ಶುಕ್ರವಾರ, ಮೇ 14, 2021
31 °C

ಜನಪ್ರತಿನಿಧಿಗಳ ಇಚ್ಛಾಶಕ್ತಿ ಕೊರತೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು: `ಸರ್ವರಿಗೂ ಮಾನವ ಹಕ್ಕುಗಳು ದೊರೆಯುವಂತೆ ಮಾಡುವಲ್ಲಿ ರಾಜಕಾರಣಿಗಳು ಮತ್ತು ಅಧಿಕಾರಿಗಳಲ್ಲಿ ಇಚ್ಛಾಶಕ್ತಿಯ ಕೊರತೆಯಿದೆ~ ಎಂದು ಅಮ್ನೆಸ್ಟಿ ಇಂಟರ್ ನ್ಯಾಷನಲ್‌ನ ಮಹಾ ಕಾರ್ಯದರ್ಶಿ ಸಲೀಲ್ ಶೆಟ್ಟಿ ಶನಿವಾರ ಇಲ್ಲಿ ಅಭಿಪ್ರಾಯಪಟ್ಟರು.ನಗರದ ದೊಮ್ಮಲೂರಿನ ಬೆಂಗಳೂರು ಇಂಟರ್ ನ್ಯಾಷನಲ್ ಸೆಂಟರ್ ಸಭಾಂಗಣದಲ್ಲಿ ನಡೆದ `ಭಾರತವು ಮಾನವ ಹಕ್ಕುಗಳ ಜಾಗತಿಕ ನಾಯಕನಾಗಬಹುದೇ~ ಕುರಿತ ಸಂವಾದ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಅವರು ಮಾತನಾಡಿದರು.`ಸದುದ್ದೇಶದಿಂದ ಕೂಡಿದ ಪ್ರಗತಿಪರ ಯೋಜನೆಗಳನ್ನು ರೂಪಿಸಿದ್ದಾಗಿಯೂ ಮಾನವ ಹಕ್ಕುಗಳನ್ನು ಪರಿಣಾಮಕಾರಿಯಾಗಿ ಜಾರಿಗೊಳಿಸುವಲ್ಲಿ ವಿಫಲವಾಗಿರುವುದನ್ನು ನಾವು ಕಾಣುತ್ತಿದ್ದೇವೆ. ಕಾರ್ಪೊರೇಟ್ ಸಹಭಾಗಿತ್ವದ ಯೋಜನೆಗಳಿಗಾಗಿ ಜನರ ಜೀವನಶೈಲಿಯನ್ನು ಹಾಳುಗೆಡವಿ, ಅವರ ಭೂಮಿಯನ್ನು ಕಸಿದು ಒಕ್ಕಲೆಬ್ಬಿಸುವುದು ಕೂಡ ಮಾನವ ಹಕ್ಕುಗಳ ಸ್ಪಷ್ಟ ಉಲ್ಲಂಘನೆಯಾಗಿದೆ~ ಎಂದು ಪ್ರತಿಪಾದಿಸಿದರು.`ಸಮಾಜದಲ್ಲಿ ತುಳಿತಕ್ಕೆ ಒಳಗಾದ ದಲಿತರು, ಆದಿವಾಸಿಗಳು, ಮಹಿಳೆಯರು, ಅಲ್ಪಸಂಖ್ಯಾತರ ವಿರುದ್ಧ ಸಾಮಾಜಿಕ ಕ್ರೌರ್ಯ ಮೇರೆ ಮೀರಿದ್ದು, ಅವರು ಮಾನವ ಹಕ್ಕುಗಳಿಂದ ವಂಚಿತರಾಗುತ್ತಿದ್ದಾರೆ~ ಎಂದು ವಿಷಾದಿಸಿದರು.`ದೌರ್ಜನ್ಯ ವಿರುದ್ಧದ ವಿಶ್ವಸಂಸ್ಥೆಯ ಸಮ್ಮೇಳನದಲ್ಲಿ ಸಹಿ ಹಾಕಿರುವ ಭಾರತ ಅಂತರರಾಷ್ಟ್ರೀಯ ಕಾನೂನುಗಳಿಗೆ ಪೂರಕವಾಗಿ ದೇಶದ ಕಾನೂನಿಗೆ ತಿದ್ದುಪಡಿ ತರಲು ಮುಂದಾಗಿರುವುದು ಸ್ವಾಗತಾರ್ಹ ಬೆಳವಣಿಗೆ. ಆದರೆ, ದೌರ್ಜನ್ಯ ಪ್ರಕರಣಗಳನ್ನು ಮಟ್ಟ ಹಾಕುವಲ್ಲಿ ನಾವು ನಿರೀಕ್ಷಿತ ಯಶಸ್ಸು ಸಾಧಿಸಲು ಸಾಧ್ಯವಾಗಿಲ್ಲ~ ಎಂದರು.`ಯಾವುದೇ ಸಾವು ಸಂಭವಿಸಿದ ಪ್ರಕರಣ 48 ಗಂಟೆಯೊಳಗೆ ದಾಖಲಾಗಬೇಕು. ಹಾಗೆಯೇ, ಎನ್‌ಕೌಂಟರ್ ಸಾವು ಪ್ರಕರಣಗಳನ್ನೂ ಪ್ರತ್ಯೇಕ ಸ್ವತಂತ್ರ ತನಿಖಾ ಸಂಸ್ಥೆಯಿಂದ ತನಿಖೆ ನಡೆಸುವಂತೆ ರಾಷ್ಟ್ರೀಯ ಮಾನವ ಹಕ್ಕುಗಳ ಆಯೋಗವು ಆದೇಶಿಸಿದೆ. ಇದು ಮಾನವ ಹಕ್ಕುಗಳ ಬಗ್ಗೆ ಆಯೋಗದ ಕಳಕಳಿಯನ್ನು ತೋರುತ್ತದೆ~ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.`ಎಲ್ಲ ಕ್ಷೇತ್ರಗಳಲ್ಲಿಯೂ ಯಶಸ್ಸು ಕಂಡಿರುವ ಭಾರತವು ಮಾನವ ಹಕ್ಕುಗಳ ಪರಿಪಾಲನೆಯಲ್ಲಿ ಕೂಡ ಜಾಗತಿಕ ನಾಯಕತ್ವವನ್ನು ವಹಿಸಿಕೊಳ್ಳುವಷ್ಟು ಸಾಮರ್ಥ್ಯ ಹೊಂದಿದೆ~ ಎಂದರು.`ದೇಶೀಯ ಮಾನವ ಹಕ್ಕುಗಳ ಸವಾಲುಗಳನ್ನು ಹಾಲಿ ಇರುವ ಸಂಸ್ಥೆಗಳನ್ನು ಪರಿಣಾಮಕಾರಿಯಾಗಿ ಬಳಸಿಕೊಳ್ಳುವ ಮೂಲಕ ಎದುರಿಸಬೇಕಾದ ಅನಿವಾರ್ಯತೆ ಇದೆ. ಪೊಲೀಸ್ ಹಾಗೂ ಭದ್ರತಾ ಸಂಸ್ಥೆಗಳಲ್ಲಿ ವಿಶ್ವಾಸಾರ್ಹತೆ ಮೂಡಿಸುವ ಮೂಲಕ ಈ ಲೋಪವನ್ನು ಸರಿಪಡಿಸಬೇಕಾಗಿದೆ~ ಎಂದು ಅವರು ಹೇಳಿದರು.ಸುಪ್ರೀಂಕೋರ್ಟ್‌ನ ನಿವೃತ್ತ ಮುಖ್ಯ ನ್ಯಾಯಮೂರ್ತಿ ಎಂ.ಎನ್. ವೆಂಕಟಾಚಲಯ್ಯ ಮಾತನಾಡಿದರು. ರಾಷ್ಟ್ರೀಯ ಉನ್ನತ ಆರ್ಥಿಕ ಸಂಶೋಧನಾ ಮಂಡಳಿ (ಎನ್‌ಸಿಎಇಆರ್) ಮಾಜಿ ಮಹಾ ನಿರ್ದೇಶಕ ಪ್ರೊ.ಎಸ್.ಎಲ್. ರಾವ್ ಉಪಸ್ಥಿತರಿದ್ದರು.

 

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.