ಮಂಗಳವಾರ, ನವೆಂಬರ್ 19, 2019
23 °C

ಜನಪ್ರತಿನಿಧಿ; ಆಗದಿರಲಿ ಅಹಂಕಾರಕೆ ಅಧಿಪತಿ

Published:
Updated:

ಐದು ವರ್ಷಕ್ಕೊಮ್ಮೆ ಚುನಾವಣೆ. ಎಲ್ಲಪಕ್ಷಗಳವರೂ `ಪ್ರಜೆಗಳೇ ಪ್ರಭುಗಳು' ಎನ್ನುವ ಭಾವನೆಯಿಂದ ಪ್ರಜೆಗಳ ಬಾಗಿಲ ಬಳಿ ಸುಳಿಯುತ್ತಾರೆ. ಪ್ರಜೆಯೆಂಬ ಪ್ರಭುವನ್ನು ಓಲೈಸಲು ಏನೆಲ್ಲ ಕರಾಮತ್ತುಗಳು. ಹೊಸಹೊಸ ಯೋಜನೆಗಳನ್ನು ಪ್ರಣಾಳಿಕೆ(ಮ್ಯೋನಿಫೆಸ್ಟೋ)ಯಲ್ಲಿ ಪ್ರಸ್ತಾಪಿಸುತ್ತ, ಘೋಷಣೆಗಳನ್ನು ಕೂಗುತ್ತ ಮನೆಮನೆ ಬಾಗಿಲು ತಟ್ಟುತ್ತಾರೆ. ಜನರನ್ನು ಸುಲಭವಾಗಿ ಮೋಸಗೊಳಿಸುವ ತಂತ್ರಗಳ ಅನ್ವೇಷಣೆಯಲ್ಲಿ ತೊಡಗುತ್ತಾರೆ.ಕುತಂತ್ರಗಳನ್ನು ಹೆಣೆಯುವವನು ಗಣತಂತ್ರದ ಮೇಲಿನ ವಿಶ್ವಾಸವನ್ನು ಕಳೆದುಕೊಳ್ಳುತ್ತಾನೆ. ಪ್ರಜಾತಂತ್ರದಲ್ಲಿ ತಂತ್ರಗಳಿರಲಿ, ಆದರೆ ಕುತಂತ್ರಗಳಿಗೆ ಜನರು ಮೋಸ ಹೋಗದಿರಲಿ. ಜನನಾಯಕರು ಕುತಂತ್ರಗಳನ್ನು ಹೆಚ್ಚಾಗಿ ನಂಬಬಾರದು. ತನ್ನ ಅವಧಿಯಲ್ಲಿ ಒಳ್ಳೊಳ್ಳೆಯ ಯೋಜನೆಗಳನ್ನು ತಂದು, ಸಂಕಷ್ಟಗಳನ್ನು ಪರಿಹರಿಸುತ್ತ, ಜನರಿಗೆ ಹತ್ತಿರವಾಗುವುದೇ ಉತ್ತಮವಾದ ಮಾರ್ಗ. ಇದರ ಹೊರತಾಗಿ ಸುಳ್ಳು ಆಶ್ವಾಸನೆಗಳನ್ನು ನೀಡುತ್ತ, ಒಂದಿಲ್ಲೊಂದು ಗಿಮಿಕ್ ಮಾಡುತ್ತ ಸಾಗುವುದು ಸಮಂಜಸವಲ್ಲ.

ಗ್ರಾಮಸ್ಥರು ತಮ್ಮ ಊರಲ್ಲಿ ಒಂದು ದೇವಸ್ಥಾನ ಆಗಬೇಕು; ಇದಕ್ಕಾಗಿ ನಿಮ್ಮ ಅನುದಾನದಿಂದ ಹಣವನ್ನು ಬಿಡುಗಡೆಗೊಳಿಸಬೇಕೆಂದು ಜನಪ್ರತಿನಿದಿಗಳಿಗೆ ಒತ್ತಾಯಿಸುತ್ತಾರೆ. ಬಹಳಮಟ್ಟಿಗೆ ಯಶಸ್ವಿಯಾಗುತ್ತಾರೆ. ಹಳ್ಳಿಗರು ಪ್ರಾಥಮಿಕ ಸೌಲಭ್ಯಗಳಿಲ್ಲದೆ ತೊಂದರೆ ಅನುಭವಿಸಿದರೂ, ಅವುಗಳ ನಿವಾರಣೆಗೆ ತಾವೇ ಜನಪ್ರತಿನಿಧಿಗಳಿಗೆ ನೀಡಿದ ಅಧಿಕಾರವನ್ನು ಬಳಸಿಕೊಳ್ಳಲು ಮುಂದಾಗುವುದಿಲ್ಲ.ತಮ್ಮ ಊರಲ್ಲಿ ಒಂದು ದೇವಸ್ಥಾನ ಕಟ್ಟಿಕೊಟ್ಟರೆ ಸಾಕೆಂದು ಅಷ್ಟಕ್ಕೇ ತೃಪ್ತರಾಗುತ್ತಾರೆ. ಮಕ್ಕಳು - ಮಹಿಳೆಯರು ಮಲ-ಮೂತ್ರ ವಿಸರ್ಜನೆಗೆ ಏನೆಲ್ಲ ಸಮಸ್ಯೆ ಅನುಭವಿಸಿದರೂ ಶೌಚಾಲಯದಂತಹ ಅನುಕೂಲತೆಯನ್ನು ಪಡೆಯುವಲ್ಲಿ ನಿರ್ಲಕ್ಷ್ಯ. ಊಟೋಪಚಾರಗಳು ವಿಳಂಬವಾದರೆ ಸ್ವಲ್ಪ ಸಮಯದವರೆಗೆ ತಡೆದುಕೊಳ್ಳಬಹುದು. ಆದರೆ ನಿಸರ್ಗದತ್ತವಾದ ಕರೆಗಳನ್ನು ತಡೆಹಿಡಿಯಲು ಯಾರಿಂದಲೂ ಸಾಧ್ಯವಿಲ್ಲ. ಅವುಗಳನ್ನು ತಡೆಹಿಡಿಯುತ್ತ ಹೋದರೆ ನಂತರದ ದಿನಗಳಲ್ಲಿ  ಎಲ್ಲಿಲ್ಲದ ಸಂಕಷ್ಟ.ಈ ಅರಿವು ನಮ್ಮ ಹಳ್ಳಿಗರಿಗೆ ಇರಬೇಕಾಗುತ್ತದೆ. ಯಾವುದೇ ಸಂಘ-ಸಂಸ್ಥೆ, ದೇವಸ್ಥಾನ, ಧಾರ್ಮಿಕ ಕೇಂದ್ರ, ಶಾಲೆ-ಕಾಲೇಜು, ಉದ್ಯಾನವನ, ಸಿನಿಮಾ ಮಂದಿರ, ಬಸ್‌ಸ್ಟ್ಯಾಂಡ್, ರೈಲ್ವೆಸ್ಟೇಷನ್, ಸ್ಮಶಾನ, ಸಾರ್ವಜನಿಕ ಸ್ಥಳಗಳಲ್ಲಿ ಅಲ್ಲದೆ, ಪ್ರತಿಯೊಂದು ಮನೆಗಳಲ್ಲೂ ಶೌಚಾಲಯ ಇರಲೇಬೇಕು. ತಮ್ಮ ಮನೆಯಲ್ಲಿ ಶೌಚಾಲಯ ಇರಬೇಕೆಂಬುದನ್ನು ಜನರು ಬಯಸುವುದಿಲ್ಲ. ಏಕೆಂದರೆ ಅದರಿಂದ ಮಡಿ-ಮೈಲಿಗೆಗೆ ಭಂಗವಾಗುತ್ತದೆ. ಸೂತಕ ಸಂಭವಿಸುತ್ತವೆಂಬ ಅಜ್ಞಾನ.ಮಾನವ ತಾನು ಅಂತಹ ಹೊಲಸಿನಲ್ಲಿ  ಹುಟ್ಟಿಬಂದು, ತನ್ನ ಶರೀರದಿಂದ ಹೊರಹಾಕಬೇಕಾಗಿರುವ ಮಲ-ಮೂತ್ರ ವಿಸರ್ಜನೆಯ ಬಗೆಗೆ ಅತಿಯಾದ ಸೂತಕ-ಪಾತಕಕ್ಕೆ ಒಳಗಾಗುತ್ತಿರುವುದು ತುಂಬ ಅವೈಜ್ಞಾನಿಕ. ಹೊರಗಡೆ ಅವನ್ನು ವಿಸರ್ಜಿಸುವುದರಿಂದ, ರೋಗಾದಿಗಳು ಹಬ್ಬುತ್ತವೆಂಬ ಪ್ರಾಥಮಿಕ ಅರಿವನ್ನು ನೀಡುತ್ತ, ದೇವಾಲಯದ ಬಗೆಗಿನ ಅತಿವ್ಯಾಮೋಹವನ್ನು ಕಡಿಮೆಮಾಡುತ್ತ, ಶೌಚಾಲಯದ ಮಹತ್ವವನ್ನು ಒತ್ತಿಹೇಳುವ ಕಾರ್ಯವು ಜನಪ್ರತಿನಿಧಿಗಳದು. ಜನರ ನಿಷ್ಠುರವನ್ನು ಕಟ್ಟಿಕೊಳ್ಳಬೇಕಾಗುತ್ತದೆಂದು, ಜನಪ್ರತಿನಿಧಿಗಳು ಈ ಕೆಲಸಕ್ಕೆ ಮುಂದಾಗುವುದಿಲ್ಲ. ಅವರು ಈ ಕಾರ್ಯವನ್ನು ನಿರ್ವಹಿಸದಿದ್ದರೆ, ಯಾರು ಮಾಡಬೇಕು?ಈಗಾಗಲೇ ದೇವಸ್ಥಾನವನ್ನು ಕಟ್ಟಲಾಗಿದ್ದರೆ, ಅದಕ್ಕೆ ವಾದ್ಯದ ಉಪಕರಣಗಳ ಬೇಡಿಕೆಯನ್ನು ಆ ಸಮಿತಿಯವರು ಮುಂದಿಡುತ್ತಾರೆ. ಜನಪ್ರತಿನಿಧಿಗಳು ಬಂದಾಗ, ಈ ಬಗ್ಗೆ ಮನವಿ ಸಲ್ಲಿಸುತ್ತಾರೆ. ಊರಲ್ಲಿ ವಿವಿಧ ಕೋಮಿನ ಜನರು ವಾಸಿಸುತ್ತಾರೆ. ಪ್ರತಿಯೊಂದು ಜಾತಿಯ ಯುವಕ ಮಂಡಳಿಗಳು. ಅವರ ಬೇಡಿಕೆಯೆಂದರೆ, ವಾದ್ಯದ ಉಪಕರಣ ಇಲ್ಲವೆ ಧ್ವನಿವರ್ಧಕ. ರಾಜಕಾರಣಿಗಳು ಕೊಡಿಸಿದ ಉಪಕರಣಗಳಿಂದ ಅವರು ಊರೆಲ್ಲ ಶಬ್ದಮಾಲಿನ್ಯ ಸೃಷ್ಟಿಸುತ್ತಾರೆ.ದೇವಸ್ಥಾನಕ್ಕೆ ಧ್ವನಿವರ್ಧಕ ಮತ್ತು ವಾದ್ಯದ ಉಪಕರಣ ಕೊಡಿಸಿದ್ದರಿಂದ ಆ ಜನಪ್ರತಿನಿಧಿಯ ಬಗೆಗೆ ಏನೋ ಅಭಿಮಾನ. ಕೆಲ ರಾಜಕಾರಣಿಗಳಿಗೆ ಇಂಥ ಕೊಡುಗೆಯನ್ನು ಕೊಡಿಸಿದ್ದಕ್ಕೆ, ಎಲ್ಲಿಲ್ಲದ ಸಂತೃಪ್ತಿ. ಬೇಗನೆ ಹಾಳಾಗುವ ಸಾಮಾನುಗಳನ್ನು ಕೊಡಿಸಿ ಒಳಗೊಳಗೇ ಬೀಗುತ್ತಾರೆ. ಪ್ರಜೆಗಳಿಗೆ ತಾವು ಕೊಡಿಸಬೇಕಾಗಿರುವುದು ಏನು, ಎಂಬುದನ್ನು ಗಂಭೀರವಾಗಿ ಚಿಂತಿಸಬೇಕಾಗಿದೆ.ಊರಿಗೆ ಹೋಗಲು ಸರಿಯಾದ ರಸ್ತೆ ಇರುವುದಿಲ್ಲ. ಅದರ ನಿರ್ಮಾಣಕ್ಕೆ ಲಕ್ಷ್ಯ ಕೊಡಬೇಕಾಗಿದೆ. ಕುಡಿಯುವ ನೀರಿನ ಸೌಲಭ್ಯ, ವಿದ್ಯುತ್ ಸಂಪರ್ಕ, ಶಾಲಾ-ಕಾಲೇಜುಗಳ ನಿರ್ಮಾಣ, ಸಮುದಾಯ ಭವನ, ಉದ್ಯಾನವನ, ಗ್ರಂಥಭಂಡಾರ ಇಂಥವುಗಳನ್ನು ಒದಗಿಸುವುದು ಪ್ರತಿಯೊಬ್ಬ ಜನಪ್ರತಿನಿಧಿಯ ಜವಾಬ್ದಾರಿ.ಕೆಲ ರಾಜಕಾರಣಿಗಳು ಅನುಕಂಪದ (ಸಿಂಪಥಿ) ಅಲೆಯಿಂದಲೋ, ಎದುರಾಳಿಯನ್ನು ಜನರು ತಿರಸ್ಕರಿಸಿದ್ದರಿಂದಲೋ ಗೆಲ್ಲುತ್ತಾರೆ. ಗೆದ್ದುಬಂದ ಬಳಿಕ ಜನಸಂಪರ್ಕದಿಂದ ದೂರಉಳಿಯುತ್ತಾರೆ. ಗೆಲ್ಲುವವರೆಗೆ ಇವರ ಮನೆಗೆ ಬರುವ ಜನಗಳಿಗೆಲ್ಲ ಕಾಫೀ-ಟೀ, ಊಟೋಪಚಾರದ ವ್ಯವಸ್ಥೆ.ಏನೆಲ್ಲ ಸ್ಪಂದನ. ಗೆದ್ದ ಮರುಗಳಿಗೆಯಿಂದಲೇ ಗೆಲ್ಲಿಸಿದವರನ್ನು ನಿರ್ದಾಕ್ಷಿಣ್ಯವಾಗಿ ದೂರಕ್ಕೆ ಅಟ್ಟುವ ದಾರ್ಷ್ಟ್ಯ. ಜನರ ಅನುಕಂಪ ಗಳಿಸಲು ಆಯಾ ಜಾತಿಯ ಉಡುಗೆ-ತೊಡುಗೆಯ ಸೋಗು ಹಾಕಿಕೊಂಡು ನಾಟಕ. ಮದುವೆ-ಮುಂಜಿಯಲ್ಲಿ ಸಹಭೋಜನ. ಮರಣ ಸಂಭವಿಸಿದ ಸಂದರ್ಭದಲ್ಲಿ ಮನೆಗೆ ಹೋಗಿ ಸಾಂತ್ವನ. ಕೆಲ ರಾಜಕಾರಣಿಗಳ ಹೆಂಡಂದಿರು ದಲಿತರ ಮನೆಗಳಿಗೆ ಹೋಗಿ, ತಮ್ಮ ತಲೆಕೂದಲನ್ನು ಬಾಚಿಕೊಂಡು ಮತದಾರರನ್ನು ಒಲಿಸುವ ಕಪಟನಾಟಕ.ಗೆದ್ದಬಳಿಕ ಜನಪ್ರತಿನಿಧಿಗೆ ಸರ್ಕಾರಿ ವಾಹನ, ಕೆಂಪುಗೂಟದ ಕಾರು. ಸೈರನ್ ಕೂಗುತ್ತ ಊರಿಗೆ ಬಂದರೆ, ಕೆಲಕ್ಷಣದಲ್ಲಿ ಜನರು ಮುಕುರಿಕೊಳ್ಳುತ್ತಾರೆ. ಜನಪ್ರತಿನಿಧಿಯ ವಾಹನದ ಸಂಗಡ ಅಧಿಕಾರಿಗಳ ವಾಹನಗಳು, ಅಭಿಮಾನಿಗಳ ವಾಹನಗಳು. ಎಂಟ್ಹತ್ತು ವಾಹನಗಳೊಟ್ಟಿಗೆ, ಅಕ್ಕಪಕ್ಕದಲ್ಲಿ ಗನ್‌ಮ್ಯೋನ್‌ಗಳು. ಟವೆಲ್ ಕೊಡಲಿಕ್ಕೆ ಒಬ್ಬ, ನೀರಿನ ಬಾಟಲಿ ಎತ್ತಿಕೊಡಲು ಮತ್ತೊಬ್ಬ. ಬೂಟು ಒರೆಸಲು ಒಬ್ಬ,  ಔಷಧಿ ನೀಡಲು ಮಗದೊಬ್ಬ. ಅಧಿಕಾರವೆಂದರೆ, ಐಷಾರಾಮಿ ಅನ್ನುವಂತಾಗಿದೆ. ಜವಾಬ್ದಾರಿಯುತ ಸ್ಥಾನಗಳಲ್ಲಿ ಇರುವವರ ಹತ್ತಿರ ಅಧಿಕಾರ ಕೇಂದ್ರೀಕತ ಆಗಿರುತ್ತದೆ.ರಾಜಕಾರಣಿಗಳ ಸುತ್ತ  ಪ್ರಜಾಧಿಕಾರ , ಧಾರ್ಮಿಕರ ಸುತ್ತ ಧರ್ಮಾಧಿಕಾರ. ಅಧಿಕಾರಗಳ ಸುತ್ತ  ಕಾರ್ಯಭಾರ . ಆದ್ದರಿಂದ ಒಂದಷ್ಟು ರಕ್ಷಣೆ. ಜನರ ನಡುವೆ ಬದುಕುತ್ತಿರುವವರಿಗೆ ಭದ್ರತೆ. ಇದರ ಹೊರತಾಗಿ ಅವರು ಜನಸಾಮಾನ್ಯರ ಆಸ್ತಿಪಾಸ್ತಿ ರಕ್ಷಿಸುವಂತಹ ಹೊಣೆಗಾರಿಕೆಯನ್ನು ಹೊತ್ತುಕೊಳ್ಳುತ್ತಾರೆ. ಹಣ, ಆಸ್ತಿ, ಅಧಿಕಾರ, ಅಂತಸ್ತು, ಆಕರ್ಷಣೆ (ಸಿನಿಮಾ ಕ್ಷೇತ್ರ) ಆದರ್ಶಗಳ ಸಂದರ್ಭದಲ್ಲಿ ಸಂಘರ್ಷಗಳು. ಆದರ್ಶಗಳ ಅನುಸರಣೆಯಲ್ಲಿ ಜನರು ಆಕ್ರೋಶಕ್ಕೆ ಒಳಗಾಗುತ್ತಾರೆ. ಅಂಥ ಸಂದರ್ಭದಲ್ಲಿ ಅವರಿಗೆ ರಕ್ಷಣೆಯ ಅಗತ್ಯವಿದೆ.ಈ ವಿಚಾರದಲ್ಲಿ  ಕೇರಳದ ಜನನಾಯಕರ ನಡೆ ನಮಗೆ ಆದರ್ಶವಾಗಬೇಕು. ಮೂರುವರ್ಷಗಳ ಹಿಂದೆ ಶ್ರೀಮಠ ಮತ್ತು ಬಸವಕೇಂದ್ರಗಳ ಸಹಯೋಗದೊಂದಿಗೆ ಕೇರಳದ ತಿರುವೆಲ್ಲಾದಲ್ಲಿ  ಬಸವಧರ್ಮ ಸಮಾವೇಶವನ್ನು ನಡೆಸಲಾಯಿತು. ಅಂದು ಕಂಡುಬಂದ ಸನ್ನಿವೇಶ - ವಿವಿಧ ಪಕ್ಷಗಳ ಜನಪ್ರತಿನಿಧಿಗಳು ಸಮಾವೇಶದಲ್ಲಿ ಭಾಗವಹಿಸಿದರು. ಅವರು ಒಬ್ಬೊಬ್ಬರೇ ವೇದಿಕೆಗೆ ಬರುತ್ತಿದ್ದರು. ಅವರ ದಿನಚರಿ, ಬೇಕಾದ ಮಾಹಿತಿಯನ್ನು ಬಗಲಲ್ಲಿ ಮತ್ತು ಕೈಯಲ್ಲಿ ಹಿಡಿದುಕೊಂಡು ಭಾಗವಹಿಸುತ್ತಿದ್ದರು.ಸಮಾರಂಭದ ಬಳಿಕ ನೀಡಿದ ಸ್ಮರಣಿಕೆಗಳನ್ನು ಅವರೇ ತೆಗೆದುಕೊಂಡು, ತಮ್ಮ ವಾಹನ ಏರಿ ಹೋಗುತ್ತಿದ್ದರು. ಭಾಗವಹಿಸಿದ ಎಲ್ಲರಿಗೂ ಆಶ್ಚರ್ಯ. ಇಂದಿನ ಮುಖ್ಯಮಂತ್ರಿಗಳಾದ ಉಮನ್ ಚಾಂಡಿಯವರು ಅಂದಿನ ವಿರೋಧಪಕ್ಷದ ಧುರೀಣರು. ಎಲ್ಲ ಪಕ್ಷಗಳ ನಡೆಯೂ ಒಂದೇ ಆಗಿತ್ತು.ನಮ್ಮಲ್ಲಿ ಅಧಿಕಾರದ ಸುತ್ತ ದರ್ಪದೊಂದಿಗೆ ಆಡಂಬರ. ಒಂದುರೀತಿಯಲ್ಲಿ ಜನಪ್ರತಿನಿಧಿಗಳನ್ನು `ಆರಾಧ್ಯದೈವ'ವೆಂಬಂತೆ ಬಿಂಬಿಸಲಾಗುತ್ತದೆ. ಜನಸೇವೆಯ ಮೂರುತಿ, ಸರಳತೆಯ ಸಾಕಾರಮೂರುತಿ ಎಂಬುದನ್ನು ಮರೆತು `ಅಧಿಪತಿ' ಎಂಬಂತೆ ನಡೆದುಕೊಳ್ಳುವಿಕೆ.  ಇಂಥ ನಡೆಯು ಭ್ರಮನಿರಸನಕ್ಕೆ ನೀಡುತ್ತದೆ ಅವಕಾಶ.ಜನಪ್ರತಿನಿಧಿಗಳಿಗೆ ಒಮ್ಮಮ್ಮೆ ಜೀವಬೆದರಿಕೆ ಇರುತ್ತದೆ. ಅಂಥ ಸಂದರ್ಭದಲ್ಲಿ ಅವರಿಗೆ ರಕ್ಷಣೆ ಬೇಕೇಬೇಕು. ಜನಪ್ರತಿನಿಧಿಗಳು ತಮ್ಮ ಪ್ರತಿಷ್ಠೆಗಾಗಿ ಅವಕಾಶಗಳನ್ನು ಬಳಸುತ್ತಾರೆಂಬ ಸಂಗತಿ ಕೇಳಿಬರುತ್ತಿರುತ್ತದೆ. ಹತ್ತಾರು ಕಾರುಗಳಲ್ಲಿ ಬಂದದ್ದನ್ನು ನೋಡಿ, ಜನರು ಆಶ್ಚರ್ಯಪಡುವಂತಾಗಬೇಕೆಂದು ಬಯಸುತ್ತಾರೆ. ಕೆಲಜನಪ್ರತಿನಿಧಿಗಳು ಸಂಪರ್ಕಕ್ಕೆ ಸಿಗುವುದಿಲ್ಲವೆಂಬ ಕೂಗು. ಜನಸಾಮಾನ್ಯರಿಂದ ಗೆದ್ದು, ಜನಸಾಮಾನ್ಯರಿಗೆ ಸಿಗದೆ, ವಿಪರೀತ ಸೆಕ್ಯುರಿಟಿ. ಮನೆಹತ್ತಿರ ಸೇರಿಸುವುದಿಲ್ಲ, ಕಾರಿನ ಹತ್ತಿರ ಬಿಡುವುದಿಲ್ಲ. ಸಭೆ-ಸಮಾರಂಭಗಳಿಗೆ ಕರೆದರೂ ಬರುವುದಿಲ್ಲ. ಆರಂಭಿಕ ದಿನಗಳಲ್ಲಿ ಕೆಲವರು ಜನಸಂಪರ್ಕದಲ್ಲಿದ್ದು, ಸರಳತೆಯನ್ನು ತೋರಿಸುತ್ತಾರೆ.ನಂತರದ ದಿನಗಳಲ್ಲಿ ಅದು ಮಾಯವಾಗುತ್ತದೆ. ಅಧಿಕಾರ ಅಂದರೆ, ಒಂದು ತೆರನಾದ ಅಮಲು ಅನ್ನುವಂತಾಗಿದೆ. ಅದನ್ನು ಅನುಭವಿಸಲು ಪ್ರತಿಯೊಬ್ಬರೂ ಇಚ್ಛಿಸುತ್ತಾರೆ. ಅಧಿಕಾರದ ಸುಖ ಸರ್ವರಿಗೂ ಬೇಕು. ಆದರೆ ಜನಸಾಮಾನ್ಯರ ಸಂಕಷ್ಟಗಳನ್ನು ನಿವಾರಿಸುವುದು? ಜನರು ಮನೆಮುಂದೆ ಗಂಟೆಗಟ್ಟಲೆ ಕಾಯಬೇಕು. ಕಾಯಿಸಿಕೊಂಡರೇನೇ  ಜನಪ್ರಿಯತೆ  ಅನ್ನುವ ಹುಸಿತನ. ದೊಡ್ಡತನವು ಜನಸೇವೆಗೆ ಅಡ್ಡಬರಬಾರದು. ಅದರಿಂದ ಬರಬಹುದಾದ ಜನಪ್ರಿಯತೆಯನ್ನು ಮತ್ತು ಅದು ಸೃಷ್ಟಿಸುವ ಅಹಮಿಕೆಯ ನಿರಸನವನ್ನು ಬಸವಣ್ಣನವರು ಹೀಗೆ ಮಾಡಿಕೊಳ್ಳು(ಡು)ತ್ತಾರೆ -ಅಡ್ಡದೊಡ್ಡ ನಾನಲ್ಲಯ್ಯೊ, ದೊಡ್ಡ ಬಸುರನಲ್ಲಯ್ಯೊ,/ದೊಡ್ಡವನಲ್ಲದೆ ನಿಮ್ಮ ಶರಣರು ಮನ್ನಿಸರಯ್ಯೊ./ಹಡೆದುಂಬ ಸೂಳೆಯಂತೆ ಧನವುಳ್ಳವರನರಸಿ ಅರಸಿ/ಬೋಧಿಸಲು, ಪ್ರಾರ್ಥಿಸಲು ಮುನ್ನ ನಾನರಿಯೆನಯ್ಯೊ,ದೊಡ್ಡತನವೆನಗಿಲ್ಲಯ್ಯೊ, ಅಂಜುವೆನಂಜುವೆ ನಿಮ್ಮ ಪ್ರಮಥರಿಗೆ./ಅನಾಥ ನಾನಯ್ಯೊ, ಕೂಡಲಸಂಗಮದೇವಾ./ಅರ್ಥ ಸಚಿವನಾಗಿದ್ದು, ಏನೂ ಇಲ್ಲದ ಅನಾಥನಿಗೆ ಹೋಲಿಸಿಕೊಂಡಿರುವುದನ್ನು ಇಲ್ಲಿ ಗಮನಿಸಬೇಕು.ಎಲ್ಲ ಜನಪ್ರತಿನಿಧಿಗಳನ್ನು ಒಂದೇರೀತಿಯಾಗಿ ನೋಡುವಂತಿಲ್ಲ; ತೂಗುವಂತಿಲ್ಲ. ಇದಕ್ಕೆ ಅಪವಾದವಾಗಿ ಉತ್ತಮ ಕಾರ್ಯವನ್ನು ನಿರ್ವಹಿಸುವವರು ಇದ್ದಾರೆ. ಅಂಥವರಿಂದಲೇ ದೇಶದ ಪ್ರಗತಿ. ಅವರೇ ಆಶಾಕಿರಣ. ಅಧಿಕಾರ ಇರುವುದು ಜನಸೇವೆಗಾಗಿ. ಅದಕ್ಕಾಗಿ ಬಳಸಿಕೊಂಡರೆ, ಅವನೊಬ್ಬ ಜನಪ್ರಿಯ ರಾಜಕಾರಣಿ. ಉತ್ತಮವಾಗಿ ಕಾರ್ಯನಿರ್ವಹಿಸಿದವರನ್ನು ಜನರು ಜನಪ್ರಿಯ ಶಾಸಕ-ಸಂಸದರೆಂದು ಕರೆದುಬಿಡುತ್ತಾರೆ; ಕೆಲವೊಮ್ಮೆ ಅವರೇ ಕರೆಸಿಕೊಳ್ಳುತ್ತಾರೆ.

ಜನರ ಕುಂದು-ಕೊರತೆಗಳನ್ನು ನಿವಾರಣೆ ಮಾಡಲು ಆಗದಿರುವಾಗ, ಅತಿಯಾದ ಅಹಂಕಾರಕ್ಕೆ ಈಡಾಗಿ, ಜನರಿಂದ ದೂರಾಗುವುದು. ರಾಜ್ಯ ರಾಜಕಾರಣದಲ್ಲಿ ಕೆಲವರು ಇದನ್ನು ಸಾಬೀತುಪಡಿಸಿದ್ದಾರೆ. ಕೇಂದ್ರದಲ್ಲಿರುವವರು ಇದರಿಂದ ಹೊರತಾಗಿರುವುದಿಲ್ಲ. ಫೋನ್ ಸಂಪರ್ಕಕ್ಕೆ ಅಷ್ಟು ಸುಲಭವಾಗಿ ಲಭ್ಯ ಆಗದಿರುವುದು, ಜನಸಾಮಾನ್ಯರ ಭೇಟಿಗೆ ಅವಕಾಶವೀಯದಿರುವುದು, ಕರೆದ ಸಭೆ-ಸಮಾರಂಭಗಳಲ್ಲಿ ಭಾಗವಹಿಸದಿರುವುದು, ಬಂದರೂ ತಡವಾಗಿ ಬರುವುದು, ಸಾರ್ವಜನಿಕ ಕೆಲಸವನ್ನು ಅಲಕ್ಷಿಸುವುದು, ಭದ್ರತೆಯ ಕೋಟೆಯನ್ನು ಭೇದಿಸಿ ಭೇಟಿ ಮಾಡುವುದು ಸುಲಭವಲ್ಲವೆಂಬ ಅನಿಸಿಕೆ. ಸಾಮಾನ್ಯರು ಬಂದಾಗ ತಿರಸ್ಕಾರ, ಸ್ಥಿತಿವಂತರು ಎದುರಾದಾಗ ಎಲ್ಲಿಲ್ಲದ ಆದರ ತೋರುವುದನ್ನು ಬಸವಣ್ಣನವರೂ ಛೇಡಿಸುತ್ತಾರೆ -ಕುದುರೆ - ಸತ್ತಿಗೆಯವರ ಕಂಡಡೆ ಹೊರಳಿಬಿದ್ದು ಕಾಲಹಿಡಿವರು,/ಬಡಭಕ್ತರು ಬಂದಡೆ  ಎಡೆಯಿಲ್ಲ, ಅತ್ತ ಸನ್ನಿ  ಎಂಬರು./ಎನ್ನೊಡೆಯ ಕೂಡಲಸಂಗಯ್ಯನವರ

ತಡಗೆಡಹಿ ಮೂಗ ಕೊಯ್ಯದೆ ಮಾಬನೆ ?

ಏನೇ ಆಗಲಿ ಜನರಿಂದ ಆಯ್ಕೆಯಾಗಿ ಅಧಿಕಾರ ಹಿಡಿದುಕೊಂಡಂತಹ ಪ್ರತಿನಿಧಿಗಳು ಅಧಿಕಾರದ ಅಹಮಿಕೆಯಲ್ಲಿ ತೇಲಿಹೋಗಬಾರದು. ಅವರು ದೊರೆಗಳಂತೆ ದರ್ಪವನ್ನು ತೋರಿಸಬಾರದು. ಬದಲಾಗಿ ಜನತೆಗೆ ಸಮೀಪ ಇರಬೇಕು. ಜನಸೇವೆಗೆ ಸಿಕ್ಕ ಅವಕಾಶವೆಂದು ಭಾವಿಸುತ್ತ, ನಿರಹಂಕಾರದಿಂದ ಬಾಗಬೇಕು.ಈ ನಿಟ್ಟಿನಲ್ಲಿ ಅವರು ನಿರಹಂಕಾರದ ಮೂರುತಿ ಆಗಬೇಕೆಂದು ಜನತೆ ಭಾವಿಸುತ್ತಾರೆ. ತಾವು ಹೊಂದಿರುವಂತಹ ಅಧಿಕಾರವನ್ನು ಆದರ್ಶಗಳ ಅನುಷ್ಠಾನಕ್ಕೆ ಬಳಸಿಕೊಂಡು, ಅಶೋಕ ಚಕ್ರವರ್ತಿಯಂತೆ, ಬಸವಣ್ಣನಂತೆ, ಜನಕಮಹಾರಾಜನಂತೆ ಇತಿಹಾಸವಾಗಿ ಉಳಿಯಬೇಕೆಂಬುದು ಎಲ್ಲರ ಆಶಯ.  ನನ್ನಂಥ `ಮಠಾಧಿಪತಿ'ಯು `ಜನಸೇವಕ'ನೆಂದು ಗುರುತಿಸಿಕೊಳ್ಳಲು ಇಷ್ಟಪಡುತ್ತಿರುವಾಗ ಜನಪ್ರತಿನಿಧಿಗಳು ಜನರಿಂದ ದೂರ ಉಳಿದು, ಅಂತರವನ್ನು ನಿರ್ಮಿಸಿಕೊಳ್ಳುವುದು, ಗಣತಂತ್ರಕ್ಕೆ ಒಂದು ಅಣಕ. ಈ ನಿಸರ್ಗಕ್ಕೆ ಅಖಂಡವಾದ ಅಧಿಕಾರವಿದ್ದಾಗ್ಯೂ ವಿನಯದಿಂದ ಬಾಗುತ್ತದೆ. ಅಧಿಕಾರ ಅಶಾಶ್ವತ. ಅದರಿಂದ ಸಾರ್ಥಕತೆಯನ್ನು ಸಾಧಿಸಬೇಕಾಗಿದೆ. ತಾ ಮಾಡಿದ ಸೇವೆ ಮಾತ್ರ ಶಾಶ್ವತ. ಸೇವೆಯ ಮುಖಾಂತರ ಶಾಶ್ವತವಾಗಿರಲು ಯತ್ನಿಸಬೇಕಾಗಿದೆ.ಪ್ರಜೆಗಳು ತಮ್ಮ ಅಮೂಲ್ಯವಾದ ಮತವನ್ನು ಚಲಾಯಿಸುವುದು ಆದ್ಯಕರ್ತವ್ಯ. ಅದರಂತೆ ತಮ್ಮ ಮತದ ಮೌಲ್ಯವನ್ನು ಕಾಪಾಡಿಕೊಳ್ಳುವುದು ಅಷ್ಟೇ ಮುಖ್ಯವಾಗಿದೆಯೆಂಬುದನ್ನು ಅರ್ಥಮಾಡಿಕೊಂಡು ಧನದಾಹಿಗಳಲ್ಲದ, ಒಂದಿಲ್ಲೊಂದು ಗಿಮಿಕ್ ಮಾಡದ, ಜನರ ಕುಂದು-ಕೊರತೆಗಳನ್ನು ನಿವಾರಿಸುವುದು ತಮ್ಮ ಪಾಲಿನ ಕರ್ತವ್ಯವೆಂದು ಭಾವಿಸುವ ಉತ್ತಮ ಹಾಗೂ ಒಳ್ಳೆಯ ಅಭ್ಯರ್ಥಿಗಳನ್ನು ಆಯ್ಕೆ ಮಾಡಬೇಕಾಗಿದೆ. ಉತ್ತಮರನ್ನು ಆಯ್ಕೆ ಮಾಡದೆ, ಉತ್ತಮ ಆಡಳಿತವನ್ನು ನಿರೀಕ್ಷಿಸಲು ಸಾಧ್ಯವಿಲ್ಲವೆಂಬುದನ್ನು ಮರೆಯಬಾರದು.ನಿಮ್ಮ ಅನಿಸಿಕೆ ತಿಳಿಸಿ: editpagefeedback@prajavani.co.in

ಪ್ರತಿಕ್ರಿಯಿಸಿ (+)