ಜನಪ್ರತಿನಿಧಿ ಅನರ್ಹತೆ: ಅರ್ಜಿ ವಜಾ

7

ಜನಪ್ರತಿನಿಧಿ ಅನರ್ಹತೆ: ಅರ್ಜಿ ವಜಾ

Published:
Updated:

ನವದೆಹಲಿ (ಪಿಟಿಐ):  ಅಪರಾಧ ಕೃತ್ಯಗಳಲ್ಲಿ ತಪ್ಪಿತಸ್ಥರೆಂದು ಸಾಬೀತಾಗಿ, ಎರಡು ಅಥವಾ ಅದಕ್ಕಿಂತ ಹೆಚ್ಚು ವರ್ಷಗಳ ಜೈಲು ಶಿಕ್ಷೆಗೆ ಒಳಪಡುವ ಸಂಸದರು ಅಥವಾ ಶಾಸಕರನ್ನು ಕೂಡಲೇ ಅನರ್ಹಗೊಳಿಸಬೇಕೆನ್ನುವ ತೀರ್ಪನ್ನು ಪುನರ್‌ಪರಿಶೀಲಿಸುವಂತೆ ಕೋರಿ ಕೇಂದ್ರ ಸಲ್ಲಿಸಿದ್ದ ಮೇಲ್ಮನವಿಯನ್ನು ಸುಪ್ರೀಂಕೋರ್ಟ್ ಬುಧವಾರ ವಜಾ ಮಾಡಿದೆ.`ಸುಪ್ರೀಂಕೋರ್ಟ್ ಈ ಕಾಯ್ದೆಯನ್ನು ವ್ಯಾಖ್ಯಾನಿಸಿರುವುದಕ್ಕೆ ಅತೃಪ್ತಿ ಇದ್ದಲ್ಲಿ ಕಾನೂನಿಗೆ ತಿದ್ದುಪಡಿ ತರಲು ಸಂಸತ್ ಮುಕ್ತವಾಗಿದೆ' ಎಂದು ನ್ಯಾಯಮೂರ್ತಿಗಳಾದ ಎ.ಕೆ.ಪಟ್ನಾಯಕ್ ಮತ್ತು ಎಸ್.ಜೆ.ಮುಖ್ಯೋಪಾಧ್ಯಾಯ ಅವರಿದ್ದ ಪೀಠವು ಅಭಿಪ್ರಾಯಪಟ್ಟಿದೆ. ಪ್ರಕರಣದ ವಿಚಾರಣೆ ಸಂದರ್ಭದಲ್ಲಿ ವಾದ ಮಾಡಲು ಇಷ್ಟಪಡದ ಕೇಂದ್ರದ ನಿಲುವನ್ನು ಕೂಡ ಪೀಠವು ಪ್ರಶ್ನಿಸಿತು.`ಜನಪ್ರತಿನಿಧಿ ಕಾಯ್ದೆ ಸಂಕೀರ್ಣವಾಗಿದ್ದು, ಗೊಂದಲಕ್ಕೆ ಕಾರಣವಾಗಿದೆ. ಆದರೆ, ಅಪರಾಧ ಹಿನ್ನೆಲೆಯ ವ್ಯಕ್ತಿಗಳನ್ನು ಚುನಾವಣೆಯಿಂದ ದೂರು ಇಡುವುದು ಇದರ ಉದ್ದೇಶ' ಎಂದು ಕೋರ್ಟ್ ಹೇಳಿತು.`ಯಾವುದೇ ಅಪರಾಧ ಕೃತ್ಯದಲ್ಲಿ ತಪ್ಪಿತಸ್ಥರೆಂದು ರುಜುವಾತಾದ, ಎರಡು ಅಥವಾ ಅದಕ್ಕಿಂತ ಹೆಚ್ಚು ವರ್ಷ ಜೈಲು ಶಿಕ್ಷೆಗೆ ಒಳಪಡಬಹುದಾದ ಜನಪ್ರತಿನಿಧಿಗಳನ್ನು ತಕ್ಷಣವೇ ಅನರ್ಹಗೊಳಿಸಬೇಕು ಹಾಗೂ ಜೈಲಿನಲ್ಲಿರುವ ವ್ಯಕ್ತಿ ಚುನಾವಣೆಯಲ್ಲಿ ಸ್ಪರ್ಧಿಸದಂತೆ ತಡೆಯಬೇಕು' ಎಂದು ಜುಲೈ 10ರಂದು ಸುಪ್ರೀಂಕೋರ್ಟ್ ತೀರ್ಪು ನೀಡಿತ್ತು.ಈ ತೀರ್ಪನ್ನು ಉಲ್ಲೇಖಿಸಿದ ಪೀಠ, `ಹೊರ ನೋಟಕ್ಕೆ ಈ ಕಾಯ್ದೆಯಲ್ಲಿ  ದೋಷ ಕಂಡುಬರುವುದಿಲ್ಲ. ಆದರೆ ಇದರ ವ್ಯಾಖ್ಯೆಯಲ್ಲಿ ಲೋಪ ಇರಬಹುದು. ತೀರ್ಪಿನಲ್ಲಿ ದೋಷ ಇಲ್ಲದ ಕಾರಣ ಸಂಸತ್ ಇದನ್ನು ಒಪ್ಪಿಕೊಂಡಿತ್ತು. ನಂತರದಲ್ಲಿ ಪ್ರಜಾಪ್ರತಿನಿಧಿ ತಿದ್ದುಪಡಿ ಕಾಯ್ದೆಯನ್ನು ರಾಜ್ಯಸಭೆ ಅಂಗೀಕರಿಸಿತ್ತು' ಎಂದು ಹೇಳಿತು. `ನಾವು ಪ್ರಭಾವಕ್ಕೆ ಒಳಗಾಗಿಲ್ಲ. ಇದನ್ನು ಉತ್ತಮ ತೀರ್ಪು ಎಂದೇ ಪರಿಗಣಿಸಲಾಗಿದೆ. ಎಲ್ಲರೂ ಇದನ್ನು ಒಪ್ಪಿಕೊಳ್ಳಬೇಕು. ಈ ತೀರ್ಪನ್ನು ಸಂಸತ್ ಒಪ್ಪಿಕೊಂಡಿದ್ದಕ್ಕೆ ನಮಗೆ ಖುಷಿಯಾಗಿದೆ' ಎಂದು ಪೀಠ ತಿಳಿಸಿತು.ಮತ್ತೊಂದು ಅರ್ಜಿ ಮಾನ್ಯ: ಜೈಲಿನಲ್ಲಿರುವ ವ್ಯಕ್ತಿಗಳು ಚುನಾವಣೆಯಲ್ಲಿ ಸ್ಪರ್ಧಿಸುವಂತಿಲ್ಲ ಎಂಬ ತೀರ್ಪನ್ನು ಪುನರ್‌ಪರಿಶೀಲಿಸುವಂತೆ ಕೋರಿ ಸಲ್ಲಿಸಿದ್ದ ಮತ್ತೊಂದು ಅರ್ಜಿಯನ್ನು ವಿಚಾರಣೆಗೊಳಪಡಿಸಲು ಪೀಠ ಒಪ್ಪಿಕೊಂಡಿತು. ಮುಂದಿನ ವಿಚಾರಣೆಯನ್ನು ಅ. 23ಕ್ಕೆ ನಿಗದಿಪಡಿಸಿತು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry