ಬುಧವಾರ, ನವೆಂಬರ್ 20, 2019
28 °C
ಶಾಸಕರಿಗೆ ಬರುವ ಶೇ 80 ಅರ್ಜಿ ದೇಣಿಗೆ ಕೇಳುವಂಥವು?

ಜನಪ್ರತಿನಿಧಿ ಎಂದರೆ ಹಣ ಕೊಡುವ ಯಂತ್ರವೇ?

Published:
Updated:

ಹಣ ನೀಡಿ ಜನರ ವೋಟು ಕಬಳಿಸಬಹುದೇ ಎಂಬುದು ಚರ್ಚಾಸ್ಪದ ವಿಷಯ. ನೇರ ಹಣ ಪಡೆದು ವೋಟ್ ಕೊಡುವ ಮತದಾರರು ಅತಿ ಕನಿಷ್ಠ ಸಂಖ್ಯೆಯಲ್ಲಿರುತ್ತಾರೆ. ಅದೂ ಕೂಡಾ ಹಣ ಪಡೆದು ವೋಟ್ ಕೊಡುತ್ತಾರೆ. ಎಂಬ ಗ್ಯಾರಂಟಿಯೂ ಇಲ್ಲ. ಒಟ್ಟಾರೆಯಾಗಿ ವೋಟ್ ಕೊಡುವವ

1. ಪಕ್ಷದ ಪಕ್ಕಾ ಕಾರ್ಯಕರ್ತ

2. ಪಕ್ಷದ ಕಾಯಂ ಮತದಾರ

3. ಪ್ರತಿ ಚುನಾವಣೆಯಲ್ಲಿ ಮನಬದಲಿಸುವ ಮತದಾರ

4. ಹಣ ಪಡೆದು ವೋಟ್ ಹಾಕುವ ಮತದಾರ

ಇಲ್ಲಿ ಹಣ ಪಡೆದು ವೋಟ್ ನೀಡುವ ಮತದಾರ ಫಲಿತಾಂಶ ಬದಲಿಸುವಷ್ಟು ಸಂಖ್ಯೆಯಲ್ಲಿ ಇರಲಾರ. ಅದು ಸಾಧ್ಯವೂ ಇಲ್ಲ. ಇಲ್ಲಿ ಪ್ರತಿ ಚುನಾವಣೆಯಲ್ಲಿ ಮನಸ್ಸು ಬದಲಾಯಿಸುವ ಮತದಾರನೇ ಮುಖ್ಯ. ಈತ ಸಿಗುವುದು ಎಲ್ಲಿ. ಅವರವರ ಮನೆಯಲ್ಲಿ ಅವರವರ ಮನೆಗೆ ಪದೇ ಪದೇ ತೆರಳಿ ಅಭ್ಯರ್ಥಿಯ ಬಗ್ಗೆ, ಪ್ರಣಾಳಿಕೆ ಬಗ್ಗೆ, ವಿರೋಧ ಪಕ್ಷದ ತಪ್ಪುಗಳ ಬಗ್ಗೆ ಮನವರಿಕೆ ಮಾಡಬೇಕು. ಅದು ಬೂತ್ ಮಟ್ಟದ ಕಾರ್ಯಕರ್ತರಿಂದ ಮಾಡಿಸಲು ಸಾಧ್ಯವಾದರೆ, 10-20 ಜನರ ಗುಂಪಿನ ನಾಯಕನಿಗೆ, ತನ್ನ ಪಕ್ಷದ ಪುಢಾರಿಗಳಿಗೆ, ಜಾತಿ ನಾಯಕರಿಗೆ ಹಣ ನೀಡುವ ಅಗತ್ಯವಿರುವುದಿಲ್ಲ. ಅಂತಹ ಅಗತ್ಯ ಬಂದಾಗ ಅವರೆಲ್ಲರೂ ಆಯಾ ಬೂತಿನ ಪ್ರತಿನಿಧಿಯ ಜೊತೆ ಗುರುತಿಸಿಕೊಂಡು ಕೆಲಸ ಮಾಡಿದರೆ ಮಾತ್ರ ಅವರಿಗೂ ಖರ್ಚಿಗೆ-ಊಟಕ್ಕೆ-ಓಡಾಟಕ್ಕೆ ಇತ್ಯಾದಿ ನೀಡಬಹುದು. ಉತ್ತರ ಕರ್ನಾಟಕದ ಕೆಲವು ಕ್ಷೇತ್ರಗಳಲ್ಲಿ ಸಾವಿರಾರು `ವೋಟ್'ಗಳನ್ನು ಹಣದ ಮೂಲಕವೇ ಖರೀದಿಸಲಾಗುತ್ತದೆ. ಅದು ಫಲಿತಾಂಶದ ಮೇಲೆ ಪರಿಣಾಮ ಬೀರುವುದು ಹೌದು.ಆದರೆ ರಾಜಕೀಯ ಇತಿಹಾಸ ಒಮ್ಮೆ ಅವಲೋಕಿಸಿದರೆ, ಅನೇಕ ಸಂದರ್ಭಗಳಲ್ಲಿ ನಿರ್ದಿಷ್ಟ ಪಕ್ಷವು ಸ್ವೀಪ್ ಮಾಡಿ ಅತಿ ಹೆಚ್ಚು ಸಂಖ್ಯೆಯಲ್ಲಿ ಗೆಲ್ಲುತ್ತದೆ. ಕೆಲವೊಮ್ಮೆ ಅತೀ ಹೆಚ್ಚು ಸಂಖ್ಯೆಯಲ್ಲಿ ಗೆದ್ದ ಪಕ್ಷ ಇನ್ನೊಂದು ಚುನಾವಣೆಯಲ್ಲಿ ಮಕಾಡೆ ಮಲಗುತ್ತದೆ. ಅಂದರೆ ಅಲ್ಲಿ ಹಣ    ವರ್ಕ್ ಔಟ್ ಆಗಿಲ್ಲವೆಂದೇ ಅರ್ಥ. ಚುನಾವಣಾ ಖರ್ಚಿಗೆ ಹಣ ಬೇಕು. ಆದರೆ ಖರ್ಚು ಹೆಚ್ಚು ಮಾಡಿದ್ದೆಲ್ಲಾ ಮತ ಆಗಲಾರದು. ಬಹುಶಃ ಇದೇ ಕಾರಣಕ್ಕೆ ಯು.ಬಿ.ಮಲ್ಯರಿಗೆ ಗೆಲ್ಲಲು ಸಾಧ್ಯವಾಗಿಲ್ಲ.ಇನ್ನು ಒಂದು ನಿರ್ದಿಷ್ಟ ಜಾತಿಯ ಜನ ಹೆಚ್ಚಿದ್ದರೆ, ಅದೇ ಜಾತಿಯವನನ್ನು ನಿಲ್ಲಿಸಿದರೆ ಗೆಲ್ಲುತ್ತಾನೆ ಎಂಬುದು. ಇದು ಮೈಸೂರು, ಬೆಂಗಳೂರು ಸುತ್ತಮುತ್ತ ಅನೇಕ ಬಾರಿ ನಿಜವಾಗಿದ್ದರೂ, ಸಾರ್ವತ್ರಿಕ ಸತ್ಯವಾಗಲಾರದು. ಕರಾವಳಿಯ ಜಿಲ್ಲೆಗಳಲ್ಲಿ ಜನಸಂಖ್ಯೆಯಲ್ಲಿ ಶೇಕಡಾ 1ರಷ್ಟಿರುವ ಬ್ರಾಹ್ಮಣರೇ ಹೆಚ್ಚು ಎಂ.ಎಲ್.ಎ. ಗಳಾಗುವುದು. ಜನಸಂಖ್ಯೆಯಲ್ಲಿ ಶೇ 1ಕ್ಕಿಂತ ಕಡಿಮೆ ಇರುವ ಜೈನರ ಅಭ್ಯರ್ಥಿ ಮೂರ‌್ನಾಲ್ಕು ಬಾರಿ ಎಂ.ಎಲ್.ಎ. ಆಗುತ್ತಾರೆ. ಅದೇ ರೀತಿ ಹೆಚ್ಚಿನ ಸಂಖ್ಯೆಯಲ್ಲಿರುವ ಬಿಲ್ಲವ ಸಮುದಾಯದ ಅಭ್ಯರ್ಥಿಗಳೂ ಸೋಲುವುದುಂಟು. ಅಂದರೆ, ಎಲ್ಲ ಸಂದರ್ಭಗಳಲ್ಲಿಯೂ ಜಾತಿ ಆಧಾರಿತ ಮತದಾನ ಆಗುವುದಿಲ್ಲ.ಇದೆಲ್ಲವೂ ನಮ್ಮ ಪಕ್ಷಗಳ ನಾಯಕರಿಗೆ ತಿಳಿದಿಲ್ಲವೇ? ತಿಳಿದಿದೆ. ಆದರೂ ವಿಶಿಷ್ಟ ಪರಿಸ್ಥಿತಿಯೊಂದು ನಿರ್ಮಾಣವಾಗಿ ಬಿಟ್ಟಿದೆ.

ಇತ್ತೀಚಿನ ದಿನಗಳಲ್ಲಿ ರಾಜಕೀಯ ಪಕ್ಷದ ಆಂತರಿಕ ಸಂಘಟನೆ ಶೂನ್ಯ ಸ್ಥಿತಿಗೆ ತಲುಪುತ್ತಿದೆ. 20 ವರ್ಷಗಳ ಹಿಂದೆ ಪಕ್ಷವೊಂದರ ಜಿಲ್ಲಾಧ್ಯಕ್ಷರೆಂದರೆ ಅಪಾರ ಗೌರವ ಸಾಮಾಜಿಕ ಮನ್ನಣೆ ಇತ್ತು. ಪದಾಧಿಕಾರಿಗಳೂ ಗೌರವಿಸಿ- ಗುರುತಿಸಿಕೊಳ್ಳುತ್ತಿದ್ದರು. ಅವರಿಗೂ, ಜನರಿಗೂ ನೇರ ಸಂಪರ್ಕವಿತ್ತು. ಪಕ್ಷದ ಕಚೇರಿಗಳಿಗೆ ಜನರು ಸಮಸ್ಯೆಯನ್ನು ಹೇಳಿಕೊಂಡೂ ಬರುತ್ತಿದ್ದರು. ಈಗ ಚುನಾಯಿತ ಪ್ರತಿನಿಧಿಯ ಹಿಂದೆ ಇಡೀ ಪಕ್ಷ ಓಡುತ್ತದೆ. ಆತನೇ ಸರ್ವಸ್ವ. ಅವರನ್ನು ನಿಯಂತ್ರಿಸುವ ಯಾವ ವ್ಯವಸ್ಥೆಯೂ ಪಕ್ಷಗಳಲ್ಲಿಲ್ಲ. ಕೇವಲ ಚುನಾವಣೆ ಹಾಗೂ ಅಧಿಕಾರ ರಾಜಕೀಯ. ಪಕ್ಷ ಸಂಘಟನೆ ಮತ್ತು ಪಕ್ಷದ ಕಾರ್ಯಕ್ರಮ ಸ್ಥಗಿತಗೊಂಡಿದೆ. ಅವರವರ ತಾಕತ್ತಿನಲ್ಲಿ ತನ್ನದೇ ಗುಂಪು ಕಟ್ಟಿ ಶಕ್ತಿ ಪ್ರದರ್ಶಿಸಿದವ ನಾಯಕ. ಆತ, ಅಧಿಕಾರಗಳಿಸಿದ ತಕ್ಷಣ, ಆತನಿಗೆ ಪಕ್ಷ ನಗಣ್ಯ.ಪಕ್ಷದ ಸಂಘಟನೆ ಮಾಡುವ ಪ್ರಾಮಾಣಿಕ ವ್ಯಕ್ತಿಗಳಿಗೆ ಚುನಾವಣೆಯಲ್ಲಿ ಬಿ-ಫಾರ್ಮ್ ಸಿಗುವ ಯಾವ ಗ್ಯಾರಂಟಿಯೂ ಇಲ್ಲ. ಅದಕ್ಕೆ ಯಾರೂ ಸಂಘಟನೆ ಬಗ್ಗೆ ತಲೆಕೆಡಿಸಿಕೊಳ್ಳುವುದಿಲ್ಲ. ತನಗೆ ಬಿ- ಫಾರ್ಮ್ ಸಿಕ್ಕಿದ ಮೇಲೆ ಆತ ಆಟ ಶುರುವಿಟ್ಟುಕೊಳ್ಳುವುದು.

ಪಕ್ಷವೊಂದರ ಸಂಘಟನಾ ಚಟುವಟಿಕೆ ಬೇರೆ, ಪಕ್ಷವೊಂದರ ಚುನಾವಣಾ ಚಟುವಟಿಕೆ ಬೇರೆ. ಹೀಗೆ ಎರಡೂ ಮುಖಗಳಿರಬೇಕಾದಲ್ಲಿ ಒಂದೇ  ಮುಖವಾಗಿದೆ.ಅಧಿಕಾರ ಚುಕ್ಕಾಣಿ ಹಿಡಿಯುವ ತಂತ್ರಗಾರಿಕೆ ಮಾತ್ರ ಉಳಿದುಕೊಂಡಿದೆ. ಅದಕ್ಕಾಗಿ ಪಕ್ಷಾಂತರವೂ ಸಲೀಸು. ಪಕ್ಷದ ಸಂಘಟನಾ ಶಕ್ತಿ ಪ್ರಬಲವಾಗಿದ್ದು, ಆ ನೆಲೆಯಲ್ಲಿ ಆಯ್ಕೆಯಾದವ ಪಕ್ಷ ಬಿಟ್ಟು ಹೋಗಲು ಹೆದರುತ್ತಾನೆ. ಆದರೆ, ಏಕಾಏಕಿ  ಬಿ-  ಫಾರ್ಮ್ ಪಡೆದು ಹಣ ಖರ್ಚು ಮಾಡಿ, ತನ್ನದೇ ಗುಂಪು ಸೃಷ್ಟಿಸಿಕೊಂಡವ ಯಾವ ಕಾಲಕ್ಕೂ ಪಕ್ಷಾಂತರ ಮಾಡಲು ಹೆದರಲಾರ.ಜನಪ್ರತಿನಿಧಿ = ಎಟಿಎಂ

ಇನ್ನು ಗೆದ್ದ ಶಾಸಕ/ ಸಂಸದನೊಬ್ಬನನ್ನು ಬಳಸಿಕೊಳ್ಳುವ ರೀತಿಯೂ ಅಷ್ಟೇ ಭ್ರಷ್ಟವಾಗಿದೆ. ಒಬ್ಬ ಶಾಸಕನ ಮನೆಯಲ್ಲಿ ಬೆಳಿಗ್ಗೆಯಿಂದಲೇ ಜನ, ಮಗನಿಗೆ ಫೀಸು ಕಟ್ಟಲು ಹಣ ಕೇಳಲು, ಕ್ಲಬ್‌ಗೆ ಡೊನೇಷನ್ ಕೇಳಲು, ಹೆಂಡತಿ ಹೆರಿಗೆ ಖರ್ಚು ನಿಭಾಯಿಸಲು.. ಹೀಗೆ ವಿವಿಧ ಕಾರಣ ಸಹಿತ ಕ್ಯೂ ನಿಲ್ಲುತ್ತಾರೆ. ಆತ ಕೊಡದಿದ್ದರೆ, ಅಥವಾ ಕೊಟ್ಟದ್ದು ಕಡಿಮೆ ಆದರೆ ಆತನ ಜನ್ಮ ಜಾಲಾಡುವ ಜನಸಮೂಹ ನಿರ್ಮಾಣಗೊಂಡಿದೆ. ಆತ ಎಟಿಎಂ ಆಗಿ ಪರಿವರ್ತನೆ ಆಗುತ್ತಾನೆ.

ಬೆಂಗಳೂರಿನಲ್ಲಿರುವ ಶಾಸಕನನ್ನು ನೋಡಲು 10-20 ಜನ ಹೋಗಿ ಠಿಕಾಣಿ ಹೊಡೆದು, ಊಟ, ರೂಮು, ವಾಹನ ಬಾಡಿಗೆ ಎಲ್ಲವನ್ನೂ ಅವರ ತಲೆಗೆ ಕಟ್ಟುತ್ತಾರೆ. ಮದುವೆ, ಮುಂಜಿ, ಸಭೆ, ಸಮಾರಂಭ ಎಲ್ಲದರಲ್ಲೂ ಆತ ಹಾಜರಿರಬೇಕು. ಜೊತೆಗೆ ಕಪ್ಪ-ಕಾಣಿಕೆ ನೀಡಲೇಬೇಕು. ಮಂತ್ರಿಯೊಬ್ಬರ ಕೈಯಲ್ಲಿದ್ದ 100 ಅರ್ಜಿಗಳನ್ನು ನೋಡಿದಾಗ ಅದರಲ್ಲಿ ತಮ್ಮೂರಿಗೆ ರಸ್ತೆ ಬೇಕು/ನೀರು ಬೇಕು, ಶಾಲೆ, ಆಸ್ಪತ್ರೆ ಬೇಕು ಎಂಬ ವಿಚಾರ 5 ಅರ್ಜಿಗಳು ಮಾತ್ರ.

ಉಳಿದ ಅರ್ಜಿಗಳಲ್ಲಿ ಶೇಕಡಾ 80ರಷ್ಟು ವೈಯಕ್ತಿಕವಾಗಿ ಹಣ/ದೇಣಿಗೆ ಕೇಳುವ ಅರ್ಜಿಗಳೇ. ಇಂತಹ ಪರಿಸ್ಥಿತಿಯಲ್ಲಿ ಹಣ ಖರ್ಚು ಮಾಡದೇ ಚುನಾವಣೆಗೆ ನಿಲ್ಲುವ, ಗೆದ್ದ ಮೇಲೆ ಹಣ ಹಂಚಲೇಬೇಕಾದ ಜನಪ್ರತಿನಿಧಿ ಭ್ರಷ್ಟಾಚಾರ ಮಾಡದೇ ಇರಲು ಹೇಗೆ ಸಾಧ್ಯ? ಜೊತೆಗೆ ಅವನ ಸ್ವಂತಕ್ಕೆ ಆಸ್ತಿ-ಸಂಪತ್ತಿನ ಕ್ರೋಡೀಕರಣದ ಚಟ ಅಂಟಿಕೊಂಡರೆ ಮುಗಿಯಿತು. ಆತ ಭ್ರಷ್ಟರಲ್ಲಿ ಮಹಾಭ್ರಷ್ಟನಾಗುತ್ತಾನೆ.

(ನಾಳಿನ ಸಂಚಿಕೆಯಲ್ಲಿ ಭಾಗ 7)

ಪ್ರತಿಕ್ರಿಯಿಸಿ (+)