ಪಹಣಿಯಲ್ಲಿ ಬೆಳೆ ವಿವರ ದಾಖಲಿಸುವಂತಹ ಹಾಗೂ ಬೆಳೆ ಕಟಾವು ಪ್ರಯೋಗಗಳನ್ನು ನಡೆಸುವ ಬಗ್ಗೆ ಅರಿವು ಮೂಡಿಸುವುದು, ಮಹತ್ವದ ಸಭೆ ಆಗಿರುವುದರಿಂದ ಈ ಸಭೆಗೆ ಹಾಜರಾಗದ ತಾಲ್ಲೂಕು ಪಂಚಾಯ್ತಿ ಕಾರ್ಯನಿರ್ವಾಹಕ ಅಧಿಕಾರಿಗಳು, ಸಹಾಯಕ ಕೃಷಿ ನಿರ್ದೇಶಕರು ಗೈರಾಗಿರುವುದರ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದ ಜಿಲ್ಲಾಧಿಕಾರಿಗಳು ಈ ಬಗ್ಗೆ ಗೈರು ಹಾಜರಾಗಿರುವ ಅಧಿಕಾರಿಗಳಿಗೆ ಕರ್ತವ್ಯ ನಿರ್ಲಕ್ಷ್ಯ ತೋರಿದ್ದಾರೆ ಎಂದು ತಿಳಿಸಿ ಇವರಿಗೆ ಕಾರಣ ಕೇಳಿ ನೋಟಿಸ್ ನೀಡುವಂತೆ ಜಿಲ್ಲಾಧಿಕಾರಿ ಸೂಚಿಸಿದರು.ಜಿಲ್ಲಾ ಪಂಚಾಯ್ತಿ ಮುಖ್ಯ ಕಾರ್ಯ ನಿರ್ವಹಣಾಧಿಕಾರಿ ಕೆ.ಎಂ. ನಾರಾಯಣಸ್ವಾಮಿ, ಬೆಳೆ ಅಂದಾಜು ಸಮೀಕ್ಷೆ ಮತ್ತು ಬೆಳೆವಿಮಾ ಯೋಜನೆ ಅಡಿಯಲ್ಲಿ ಕೈಗೊಂಡು ಪ್ರಯೋಗದ ಬಗ್ಗೆ ಮಾತನಾಡಿ, ಬೆಳೆ ಕಟಾವು ಪ್ರಯೋಗಗಳನ್ನು ಕರಾರುವಾಕ್ಕಾಗಿ ಕೈಗೊಳ್ಳಬೇಕು. ಬೆಳೆ ಕಟಾವು ಪ್ರಯೋಗ ಕೈಗೊಳ್ಳಲು ಇತರ ಇಲಾಖೆ ಅಧಿಕಾರಿ, ಸಿಬ್ಬಂದಿಯ ಸಹಯೋಗದೊಂದಿಗೆ ನಡೆಸುವಂತೆಯೂ ಹಾಗೂ ಹಳೆ ಪದ್ಧತಿಯ ತಕ್ಕಡಿ ಹಾಗೂ ತೂಕದ ಬಟ್ಟು ಬಳಕೆಯ ಬದಲಾಗಿ ಡಿಜಿಟಲ್ ತೂಕದ ಯಂತ್ರಗಳನ್ನು ಉಪಯೋಗಿಸಿದಲ್ಲಿ ನಿಖರತೆ ಹಾಗೂ ಕರಾರುವಾಕ್ಕಾಗಿ ಇಳುವರಿ ಮಾಹಿತಿಯನ್ನು ಸಂಗ್ರಹಿಸಬಹುದಾಗಿದೆ. ಈ ದಿಸೆಯಲ್ಲಿ ಡಿಜಿಟಲ್ ತೂಕದ ಯಂತ್ರ ಬಳಕೆ ಮಾಡುವ ಬಗ್ಗೆ ಅಧಿಕಾರಿಗಳಿಗೆ ತಿಳಿಸಿದರು.ಜಿಲ್ಲಾ ಅಂಕಿ-ಅಂಶಗಳ ಅಧಿಕಾರಿ ಡಿ. ಚಂದ್ರಪ್ಪ ಸ್ವಾಗತಿಸಿದರು. ಉಪ ವಿಭಾಗಾಧಿಕಾರಿ ನಾಗರಾಜ್ ಇದ್ದರು. 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry