ಜನಪದ ಸಂಸ್ಕೃತಿಯ ಗೊರಲತ್ತಿನ ಮಾರಮ್ಮ

7

ಜನಪದ ಸಂಸ್ಕೃತಿಯ ಗೊರಲತ್ತಿನ ಮಾರಮ್ಮ

Published:
Updated:

ಚಳ್ಳಕೆರೆ: ಅನಾದಿ ಕಾಲದಿಂದಲೂ ಜನಪದ ಸಂಸ್ಕೃತಿಯನ್ನು ತನ್ನೊಡಲೊಳಗೆ ಇಟ್ಟುಕೊಂಡು, ತನ್ನನ್ನು ನಂಬಿರುವ ಸಾವಿರಾರು ಭಕ್ತಾದಿಗಳ ಮನಸ್ಸಿನಲ್ಲಿ ನೆಲೆವೂರುತ್ತಾ ಬಂದಿರುವ ಗೊರ‌್ಲತ್ತಿನ ಮಾರಮ್ಮ ತಾಲ್ಲೂಕಿನ ಹತ್ತಾರು ಗ್ರಾಮಗಳ ಜನರಲ್ಲಿ ಇಂದಿಗೂ ಮನೆಮಾತಾಗಿದ್ದಾಳೆ. ಆ ಮೂಲಕ ತನ್ನ ನಂಬಿದವರ ಇಷ್ಟಾರ್ಥಗಳನ್ನು ಈಡೇರಿಸುವ ದೇವತೆಯಾಗಿದ್ದಾಳೆ.ಇಂತಹ ಗೊರ‌್ಲತ್ತಿನ ಮಾರಮ್ಮನಿಗೆ ಪ್ರತೀ ಐದು ವರ್ಷಕ್ಕೊಮ್ಮೆ ಮಾಡುವ ದೊಡ್ಡ ಜಾತ್ರೆ ಮಹೋತ್ಸವ ಇದೇ ಫೆ. 22ರಿಂದ ಪ್ರಾರಂಭವಾಗಿ ಮಾರ್ಚ್ 1ರವರೆಗೆ ಒಂದು ವಾರಗಳ ಕಾಲ ವಿವಿಧ ಆಚರಣೆಗಳ ಮೂಲಕ ವೈಭವದಿಂದ ಜರುಗುವುದನ್ನು ಕಾಣಬಹುದು.ಜಾನಪದ ನೆಲೆಗಟ್ಟಿನ ಹಿನ್ನೆಲೆಯಲ್ಲಿ ಗೊರ‌್ಲತ್ತಿನ ಮಾರಮ್ಮ ದೇವಿಗೆ ತನ್ನದೇ ಐತಿಹಾಸಿಕ ಮಹತ್ವ ಇರುವುದನ್ನು ಈಕೆಯ ಕುರಿತು ಹಿರಿ ತಲೆಮಾರಿನ ಹೆಂಗಳೆಯರು ಹೇಳುವ ಸಾವಿರಾರು ಜನಪದ ಹಾಡು, ಕತೆಗಳ ಮೂಲಕ ತಿಳಿದುಕೊಳ್ಳಬಹುದಾಗಿದೆ.ಅನಕ್ಷರಸ್ಥ ಮಹಿಳೆಯರು ಈಕೆಯ ಕುರಿತು ಸಾವಿರಾರು ಪದಗಳನ್ನು ಕಟ್ಟಿ ಹಾಡುತ್ತಾರೆ. ಈಕೆಯ ಹುಟ್ಟು, ಬಾಲ್ಯ, ಯೌವ್ವನ ಕುರಿತಾದ ಜಾನಪದ ಹಾಡುಗಳು ಈಕೆಯ ಇತಿಹಾಸವನ್ನು ಅನಾವರಣಗೊಳಿಸುತ್ತವೆ. ಪರಂಪರೆಯಿಂದಲೂ ಗ್ರಾಮೀಣ ಪ್ರದೇಶಗಳಲ್ಲಿ ಹೆಣ್ಣು ದೇವತೆಗಳಿಗೆ ಅತ್ಯಂತ ಗೌರವ, ಭಕ್ತಿ ಸಮರ್ಪಿಸುವುದನ್ನು ಕಾಣಬಹುದು. ಅದೇ ರೀತಿ ಮಾರಮ್ಮನಿಗೂ ಕೂಡ ಸುತ್ತಲ ಹತ್ತೆಂಟು ಹಳ್ಳಿಗಳ ಎಲ್ಲಾ ಜಾತಿ-ಜನಾಂಗಗಳು ಭಕ್ತಿಯಿಂದ ಪೂಜಿಸುವ ಅಧಿದೇವತೆಯಾಗಿ ಕಂಗೊಳಿಸುತ್ತಿದ್ದಾಳೆ.ಜನಪದ ಸಂಸ್ಕೃತಿಯಲ್ಲಿ ಹಿಂದುಳಿದ ಸಮುದಾಯದ ಹೆಣ್ಣು ಮಗಳು ಎಂದೇ ಬಿಂಬಿತವಾಗಿರುವ ಗೊರ‌್ಲತ್ತಿನ ಮಾರಮ್ಮನಿಗೆ, ಜಡೇಕುಂಟೆ-ಕಾಪರಹಳ್ಳಿ ತವರು ಮನೆ ಆಗಿತ್ತು. ಇಲ್ಲಿ ನೆಲೆಸಿರುವ ಕಾಟಪ್ಪ ದೇವರು ಈಕೆಯ ಅಣ್ಣನೆಂಬ ಪ್ರತೀತಿ ಇದೆ.ಗೊರ‌್ಲತ್ತಿನ ಮಾರಮ್ಮ ಮತ್ತು ಜಡೇಕುಂಟೆಯ ಕಾಟಪ್ಪನ ಕುರಿತು ಸಾವಿರಾರು ಪದಗಳನ್ನು ಜನಪದರು ಹಾಡುತ್ತಾರೆ. ಇಂತಹ ಜನಪದ ಹಾಡುಗಳಲ್ಲಿ ಅಣ್ಣ-ತಂಗಿಯರಾಗಿದ್ದರು ಎಂಬುದಕ್ಕೆ ಅನೇಕ ಪುರಾವೆಗಳು ಸಿಗುತ್ತವೆ.ಹಾಡು, ಕತೆಗಳಲ್ಲಿ ಮಾರಮ್ಮ ಮತ್ತು ಕಾಟಪ್ಪನ ಹುಟ್ಟು, ಬೆಳವಣಿಗೆ, ಪ್ರಭಾವಳಿಗಳನ್ನು ಅನಾವರಣಗೊಳಿಸುವ ಹಿರಿ ತಲೆಮಾರಿನವರು ಇವರಿಬ್ಬರನ್ನೂ ಆರಾಧ್ಯರೆಂದು ಪೂಜಿಸಿಕೊಂಡು ಬಂದಿದ್ದಾರೆ. ಪ್ರತೀ ವರ್ಷದ ಶೇಂಗಾ ಸುಗ್ಗಿ ಮುಗಿದ ನಂತರ ಜಡೇಕುಂಟೆ-ಕಾಪರಹಳ್ಳಿ ಜನರು ಎತ್ತಿನ ಬಂಡಿಗಳಲ್ಲಿ ಗೊರ‌್ಲತ್ತಿಗೆ ಹೋಗಿ ಆರತಿ ಬೆಳಗುವುದುಂಟು.   ಇವತ್ತಿಗೂ ಜಡೇಕುಂಟೆ-ಕಾಪರಹಳ್ಳಿಯಲ್ಲಿ ಜನಿಸಿರುವ ಎಲ್ಲಾ ಸಮುದಾಯಗಳ ಹೆಣ್ಣುಮಕ್ಕಳನ್ನು ಮಾರಮ್ಮನಿಗೆ ಹೋಲಿಸಿ ಮಾತನಾಡುವುದುಂಟು. ಈ ಕಾರಣಕ್ಕಾಗಿಯೇ ಈ ಭಾಗದ ಹಳ್ಳಿಗಳಲ್ಲಿ ಮಾರಣ್ಣ, ಮಾರಕ್ಕ ಎಂಬ ಹೆಸರುಗಳುಳ್ಳ ಜನರು ಕಾಣಸಿಗುತ್ತಾರೆ.ಗೊರ‌್ಲತ್ತಿನಲ್ಲಿ ದೊಡ್ಡ ಜಾತ್ರೆ ನಡೆಯುವ ಸಂದರ್ಭದಲ್ಲಿ ಜಾತ್ರೆಗೂ ಮುಂಚೆ ಪಾಲಿಕೆಯಲ್ಲಿ ತವರು ಮನೆಗೆ ಬಂದು ಯಾವುದೇ ಜಾತಿ ಎನ್ನದೇ ಪ್ರತೀ ಸಮುದಾಯದವರ ಮನೆಗೂ ಹೋಗಿ ಉಡಿಯಕ್ಕಿ, ಹಸಿರು ಸೀರೆ, ಹಸಿರು ಬಳೆ ತೆಗೆದುಕೊಂಡು ಹೋಗುವುದು ಗೊರ‌್ಲತ್ತಿನ ಮಾರಮ್ಮನ ಪ್ರಾಚೀನತೆಗೆ  ಹಿಡಿದ ಕನ್ನಡಿಯಾಗಿದೆ.ಈ ಬಾರಿ ನಡೆಯುವ ಗೊರ‌್ಲತ್ತಿನ ಮಾರಮ್ಮನ ಜಾತ್ರೆಗೆ ಮುನ್ನಾ ದಿನವಾದ ಸೋಮವಾರ ಜಡೇಕುಂಟೆ-ಕಾಪರಹಳ್ಳಿಗೆ ಆಗಮಿಸಿದ ಮಾರಮ್ಮ ದೇವಿಗೆ ಎರಡೂ ಗ್ರಾಮಗಳ ಅಣ್ಣ-ತಮ್ಮಂದಿರು ಅತ್ಯಂತ ವಿಜೃಂಭಣೆಯಿಂದ ಬರಮಾಡಿಕೊಂಡು, ಈಕೆಯ ಹೆಸರಲ್ಲಿ `ತಳಿಸೇವೆ~ ಮಾಡಿ ಊರ ಹೆಣ್ಣು ಮಗಳನ್ನು ಸಂತೋಷಭರಿತಳಾಗಿ ಕಳುಹಿಸಿಕೊಟ್ಟಿದ್ದಾರೆ. ಪ್ರತೀ ಮನೆಯವರೂ ತಾನು ನಂಬಿರುವ ದೇವತೆಗೆ ಹಸಿರು ಬಳೆ, ಸೀರೆ, ಉಡಿಯಕ್ಕಿ ನೀಡಿ ಭಕ್ತಿ ಪ್ರದರ್ಶನ ಮಾಡಿ ಸಂಭ್ರಮಿಸಿದ್ದಾರೆ.ಈ ಭಾಗದ ಯುವತಿಯರಿಗೆ ಕಂಕಣ ಭಾಗ್ಯ ಕೂಡಿ ಬರಲೆಂದು, ಸಂತಾನ ಭಾಗ್ಯ, ಹುಟ್ಟಿದ ಮಗುವಿಗೆ ತಾಯ ಎದೆಹಾಲು ಕಡಿಮೆಯಾದರೆ ಹಾಲು ಬರಲೆಂದು, ಕಾಯಿಲೆ ಬಿದ್ದರೆ ಗುಣಮುಖರಾಗಲೆಂದು ಮಾರಮ್ಮನಿಗೆ ಹರಕೆ ಹೊರುವುದು ಪರಂಪರೆಯಿಂದಲೂ ನಡೆದುಕೊಂಡು ಬಂದ ಸಂಪ್ರದಾಯವಾಗಿದೆ.ಫೆಬ್ರವರಿ 28ರಂದು ಗೊರ‌್ಲತ್ತಿನಲ್ಲಿ ದೇವಿಗೆ ಈ ಭಾಗದ ಹತ್ತಾರು ಹಳ್ಳಿಗಳ ಸಾವಿರಾರು ಹೆಂಗಳೆಯರು ಹಿಟ್ಟಿನಾರತಿ ಬೆಳಗುವುದು, ದೇವತೆಗೆ ಹರಕೆ ಹೊತ್ತವರು ಸಿಹಿ ಮತ್ತು ಮಾಂಸದೂಟದ `ಪರವು~ ಮಾಡುವುದನ್ನು ಕಾಣಬಹುದು. ಹೀಗೇ ಪುರಾತನ ಕಾಲದಿಂದಲೂ ವಿಶಿಷ್ಟ ಆಚರಣೆಗಳನ್ನು ಮಾಡಿಕೊಂಡು ಬಂದಿರುವ ಈಕೆಯ ಭಕ್ತರು ಇಂದಿಗೂ ಅದನ್ನು ಮುಂದುವರಿಸಿದ್ದಾರೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry