ಸೋಮವಾರ, ಜೂನ್ 14, 2021
22 °C
ಸಚಿವರು, ಸಂಸದರ ಸರ್ಕಾರಿ ವಾಹನ ವಾಪಸ್

ಜನಪ್ರತಿನಿಧಿಗಳಿಗೆ ಖಾಸಗಿ ವಾಹನವೇ ಗತಿ!

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ದಾವಣಗೆರೆ: ಲೋಕಸಭಾ ಚುನಾವಣೆಯ ದಿನಾಂಕ ನಿಗದಿಯಾಗಿದ್ದು, ನೀತಿ ಸಂಹಿತೆ ಜಾರಿಗೊಂಡಿದೆ. ರಾಜ್ಯದಲ್ಲಿ ಒಂದು ಹಂತದ ಚುನಾವಣೆ ನಡೆಸಲು ಚುನಾವಣಾ ಆಯೋಗ ಅಸ್ತು ಎಂದಿದ್ದು, ಏಪ್ರಿಲ್‌ 17ರಂದು ದಾವಣಗೆರೆ ಲೋಕಸಭಾ ಕ್ಷೇತ್ರದಲ್ಲೂ ಮತದಾನ ನಡೆಯಲಿದೆ.ಲೋಕಸಭಾ ಚುನಾವಣೆ ಹಿನ್ನೆಲೆಯಲ್ಲಿ ಜನಪ್ರತಿನಿಧಿಗಳು ಇನ್ನು ಸರ್ಕಾರಿ ವಾಹನ ಬಳಸುವಂತಿಲ್ಲ. ಸಂಸತ್‌ ಸದಸ್ಯ ಜಿ.ಎಂ.ಸಿದ್ದೇಶ್ವರ, ತೋಟಗಾರಿಕೆ ಹಾಗೂ ಎಪಿಎಂಸಿ ಸಚಿವ ಶಾಮನೂರು ಶಿವಶಂಕರಪ್ಪ, ವಿಧಾನ ಪರಿಷತ್‌ ವಿರೋಧ ಪಕ್ಷದ ಮುಖ್ಯಸಚೇತಕ ಡಾ.ಎ.ಎಚ್‌. ಶಿವಯೋಗಿಸ್ವಾಮಿ ಈಗಾಗಲೇ ಸರ್ಕಾರಿ ವಾಹನವನ್ನು ವಾಪಸ್‌ ನೀಡಿದ್ದಾರೆ.ಇನ್ನು ಜಿಲ್ಲಾ ಪಂಚಾಯ್ತಿ ಅಧ್ಯಕ್ಷೆ–ಉಪಾಧ್ಯಕ್ಷೆ, ಹೊನ್ನಾಳಿ, ಜಗಳೂರು, ಹರಪನಹಳ್ಳಿ, ದಾವಣಗೆರೆ, ಚನ್ನಗಿರಿ, ಹರಿಹರದ ತಾಲ್ಲೂಕು ಪಂಚಾಯ್ತಿ ಅಧ್ಯಕ್ಷರು, ಡಿಸಿಸಿ ಬ್ಯಾಂಕ್‌ ಅಧ್ಯಕ್ಷರು ಸರ್ಕಾರಿ ವಾಹನ ಬಳಸುವಂತಿಲ್ಲ. ಅವರಿಗೆ ಚುನಾವಣೆ ಮುಗಿಯುವರೆಗೂ ಖಾಸಗಿ ವಾಹನವೇ ಗತಿಯಾಗಲಿದೆ!‘ಈಗಾಗಲೇ ಮೌಖಿಕವಾಗಿ ಸರ್ಕಾರಿ ವಾಹನ ಬಳಕೆ ಮಾಡದಂತೆ ಜನಪ್ರತಿನಿಧಿಗಳಿಗೆ ತಿಳಿಸಲಾಗಿದೆ. ಮಾರ್ಚ್‌ 6ರಂದು ಜಿಲ್ಲಾಮಟ್ಟದ ಅಧಿಕಾರಿಗಳ ಸಭೆ ನಡೆಸಲಾಗುವುದು. ಅಲ್ಲಿ ನೀತಿ ಸಂಹಿತೆ ಜಾರಿಗೆ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಲು ಸೂಚಿಸಲಾಗುವುದು. ಚುನಾವಣೆ ದಿನಾಂಕ ಮಾಧ್ಯಮದಲ್ಲಿ ಪ್ರಕಟವಾಗಿದೆ. ಆಯೋಗದಿಂದ ಅಧಿಕೃತ ಆದೇಶ ಪ್ರತಿ ಬಂದ ಕೂಡಲೇ ಅದನ್ನು ಪಾಲಿಸಲಾಗುವುದು’ ಎಂದು ಜಿಲ್ಲಾಧಿಕಾರಿ ಎಸ್‌.ಟಿ.ಅಂಜನಕುಮಾರ್‌ ‘ಪ್ರಜಾವಾಣಿ’ಗೆ ತಿಳಿಸಿದರು.ಕಾಂಗ್ರೆಸ್‌ ಕಡೆಗೆ ಕುತೂಹಲ

ದಾವಣಗೆರೆ ಲೋಕಸಭಾ ಕ್ಷೇತ್ರದಿಂದ ಬಿಜೆಪಿ ಅಭ್ಯರ್ಥಿಯಾಗಿ ಹಾಲಿ ಸಂಸದ ಜಿ.ಎಂ.ಸಿದ್ದೇಶ್ವರ ಸ್ಪರ್ಧಿಸುತ್ತಿದ್ದಾರೆ. ಜತೆಗೆ, ಪ್ರಧಾನಿ ಅಭ್ಯರ್ಥಿ ನರೇಂದ್ರ ಮೋದಿ ಅವರನ್ನು ಕರೆಸಿ ಬೃಹತ್‌ ರ್‍ಯಾಲಿಯನ್ನೂ ನಡೆಸಿದ್ದಾರೆ.ಸಿದ್ದೇಶ್ವರ ಅವರು ತಾಲ್ಲೂಕಿನ ವಿವಿಧೆಡೆ ಸಂಚರಿಸಿ ದೊಡ್ಡಮಟ್ಟದ ಪ್ರಚಾರ ಕೂಡ ನಡೆಸುತ್ತಿದ್ದಾರೆ. ಆದರೆ, ಕಾಂಗ್ರೆಸ್‌ಗೆ ಅಭ್ಯರ್ಥಿ ಆಯ್ಕೆಯ ಗೊಂದಲ ಇನ್ನೂ ಬಗೆಹರಿದಿಲ್ಲ. ಶಾಸಕ ಎಸ್‌.ಎಸ್‌.ಮಲ್ಲಿಕಾರ್ಜುನ್‌ ಅಥವಾ ಮಹಿಮ ಪಟೇಲ್‌ ಅವರ ಹೆಸರು ಕೇಳಿಬರುತ್ತಿದೆ. ಜಿಲ್ಲೆಯ 6 ವಿಧಾನಸಭಾ ಕ್ಷೇತ್ರಗಳಲ್ಲಿ ಕಾಂಗ್ರೆಸ್‌ನ ಶಾಸಕರು ಇದ್ದಾರೆ. ಇದು ಕಾಂಗ್ರೆಸ್‌ನ ಗೆಲುವಿನ ಯಾತ್ರೆಗೆ ನೆರವಾಗಲಿದೆ ಎಂಬ  ಮಾತುಗಳು ಜಿಲ್ಲೆಯಲ್ಲಿ ಕೇಳಿಬರುತ್ತಿವೆ.ಇನ್ನು ಜೆಡಿಎಸ್‌ ಪ್ರಾಬಲ್ಯ ಜಿಲ್ಲೆಯಲ್ಲಿ ಅಷ್ಟಾಗಿಲ್ಲ. ಹರಿಹರದಲ್ಲಿ ಮಾತ್ರ ಜೆಡಿಎಸ್‌ ಶಾಸಕರಿದ್ದಾರೆ. ಕಳೆದ ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ತೊರೆದು ಜೆಡಿಎಸ್‌ ಸೇರ್ಪಡೆಯಾಗಿದ್ದ ಸೈಯದ್‌ ಸೈಫುಲ್ಲಾ ಜೆಡಿಎಸ್‌ ಸಂಭವನೀಯರ ಆಯ್ಕೆಯಲ್ಲಿ ಕಾಣಿಸಿಕೊಂಡಿದ್ದಾರೆ. ಅವರೇ ಅಂತಿಮವಾಗಿ ಕಣಕ್ಕೆ ಇಳಿಯುವ ಸಾಧ್ಯತೆ ಇದೆ.ಅಧಿಕೃತವಾಗಿ ಅಭ್ಯರ್ಥಿಗಳ ಆಯ್ಕೆಪಟ್ಟಿ ಘೋಷಣೆಯಾದ ಕೂಡಲೇ ಚುನಾವಣೆ ಕಣ ರಂಗೇರಲಿದೆ.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.