ಶನಿವಾರ, ಜನವರಿ 18, 2020
23 °C

ಜನಪ್ರತಿನಿಧಿಗಳ ಚಿತ್ತ; ಹರಿಯಲಿ ಕುಂದು ಕೊರತೆಗಳತ್ತ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಕರ್ನಾಟಕಕ್ಕೆ ತನ್ನದೇ ಆದ ಉತ್ಕೃಷ್ಟ ಪರಂಪರೆಯಿದೆ. ನಮ್ಮ ಪರಂಪರೆ ಶ್ರೀಮಂತವಾದುದು. ಶ್ರೀಮಂತ ಪರಂಪರೆಗೆ ಸೇರಿದ ನಾವು ಬಡವರಾಗುತ್ತ ಹೊರಟಿದ್ದೇವೆಂಬುದು ನನ್ನ ಅನಿಸಿಕೆ.ಐಟಿ ಮತ್ತು ಬಿಟಿ ಕ್ಷೇತ್ರದಲ್ಲಿ ಕನ್ನಡಿಗರು ಮುಂದಿದ್ದಾರೆ. ಅದಕ್ಕೆ ನಾವು ಹೆಮ್ಮೆಪಡಬೇಕಾಗುತ್ತದೆ. ಜಗತ್ತಿನಾದ್ಯಂತ ನಮ್ಮ ಯುವ ಎಂಜಿನಿಯರ್‌ಗಳು ಅದರಲ್ಲೂ ಸಾಫ್ಟ್‌ವೇರ್ ಎಂಜಿನಿಯರ್‌ಗಳು ಕರ್ನಾಟಕದ ವಿಶೇಷವಾಗಿ ಬೆಂಗಳೂರಿನ ಕೀರ್ತಿಯನ್ನು ಬಾನೆತ್ತರಕ್ಕೆ ಹಾರಿಸಿದ್ದಾರೆ.ಇಂಥ ಸಾಹಸಿಗರಿಗೆ ಧನ್ಯವಾದ ಹೇಳಲೇಬೇಕು.

ಭಾರತೀಯ ವೈದ್ಯರು ವಿಶ್ವದಾದ್ಯಂತ ಗಣನೀಯ ಸೇವೆ ಸಲ್ಲಿಸುತ್ತಿದ್ದಾರೆ. ಪ್ರತಿಯೊಂದು ಕ್ಷೇತ್ರದಲ್ಲೂ ಅದ್ಭುತವಾದ ಪ್ರತಿಭೆಗಳಿವೆ. ಅವಕಾಶಗಳು ಸಿಗದ ಕಾರಣ ಅವರು ವಿದೇಶಗಳಲ್ಲಿ ನೆಲೆಸುವಂತಾಗಿದೆ.ನೆರೆಯ ರಾಜ್ಯಗಳಿಗೆ ಹೋಲಿಸಿದರೆ, ನಾವಿನ್ನೂ ಸಾಧಿಸಬೇಕಾದುದು ಬಹಳಷ್ಟು ಇದೆ ಎಂದೆನಿಸುತ್ತದೆ. ಯಾವುದೇ ಪ್ರಗತಿಗೆ ಮುಖ್ಯವಾಗಿ ಬೇಕಾದುದು ರಸ್ತೆಗಳು. ಉತ್ತಮ ರಸ್ತೆಗಳಿಂದ ಸಾರಿಗೆ ಸಂಪರ್ಕ ಸುಗಮವಾಗುತ್ತದೆ.

ಉತ್ತಮವಾದ ರಸ್ತೆಗಳು ಇಲ್ಲದೇ ಇದ್ದಾಗ ಸಂಪರ್ಕವೇ ದೊಡ್ಡ ಸಮಸ್ಯೆ ಆಗುತ್ತದೆ.  ರಾಜ್ಯ ಮತ್ತು ಹೊರ ರಾಜ್ಯಗಳೊಂದಿಗಿನ ಜನ ಸಂಪರ್ಕಕ್ಕೆ ರಸ್ತೆಗಳು ಅತಿಮುಖ್ಯ. ನಾವು ಬಡವರಾಗುತ್ತಿದ್ದೇವೆ. ಅದಕ್ಕೆ ನಮ್ಮ ವ್ಯವಸ್ಥೆಯಲ್ಲಿ ಲೋಪದೋಷಗಳೇ ಕಾರಣ.ಅವುಗಳನ್ನು ನಿಯಂತ್ರಿಸಬೇಕಾಗಿದೆ. ಸಮುದಾಯದ ಅಭಿವೃದ್ಧಿಗೆ ಮಂಜೂರಾದ ಹಣವು ದುರುಪಯೋಗವಾಗಿ ಕಳಪೆ ರಸ್ತೆಗಳು ನಿರ್ಮಾಣವಾದರೆ ಅವು ಕೆಲವೇ ದಿನಗಳಲ್ಲಿ ದುರಸ್ತಿಗೆ ಬರುತ್ತವೆ.

ರಸ್ತೆ ದುರಸ್ತಿಯು ಆಗದಿದ್ದಾಗ ಜನರಲ್ಲಿ ಆಕ್ರೋಶ, ಬೇಸರ ಉಂಟಾಗುತ್ತದೆ. ಅದು ಜನಪ್ರತಿನಿಧಿಗಳ ಮೇಲೆ ತಿರುಗುತ್ತದೆ. ಅಂತಿಮವಾಗಿ ಅದು ಸರ್ಕಾರದ ಮೇಲೆಯೂ ತಿರುಗುತ್ತದೆ.ನಮ್ಮ ರಾಷ್ಟ್ರೀಯ ಹೆದ್ದಾರಿಗಳು ಚೆನ್ನಾಗಿವೆ. ರಾಷ್ಟ್ರೀಯ ಹೆದ್ದಾರಿಯನ್ನು ಕೂಡುವ ಜಿಲ್ಲೆಯ ರಸ್ತೆಗಳು, ಜಿಲ್ಲೆಯಿಂದ ತಾಲ್ಲೂಕು ರಸ್ತೆಗಳು, ತಾಲ್ಲೂಕಿನಿಂದ ಗ್ರಾಮಾಂತರ ಪ್ರದೇಶಗಳಿಗೆ ಹೋಗುವ ಒಳ ರಸ್ತೆಗಳು ಉತ್ತಮವಾಗಿ ಇರಬೇಕಾಗುತ್ತದೆ.

ಈ ಬಗ್ಗೆ ಜನಪ್ರತಿನಿಧಿಗಳು ಜಾಗೃತರಾಗಬೇಕಿದೆ. ರಸ್ತೆಗಳನ್ನು ಸುಧಾರಿಸಲು, ಸರ್ಕಾರದಿಂದ ಹಣವನ್ನು ಮಂಜೂರು ಮಾಡಿಸಲು ಅವರು ಶ್ರಮಿಸಬೇಕು.

ಸರ್ಕಾರ ನೀಡಿದ ಹಣವನ್ನು ಸಮರ್ಪಕವಾಗಿ ಬಳಸಿಕೊಂಡು ರಸ್ತೆ ವ್ಯವಸ್ಥೆಯನ್ನು ಸುಧಾರಿಸಲು ಅವರು ಕ್ರಮ ತೆಗೆದುಕೊಳ್ಳಬೇಕಾಗುತ್ತದೆ. ಗುಣಮಟ್ಟದ ಕೆಲಸಕ್ಕೆ ಆದ್ಯತೆ ನೀಡಿದರೆ ಎಲ್ಲವೂ ಸುಗಮವಾಗುತ್ತದೆ. ಸಾರ್ವಜನಿಕರ ಆರೋಗ್ಯ ಸುರಕ್ಷಿತವಾಗಿರುತ್ತದೆ.ಜನ ಪ್ರತಿನಿಧಿಗಳಿಗೆ  ಸಮಸ್ಯೆಗಳನ್ನು ನಿವಾರಿಸಲು ಬೇಕಾದ ಎಲ್ಲ ಅಧಿಕಾರ ಇದೆ. ಆದರೆ ಅವರ ಲಕ್ಷ್ಯವು ಸಮಸ್ಯೆಗಳತ್ತ ಹರಿಯಬೇಕಾಗಿದೆ. ರಸ್ತೆ, ಚರಂಡಿ ವ್ಯವಸ್ಥೆ, ವಿದ್ಯುತ್ ಪೂರೈಕೆ ಹಾಗೂ ನೀರಿನ ಅನುಕೂಲತೆ ಇವು ಜನರ  ಪ್ರಾಥಮಿಕವಾದ ಅಗತ್ಯಗಳು.ಜನರ ಈ ಅಗತ್ಯಗಳನ್ನು, ಅವರ ಬೇಕು ಬೇಡಗಳನ್ನು ತಿಳಿದುಕೊಂಡು ಅವನ್ನು ಬಗೆಹರಿಸಲು ಪ್ರಯತ್ನ ಮಾಡುವವನೇ ನಿಜವಾದ ಜನ ಪ್ರತಿನಿಧಿ. ಜನರು ಅನುಭವಿಸುವ ಸಂಕಷ್ಟಗಳನ್ನು ನೋಡಿಕೊಂಡು ಸುಮ್ಮನಿರುವುದು ಜನ ಪ್ರತಿನಿಧಿಯ ಲಕ್ಷಣವಲ್ಲ.ಸಮಾಜವು ಹತ್ತು ಮಕ್ಕಳ ತಾಯಿಯಂತೆ. ಹಿರಿಯವನು ತಾಯಿಯ ಯೋಗ ಕ್ಷೇಮ ನೋಡಿಕೊಳ್ಳುತ್ತಾನೆ ಎಂದು  ಕಿರಿಯವನು, ಕಿರಿಯವನು ನೋಡುತ್ತಾನೆಂದು ಮಧ್ಯದವನು. ಕೊನೆಗೆ ಯಾರೂ ನೋಡದೆ ಬೀದಿಯಲ್ಲಿ ಬಿದ್ದು ಸಾಯುವ ಪರಿಸ್ಥಿತಿ ನಮ್ಮ ಸಮಾಜದ್ದು.

`ಹತ್ತು ಮಕ್ಕಳ ತಾಯಿ, ಹಾದ್ಯಾಗ ಬಿದ್ದು ಸಾಯಿ~ ಎಂಬ ಗಾದೆಯು ಸಾರ್ವಜನಿಕ ಕ್ಷೇತ್ರದ ಅವ್ಯವಸ್ಥೆಯನ್ನು ತೆರೆದು ತೋರಿಸುತ್ತದೆ. ಜನರ ಅಗತ್ಯಗಳನ್ನು ಜನ ಪ್ರತಿನಿಧಿ ಸರಿಯಾಗಿ ನೋಡಿಕೊಳ್ಳಬೇಕಾಗುತ್ತದೆ. ಜನರ ಸುಖವೇ ತಮ್ಮ ಸುಖ; ಜನರ ನೋವೇ ತಮ್ಮ ನೋವೆಂದು ಭಾವಿಸಬೇಕಾಗುತ್ತದೆ. ಜನರ ಸೇವೆಯೇ ಜಗದೀಶನ ಸೇವೆಯೆಂದು ಅರಿತು ಅದನ್ನು ಸಾಕಾರಗೊಳಿಸಲು ಯತ್ನಿಸಬೇಕು.

ಜನರ ಸ್ಥಿತಿಗತಿಗಳನ್ನು ಹೃದಯವಿದ್ದ ಜನ ಪ್ರತಿನಿಧಿ ಅರ್ಥ ಮಾಡಿಕೊಳ್ಳುತ್ತಾನೆ. ಸಾರ್ವಜನಿಕರ ಕುಂದು ಕೊರತೆಗಳನ್ನು ಅರಿತುಕೊಳ್ಳುವುದು ಒಂದು ಕಲೆ, ಮಾತ್ರವಲ್ಲ ಅದೊಂದು ಸಹೃದಯತೆ. ಸಾರ್ವಜನಿಕ ಸೇವೆಯಲ್ಲಿರುವವರಿಗೆ ಸಹೃದಯತೆ ಇರಬೇಕಾಗುತ್ತದೆ.  ಅರಮನೆ ಮತ್ತು ಗುರುಮನೆಗಳ ನಡುವಿನ ಬಾಂಧವ್ಯಕ್ಕೆ ನಮ್ಮ ಶ್ರಿಮಠದ ಇತಿಹಾಸವು ಒಂದು ಉಜ್ವಲ ಉದಾಹರಣೆ. ನಾಡನ್ನು ಆಳಿದ ಪಾಳೇಗಾರರಲ್ಲಿ ಭರಮಣ್ಣ ನಾಯಕರೂ ಒಬ್ಬರು.

ಅವರಿಗೆ ಆಶೀರ್ವದಿಸಿದ ಗುರುಗಳು ಶಾಂತವೀರ ಮುರುಘಾ ಸ್ವಾಮಿಗಳು. ಗುರುಗಳನ್ನು ಉಚಿತಾಸನದಲ್ಲಿ ಕುಳ್ಳಿರಿಸಿ, `ತಮ್ಮದು ಕುಳಿತ ಪಟ್ಟ, ನನ್ನದು ನಿಂತ ಪಟ್ಟ~ ಅನ್ನುತ್ತಾನೆ ದೊರೆ.ಆಗ ಶಾಂತವೀರರು `ಅರಿತರೆ ಆರು ಪಟ್ಟ; ಮರೆತರೆ ಮುಗಿದ ಪಟ್ಟ~ ಅನ್ನುತ್ತಾರೆ.

ಸಾರ್ವಜನಿಕರ ಸೇವೆಯನ್ನು ಅರಿತು, ಅದರ ನಿವಾರಣೆಗೆ ಹಾತೊರೆದರೆ ಜನರ ಆಶೀರ್ವಾದ ಅನಂತಕಾಲ. ಅದನ್ನು ನಿರ್ಲಕ್ಷಿಸಿದರೆ ಅವರೇ ಕೊಟ್ಟ ಅಧಿಕಾರಕ್ಕೆ ಅಂತ್ಯಕಾಲ ಎಂಬುದು ಅವರ ಮಾತಿನ ಅರ್ಥ.ಎಲ್ಲ ಜನಪ್ರತಿನಿಧಿಗಳನ್ನು ಇಡಿಯಾಗಿ ತೂಗಬಾರದು. ಕೆಲವರ ಕ್ಷೇತ್ರಗಲ್ಲಿ ಉತ್ತಮವಾದ ರಸ್ತೆಗಳು, ಬೀದಿ ದೀಪದ ವ್ಯವಸ್ಥೆ, ನೀರಿನ ಅನುಕೂಲತೆ, ಆಸ್ಪತ್ರೆಯ ಸೌಲಭ್ಯ, ಸಾರ್ವಜನಿಕ ಪಾರ್ಕುಗಳು ಇತ್ಯಾದಿ ಎಲ್ಲವೂ ಚೆನ್ನಾಗಿವೆ.

ಕೆಲವರ ಕ್ಷೇತ್ರಗಳನ್ನು ನೋಡುವಂತಿಲ್ಲ. ಅವ್ಯವಸ್ಥೆಯ ಆಗರ. ಅದಕ್ಕೆ ಕಾರಣ ಅಲಕ್ಷ್ಯ. ಜನಪ್ರತಿನಿಧಿಗಳು ಸೇವೆಯನ್ನು ಅಲಕ್ಷಿಸಿದರೆ, ಜನರು ಅಂಥವರನ್ನು ಅಲಕ್ಷಿಸುತ್ತಾರೆಂಬ ಅರಿವು ಸದಾ ಜಾಗೃತವಾಗಿರಲಿ. ಅಭಿವೃದ್ಧಿಯಲ್ಲಿ ರಾಜಕಾರಣ ನುಸುಳಬಾರದು. ತಮ್ಮ ಸಮಯ, ಶಕ್ತಿ, ಸಂಘಟನೆ ಸರ್ವವು ಜನಸೇವೆಗೆ ಬಳಕೆ ಆಗಲಿ.

 

ಪ್ರತಿಕ್ರಿಯಿಸಿ (+)