ಜನಪದ ಮತ್ತು ನೀಲು- ಇದು ಟೋನಿಯ ಬಾಂಡ್ ಸ್ಟೈಲು

ಬುಧವಾರ, ಜೂಲೈ 17, 2019
25 °C

ಜನಪದ ಮತ್ತು ನೀಲು- ಇದು ಟೋನಿಯ ಬಾಂಡ್ ಸ್ಟೈಲು

Published:
Updated:

`ನೀವು ನನ್ನನ್ನು ನಟಿಸಲೇ ಬಿಡುತ್ತಿಲ್ಲ!~ - ನಾಯಕ ನಟ ಶ್ರೀನಗರ ಕಿಟ್ಟಿ ಅವರ ದೂರು. `ನಟಿಸಬೇಕಾಗಿರುವುದೇ ಹೀಗೆ~ - ನಿರ್ದೇಶಕ ಜಯತೀರ್ಥ ಅವರ ಉತ್ತರ.`ಹೋಗಲಿ ಬಿಡಿ. ಈ ಅನುಭವವೂ ಒಂದು ರೀತಿಯಲ್ಲಿ ಚೆನ್ನಾಗಿಯೇ ಇದೆ~ - ಇದು ಕಿಟ್ಟಿ ತಮ್ಮನ್ನು ತಾವು ಸಂತೈಸಿಕೊಳ್ಳುವ ಪರಿ.ಕಿಟ್ಟಿ ಹಾಗೂ ಜಯತೀರ್ಥ ಅವರನ್ನು ಬೆಸೆದಿರುವ ಚಿತ್ರ- `ಟೋನಿ~. ಗೀತೆಗಳನ್ನು ಹೊರತುಪಡಿಸಿ ಚಿತ್ರದ ಉಳಿದ ಭಾಗದ ಚಿತ್ರೀಕರಣ ಈಗ ಮುಗಿದಿದೆ. ಗೀತೆಗಳ ಚಿತ್ರೀಕರಣಕ್ಕೆಂದು ನಿರ್ದೇಶಕ ಜಯತೀರ್ಥ ಲೊಕೇಶನ್ ಹುಡುಕಾಟಕ್ಕೆ ಹೊರಟಿದ್ದಾರೆ.ಅದಕ್ಕೆ ಮೊದಲು, ಅವರಿಗೊಂದು ಹಿತವಾದ ಅನುಭವವಾಗಿದೆ. ಅವರ ನಿರ್ದೇಶನದ ಚೊಚ್ಚಿಲ ಚಿತ್ರ `ಒಲವೇ ಮಂದಾರ~ಕ್ಕೆ ಎರಡು ಫಿಲಂಫೇರ್ ಪ್ರಶಸ್ತಿಗಳು ದೊರೆತಿವೆ.ಅತ್ಯುತ್ತಮ ಚಿತ್ರ ಹಾಗೂ ಅತ್ಯುತ್ತಮ ನಿರ್ದೇಶನ ಪ್ರಶಸ್ತಿಗಳು! ರಾಜ್ಯ ಪ್ರಶಸ್ತಿ ಕೈ ತಪ್ಪಿದರೇನು, ಬೇರೊಂದೆಡೆಯಲ್ಲಾದರೂ ತಮ್ಮ ಪ್ರಯತ್ನಕ್ಕೆ ಮನ್ನಣೆ ದೊರಕಿತಲ್ಲ ಎನ್ನುವ ಸಮಾಧಾನ ಜಯತೀರ್ಥರದು.

ಫಿಲಂಫೇರ್ ಬೆನ್ನಿಗೇ ತೆಲುಗು ಪತ್ರಿಕೆಯೊಂದರ ಪ್ರಶಸ್ತಿ ಕೂಡ `ಒಲವೇ ಮಂದಾರ~ಕ್ಕೆ ದೊರಕಿದೆ. ಆಗಸ್ಟ್‌ನಲ್ಲಿ ಕಾರ್ಯಕ್ರಮ ನಡೆಯಲಿದೆ. ನಿರ್ದೇಶಕನೊಬ್ಬ ಖುಷಿಯಾಗಲು ಇನ್ನೇನು ಬೇಕು.ಮತ್ತೆ `ಟೋನಿ~ಯ ಮಾತಿಗೆ ಬರೋಣ. ಈ ಚಿತ್ರದ ಶೂಟಿಂಗ್ ಚಿತ್ರತಂಡದಲ್ಲಿ ಸವಿನೆನಪುಗಳನ್ನು ಉಳಿಸಿದೆ. ಮುತ್ತತ್ತಿ ಬಳಿಯ ಭೂಹಳ್ಳಿಯಲ್ಲಿ ನಡೆಸಿದ ಚಿತ್ರೀಕರಣ ಇಡೀ ಚಿತ್ರತಂಡಕ್ಕೆ ಹೊಸ ಅನುಭವ ನೀಡಿದೆಯಂತೆ.

 

ಅಲ್ಲಿನ ಸುಮಾರು ಮೂರು ಶತಮಾನಗಳ ಹಳೆಯ ಮನೆಯಲ್ಲಿ ಹನ್ನೆರಡು ಜನಪದ ತ್ರಿಪದಿಗಳನ್ನು `ಟೋನಿ~ಗಾಗಿ ಚಿತ್ರೀಕರಿಸಲಾಗಿದೆ. ಈ ಚಿತ್ರೀಕರಣದಲ್ಲಿ ಕಲಾವಿದರೆಲ್ಲ ಒದ್ದೆ ಕಣ್ಣುಗಳಿಂದಲೇ ಭಾಗವಹಿಸಿದ್ದರಂತೆ.ಗುಲ್ಬರ್ಗಾ ಪರಿಸರದಲ್ಲಿ ಜಮೀನ್ದಾರಿ ಪದ್ಧತಿಯ ಕಥನದ ಕುರಿತಂತೆ ನಡೆಸಿದ ಚಿತ್ರೀಕರಣ ಇನ್ನೊಂದು ಸವಿ ನೆನಪು. ಸುಮಾರು 150 ಸ್ಥಳೀಯರು ಈ ಚಿತ್ರೀಕರಣದಲ್ಲಿ ಭಾಗವಹಿಸಿದ್ದಾರೆ. ಬೆಳಿಗ್ಗೆ 2ರಿಂದಲೇ ಶೂಟಿಂಗ್ ಶುರು. ಸೂರ್ಯೋದಯ ಹಾಗೂ ಸೂರ್ಯಾಸ್ತಗಳು ಕಥೆಗೆ ಮುಖ್ಯವಾದ್ದರಿಂದ ಹಗಲಿರುಳುಗಳ ವ್ಯತ್ಯಾಸವಿಲ್ಲದೆ ಶೂಟಿಂಗ್ ನಡೆದಿದೆ.`ಟೋನಿ~ ಚಿತ್ರದ ಪೋಸ್ಟರ್‌ಗಳಲ್ಲಿ ನಾಯಕ ಸಿಗರೇಟ್ ಸುಡುವುದು ಚರ್ಚೆಗೆ ಗುರಿಯಾಗಿತ್ತಷ್ಟೇ? ಬಾಂಡ್ ಗತ್ತಿನ ಈ ನಾಯಕನೆಲ್ಲಿ? ಜನಪದ ತ್ರಿಪದಿಗಳೆಲ್ಲಿ? (ಲಂಕೇಶರ `ನೀಲು ಕವಿತೆ~ಗಳನ್ನೂ ಚಿತ್ರದಲ್ಲಿ ಬಳಸಿಕೊಳ್ಳಲಾಗಿದೆಯಂತೆ), ಇದೆಲ್ಲದರ ನಡುವೆ ಜಮೀನ್ದಾರಿ ಕಥನಕ್ಕೆಲ್ಲಿಯ ಸ್ಥಾನ?ಪ್ರಶ್ನೆಗಳನ್ನು ಎದುರಿಗಿಟ್ಟರೆ ಜಯತೀರ್ಥ ನಗುತ್ತಾರೆ. `ಹೌದು, ಮೂರ‌್ನಾಲ್ಕು ಆಯಾಮಗಳು `ಟೋನಿ~ಯಲ್ಲಿವೆ. ಬೇರೆ ಬೇರೆ ಕಾಲಘಟ್ಟದ ಈ ಎಳೆಗಳನ್ನು ಬೆಸೆಯುವ ಪ್ರಯತ್ನ ತಮ್ಮದು. ಹೇಳಬೇಕಾದುದನ್ನು ಗಂಭೀರವಾಗಿ ಹೇಳಿದರೆ ಪ್ರೇಕ್ಷಕರು ಸ್ವೀಕರಿಸುವುದು ಕಷ್ಟ. ಆ ಕಾರಣದಿಂದಾಗಿ ಮುಖವಾಡಗಳನ್ನು ಇಟ್ಟುಕೊಂಡು ಸಂಸ್ಕೃತಿಯ ಕಥೆ ಹೇಳುತ್ತಿದ್ದೇನೆ~ ಎನ್ನುವುದು ಅವರ ವಿಶ್ಲೇಷಣೆ.   `ಟೋನಿ~ಯ ಮುಖ್ಯಪಾತ್ರಗಳಲ್ಲಿರುವ ಕಿಟ್ಟಿ ಹಾಗೂ ಐಂದ್ರಿತಾ ರೇ ಅಭಿನಯದ ಬಗ್ಗೆ ನಿರ್ದೇಶಕರದು ಅಡಿಗೆರೆಯ ಮೆಚ್ಚುಗೆ. `ಐಂದ್ರಿತಾಗೆ ಕನ್ನಡ ಸುಲಿದ ಬಾಳೆಯ ಹಣ್ಣೇನಲ್ಲ. ಆದರೆ, ಮುಗ್ಧ ಹೆಣ್ಣಿನ ಪಾತ್ರದಲ್ಲವರು ಅದ್ಭುತವಾಗಿ ಕಾಣಿಸಿಕೊಂಡಿದ್ದಾರೆ. ಅವರ ಪಾತ್ರದಲ್ಲಿ ಹೆಣ್ಣಿನ ಮಾರ್ದವತೆ ಎದ್ದುಕಾಣುತ್ತದೆ.ಕಿಟ್ಟಿಗಂತೂ ಈ ಚಿತ್ರ ಬೇರೆಯದೇ ಅನುಭವ. ಭಾವನೆಗಳನ್ನು ಅದುಮಿಟ್ಟುಕೊಂಡು, ನಿರ್ದೇಶಕರ ಸೂಚನೆಗಳನ್ನಷ್ಟೇ ಪಾಲಿಸುವ ಜಾಣ ವಿದ್ಯಾರ್ಥಿಯಂತೆ ಅವರು ಈ ಚಿತ್ರದಲ್ಲಿ ನಟಿಸಿದ್ದಾರೆ~ ಎಂದು ಜಯತೀರ್ಥ ಬಣ್ಣಿಸುತ್ತಾರೆ.ಮಾತು ಕೊನೆಯಾದದ್ದು- ಸಿನಿಮಾ ಯಾವಾಗ ತೋರಿಸುತ್ತೀರಿ ಎನ್ನುವ ಪ್ರಶ್ನೆಯೊಂದಿಗೆ. ಜಯತೀರ್ಥ ಹೇಳಿದರು- `ದೀಪಾವಳಿವರೆಗೂ ಕಾಯಿರಿ. ಬೆಳಕಿನ ಹಬ್ಬಕ್ಕೆ ಬೆರಗಿನ ಚಿತ್ರ~.

 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry