ಸೋಮವಾರ, ನವೆಂಬರ್ 18, 2019
26 °C

`ಜನಪರ ಕಾಳಜಿ ಇರುವ ಅಭ್ಯರ್ಥಿ ಬೆಂಬಲಿಸಿ'

Published:
Updated:

ಬಳ್ಳಾರಿ: `ಸದಾ ಜನರ ಜೊತೆ ಬೆರೆಯುವ ಅಭ್ಯರ್ಥಿಗಳನ್ನು ಗೆಲ್ಲಿಸಬೇಕು. ಚುನಾವಣೆಯಲ್ಲಿ ಮಾತ್ರ ಮುಖತೋರಿಸುವ ಅಭ್ಯರ್ಥಿಗಳನ್ನು ಕಡೆಗಣಿಸಬೇಕು' ಎಂದು ಸೋಷಲಿಸ್ಟ್ ಯೂನಿಟಿ ಸೆಂಟರ್ ಆಫ್ ಇಂಡಿಯಾ (ಎಸ್‌ಯುಸಿಐಸಿ) ಪಕ್ಷದ ರಾಜ್ಯ ಕಾರ್ಯದರ್ಶಿ ಕೆ.ರಾಧಾಕೃಷ್ಣ ತಿಳಿಸಿದರು.ನಗರದಲ್ಲಿ ಗುರುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಎಂತಹ ವ್ಯಕ್ತಿ ಚುನಾಯಿತನಾಗಬೇಕು ಎಂಬುದನ್ನು ನಿರ್ಧರಿಸ ಬೇಕಾದ ಮತದಾರರು, ಬಂಡವಾಳಗಾರ ಪಕ್ಷಗಳು ನೀಡುವ ಒಂದಷ್ಟು ಆಮಿಷಕ್ಕೆ ಬಲಿಯಾದರೆ ಐದು ವರ್ಷಗಳ ಕಾಲ ಕನಿಷ್ಠ ಸೌಕರ್ಯಗಳಿಲ್ಲದೆ ಒದ್ದಾಡಬೇಕಾದ ಪರಿಸ್ಥಿತಿ ನಿರ್ಮಾಣವಾಗುತ್ತದೆ  ಎಂದು ಎಚ್ಚರಿಸಿದರು.ಮತದಾರರು ಪ್ರಜ್ಞಾವಂತಿಕೆ ತೋರದಿದ್ದರೆ ಎಷ್ಟೇ ವರ್ಷಗಳು ಕಳೆದರೂ ಜನರ ಬದುಕು ಬದಲಾಗುವುದಿಲ್ಲ, ಅಭಿವೃದ್ಧಿ ಸಾಧ್ಯವಾಗು ವುದಿಲ್ಲ. ಬಿಜೆಪಿ, ಕಾಂಗ್ರೆಸ್, ಜೆಡಿಎಸ್ ಪಕ್ಷಗಳು ರಾಜ್ಯವನ್ನಾಳಿವೆ ಆದರೆ, ಈವರೆಗೆ ಗ್ರಾಮೀಣ ಭಾಗಗಳಿಗೆ ಕನಿಷ್ಠ ಸೌಲಭ್ಯ ನೀಡಲೂ ಅವರಿಂದ ಸಾಧ್ಯವಾಗಿಲ್ಲ ಎಂದು ಅವರು ಟೀಕಿಸಿದರು.ಬಳ್ಳಾರಿ ಜಿಲ್ಲೆಯ ಸಾವಿರಾರು ಹಳ್ಳಿಗಳ ಜನತೆ ಕುಡಿವ ನೀರಿಗೂ ಪರದಾಟ ನಡೆಸಿದ್ದಾರೆ. ಎಲ್‌ಎಲ್‌ಸಿಗೆ ಸೂಕ್ತ ಸಮಯಕ್ಕೆ ನೀರು ಸಿಗದೆ ರೈತರು ಬೆಳೆನಷ್ಟ ಮಾಡಿಕೊಂಡು ಸಾಲಗಾರರಾಗಿದ್ದಾರೆ. ದುಡಿವ ಜನರ ಸಮಸ್ಯೆಗಳನ್ನು ಆಲಿಸಿದ ಬಂಡವಾಳ ಶಾಹಿ ಪರ ನಿಲುವಿನ ಪಕ್ಷಗಳು ಹಣ ಮತ್ತಿತರ ಆಮಿಷವೊಡ್ಡಿ ಜನರನ್ನು ವಂಚಿಸಲು ಹೊರಟಿವೆ. ಇದಕ್ಕೆ ಕಡಿವಾಣ ಹಾಕಲು ಎಸ್‌ಯುಸಿಐ ಕಮ್ಯುನಿಸ್ಟ್ ಪಕ್ಷದ ಅಭ್ಯರ್ಥಿಗಳನ್ನು ಚುನಾಯಿಸಬೇಕು ಎಂದು ಅವರು ಮನವಿ ಮಾಡಿದರು.ರಾಜ್ಯದ 7 ಜಿಲ್ಲೆಗಳಲ್ಲಿ 11 ಅಭ್ಯರ್ಥಿಗಳನ್ನು ಕಣಕ್ಕಿಳಿಸಲಾಗಿದ್ದು, ಮಹಿಳಾ ಅಭ್ಯರ್ಥಿಗಳಿಗೆ  ಶೇ 50 ರಷ್ಟು ಆದ್ಯತೆ ನೀಡಲಾಗಿದೆ ಎಂದು ಅವರು ಹೇಳಿದರು.ಕಳೆದ 20 ದಿನಗಳಿಂದ ನಗರದ ಹಲವಾರು ವಾರ್ಡ್‌ಗಳಲ್ಲಿ ಪಕ್ಷದ ಪರ ಪ್ರಚಾರ ನಡೆಸಲಾಗಿದ್ದು, ಜನತೆಯಿಂದ ಉತ್ತಮ ಪ್ರತಿಕ್ರಿಯೆ ದೊರೆತಿದೆ ಜನತೆಯು ಪಕ್ಷವನ್ನು ಗೆಲ್ಲಿಸುತ್ತಾರೆ ಎಂಬ ಭರವಸೆ ಮೂಡಿದೆ ಎಂದು ನಗರ ಕ್ಷೇತ್ರದ ಅಭ್ಯರ್ಥಿ ಡಿ. ನಾಗಲಕ್ಷ್ಮಿ ತಿಳಿಸಿದರು.

ಪಕ್ಷದ ರಾಜ್ಯ ಸಮಿತಿ ಸದಸ್ಯೆ ಎ.ಉಮಾ, ಮಂಜುಳಾ, ಸೋಮಶೇಖರ್‌ಗೌಡ ಮತ್ತಿತರರು ಉಪಸ್ಥಿತರಿದ್ದರು. 

  

`ಕಮ್ಯುನಿಸ್ಟ್ ಪಕ್ಷಕ್ಕೆ ಮತ ನೀಡಿ'

ಬಳ್ಳಾರಿ:
ಜಿಲ್ಲೆಯ ವಿವಿಧ ಪಕ್ಷಗಳು ಬಳ್ಳಾರಿ ನಗರ ಕ್ಷೇತ್ರದಿಂದ ಸ್ಪರ್ಧಿಸಲು ಹೆಚ್ಚಿನ ಆಸಕ್ತಿ ತೋರಿದರೂ ಸೂಕ್ತ ಅಭ್ಯರ್ಥಿಗಳನ್ನು ಆಯ್ಕೆ ಮಾಡುವಲ್ಲಿ ವಿಫಲವಾಗಿವೆ ಎಂದು ಸಿಪಿಐ ಪಕ್ಷದ ಜಿಲ್ಲಾ ಘಟಕದ ಕಾರ್ಯದರ್ಶಿ ಕೆ.  ನಾಗಭೂಷಣರಾವ್ ತಿಳಿಸಿದರು.ನಗರದಲ್ಲಿ ಗುರುವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಭಾರತೀಯ  ಕಮ್ಯುನಿಷ್ಟ್ ಪಕ್ಷಗಳನ್ನು ಹೊರತುಪಡಿಸಿ, ಬಿಜೆಪಿ, ಕಾಂಗ್ರೆಸ್, ಜೆಡಿಎಸ್ ಪಕ್ಷಗಳು ಮುಂಬರುವ ವಿಧಾನಸಭೆ ಚುನಾವಣೆಯಲ್ಲಿ  ಉತ್ತಮ ಹೋರಾಟಪರ ಅಭ್ಯರ್ಥಿಗಳನ್ನು ಕಣಕ್ಕಿಳಿಸುವಲ್ಲಿ ಸಂಪೂರ್ಣ ವಿಫಲವಾಗಿವೆ ಎಂದು ತಿಳಿಸಿದರು.ರಾಜ್ಯದ ವಿವಿಧ ಪಕ್ಷದ ನಾಯಕರಲ್ಲಿ ಕಾಂಗ್ರೆಸ್ ಪಕ್ಷವೂ ಒಳಗೊಂಡಂತೆ ಹಲವಾರು ಮುಖಂಡರು ಅಕ್ರಮ ಗಣಿಗಾರಿಕೆಯ ಆರೋಪದಲ್ಲಿ ಭಾಗಿಯಾಗಿದ್ದಾರೆ. ಇದರಲ್ಲಿ ಕಾಂಗ್ರೆಸ್ ಪಕ್ಷವು ಅಕ್ರಮ ಗಣಿಗಾರಿಕೆ ಆರೋಪ ಹೊತ್ತಿರುವ ನಾಯಕರನ್ನು ಆಯ್ಕೆ ಮಾಡಿ ಕಣಕ್ಕಿಳಿಸಿದೆ. ರಾಜಕೀಯ ಪಕ್ಷಗಳ ನಡೆ ಸಮಂಜಸವಲ್ಲ ಎಂದು ಅವರು ಟೀಕಿಸಿದರು.ಈ ನಿಟ್ಟಿನಲ್ಲಿ ಭಾರತೀಯ ಕಮ್ಯುನಿಷ್ಟ್ ಪಕ್ಷಗಳು ಸಾಮಾಜಿಕ ಕಳಕಳಿ ಇರುವ ಸೂಕ್ತ ಅಭ್ಯರ್ಥಿಗಳನ್ನು ಆಯ್ಕೆ ಮಾಡಿ ಚುನಾವಣೆಗೆ ಸ್ಪರ್ಧಿಸಲು ಅವಕಾಶ ನೀಡಿದೆ ಎಂದರು. ಕಮ್ಯುನಿಸ್ಟ್ ಪಕ್ಷವು ಗೆಲುವು ಸಾಧಿಸಿದಲ್ಲಿ ಪಕ್ಷದಿಂದ ಹಲವಾರು ಯೋಜನೆಗಳನ್ನು ಹಮ್ಮಿಕೊಳ್ಳಲಾಗಿದ್ದು, ಕುಡಿಯುವ ನೀರಿನ ಸಮಸ್ಯೆಗೆ ಮೊದಲ ಆದ್ಯತೆ ನೀಡಲಾಗುವುದು ಎಂದರು.ರಸ್ತೆ ಅಭಿವೃದ್ಧಿ ಕಾಮಗಾರಿಗೆ ಹೆಚ್ಚಿನ ಒತ್ತು ನೀಡಲಾಗುವುದು, ಹಲವಾರು ವರ್ಷಗಳಿಂದ ಸೂರಿಲ್ಲದೆ ವಾಸಿಸುತ್ತಿರುವ ಜನತೆಗೆ ನಿವೇಶನ ಹಾಗೂ ವಸತಿ ಕಲ್ಪಿಸಲು ಒತ್ತಾಯಿಸಲಾಗುವುದು, ಸಮರ್ಪಕ ವಿದ್ಯುತ್ ಕೊರತೆಯನ್ನು ನೀಗಿಸಲು ಒತ್ತಡ ತರಲಾಗುವುದು ಆದ್ದರಿಂದ ಜನಸಾಮಾನ್ಯರು ಮುಂಬರುವ ಚುನಾವಣೆಯಲ್ಲಿ ಯಾವುದೇ ಆಮಿಷಗಳಿಗೆ ಒಳಗಾಗದೆ, ನಿರ್ಭೀತಿಯಿಂದ ಮತ ಚಲಾಯಿಸಬೇಕು ಎಂದು ಮನವಿ ಮಾಡಿದರು.ಖಾಸಗೀಕರಣ, ಉದಾರೀಕರಣ, ಜಾಗತೀಕರಣ ಹಾಗೂ ವಿದೇಶಿ ನೇರ ಬಂಡವಾಳ ಹೂಡಿಕೆಯ ವಿರುದ್ಧ ಹೋರಾಟ ಮಾಡುತ್ತಿರುವ ಕಮ್ಯುನಿಸ್ಟ್ ಪಕ್ಷವನ್ನು ಬೆಂಬಲಿಸುವಂತೆ ಕೋರಿದರು.ಪಕ್ಷದ ಹಿರಿಯ ಮುಖಂಡ ಅರವಿಂದ ಮಳೆಬೆನ್ನೂರ್ ಇದೇ ಸಂದರ್ಭದಲ್ಲಿ  ಪಕ್ಷದ ಪ್ರಣಾಳಿಕೆ ಬಿಡುಗಡೆ ಮಾಡಿದರು.

ಆಂಧ್ರಪ್ರದೇಶದ ರಾಜ್ಯ ಕಾರ್ಯದರ್ಶಿ ಜಗದೀಶ್, ಮುಖಂಡರಾದ ಟಿ.ಜಿ.ವಿಠಲ್ ಚಂದ್ರಕುಮಾರಿ, ವಹಾಬ್, ಗೋವಿಂದ್, ವೆಂಕಟೇಶ್, ನಾಗಾರ್ಜುನ ಮತ್ತಿತರರು ಉಪಸ್ಥಿತರಿದ್ದರು.

ಪ್ರತಿಕ್ರಿಯಿಸಿ (+)