ಜನಪರ ಕಾರ್ಯಕ್ರಮಗಳಿಗೆ ಜೆಡಿಎಸ್ ಸಿದ್ಧಹಸ್ತ

7

ಜನಪರ ಕಾರ್ಯಕ್ರಮಗಳಿಗೆ ಜೆಡಿಎಸ್ ಸಿದ್ಧಹಸ್ತ

Published:
Updated:

ಮಂಗಳೂರು: `ಜನಪರ ಕಾರ್ಯಗಳನ್ನು ಹಮ್ಮಿಕೊಳ್ಳುವಲ್ಲಿ ಜೆಡಿಎಸ್ ಎಂದೂ ಸಿದ್ಧಹಸ್ತ~ ಎಂದು ಜೆಡಿಎಸ್ ದ.ಕ. ಜಿಲ್ಲಾ ಘಟಕದ ಅಧ್ಯಕ್ಷ ಎಂ.ಬಿ. ಸದಾಶಿವ ತಿಳಿಸಿದರು.ಇಲ್ಲಿ ಪಕ್ಷದ ಕಚೇರಿಯಲ್ಲಿ ಭಾನುವಾರ ಹಮ್ಮಿಕೊಂಡಿದ್ದ ಪಕ್ಷಕ್ಕೆ ಕಾರ್ಯಕರ್ತರ ಸೇರ್ಪಡೆ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.ಜನಪರ ಕಾರ್ಯಗಳನ್ನು ಹಮ್ಮಿಕೊಳ್ಳುವಲ್ಲಿ ಜನತಾ ದಳದ ಪಾತ್ರ ಈ ರಾಜ್ಯದಲ್ಲಿ ಅತಿ ದೊಡ್ಡದು. ರಾಮಕೃಷ್ಣ ಹೆಗಡೆ ಮುಖ್ಯಮಂತ್ರಿ ಆಗಿದ್ದಾಗ ನಡೆಸಿದ ಜನಪರ ಕಾರ್ಯಗಳು ಜೆಡಿಎಸ್‌ಗೆ ಅಡಿಪಾಯ. ಆ ನಂತರ ಜೆ.ಎಚ್. ಪಟೇಲ್, ಎಚ್.ಡಿ. ದೇವೇಗೌಡ, ಎಚ್.ಡಿ. ಕುಮಾರಸ್ವಾಮಿ ಅವರ ಕಾಲದಲ್ಲಿ ಅಭಿವೃದ್ಧಿ ಕಾರ್ಯಗಳು ಏನೆಂದು ದೇಶಕ್ಕೆ ತೋರಿಸಿಕೊಟ್ಟೆವು.ನಮ್ಮ ಕಾಲದಲ್ಲಿ ನಡೆಸಿದ ಜನಪರ ಕಾರ್ಯಗಳ ಹೆಸರನ್ನು ಬದಲಿಸಿ ಭಾಗ್ಯಲಕ್ಷ್ಮಿ ಮುಂತಾದ ಹೆಸರುಗಳಿಂದ ಬಿಜೆಪಿ ಕಳ್ಳತನದ ಅಭಿವೃದ್ಧಿ ಕೆಲಸ ಮಾಡುತ್ತಿದೆ ಎಂದು ಅವರು ಲೇವಡಿ ಮಾಡಿದರು.ಅಭಿವೃದ್ಧಿ ಕಾರ್ಯಕ್ರಮಗಳನ್ನೂ ಜಾತ್ಯಾತೀತವಾಗಿ ಜೆಡಿಎಸ್ ಮಾಡುತ್ತಿದೆ. ಆದರೆ ಬಿಜೆಪಿ ಸರ್ಕಾರದ್ದು ತಾರತಮ್ಯದ ಅಭಿವೃದ್ಧಿ ಕಾರ್ಯ. ಮಹಿಳೆಯರಿಗೆ ಸೀರೆ ಹಂಚುವುದೇ ಇವರ ದೊಡ್ಡ ಸಾಧನೆ. ಅದರ ಗುಣಮಟ್ಟವಂತೂ ಹೇಳಲು ಬಾರದು. ಅಭಿವೃದ್ಧಿ ಕಾರ್ಯಕ್ರಮ ನಡೆಸುವುದು ನಮ್ಮ ಕೆಲಸವೇ ಅಲ್ಲ ಎಂದು ಬಿಜೆಪಿ ಭಾವಿಸಿದಂತಿದೆ ಎಂದರು.ಅಲ್ಲದೇ ಯುವಕರ ಶಕ್ತಿಯ ದುರ್ಬಳಕೆ ಬಿಜೆಪಿ ನಾಯಕರಿಗೆ ಕರಗತವಾಗಿದೆ. ಯುವಕರನ್ನು ದೊಂಬಿ ಗಲಾಟೆ ಮಾಡಲು ಪ್ರೇರೇಪಿಸಿ ವಿವಿಧ ಪ್ರಕರಣಗಳಲ್ಲಿ ಸಿಕ್ಕಿಸುತ್ತಾರೆ. ಈ ರೀತಿಯ ಪ್ರಕರಣಗಳು ತಳಮಟ್ಟದ ಕಾರ್ಯಕರ್ತರ ಮೇಲೆ ಇದೆಯೇ ಹೊರತು, ಒಂದೇ ಒಂದು ಪ್ರಕರಣ, ಮುಖಂಡರ ಮೇಲೆ ಇದೆಯೇ ಎಂದು ಅವರು ಪ್ರಶ್ನಿಸಿದರು.ಮಠಕ್ಕೆ ಮಾತ್ರ ಹಣ ಏಕೆ?: ಮಠಗಳಿಗೆ ಬಿಜೆಪಿ ಸರ್ಕಾರ ಕೋಟ್ಯಾಂತರ ರೂಪಾಯಿ ಕೊಟ್ಟರು. ಕೊಡಲಿ ಬೇಡ ಎಂದು ನಾವು ಹೇಳುವುದಿಲ್ಲ. ಆದರೆ ಅದೇ ರೀತಿ ಜನಪರ ಕಾರ್ಯಕ್ರಮಗಳಿಗೂ ಹಣ ಖರ್ಚು ಮಾಡಲಿ. ಮೂಲಭೂತ ಸೌಕರ್ಯ ವೃದ್ಧಿಗೆ ಸರ್ಕಾರ ಒಂದೇ ಒಂದು ರೂಪಾಯಿಯೂ ಖರ್ಚಾಗಿಲ್ಲ ಎಂದರು. ಒಟ್ಟು 60 ಕಾರ್ಯಕರ್ತರು ಇತರೆ ಪಕ್ಷಗಳಿಂದ ಜೆಡಿಎಸ್ ಸೇರ್ಪಡೆಗೊಂಡರು. ಜಿಲ್ಲಾ ಘಟಕದ ಉಪಾಧ್ಯಕ್ಷ ವಸಂತ ಪೂಜಾರಿ, ಪ್ರಧಾನ ಕಾರ್ಯದರ್ಶಿ ರಾಮಗಣೇಶ್, ನಗರಪಾಲಿಕೆ ಸದಸ್ಯ ಹರೀಶ್ ಕೆ. ಸುರತ್ಕಲ್  ಇದ್ದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry